ADVERTISEMENT

ದಾವಣಗೆರೆ | ಕೋವಿಡ್‌–19 ಭೀತಿ: ಹೋಟೆಲ್‌ಗಳಿಗೆ ಬಾರದ ಗ್ರಾಹಕರು

ಶೇ 40ರಷ್ಟು ಮಾತ್ರ ವ್ಯಾಪಾರ: ವಸತಿ ಗೃಹಗಳೂ ಖಾಲಿ ಖಾಲಿ

ಡಿ.ಕೆ.ಬಸವರಾಜು
Published 19 ಜೂನ್ 2020, 19:30 IST
Last Updated 19 ಜೂನ್ 2020, 19:30 IST
ದಾವಣಗೆರೆಯ ಬಸ್‌ ನಿಲ್ದಾಣದ ಮುಂಭಾಗದಲ್ಲಿರುವ ಹೊಟೇಲ್‌ನಲ್ಲಿ ಗ್ರಾಹಕರಿಲ್ಲದೇ ಬಣಗುಡುತ್ತಿದೆ. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಬಸ್‌ ನಿಲ್ದಾಣದ ಮುಂಭಾಗದಲ್ಲಿರುವ ಹೊಟೇಲ್‌ನಲ್ಲಿ ಗ್ರಾಹಕರಿಲ್ಲದೇ ಬಣಗುಡುತ್ತಿದೆ. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕೋವಿಡ್‌–19 ಕಾರಣದಿಂದ ಲಾಕ್‌ಡೌನ್‌ ಆಗಿದ್ದ ಹೋಟೆಲ್‌ಗಳು ಹಾಗೂ ವಸತಿಗೃಹಗಳಿಗೆ (ಲಾಡ್ಜ್) ಗ್ರಾಹಕರು ಬರುತ್ತಿಲ್ಲ. ಇದರಿಂದಾಗಿ ಮೂರು ತಿಂಗಳು ಲಾಕ್‌ಡೌನ್‌ನಿಂದಾಗಿ ಮೊದಲೇ ಸಂಕಷ್ಟದಲ್ಲಿದ್ದ ಹೋಟೆಲ್ ಮಾಲೀಕರಿಗೆ ಈಗ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಕೋವಿಡ್–19 ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಆರಂಭ ಮಾಡಿದರೂ ನಿರೀಕ್ಷಿಸಿದ ಮಟ್ಟಿಗೆ ಗ್ರಾಹಕರು ಬರುತ್ತಿಲ್ಲ. ಇದರಿಂದಾಗಿ ಕೆಲವು ಹೋಟೆಲ್‌ಗಳು ಮುಚ್ಚಿವೆ. ಕೆಲವು ಹೋಟೆಲ್‌ಗಳು ಇನ್ನೂ ಆರಂಭವಾಗಿಲ್ಲ. ಕ್ವಾರಂಟೈನ್‌ಗೆ ಒಳಪಡಿಸಲು ಕೆಲವು ವಸತಿಗೃಹಗಳನ್ನು ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಕೆಲವುಗಳನ್ನು ಬಿಟ್ಟುಕೊಟ್ಟಿದೆ. ಆದರೂ ಅವುಗಳಿಗೆ ಗ್ರಾಹಕರು ಬಾರದೇ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಅಲ್ಲದೇ ಕ್ವಾರಂಟೈನ್‌ಗೆ ಒಳಪಡಿಸಿದ ಹೋಟೆಲ್‌ಗಳ ಮಾಲೀಕರಿಗೆ ಜಿಲ್ಲಾಡಳಿತ ಬಿಲ್‌ ಅನ್ನು ಇನ್ನೂ ಪಾವತಿ ಮಾಡಿಲ್ಲ. ಇದರಿಂದಾಗಿ ಅವರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿರುವ ಸವಾಲಿನ ಜತೆಗೆ ಸದ್ಯದ ಆರ್ಥಿಕ ಸಂಕಷ್ಟವನ್ನು ಹೇಗೆ ಎದುರಿಸಬೇಕೆಂಬ ಚಿಂತೆ ಮಾಲೀಕರನ್ನು ಕಾಡುತ್ತಿದೆ.

ADVERTISEMENT

‘ಮಾರುಕಟ್ಟೆ ಇರುವ ಪ್ರದೇಶದಲ್ಲಿ ಸ್ವಲ್ಪಮಟ್ಟಿಗೆ ಬರುತ್ತಿದ್ದಾರೆ. ಆದರೆ ಬೇರೆ ಕಡೆ ಹೋಟೆಲ್‌ಗಳಲ್ಲಿ ಅಂತಹ ವ್ಯಾಪಾರವಿಲ್ಲ. ಅಂತರರಾಜ್ಯ ಬಸ್‌ಗಳ ಸಂಚಾರ ಹಾಗೂ ರೈಲು ಸಂಚಾರ ಸರಿಯಾಗಿ ಆರಂಭವಾಗದ ಹಿನ್ನೆಲೆಯಲ್ಲಿ ಹೊರಗಡೆಯಿಂದ ಜನರು ಬರುತ್ತಿಲ್ಲ. ಪ್ರವಾಸ ಮಾಡಿದರೂ ಉಳಿದುಕೊಳ್ಳಲು ಜನರು ಎದುರುತ್ತಿದ್ದಾರೆ. ಹಳ್ಳಿಯಿಂದ ಜನರು ಬಂದರೂ ಹೋಟೆಲ್‌ಗಳಲ್ಲಿ ಮೊದಲಿನ ತರಹ ವ್ಯಾಪಾರವಿಲ್ಲ. ಮನೆಯಿಂದಲೇ ತಿಂಡಿ, ಬಿಸಿನೀರು ತರುತ್ತಿದ್ದಾರೆ. ಹೋಟೆಲ್‌ಗಳಲ್ಲಿ ವ್ಯಾಪಾರವಿಲ್ಲ’ ಎನ್ನುತ್ತಾರೆ ದಾವಣಗೆರೆ ಹೋಟೆಲ್ ಉದ್ದಿಮೆದಾರರ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಬಿ.ಕೆ.

