
ದಾವಣಗೆರೆ: ನಗರದ ಹೊರವಲಯದ ಅಪೂರ್ವ ರೆಸಾರ್ಟ್‌ನಲ್ಲಿನ ಮದುವೆಯಲ್ಲಿ ₹ 67.48 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣವನ್ನು ಭೇದಿಸಿದ ಗ್ರಾಮಾಂತರ ಠಾಣೆಯ ಪೊಲೀಸರು, ₹ 51.49 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಮಧ್ಯಪ್ರದೇಶದಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀಮಂತರ ವಿವಾಹಗಳನ್ನು ಗುರಿಯಾಗಿಸಿಕೊಂಡು ಕಳವು ಕೃತ್ಯ ನಡೆಸುತ್ತಿದ್ದ ಕುಖ್ಯಾತ ‘ಬ್ಯಾಂಡ್, ಬಾಜಾ, ಭಾರತ್’ ಗ್ಯಾಂಗ್ ಈ ಕೃತ್ಯ ಎಸಗಿದ್ದು ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳಾದ ಕರಣ್ ವರ್ಮಾ ಮತ್ತು ವಿನಿತ್ ಸಿಸೊಡಿಯಾ ಪರಾರಿಯಾಗಿದ್ದು, ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ.
‘ನ.14 ರಂದು ಅಪೂರ್ವ ರೆಸಾರ್ಟ್‌ನಲ್ಲಿ ಮದುವೆ ನಡೆಯುತ್ತಿತ್ತು. ರಾತ್ರಿ 8.30ರ ಸುಮಾರಿಗೆ ರೆಸಾರ್ಟ್ ಪ್ರವೇಶಿಸಿದ ದುಷ್ಕರ್ಮಿಗಳು ಮಹಿಳೆಯ ಕೈಯಲ್ಲಿದ್ದ ಚಿನ್ನಾಭರಣದ ಬ್ಯಾಗಿಗೆ ಹೊಂಚು ಹಾಕಿದ್ದರು. ಮಹಿಳೆಯು ಕುರ್ಚಿಯ ಕೆಳಗೆ ಬ್ಯಾಗ್ ಇಟ್ಟುಕೊಂಡು ಚಪ್ಪಾಳೆ ತಟ್ಟಲು ಪ್ರಯತ್ನಿಸಿದಾಗ 535 ಗ್ರಾಂ ಚಿನ್ನಾಭರಣಗಳಿದ್ದ ಬ್ಯಾಗ್ ಕಳವು ಮಾಡಿ ಪರಾರಿಯಾಗಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ಬ್ಯಾಗ್ ಕಳವು ಆಗಿರುವುದು ಗಮನಕ್ಕೆ ಬರುತ್ತಿದ್ದಂತೆ ಮಹಿಳೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಮದುವೆಯ ವಿಡಿಯೊ ಸೇರಿದಂತೆ 250ಕ್ಕೂ ಅಧಿಕ ಸಿ.ಸಿ.ಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಯಿತು. ಆರೋಪಿಗಳ ಜಾಡು ಹಿಡಿದ ತನಿಖಾ ತಂಡ, ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಸಾರಂಗಪುರ್ ತೆಹಸಿಲ್‌ನ ಗುಲ್ಖೇಡಿ ಗ್ರಾಮಕ್ಕೆ ತೆರಳಿ ಕಾರ್ಯಾಚರಣೆ ನಡೆಸಿತು’ ಎಂದು ವಿವರಿಸಿದರು.
‘ತನಿಖಾ ತಂಡವು ಖಾಸಗಿ ವಾಹನದಲ್ಲಿ ಮಧ್ಯಪ್ರದೇಶಕ್ಕೆ ತೆರಳಿ ಸ್ಥಳೀಯ ಪೊಲೀಸರ ನೆರವು ಪಡೆಯಿತು. 14 ದಿನ ಕಾರ್ಯಾಚರಣೆ ನಡೆಸಿ ಆರೋಪಿಗಳು ಇರುವ ಸ್ಥಳ ಪತ್ತೆ ಮಾಡಿತು. ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲು ಹೋದಾಗ ಕರಣ್ ವರ್ಮಾ ಮತ್ತು ವಿನೀತ್ ಸಿಸೋಡಿಯಾ ಮನೆಯಿಂದ ತಪ್ಪಿಸಿಕೊಂಡರು’ ಎಂದರು.
‘ಮನೆಯನ್ನು ಪರಿಶೀಲಿಸಿದಾಗ ₹ 51.49 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಕಳವು ಕೃತ್ಯವನ್ನು ಗ್ಯಾಂಗ್ ವೃತ್ತಿಪರವಾಗಿ ಮಾಡುತ್ತಿದೆ. ಶ್ರೀಮಂತರ ವಿವಾಹಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತದೆ. ಈ ಗ್ಯಾಂಗಿನಲ್ಲಿ ಪುರುಷರು ಮತ್ತು ಮಹಿಳೆಯರು ಕೂಡ ಇದ್ದಾರೆ. ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಇರುತ್ತ ಸ್ಥಳೀಯ ಪೊಲೀಸರಿಗೆ ಅನುಮಾನ ಬರದಂತೆ ವರ್ತಿಸುತ್ತಾರೆ’ ಎಂದರು.