ADVERTISEMENT

ದಾವಣಗೆರೆ: ತಳ್ಳುಗಾಡಿ ವ್ಯಾಪಾರಿಗೆ ಕೊರೊನಾ, ಜನರ ನಿದ್ದೆಗೆಡಿಸಿದ ಬೆಳ್ಳುಳ್ಳಿ

ವಿನಾಯಕ ಭಟ್ಟ‌
Published 15 ಮೇ 2020, 4:18 IST
Last Updated 15 ಮೇ 2020, 4:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ನಗರದಲ್ಲಿ ತಳ್ಳುವ ಗಾಡಿಯಲ್ಲಿ ಬೆಳ್ಳುಳ್ಳಿ ವ್ಯಾಪಾರ ಮಾಡುತ್ತಿದ್ದ ಪಿ.ಜೆ. ಬಡಾವಣೆಯ ರೈತರ ಬೀದಿಯ 32 ವರ್ಷದ ವ್ಯಾಪಾರಿಯಲ್ಲೂ (ಪಿ–976) ಕೊರೊನಾ ವೈರಸ್‌ನ ಸೋಂಕು ಕಾಣಿಸಿಕೊಂಡಿರುವುದು ನಾಗರಿಕರ ನಿದ್ದೆಗೆಡಿಸಿದೆ.

ತಳ್ಳುವ ಗಾಡಿಯೊಂದಿಗೆ ನಗರದ ವಿವಿಧೆಡೆ ಸಂಚರಿಸಿ ವ್ಯಾಪಾರ ಮಾಡುತ್ತಿದ್ದ ಯುವಕನಿಗೆ ಕೋವಿಡ್‌–19 ರೋಗ ಇರುವುದು ದೃಢಪಡುತ್ತಿದ್ದಂತೆ ‘ಬೆಳ್ಳುಳ್ಳಿಯ ಘಾಟಿನ’ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಸೋಂಕಿತ ವ್ಯಕ್ತಿಯಿಂದ ತಾವೇನಾದರೂ ಬೆಳ್ಳುಳ್ಳಿ ಖರೀದಿಸಿದ್ದೇವೆಯೇ ಎಂಬ ಆತಂಕ ಜನರನ್ನು ಕಾಡುತ್ತಿದೆ.

ಹೊಟ್ಟೆಪಾಡಿಗೆ ವೃತ್ತಿ ಬದಲಾವಣೆ: ಸೋಂಕಿತ ವ್ಯಕ್ತಿಯು ಅರುಣ ಟಾಕೀಸ್‌ ಬಳಿ ಸಣ್ಣದೊಂದು ಚಿಕನ್‌ ಬಿರಿಯಾನಿ ಹೋಟೆಲ್‌ ನಡೆಸುತ್ತಿದ್ದರು. ಲಾಕ್‌ಡೌನ್‌ ಜಾರಿಗೊಂಡಿದ್ದರಿಂದ ಹೋಟೆಲ್‌ ಬಂದ್‌ ಆಗಿತ್ತು. ಜೀವನ ನಿರ್ವಹಣೆಗಾಗಿ ಬೆಳ್ಳುಳ್ಳಿ ಹಾಗೂ ಈರುಳ್ಳಿ ಮಾರಾಟ ಮಾಡಲು ಮುಂದಾದರು. ಎರಡು ತಿಂಗಳಿಂದ ತಳ್ಳುವ ಗಾಡಿಯಲ್ಲಿ ಬೆಳ್ಳುಳ್ಳಿ ವ್ಯಾಪಾರ ಮಾಡುತ್ತಿದ್ದರು.