‘ಜನರ ಮನಸ್ಸಿನಲ್ಲಿ ಕೋವಿಡ್ ಭಯ ಹೋಗುವ ತನಕ ವ್ಯಾಪಾರವಿಲ್ಲ. ಜನರನ್ನು ಆಕರ್ಷಣೆಗೊಳಿಸುವ ಸ್ಕೀಂ ಇಲ್ಲ. ಇಂದಿನ ಪರಿಸ್ಥಿಯಲ್ಲಿ ಉಳಿದುಕೊಳ್ಳುವುದನ್ನು ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಬಾಡಿಗೆ ಕಟ್ಟಲು ತೊಂದರೆಯಾಗಿದ್ದು, ಕಟ್ಟಡಗಳ ಮಾಲೀಕರಿಗೆ ಮನವಿ ಮಾಡಿದರೂ ಅವರು ಕೇಳುವ ಸ್ಥಿತಿಯಲ್ಲಿ ಇಲ್ಲ’ ಎಂದು ಹೇಳುತ್ತಾರೆ.

‘ಹೋಟೆಲ್‌ಗಳಲ್ಲಿ ತುಂಬಾ ವರ್ಷಗಳಿಂದ ಕೆಲಸ ಮಾಡುವ ಕೆಲಸಗಾರರು ಇದ್ದಾರೆ. ಅವರನ್ನು ಬರಬೇಡಿ ಎನ್ನಲೂ ಆಗುವುದಿಲ್ಲ. ಲಾಭದ ಮಾತು ಇರಲಿ ಅವರನ್ನು ಉಳಿಸಿಕೊಂಡರೆ ಸಾಕಾಗಿದೆ. ದಕ್ಷಿಣ ಭಾರತ ಶೈಲಿಯ ಹೋಟೆಲ್‌ಗಳಲ್ಲಿ ಶೇ 40ರಷ್ಟು ವ್ಯವಹಾರವಾಗಿದೆ. ಆದರೆ ಉತ್ತರ ಭಾರತ ಶೈಲಿಯ ಹೋಟೆಲ್‌ಗಳು ಇನ್ನೂ ಚೇತರಿಸಿಕೊಂಡಿಲ್ಲ. ಕೆಲವು ಆರಂಭವಾಗಿಲ್ಲ. ಆರಂಭವಾದರೂ ಕುಟುಂಬ ಸಮೇತ ಬಂದು ಊಟ ಮಾಡುವುದು ಕಷ್ಟ’ ಎನ್ನುತ್ತಾರೆ.

‘ಲಾಡ್ಜ್‌ಗಳ ಕ್ವಾರಂಟೈನ್‌ಗೆ ತೆಗೆದುಕೊಂಡಿದ್ದರಿಂದ ಹೊರಗಡೆಯಿಂದ ಬಂದವರು ವಾಸ್ತವ್ಯ ಹೂಡಲು ಹೆದರುತ್ತಿದ್ದಾರೆ. ಸ್ಯಾನಿಟೈಸ್ ಮಾಡಿದರೂ ರಿಸ್ಕ್ ಯಾಕೆ ಎಂದು ಬರುತ್ತಿಲ್ಲ’ ಎಂಬುದು ಸುಬ್ರಹ್ಮಣ್ಯ ಅವರ ವಾದ.

‘ಶಾಲಾ–ಕಾಲೇಜುಗಳು ಆರಂಭವಾಗಿಲ್ಲ. ಗ್ರಾಮೀಣ ಭಾಗದಿಂದ ಜನರು ಬರುತ್ತಿಲ್ಲ. ಇದರಿಂದಾಗಿ ವ್ಯಾಪಾರ ಶೇ 40ರಷ್ಟು ಮಾತ್ರ ಆಗಿದೆ. ಅಂತರರಾಜ್ಯ ಬಸ್ ಸಂಚಾರ ಆರಂಭವಾದರೆ ಗ್ರಾಹಕರು ಬರಬಹುದು’ ಎಂಬುದು ಶರಭೇಶ್ವರ ಹೋಟೆಲ್ ಮಾಲೀಕ ಎಚ್.ಎಂ.ಬಸವರಾಜಯ್ಯ ಹಿರೇಮಠ್ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.