ADVERTISEMENT

ಹಸು ಕೆಚ್ಚಲು ಕೊಯ್ದ ಕೃತ್ಯ ಖಂಡಿಸಿ ಪ್ರತಿಭಟನೆ

ಗೋ ಸಂರಕ್ಷಣಾ ಸಂವರ್ಧನಾ ಸಮಿತಿಯ ನೇತೃತ್ವ; ಗೋಪೂಜೆ ಸಲ್ಲಿಸಿದ ಪ್ರತಿಭಟನಕಾರರು

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 15:53 IST
Last Updated 18 ಜನವರಿ 2025, 15:53 IST

ದಾವಣಗೆರೆ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಕೃತ್ಯವನ್ನು ಖಂಡಿಸಿ ಗೋ ಸಂರಕ್ಷಣಾ ಸಂವರ್ಧನಾ ಸಮಿತಿ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಬಿಜೆಪಿ ಮುಖಂಡರು ಇಲ್ಲಿನ ಜಯದೇವ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರು ಗೋವುಗಳಿಗೆ ಪೂಜೆ ಸಲ್ಲಿಸಿ, ಅಕ್ಕಿ, ಬಾಳೆಹಣ್ಣು ಹಾಗೂ ಹುಲ್ಲು ತಿನ್ನಿಸಿದರು. ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

‘ಕೆಚ್ಚಲಿನ ಮೂಲಕ ಅಮೃತವನ್ನು ನೀಡುವ ಯಾವುದಾದರೂ ದೇವರಿದ್ದರೆ ಅದು ಗೋಮಾತೆ. ಗೋವುಗಳ ಕೆಚ್ಚಲನ್ನು ಕೊಯ್ದು ವಿಕೃತಿ ಮೆರೆದಿರುವುದು ಅತ್ಯಂತ ಖಂಡನೀಯ’ ಎಂದು ಸಮಿತಿಯ ಮುಖಂಡ ಸತೀಶ್ ಪೂಜಾರಿ ಹೇಳಿದರು.

ADVERTISEMENT

‘ವರ್ಷದ ಹಿಂದೆ ಪಶುವೈದ್ಯಕೀಯ ಆಸ್ಪತ್ರೆಯನ್ನು ಸಚಿವ ಜಮೀರ್ ಅಹಮದ್ ಅವರು ವಕ್ಫ್ ಬೋರ್ಡ್‌ಗೆ ಸೇರಿಸಲು ಮುಂದಾಗಿದ್ದನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಗೋಪೂಜೆಗೆ ತರಲಾಗಿದ್ದ ಹಸುಗಳ ಕೆಚ್ಚಲನ್ನೇ ಉದ್ದೇಶಪೂರ್ವಕವಾಗಿ ಕೊಯ್ಯಲಾಗಿದೆ. ಈ ಘಟನೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕು. ಸಚಿವ ಜಮೀರ್ ಅಹಮದ್ ಅವರನ್ನೂ ತನಿಖೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

‘ಮೌಲ್ವಿಗಳು ಹಾಗೂ ಮಠ ಮಂದಿರಗಳ ಸ್ವಾಮೀಜಿಗಳು ಹೀನ ಕೃತ್ಯವನ್ನು ಖಂಡಿಸದೇ, ಭ್ರಷ್ಟ ರಾಜ್ಯ ಸರ್ಕಾರ ನೀಡುವ ಅನುದಾನಕ್ಕಾಗಿ ಮೌನ ವಹಿಸಿದ್ದಾರೆ. ಅವರು ಬೀದಿಗಿಳಿದು ಹೋರಾಟ ನಡೆಸಬೇಕು’ ಎಂದು ಆಗ್ರಹಿಸಿದರು.

‘ಹಸುಗಳ ಮಾಲೀಕರಿಗೆ ಸಚಿವ ಜಮೀರ್ ಅಹಮದ್ ಪರಿಹಾರ ನೀಡುವುದು ಬೇಕಿಲ್ಲ. ಸರ್ಕಾರದಿಂದಲೇ ಗೋವುಗಳ ಮಾಲೀಕರಿಗೆ ಪರಿಹಾರ ನೀಡಬೇಕು. ಕೃತ್ಯಕ್ಕೆ ಸಂಬಂಧಿಸಿ ಅಮಾಯಕರನ್ನು ಬಂಧಿಸುವುದನ್ನು ಬಿಟ್ಟು ನಿಜವಾದ ಆರೋಪಿಗಳನ್ನು ಬಂಧಿಸಬೇಕು’ ಎಂದು ಹೇಳಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಅಶ್ವಥ್ ಅವರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪ, ಮುಖಂಡರಾದ ಲೋಕಿಕೆರೆ ನಾಗರಾಜ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಎಸ್.ಟಿ.ವೀರೇಶ್, ವೈ.ಮಲ್ಲೇಶ್ಣ, ವಿನಾಯಕ್ ರನಾಡೆ, ರಾಜ್ ಪುರೋಹಿತ್ ಪ್ರಕಾಶ್, ಗೌತಮ್ ಜೈನ್, ಸಿಂಧೂ ಆರ್. ಕಾನಡೆ, ಕಲ್ಯಾಣಮ್ಮ, ರಮೇಶ್ ಎನ್.ಇ., ಅರುಣ್ ಗುಡ್ಡದಕರೆ, ಸಿ.ಎಸ್.ರಾಜು, ಭರತ್ ಕಲ್ಯಾಣ್ ಸಿಂಗ್, ಕೃಷ್ಣಪ್ಪ ರಾಜೇಶ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.