ADVERTISEMENT

ಸೈಬರ್ ವಂಚನೆ; ದೂರುದಾರನೇ ಆರೋಪಿ!

₹152 ಕೋಟಿಯಲ್ಲ, ಸಾವಿರಕ್ಕೂ ಹೆಚ್ಚು ಕೋಟಿ ಹಣ ವಹಿವಾಟು; ಸಿಐಡಿಗೆ ಪ್ರಕರಣ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:59 IST
Last Updated 21 ಡಿಸೆಂಬರ್ 2025, 6:59 IST
ಅರ್ಫಾತ್‌ ಪಾಷಾ
ಅರ್ಫಾತ್‌ ಪಾಷಾ   

ದಾವಣಗೆರೆ: ₹52 ಲಕ್ಷ ಮೊತ್ತದ ಆನ್‌ಲೈನ್ ವಂಚನೆ ಪ್ರಕರಣದಲ್ಲಿ ದೂರುದಾರನೇ ಪ್ರಮುಖ ಆರೋಪಿಯಾಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. 

ಆರಂಭದಲ್ಲಿ ₹152 ಕೋಟಿ ಮೊತ್ತದ ವಂಚನೆ ನಡೆದಿದೆ ಎಂದು ದೂರು ದಾಖಲಾದ ಪ್ರಕರಣದಲ್ಲಿ ಅಸಲಿಗೆ ₹1,000 ಕೋಟಿಗೂ ಹೆಚ್ಚು ಅಂತರರಾಜ್ಯ ವಹಿವಾಟು ನಡೆದಿದ್ದು, ಪ್ರಕರಣವನ್ನು ಪೊಲೀಸರು ಸಿಐಡಿಗೆ ಹಸ್ತಾಂತರಿಸಿದ್ದಾರೆ. 

ಏನಿದು ಪ್ರಕರಣ: 

ADVERTISEMENT

‘ನನ್ನ ‘ಅಂಜನಾದ್ರಿ ಕನ್‌ಸ್ಟ್ರಕ್ಷನ್ಸ್‌’ ಹೆಸರಿನ ಬ್ಯಾಂಕ್‌ ಖಾತೆಯಲ್ಲಿದ್ದ ₹52.60 ಲಕ್ಷ ಹಣವನ್ನು ಸೈಬರ್ ವಂಚಕರು ಇದೇ ಆಗಸ್ಟ್‌ 11ರಂದು ನೆಟ್‌ ಬ್ಯಾಂಕಿಂಗ್‌ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ’ ಎಂದು ಇಲ್ಲಿನ ನಿಟುವಳ್ಳಿಯ ನಿವಾಸಿ, ಕಟ್ಟಡ ನಿರ್ಮಾಣ ವಲಯದ ಉದ್ಯಮಿ ಪ್ರಮೋದ್‌ ಎಚ್‌.ಎಚ್‌. ದೂರು ನೀಡಿದ್ದರು. 

ಪ್ರಕರಣ ದಾಖಲಿಸಿಕೊಂಡಿದ್ದ ಇಲ್ಲಿನ ಸೈಬರ್ ಅಪರಾಧ ಠಾಣೆ ಪೊಲೀಸರು, ಹಾಸನದ ಅರ್ಫಾತ್‌ ಪಾಷಾ ಹಾಗೂ ಗುಜರಾತ್‌ನ ಅಹಮ್ಮದಾಬಾದ್‌ನ ಸಂಜಯ್ ಕುಂದ್ ಅವರನ್ನು ಬಂಧಿಸಿದ್ದರು.   

ಆರೋಪಿಗಳು ₹152 ಕೋಟಿಯಷ್ಟು ಬೃಹತ್‌ ಮೊತ್ತವನ್ನು ಕಂಪನಿಯೊಂದರ ಹೆಸರಲ್ಲಿ ತೆರೆದಿದ್ದ ಖಾತೆಗೆ ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡಿದ್ದರು. ಈ ಪೈಕಿ ₹132 ಕೋಟಿ ಹಣವನ್ನು ನಗದೀಕರಿಸಿಕೊಂಡಿದ್ದರು. ಇನ್ನುಳಿದ ₹18 ಕೋಟಿ ಹಣವನ್ನು ಪೊಲೀಸರು ಬ್ಯಾಂಕ್‌ ಖಾತೆಯಲ್ಲಿಯೇ ತಟಸ್ಥಗೊಳಿಸಿ, ದೂರುದಾರ ಪ್ರಮೋದ್‌ ಅವರಿಗೆ ₹ 52.60 ಲಕ್ಷ ವಾಪಸ್‌ ಕೊಡಿಸಿದ್ದರು. 

ಪ್ರಕರಣದ ಇಬ್ಬರೂ ಆರೋಪಿಗಳನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸಾವಿರಕ್ಕೂ ಹೆಚ್ಚು ಕೋಟಿ ಮೊತ್ತದ ಅಕ್ರಮ ನಡೆದಿರುವುದು ಗೊತ್ತಾಗಿದೆ. ಮಾತ್ರವಲ್ಲದೇ ದೂರುದಾರ ಪ್ರಮೋದ್‌ ಅವರೇ ಪ್ರಮುಖ ಆರೋಪಿಯಾಗಿರುವುದು ತಿಳಿದು ಬಂದಿದೆ. 

ಕಮಿಷನ್‌ಗಾಗಿ ಖಾತೆ:  

ಖಾಸಗಿ ಕಂಪನಿಯ ಬ್ಯಾಂಕ್‌ ಖಾತೆ ತೆರೆದಿದ್ದ ಪ್ರಮೋದ್‌, ಅದನ್ನು ಕಮಿಷನ್‌ ಆಸೆಗೆ ಆನ್‌ಲೈನ್‌ ವಂಚಕರಿಗೆ ನೀಡಿದ್ದ. ಈ ಖಾತೆಯನ್ನು ಬಳಸಿಕೊಂಡು ಆರೋಪಿಗಳು ಬಹುಕೋಟಿ ಹಣವನ್ನು ವಹಿವಾಟು ನಡೆಸುತ್ತಿದ್ದರು. ದುಬೈನಿಂದ ಈ ಖಾತೆಗೆ ಕೋಟಿ ಕೋಟಿ ಹಣ ಜಮಾ ಆಗುತ್ತಿತ್ತು. ಆನ್‌ಲೈನ್ ಗೇಮ್‌, ಗ್ಯಾಂಬ್ಲಿಂಗ್, ಫೇಕ್ ಟ್ರೇಡಿಂಗ್‌ ಸೇರಿದಂತೆ ಇತರೆ ಹಣವೂ ಈ ಖಾತೆಯಲ್ಲಿ ಜಮಾ ಆಗುತ್ತಿತ್ತು. ಆರೋಪಿಗಳು ತನಗೆ ಕಮಿಷನ್‌ ನೀಡದಿದ್ದಾಗ ಪ್ರಮೋದ್‌ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.