ADVERTISEMENT

ಧ್ವನಿವರ್ಧಕದ ಮೂಲಕ ಕರ್ಫ್ಯೂ ಜಾರಿ

ಅನಗತ್ಯವಾಗಿ ಹೊರ ಬಂದರೆ ದಂಡ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 3:23 IST
Last Updated 28 ಏಪ್ರಿಲ್ 2021, 3:23 IST
ಲಾಕ್‌ಡೌನ್ ಘೋಷಣೆಯಾದ ಬೆನ್ನಲ್ಲೇ ವಿವಿಧ ಊರುಗಳಿಂದ ದಾವಣಗೆರೆಯ ರೈಲು ನಿಲ್ದಾಣಕ್ಕೆ ಬಂದಿಳಿದಾಗ ಕಂಡುಬಂದ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಲಾಕ್‌ಡೌನ್ ಘೋಷಣೆಯಾದ ಬೆನ್ನಲ್ಲೇ ವಿವಿಧ ಊರುಗಳಿಂದ ದಾವಣಗೆರೆಯ ರೈಲು ನಿಲ್ದಾಣಕ್ಕೆ ಬಂದಿಳಿದಾಗ ಕಂಡುಬಂದ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕೋವಿಡ್ ತಡೆಗೆ ರಾಜ್ಯ ಸರ್ಕಾರ ವಿಧಿಸಿರುವ 14 ದಿನಗಳ ಲಾಕ್‌ಡೌನ್‌ ನಗರದಲ್ಲಿ ಮಂಗಳವಾರ ರಾತ್ರಿಯೇ ಜಾರಿಯಾಯಿತು.ರಾತ್ರಿ 9 ಗಂಟೆಯ ನಂತರ ‘ಮನೆಗೆ ಹೊರಡಿ’ ಎಂದು ಧ್ವನಿವರ್ಧಕದ ಮೂಲಕಪೊಲೀಸರು ಅಂಗಡಿ ಬಾಗಿಲು ಮುಚ್ಚಿಸುತ್ತಾ ಹೋದರು. ಜನರೆಲ್ಲ ಮನೆ ಸೇರಿದರು. ನಗರವೆಲ್ಲಾ ನಿರ್ಜನವಾಯಿತು.

ಒಂದು ದಿವಸ ಮುಂಚಿತವಾಗಿಯೇ ಲಾಕ್‌ಡೌನ್ ಮಾಹಿತಿ ನೀಡಿದ್ದರಿಂದ ಮಾರುಕಟ್ಟೆ, ದಿನಸಿ ಅಂಗಡಿಗಳಲ್ಲಿ ಜನಜಂಗುಳಿ ಇತ್ತು. ಹೊರ ಜಿಲ್ಲೆಯಲ್ಲಿದ್ದ ಜಿಲ್ಲೆಯ ಜನರು ಬಸ್‌ ಹಾಗೂ ರೈಲುಗಳ ಮೂಲಕ ನಗರಕ್ಕೆ ಬಂದಿಳಿದರು. ಬೆಂಗಳೂರು–ದಾವಣಗೆರೆ ಮಾರ್ಗವಾಗಿ 60ಕ್ಕೂ ಹೆಚ್ಚು ಬಸ್‌ಗಳು ಸಂಚರಿಸಿವೆ.

ಅಗತ್ಯ ವಸ್ತುಗಳು, ಕೃಷಿ ಪರಿಕರಗಳ ಅಂಗಡಿಗಳು ತೆರೆದಿದ್ದು, ಬೆಳಿಗ್ಗೆಯಿಂದ ರಾತ್ರಿ 9ರ ತನಕ ಖರೀದಿಸಿದರು. ಹೋಟೆಲ್‌ಗಳು ಹಾಗೂ ಮದ್ಯದ ಅಂಗಡಿಗಳಲ್ಲಿ ಪಾರ್ಸೆಲ್‌ಗೆ ಅವಕಾಶ ನೀಡಲಾಗಿತ್ತು.

ADVERTISEMENT

ಬುಧವಾರದಿಂದ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ಅವಕಾಶ ಕಲ್ಪಿಸಿದ್ದು, ಆನಂತರ ಎಲ್ಲಾ ವಹಿವಾಟುಗಳು ಬಂದ್ ಆಗಲಿವೆ. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಇರುವುದಿಲ್ಲ.

‘ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಅನಗತ್ಯವಾಗಿ ಹೊರ ಬಂದರೆ ದಂಡ ಕಟ್ಟಲು ಸಿದ್ಧರಾಗಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

‘ಲಾಕ್‌ಡೌನ್ ವೇಳೆ ಬೆಳಿಗ್ಗೆ ಮದ್ಯ ಖರೀದಿಸಿ ಸಂಜೆ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ, ಅಬಕಾರಿ ಹಾಗೂ ಪೊಲೀಸ್ ಇಲಾಖೆಗಳು ಜಂಟಿಯಾಗಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತವೆ’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಎಚ್ಚರಿಸಿದ್ದಾರೆ.

‘ಮಧ್ಯಾಹ್ನದವರೆಗೆ ರಸಗೊಬ್ಬರ ಮಾರಾಟ’

ದಾವಣಗೆರೆ: ಲಾಕ್‌ಡೌನ್ ನಿಮಿತ್ತ ಕೃಷಿ ಚಟುವಟಿಕೆಗೆ ನಿರ್ಬಂಧವಿಲ್ಲ. ಆದರೂ ರೈತರು ಮತ್ತು ವ್ಯಾಪಾರಿಗಳ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಅಂಗಡಿಗಳು ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ
ತೆಗೆದಿರುತ್ತದೆ.

ರೈತರು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಕೊರೊನಾ ಸುರಕ್ಷತಾ ನಿಯಮ ಪಾಲನೆ ಮಾಡಬೇಕು ಎಂದು ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ್ ಲೋಕಿಕೆರೆ ಅವರು ಮನವಿ
ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.