ADVERTISEMENT

ಇವರ ಮನೆಯ ಪಕ್ಕದ ಮೂವರ ಜೊತೆಗೂಡಿ ಬೆಳ್ಳುಳ್ಳಿ ವ್ಯಾಪಾರ ಮಾಡುತ್ತಿದ್ದರು. ನಾಲ್ಕೈದು ಜನರ ಗುಂಪು ಒಟ್ಟಿಗೆ ವ್ಯಾಪಾರಕ್ಕೆ ಹೋಗುತ್ತಿತ್ತು. ಮಧ್ಯಾಹ್ನ 12 ಗಂಟೆಯೊಳಗೆ ವ್ಯಾಪಾರ ಮುಗಿಸಿ ಇವರೆಲ್ಲ ಮನೆಗೆ ಮರಳುತ್ತಿದ್ದರು. ಈರುಳ್ಳಿ ಲಾರಿಯ ಮೂಲಕ ಸೋಂಕು ಹರಡುತ್ತಿದೆ ಎಂಬ ಸುದ್ದಿ ಬರುತ್ತಿದ್ದಂತೆ ಎಂಟು ದಿನಗಳ ಹಿಂದೆಯೇ ವ್ಯಾಪಾರ ಮಾಡುವುದನ್ನು ನಿಲ್ಲಿಸಿದ್ದರು. ಆದರೆ, ಮೇ 10ರಂದು ಶೀತಜ್ವರ (ಐಎಲ್‌ಐ) ಕಾಣಿಸಿಕೊಂಡಿದ್ದರಿಂದ ಅವರು ಜಿಲ್ಲಾ ಆಸ್ಪತ್ರೆಗೆ ತೋರಿಸಿಕೊಳ್ಳಲು ಬಂದಿದ್ದರು. ಅವರ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

‘ಸೋಂಕಿತ ವ್ಯಾಪಾರಿಯನ್ನು ವಿಚಾರಣೆ ನಡೆಸಿದಾಗ ‘ಎಂಬಿಆರ್‌ ಟ್ರೇಡರ್ಸ್‌ನಿಂದ ಬೆಳ್ಳುಳ್ಳಿ ಹಾಗೂ ಈರುಳ್ಳಿ ಖರೀದಿಸುತ್ತಿದ್ದೆ. ಜಿಲ್ಲಾ ಕ್ರೀಡಾಂಗಣ ಪಕ್ಕದ ವಿನಾಯಕ ಮೆಡಿಕಲ್ಸ್‌ ಬಳಿ, ಹೈಸ್ಕೂಲ್‌ ಮೈದಾನದ ಬಳಿ ವ್ಯಾಪಾರ ಮಾಡುತ್ತಿದ್ದೆ’ ಎಂದು ಮಾಹಿತಿ ನೀಡಿದ್ದಾರೆ. ಇವರೊಂದಿಗೆ ದ್ವಿತೀಯ ಸಂಪರ್ಕ ಹೊಂದಿದ್ದ 16 ಜನರನ್ನು ಗುರುತಿಸಿ ಈಗಾಗಲೇ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಮತ್ತೆ ಯಾರೆಲ್ಲ ಸಂಪರ್ಕ ಹೊಂದಿದ್ದರು ಎಂದು ಪತ್ತೆ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.

ಸೋಂಕಿತ ಬೆಳ್ಳುಳ್ಳಿ ವ್ಯಾಪಾರಿಯೊಂದಿಗೆ ವಹಿವಾಟು ನಡೆಸಿರುವ ಜನರಲ್ಲಿ ಮತ್ತು ಇವರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರಲ್ಲೂ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಹಳೆ ದಾವಣಗೆರೆ ಭಾಗದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಸೋಂಕಿನ ಕೊಂಡಿ ಇದೀಗ ಹೊಸ ದಾವಣಗೆರೆ ಭಾಗದಲ್ಲೂ ಕಾಣಿಸಿಕೊಂಡಿದೆ. ಕೆಟಿಜೆ ನಗರದ ಜೊತೆಗೆ ಇದೀಗ ರೈತರ ಬೀದಿಯಲ್ಲೂ ಹೊಸ ಕಂಟೈನ್‌ಮೆಂಟ್‌ ಝೋನ್‌ ನಿರ್ಮಾಣಗೊಂಡಿದೆ.

ಪೊಲೀಸರಿಗೂ ಕಾಡುತ್ತಿದೆ ಕೋವಿಡ್‌ ಭೀತಿ

ಸಂಚಾರ ಪೊಲೀಸ್‌ ಠಾಣೆಯ 34 ವರ್ಷದ ಕಾನ್‌ಸ್ಟೆಬಲ್‌ಗೆ (ಪಿ–975) ಕೊರೊನಾ ಸೋಂಕು ತಗುಲಿರುವುದರಿಂದ ಇದೀಗ ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಕೆಲಸ ಮಾಡುವ ಪೊಲೀಸರಿಗೂ ಕೋವಿಡ್‌ ರೋಗದ ಭೀತಿ ಕಾಡುತ್ತಿದೆ.

