ದಾವಣಗೆರೆ: ರಾಜ್ಯದ ದಾವಣಗೆರೆಯಲ್ಲೂ ಒಳೊಂಡಂತೆ ದೇಶದ ವಿವಿಧೆಡೆ ಮೊಬೈಲ್ ಹ್ಯಾಕ್ ಮಾಡುವ ಮೂಲಕ ₹ 150 ಕೋಟಿಗೂ ಅಧಿಕ ಮೊತ್ತದ ವಂಚನೆ ಎಸಗಿರುವ ಪ್ರಕರಣದ ಆರೋಪಿಗಳು ಖಾಸಗಿ ಕಂಪನಿಗಳ ಬ್ಯಾಂಕ್ ಖಾತೆಗಳನ್ನೇ (ಫರ್ಮ್ ಖಾತೆ) ಗುರಿಯಾಗಿಸಿಕೊಂಡಿದ್ದ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಇಲ್ಲಿನ ನಿಟುವಳ್ಳಿಯ ನಿವಾಸಿ, ಉದ್ಯಮಿ ಎಚ್.ಎಚ್. ಪ್ರಮೋದ್ ಅವರ ‘ಅಂಜನಾದ್ರಿ ಕನ್‌ಸ್ಟ್ರಕ್ಷನ್ಸ್’ ಹೆಸರಿನ ಬ್ಯಾಂಕ್ ಖಾತೆಯಲ್ಲಿದ್ದ ₹ 52.60 ಲಕ್ಷ ಹಣವನ್ನು ಆರೋಪಿಗಳು ಆಗಸ್ಟ್ 11ರಂದು ಅಕ್ರಮವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಇಲ್ಲಿನ ಸೈಬರ್ ಅಪರಾಧ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ, ಮುಖ್ಯ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಆರೋಪಿಗಳು ₹ 150 ಕೋಟಿಯಷ್ಟು ಬೃಹತ್ ಮೊತ್ತವನ್ನು ಕಂಪನಿಯೊಂದರ ಹೆಸರಲ್ಲಿ ತೆರೆದಿದ್ದ ಖಾತೆಗೆ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದರು. ಈ ಪೈಕಿ ₹ 132 ಕೋಟಿ ಹಣವನ್ನು ನಗದೀಕರಿಸಿಕೊಂಡಿದ್ದರು. ಇನ್ನುಳಿದ ₹ 18 ಕೋಟಿ ಹಣವನ್ನು ಪೊಲೀಸರು ಬ್ಯಾಂಕ್ ಖಾತೆಯಲ್ಲಿಯೇ ತಟಸ್ಥಗೊಳಿಸಿದ್ದು, ದೂರುದಾರ ಪ್ರಮೋದ್ ಅವರಿಗೆ ₹ 52.60 ಲಕ್ಷ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿಸಿದ್ದಾರೆ.
ಆರೋಪಿಗಳು ವಂಚನೆ ಎಸಗಲೆಂದೇ ಹೈದರಾಬಾದ್‌ನಲ್ಲಿ ‘ಕೆ.ಕೆ. ಆಗ್ರೋ ಎಕ್ಸ್‌ಪರ್ಟ್ಸ್’ ಸಂಸ್ಥೆಯ ಹೆಸರಿನಲ್ಲಿ ಖಾತೆ ತೆರೆದಿದ್ದರು. ವಿವಿಧ ಕಂಪನಿಗಳನ್ನು ಹೊಂದಿರುವ ಮಾಲೀಕರ ಮೊಬೈಲ್ ಹ್ಯಾಕ್ ಮಾಡಿ, ಬ್ಯಾಂಕ್ ಖಾತೆಗಳಿಗೇ ಕನ್ನ ಹಾಕಿ ಆನ್‌ಲೈನ್ ಮೂಲಕ ಭಾರಿ ಪ್ರಮಾಣದ ಹಣವನ್ನು ‘ಕೆ.ಕೆ. ಆಗ್ರೋ ಎಕ್ಸ್‌ಪರ್ಟ್ಸ್’ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಈ ಬಗ್ಗೆ ಎನ್‌ಸಿಆರ್‌ಪಿಯಲ್ಲಿ (ಸೈಬರ್ ಅಪರಾಧ ಪ್ರಕರಣ ದಾಖಲಿಸುವ ಪೋರ್ಟಲ್) 127 ಪ್ರಕರಣಗಳು ವರದಿಯಾಗಿವೆ.
‘ಆರೋಪಿಗಳು ಫರ್ಮ್‌ಗಳು ಹೊಂದಿರುವ ಬ್ಯಾಂಕ್ ಖಾತೆಗಳನ್ನೇ ಯಾಕೆ ಟಾರ್ಗೆಟ್ ಮಾಡಿಕೊಂಡಿದ್ದರು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಉತ್ತರಪ್ರದೇಶ, ಜಮ್ಮುಕಾಶ್ಮೀರ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ಆರೋಪಿಗಳು ವಂಚನೆ ಎಸಗಿದ್ದಾರೆ. ಕೆಲವು ಬ್ಯಾಂಕ್‌ಗಳ ಸಿಬ್ಬಂದಿಯೂ ಈ ಪ್ರಕರಣಗಳಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಯಾವ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ?, ಮೊಬೈಲ್ ಸಂಖ್ಯೆ ಯಾವುದು? ಎಂಬುದೂ ಸೇರಿದಂತೆ ಇನ್ನಿತರ ಮಾಹಿತಿಯನ್ನು ಹಣದ ಆಸೆಗೆ ಕೆಲವು ಬ್ಯಾಂಕ್‌ಗಳ ಸಿಬ್ಬಂದಿ ವಂಚಕರೊಂದಿಗೆ ಹಂಚಿಕೊಂಡಿರುವ ಶಂಕೆ ಇದೆ. ವಂಚಕರು ಉದ್ಯಮಿಗಳ ಮೊಬೈಲ್ ಸಂಖ್ಯೆಗೆ ಎಪಿಕೆ ಫೈಲ್‌ಗಳನ್ನು ಕಳಿಸಿ, ಮೊಬೈಲ್ ಹ್ಯಾಕ್ ಮಾಡಿ ವಂಚಿಸಿರುವುದು ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ಗೆ ಒಳಪಡಿಸಲಾಗಿದೆ. ಪ್ರಕರಣವು ತನಿಖಾ ಹಂತದಲ್ಲಿದ್ದು ಶೀಘ್ರವೇ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳಲಾಗುವುದುಉಮಾ ಪ್ರಶಾಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಾವಣಗೆರೆ
ಮೊಬೈಲ್ ಬಳಕೆದಾರರು ಎಲ್ಲಾ ರೀತಿಯ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು. ವಾಟ್ಸ್ ಆ್ಯಪ್ ಸಂದೇಶದ ಮೂಲಕ ಬಂದ ಆ್ಯಪ್‌ಗಳಿಗೆ ಅನುಮತಿ ನೀಡುವ ಮುನ್ನ ಪರಿಶೀಲಿಸಬೇಕು. ಎಪಿಕೆ ಫೈಲ್‌ಗಳನ್ನು ಕ್ಲಿಕ್ ಮಾಡಬಾರದುಬಂಕಾಳಿ ನಾಗಪ್ಪ ಡಿವೈಎಸ್‌ಪಿ ಸೈಬರ್ ಅಪರಾಧ ಠಾಣೆ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.