ADVERTISEMENT

ದಾವಣಗೆರೆ: ಕೋವಿಡ್ ಬಗ್ಗೆ ಎಚ್ಚರಿಕೆ ಅಗತ್ಯ -ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 4:09 IST
Last Updated 19 ಜೂನ್ 2021, 4:09 IST
ದಾವಣಗೆರೆಯ ರಿಂಗ್‌ ರಸ್ತೆಯ ಕರ್ನಾಟಕ ಹಿಮೋಫಿಲಿಯ ಸೊಸೈಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಮಾಣಪತ್ರ ವಿತರಿಸಿದರು
ದಾವಣಗೆರೆಯ ರಿಂಗ್‌ ರಸ್ತೆಯ ಕರ್ನಾಟಕ ಹಿಮೋಫಿಲಿಯ ಸೊಸೈಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಮಾಣಪತ್ರ ವಿತರಿಸಿದರು   

ದಾವಣಗೆರೆ:ಕೋವಿಡ್ ಸೋಂಕು ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಕಂಡುಬರುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಜಾಗರೂಕತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಜಿಲ್ಲಾ ವರದಿಗಾರರ ಕೂಟ ಹಾಗೂ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ 7ನೇ ಯೋಗ ದಿನಾಚರಣೆಯ ಪ್ರಯುಕ್ತ ಶುಕ್ರವಾರ ರಿಂಗ್ ರಸ್ತೆಯ ಕರ್ನಾಟಕ ಹಿಮೋಫಿಲಿಯ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಕೋವಿಡ್‌ ಮೂರನೇ ಅಲೆ ಬರುತ್ತದೆ ಎಂದು ಎಚ್ಚರಿಸಿರುವ ಕಾರಣಮಕ್ಕಳನ್ನೂ ಸೇರಿ ಯಾರೂ ಅನಗತ್ಯವಾಗಿ ಹೊರಗೆ ಬರಬಾರದು. ಮನೆಯಲ್ಲಿಯೇ ಸುರಕ್ಷಿತರಾಗಿರಿ ಎಂದರು.

ADVERTISEMENT

ರಕ್ತದಾನ ಮಾಡಿದರೆ ಒಂದು ಜೀವ ಉಳಿಸಿದ ಶ್ರೇಷ್ಟ ಕೆಲಸ ನಮ್ಮದಾಗುತ್ತದೆ. ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗುತ್ತದೆ.ದೇಶದಲ್ಲಿ ಕೋವಿಡ್ ಸಂದಿಗ್ಧ ಪರಿಸ್ಥಿತಿಗಿಂತಲೂ, ಸೂಕ್ತ ಸಮಯಕ್ಕೆ ರಕ್ತ ಸಿಗದೆ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಿದೆ. ಪ್ರತಿಯೊಬ್ಬರೂ ರಕ್ತದಾನ ಮಾಡಲು ಸ್ವಯಂಪ್ರೇರಿತವಾಗಿ ಮುಂದಾಗಬೇಕು ಎಂದು ಸಲಹೆ ನೀಡಿದರು.

ಹೆಚ್ಚು ಹೆಚ್ಚು ರಕ್ತ ದಾನ ಮಾಡಿದಷ್ಟು ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಯುವಜನರು ಹೆಚ್ಚು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆ ಬೇಡ ಎಂದರು.

‘ಸಮಾಜದಿಂದ ಬಂದದ್ದನ್ನು ಸಮಾಜಕ್ಕೇ ಅರ್ಪಿಸಬೇಕು’ ಎಂಬಂತೆ ಕಿರುವಾಡಿ ಗಿರಿಜಮ್ಮ ಮತ್ತು ಬಿ.ಸಿ. ಉಮಾಪತಿ ಅವರನ್ನು ನೋಡಿ ಕಲಿಯಬೇಕಿದೆ. ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿರುವ ಅವರು ಸೇವೆಯನ್ನು ತಮ್ಮ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು ಬದುಕುತ್ತಿದ್ದಾರೆ. ಇದು ನಿರಂತರವಾಗಿರಲಿ ಎಂದು ಅಭಿನಂದಿಸಿದರು.

ನಂತರ ರಕ್ತದಾನ ಮಾಡಿದ ಯುವಕರಿಗೆ ಹೂ ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಿದರು.

ದಾವಣಗರೆ ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ್ ರಾಯ್ಕರ್, ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಗೌರವ ಅಧ್ಯಕ್ಷೆ ಕಿರುವಾಡಿ ಗಿರಿಜಮ್ಮ, ವರ್ತಕ ಬಿ.ಸಿ. ಉಮಾಪತಿ, ಆಸ್ಪತ್ರೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.