ADVERTISEMENT

ಸಂತೇಬೆನ್ನೂರು | ದಂಪತಿಯನ್ನು ಥಳಿಸಿ, ಕಟ್ಟಿಹಾಕಿ ಚಿನ್ನಾಭರಣ ದರೋಡೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:38 IST
Last Updated 8 ಸೆಪ್ಟೆಂಬರ್ 2025, 6:38 IST
   

ಸಂತೇಬೆನ್ನೂರು: ಸಮೀಪದ ಕಾಕನೂರಿನ ಹೊರವಲಯದಲ್ಲಿ ಶನಿವಾರ ರಾತ್ರಿ ಮನೆಗೆ ನುಗ್ಗಿದ ಐವರು ದರೋಡೆಕೋರ ತಂಡ, ದಂಪತಿಯನ್ನು ಥಳಿಸಿ, ಚಿನ್ನಾಭರಣ ದೋಚಿದೆ. 

ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ಬದಿಯ ತೋಟದ ಮನೆಯಲ್ಲಿ ಶನಿವಾರ ರಾತ್ರಿ 7.20 ರಿಂದ 8 ಗಂಟೆ ಅವಧಿಯಲ್ಲಿ ಕೃತ್ಯ ನಡೆದಿದೆ. ನಿವೃತ್ತ ಶಿಕ್ಷಕ ಮಾದಪ್ಪ ಹಾಗೂ ಅವರ ಪತ್ನಿ ಇಬ್ಬರೇ ಮನೆಯಲ್ಲಿ ಇರುವ ಸಮಯ ನೋಡಿಕೊಳ್ಳು ಕಳ್ಳರು ಹೊಂಚು ಹಾಕಿದ್ದಾರೆ. ರಾತ್ರಿ ಮನೆಗೆ ಬರಬೇಕಿದ್ದ ತಮ್ಮ ಪುತ್ರನಿಗಾಗಿ, ಬೀಗದ ಕೀಯನ್ನು ಬಾಗಿಲಲ್ಲಿಯೇ ದಂಪತಿ ಇಟ್ಟಿದ್ದರು ಎನ್ನಲಾಗಿದೆ.  

ಮಗ ಬರುವುದಕ್ಕೂ ಮುನ್ನ ಏಕಾಏಕಿ ನುಗ್ಗಿದ ದರೋಡೆಕೋರರು ಚಾಕು ಹಿಡಿದು ದಂಪತಿಯನ್ನು ಬೆದರಿಸಿದರು. ಮಾದಪ್ಪ ಅವರ ಕೈಕಾಲು ಕಟ್ಟಿಹಾಕಿದ್ದಾರೆ. ಅಡುಗೆ ಮನೆಯಲ್ಲಿದ್ದ ಸಾವಿತ್ರಮ್ಮ ಅವರಿಗೆ ಬಲವಾಗಿ ಕಪಾಳಕ್ಕೆ ಹೊಡೆದಿದ್ದಾರೆ. ಬೆದರಿಸಿ, ಅವರ ಮೈಮೇಲಿದ್ದ ಚಿನ್ನದ ಆಭರಣ ಕಸಿದುಕೊಂಡಿದ್ದಾರೆ. ನಂತರ ಅವರನ್ನೂ ಥಳಿಸಿ, ಕೈಕಾಲು ಕಟ್ಟಿದ್ದಾರೆ. 

ADVERTISEMENT

ಬೀರುವಿನ ಬೀಗ ತೆಗೆದು, ಅದರಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ. ಅಂದಾಜು ₹8.85 ಲಕ್ಷ ಮೌಲ್ಯದ 15 ಗ್ರಾಂ ಚಿನ್ನಾಭರಣ ಹಾಗೂ 750 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

ರಾತ್ರಿ 11 ಗಂಟೆಗೆ ಎಸ್‌ಪಿ ಉಮಾ ಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸಾಕ್ಷ್ಯ ಸಂಗ್ರಹಿಸಿದರು. ಎಎಸ್‌ಪಿ ಸ್ಯಾಮ್ ವರ್ಗೀಸ್, ಸಿಪಿಐ ನಿಂಗನಗೌಡ ನೆಗಳೂರು, ಎಸ್‌ಐ ಜಿ.ಜಗದೀಶ್ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ.

ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.