ADVERTISEMENT

ಗಿಳಿಗಳ ದಾಳಿ: ಪಾಪ್‌ಕಾರ್ನ್ ಮೆಕ್ಕೆಜೋಳಕ್ಕೆ ಕುತ್ತು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 7:39 IST
Last Updated 23 ಆಗಸ್ಟ್ 2025, 7:39 IST
ಪಾಪ್‌ಕಾರ್ನ್ ಮೆಕ್ಕೆಜೋಳದ ಹೊಲವೊಂದರಲ್ಲಿ ಗಿಳಿಗಳ ದಾಳಿಯಿಂದ ಬರಿದಾಗಿರುವ ತೆನೆಗಳು
ಪಾಪ್‌ಕಾರ್ನ್ ಮೆಕ್ಕೆಜೋಳದ ಹೊಲವೊಂದರಲ್ಲಿ ಗಿಳಿಗಳ ದಾಳಿಯಿಂದ ಬರಿದಾಗಿರುವ ತೆನೆಗಳು   

ಸಂತೇಬೆನ್ನೂರು: ಬೆಳಗಾಗುತ್ತಿದ್ದಂತೆಯೇ ಹೊಲಗಳಿಗೆ ಗಿಳಿಗಳ ಹಿಂಡು ದಾಳಿಯಿಡುತ್ತಿದ್ದು, ಅವುಗಳಿಂದ ಪಾಪ್‌ಕಾರ್ನ್ ಮೆಕ್ಕೆಜೋಳದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

ಹೋಬಳಿ ವ್ಯಾಪ್ತಿಯಲ್ಲಿ ಪಾಪ್‌ಕಾರ್ನ್ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದ್ದು, ತೆನೆಗಳು ಹಾಲುಗಾಳು ಸ್ಥಿತಿಯಲ್ಲಿವೆ. ಮಿದುವಾದ ಹಾಗೂ ರುಚಿಕರ ಕಾಳು ತಿನ್ನಲು ಗಿಳಿಗಳು ಹೊಲಕ್ಕೆ ದಾಳಿ ಇಡುತ್ತಿವೆ. ಇಡೀ ತೆನೆಯನ್ನು ತಿಂದುಹಾಕುತ್ತಿವೆ. ಪ್ರತಿ ಎಕರೆಗೆ ₹20,000ದಿಂದ ₹25,000 ಖರ್ಚು ಮಾಡಿರುವ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಗಿಳಿ ಓಡಿಸಲು ಸೂರ್ಯೋದಯಕ್ಕೆ ಮುನ್ನವೇ ಹೊಲಕ್ಕೆ ಧಾವಿಸುವ ರೈತರು ನಾನಾ ತಂತ್ರ ಅನುಸರಿಸುತ್ತಾರೆ. ತಟ್ಟೆ, ತಮಟೆ, ಡಬ್ಬ ಬಡಿಯುತ್ತಾರೆ. ಕೇಕೆ ಹಾಕಿ, ಪಟಾಕಿ ಸಿಡಿಸುತ್ತಾರೆ. ಡಮ್ಮಿ ಗನ್ ಬಳಸಿ ಗಿಳಿ ಓಡಿಸುವ ಯತ್ನ ನಡೆಸಿದರೂ, ನಿಯಂತ್ರಣ ಸಾಧ್ಯವಾಗದೇ ಬೆಳೆ ಹಾನಿಗೀಡಾಗಿದೆ.

ADVERTISEMENT

ಈಚಿನ ದಿನಗಳಲ್ಲಿ ಮಧ್ಯಾಹ್ನದ ವೇಳೆಯೂ ಗಿಳಿಗಳು ದಾಳಿ ಇಡುತ್ತಿದ್ದು, 8 ಎಕರೆಯಲ್ಲಿ ಬೆಳೆದಿದ್ದ ಬೆಳೆ ಬಹುತೇಕ ಗಿಳಿಗಳಿಗೆ ಅಹಾರವಾಗಿದೆ ಎನ್ನುತ್ತಾರೆ ದೊಡ್ಡಬ್ಬಿಗೆರೆ ವಿನಾಯಕ ಹಾಗೂ ಶಿವು.

‘ಶಾಲೆಗೆ ತೆರಳುವ ಮುನ್ನ ಗಿಳಿ ಓಡಿಸಲು ಹೊಲಕ್ಕೆ ಹೋಗುತ್ತೇವೆ. ರೆಕಾರ್ಡೆಡ್ ಧ್ವನಿವರ್ಧಕಗಳನ್ನು ಹಿಡಿದು ಹೊಲ ಸುತ್ತುತ್ತೇವೆ. ಒಮ್ಮೆಗೆ 20 ರಿಂದ 30 ಗಿಳಿಗಳ ಹಿಂಡು ದಾಳಿ ಇಡುತ್ತವೆ’ ಎನ್ನುತ್ತಾರೆ ವಿದ್ಯಾರ್ಥಿಗಳು.

ಮೇನಲ್ಲಿ ಪಾಪ್ ಕಾರ್ನ್ ಬಿತ್ತನೆ ಮಾಡಿ ಎರಡು ಎಕರೆಗೆ ₹45000 ಖರ್ಚು ಮಾಡಿದ್ದೆ. ಉತ್ತಮ ಮಳೆಯಿಂದ ಭರಪೂರ ಇಳುವರಿ ನಿರೀಕ್ಷೆ ಇತ್ತು. ಗಿಳಿಗಳ ದಾಳಿಯಿಂದ ಬೆಳೆ ಸಂಪೂರ್ಣ ಹಾಳಾಗಿದೆ
ಶ್ರೀನಿವಾಸ್ ಟಪಾಲ್ ಗ್ರಾಮಸ್ಥ

ರುಚಿಕರ ಪಾಪ್‌ಕಾರ್ನ್ ಮೆಕ್ಕೆಜೋಳ ಈ ಭಾಗದ ವಿಶೇಷ ಬೆಳೆ. ಬ್ರಾಂಡೆಡ್ ತಿನಿಸು ತಯಾರಿಸಲು ಇದಕ್ಕೆ ಭಾರಿ ಬೇಡಿಕೆ ಇದೆ. ಹೋಬಳಿಯಲ್ಲಿ 2,000 ಹೆಕ್ಟೇರ್‌ನಲ್ಲಿ ಪಾಪ್‌ಕಾರ್ನ್ ಬಿತ್ತನೆಯಾಗಿದೆ. ಈ ಪೈಕಿ 1,000 ಹೆಕ್ಟೇರ್ ಬೆಳೆ ಕೇದಿಗೆ ರೋಗದಿಂದ ಈಗಾಗಲೇ ನಾಶವಾಗಿದೆ. ಉಳಿದ ಬೆಳೆಯೂ ಗಿಳಿಗಳಿಂದ ಹಾಳಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾನಿ ಸಮೀಕ್ಷೆ ನಡೆಸಬೇಕು ಎನ್ನುತ್ತಾರೆ ರೈತರು.

ಗಿಳಿಗಳನ್ನು ಓಡಿಸಲು ಎಲೆಕ್ಟ್ರಾನಿಕ್ ಧ್ವನಿವರ್ಧಕ ಅಳವಡಿಸಿರುವುದು
ಗಿಳಿ ಓಡಿಸಲು ಡಬ್ಬ ಬಡಿಯುತ್ತಿರುವ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.