ADVERTISEMENT

ಕೊರೊನಾ: ಸಾವು ಕಾಣದೇ 40 ದಿನಗಳು

ಆರಂಭಿಕ ಹಂತದಲ್ಲೇ ಚಿಕಿತ್ಸೆ l ಪರಿಣಾಮಕಾರಿ ಸಮೀಕ್ಷೆ ಕಾರಣ

ಬಾಲಕೃಷ್ಣ ಪಿ.ಎಚ್‌
Published 21 ಜನವರಿ 2021, 2:40 IST
Last Updated 21 ಜನವರಿ 2021, 2:40 IST
ಡಾ. ನಾಗರಾಜ್‌
ಡಾ. ನಾಗರಾಜ್‌   

ದಾವಣಗೆರೆ: ಅಧಿಕೃತ ದಾಖಲೆ ಪ್ರಕಾರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವು ಉಂಟಾಗದೇ 40 ದಿನಗಳು ಕಳೆದಿವೆ. ಸೋಂಕಿತರಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ದೊರೆಯುತ್ತಿರುವುದು, ಸರ್ವೇಕ್ಷಣಾ ಇಲಾಖೆಯಿಂದ ಪರಿಣಾಮಕಾರಿಯಾಗಿ ಸಮೀಕ್ಷೆ ನಡೆಸಿ ಹಿರಿಯರನ್ನು, ರೋಗಿಗಳನ್ನು ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಿರುವುದು ಇದಕ್ಕೆ ಕಾರಣ ಎಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಹೇಳಿಕೊಂಡಿದೆ.

ಜಿಲ್ಲೆಯಲ್ಲಿ ಕೊರೊನಾಕ್ಕೆ ತುತ್ತಾಗಿ ಈವರೆಗೆ 264 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 21 ಮಂದಿ ಹೊರಜಿಲ್ಲೆಯವರು. ದಾವಣಗೆರೆ
ಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದ್ದರಿಂದ ಈ ಜಿಲ್ಲೆಯ ಅಂಕಿಅಂಶಗಳಲ್ಲಿ ದಾಖಲಿಸಲಾದವರು. ಮೇ 1ರಂದು ಜಾಲಿನಗರ ವೃದ್ಧ ಮೃತಪಟ್ಟಿದ್ದು, ಕೊರೊನಾದಿಂದ ಮೃತಪಟ್ಟ ಮೊದಲ ಸಾವು ಇದಾಗಿತ್ತು. ಡಿ.10ರಂದು ಚಿತ್ರದುರ್ಗದ ವ್ಯಕ್ತಿ ದಾವಣಗೆರೆಯಲ್ಲಿ ಮೃತಪಟ್ಟಿದ್ದು, ಅದೇ ಸದ್ಯಕ್ಕೆ ಕೊನೇ ಸಾವು ಆಗಿದೆ.

‘ಸೋಂಕಿನ ಸರಪಳಿ ತುಂಡರಿಸುವಲ್ಲಿ ಸಫಲರಾಗಿದ್ದರಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸರ್ವೆಲೆನ್ಸ್‌ ತಂಡ ಮನೆ ಮನೆ ಭೇಟಿ ನೀಡಿ ವಯಸ್ಸಾದವರು ಇದ್ದಾರಾ ಎಂದು ಪತ್ತೆ ಹಚ್ಚಿ ಅವರನ್ನು ತಪಾಸಣೆ ಮಾಡಿಸಿದ್ದಾರೆ. ಗರ್ಭಿಣಿಯರು, ಬೇರೆ ಅನಾರೋಗ್ಯದಿಂದ ಬಳಲುವವರು ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕಿನ ಲಕ್ಷಣ ಕಾಣಿಸಿಕೊಂಡರೆ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ದೊರೆತ ಕಾರಣ ಹೆಚ್ಚು ಅಪಾಯಗಳು ಉಂಟಾಗಲಿಲ್ಲ. ಅಲ್ಲದೇ ಸೋಂಕಿತರ ಸಂಪರ್ಕದಲ್ಲಿ ಇರುವವರಿಗೆ ಸೋಂಕು ಕಾಣಿಸಿಕೊಳ್ಳಲಿ ಎಂದು ಕಾಯದೇ ಅವರನ್ನು ಕ್ವಾರಂಟೈನ್‌ ಮಾಡಿ ನಿಗಾ ಇಡಲಾಗಿತ್ತು. ಒಂದು ಹಂತದಲ್ಲಿ ಆಸ್ಪತ್ರೆಯಲ್ಲಿ ಜಾಗವೇ ಇಲ್ಲದಷ್ಟು ಸೋಂಕಿತರು ಬಂದರೂ ಜಿಲ್ಲಾಡಳಿತ ಸಮರ್ಥವಾಗಿ ನಿರ್ವಹಿಸಿದ್ದರಿಂದ ಸಮಸ್ಯೆ
ಯಾಗಲಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಬೆಡ್‌ಗಳನ್ನು ಜಾಸ್ತಿ ಮಾಡಲಾಯಿತು. ಎಲ್ಲ ತಾಲ್ಲೂಕು ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಯಿತು. ಈ ಎಲ್ಲ ಕಾರಣಗಳಿಂದ ಸಾವಿನ ಪ್ರಮಾಣ ಕಡಿಮೆಗೊಳಿಸಲು ಸಾಧ್ಯವಾಯಿತು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ಕೊರೊನಾ ಲಕ್ಷಣಗಳು ಕಂಡುಬಂದಿದ್ದರೂ ಸಮಾಜದ ಮನಸ್ಥಿತಿಗೆ ಹೆದರಿ ಕೆಲವರು ಆಸ್ಪತ್ರೆಗೆ ಬಾರದೆ, ರೋಗ ಉಲ್ಬಣಗೊಂಡ ಬಳಿಕ ಆಸ್ಪತ್ರೆಗೆ ಬರುತ್ತಿದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿತ್ತು. ಸೋಂಕು ಯಾರೂ ಬೇಕಂತಲೇ ತಂದುಕೊಳ್ಳುವುದಿಲ್ಲ ಎಂಬುದು ಜನರಿಗೆ ಮನವರಿಕೆ ಆದ ಬಳಿಕ ಕೊರೊನಾ ಬಗ್ಗೆ ಮೊದಲು ಇದ್ದ ಆತಂಕದ ಮನೋಭಾವ ಬದಲಾಗಿದ್ದು ಕೂಡ ಸಾವನ್ನು ತಡೆಯಲು ಕಾರಣವಾಗಿದೆ. ಕೊರೊನಾ ಅಂದರೆ ಏನು ಎಂಬುದು ಸರಿಯಾಗಿ ಗೊತ್ತಾಗುವ ಮೊದಲೇ ಸೋಂಕು ತಗುಲಿದಾಗ ಒಂದಷ್ಟು ಮಂದಿ ಹೆದರಿಯೇ ಮೃತಪಟ್ಟಿದ್ದರು. ಅವೆಲ್ಲ ಈಗ ನಿಯಂತ್ರಣವಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.