ಕೆಟಿಜೆ ನಗರದ 52 ವರ್ಷದ ಮಹಿಳೆಗೆ (ಪಿ–665) ಸೋಂಕು ತಗುಲಿರುವುದು ಮೇ 5ರಂದು ದೃಢಪಟ್ಟಿತ್ತು. ಮೇ 3ರಂದೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಟಿಜೆ ನಗರದ ಕಂಟೈನ್‌ಮೆಂಟ್‌ ಝೋನ್‌ನಲ್ಲಿ ಇದುವರೆಗೂ ಮತ್ತೆ ಯಾರಲ್ಲೂ ಸೋಂಕು ಪತ್ತೆಯಾಗಿರಲಿಲ್ಲ. ಮೇ 7ರಿಂದ ಮೂರು ದಿನಗಳ ಕಾಲ ಇಲ್ಲಿ ಕಾನ್‌ಸ್ಟೆಬಲ್ ಕೆಲಸ ಮಾಡಿದ್ದರು. ಆದರೆ, ಇದೀಗ ಅವರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಅಲ್ಲಿ ಇನ್ನೂ ಯಾರಾದರೂ ಸೋಂಕಿತರು ಇದ್ದಾರೆಯೇ ಅಥವಾ ಇವರಿಗೆ ಬೇರೆ ಕಡೆಯಿಂದ ಸೋಂಕು ತಗುಲಿತೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಕಾನ್‌ಸ್ಟೆಬಲ್‌ ಜೊತೆಗೆ ಕೆಲಸ ಮಾಡಿದ್ದ ಪೊಲೀಸ್‌ ಸಿಬ್ಬಂದಿಗೂ ಕೊರೊನಾ ಭೀತಿ ಕಾಡುತ್ತಿದೆ. ಇವರು ಕೆಲಸ ಮಾಡುತ್ತಿದ್ದ ಸಂಚಾರ ಠಾಣೆಯ ಪ್ರವೇಶ ದ್ವಾರಕ್ಕೆ ಗುರುವಾರ ಬ್ಯಾರಿಕೇಡ್ ಹಾಕಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಈರುಳ್ಳಿ ನಂಟು ತಂದಿತೇ ಸೋಂಕು?

‘ಹೊರ ರಾಜ್ಯದಿಂದ ಬಂದ ಈರುಳ್ಳಿ ಲಾರಿಯಿಂದಾಗಿ ನಗರದಲ್ಲಿ ಸೋಂಕು ಹರಡಿರಬಹುದು ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಇದೀಗ ಬೆಳ್ಳುಳ್ಳಿ ವ್ಯಾಪಾರಿಯಲ್ಲೂ ಸೋಂಕು ಕಾಣಿಸಿಕೊಂಡಿದೆ. ಇವರಿಗೆ ಯಾವ ಮೂಲದಿಂದ ಸೋಂಕು ಹರಡಿರಬಹುದು ಎಂದು ತನಿಖೆ ನಡೆಸಲಾಗುತ್ತಿದ್ದು, ಇನ್ನಷ್ಟು ಸಮಯ ಬೇಕಾಗಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದ್ದಾರೆ.

‘ಮಹಾರಾಷ್ಟ್ರದ ಜೊತೆಗೆ ಚಳ್ಳಕೆರೆಯ ಕಲ್ಲಳ್ಳಿಯಿಂದಲೂ ನಗರಕ್ಕೆ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಎಪಿಎಂಸಿಗೆ ಬಂದು ಹೋಗುವ ಲಾರಿ ಚಾಲಕರು ಹಾಗೂ ಕ್ಲೀನರ್‌ಗಳನ್ನೂ ವಿಚರಣೆಗೊಳಪಡಿಸಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಬೆಳ್ಳುಳ್ಳಿ ವ್ಯಾಪಾರಿ ವಾಸಿಸುತ್ತಿದ್ದ ರೈತರ ಬೀದಿಯನ್ನು ಹೊಸದಾಗಿ ಕಂಟೈನ್‌ಮೆಂಟ್‌ ಝೋನ್‌ ಮಾಡಲಾಗಿದೆ. ಸ್ಥಳಕ್ಕೆ ತೆರಳಿ ಸಮೀಕ್ಷೆ ನಡೆಸಿ, ಸೀಲ್‌ಡೌನ್‌ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.