ADVERTISEMENT

ದಾವಣಗೆರೆ | ಉಷ್ಣಾಂಶದಲ್ಲಿ ಕುಸಿತ: ಹೆಚ್ಚಿದ ಚಳಿ

ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶ ದಾಖಲು

ರಾಮಮೂರ್ತಿ ಪಿ.
Published 5 ಡಿಸೆಂಬರ್ 2024, 6:34 IST
Last Updated 5 ಡಿಸೆಂಬರ್ 2024, 6:34 IST
   

ದಾವಣಗೆರೆ: ಫೆಂಜಲ್ ಚಂಡಮಾರುತದ ಪರಿಣಾಮದಿಂದಾಗಿ ಉಷ್ಣಾಂಶದಲ್ಲಿ ತೀವ್ರ ಕುಸಿತವಾಗಿದ್ದು, ಚಳಿಯು ಜನರ ಮೈಕೊರೆಯುತ್ತಿದೆ. ಥಂಡಿ ವಾತಾವರಣದಿಂದಾಗಿ ಬೆಳಿಗ್ಗೆ ಹಾಗೂ ರಾತ್ರಿ ವೇಳೆ ಜನರು ಮನೆಯಿಂದ ಹೊರಬರಲೂ ಹಿಂದೇಟು ಹಾಕುವ ಸ್ಥಿತಿ ಇದೆ. ಅದರಲ್ಲೂ ವೃದ್ಧರು ಹಾಗೂ ಮಕ್ಕಳಿಗೆ ಉಷ್ಣಾಂಶದ ಕುಸಿತವು ಅನಾರೋಗ್ಯದ ಭೀತಿ ಸೃಷ್ಟಿಸಿದೆ.

ಮುಂಜಾನೆಯೇ ಕಾಯಕದಲ್ಲಿ ತೊಡಗುವವರಿಗೆ ಚಳಿಯಿಂದಾಗಿ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಮನೆ ಮನೆಗೆ ಹಾಲು, ದಿನಪತ್ರಿಕೆ ಹಾಕುವವರು, ತರಕಾರಿ ಮಾರಾಟ ಮಾಡುವವರು, ಪೌರಕಾರ್ಮಿಕರು ಹಾಗೂ ಇನ್ನಿತರ ಶ್ರಮಿಕರು ಮೈನಡುಗುವ ಚಳಿಯಲ್ಲೇ ಕೆಲಸ ಮುಂದುವರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸ್ವೆಟರ್, ಮಂಕಿಕ್ಯಾಪ್ ಸೇರಿದಂತೆ ಬೆಚ್ಚನೆಯ ಉಡುಪು ಧರಿಸಿ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

‘ಡಿಸೆಂಬರ್‌ನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕನಿಷ್ಠ 21 ಹಾಗೂ ಗರಿಷ್ಠ 27 ಡಿಗ್ರಿ ಉಷ್ಣಾಂಶ ಇರಲಿದೆ. ಆದರೆ, ಫೆಂಜಲ್ ಚಂಡಮಾರುತದ ಪರಿಣಾಮವಾಗಿ ಸೋಮವಾರ, ಮಂಗಳವಾರ ಕನಿಷ್ಠ 18 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಬುಧವಾರ ಕೊಂಚ ಬಿಸಿಲಿನ ವಾತಾವರಣ ಕಂಡುಬಂದಿದ್ದು, 20ರಿಂದ 22 ಡಿಗ್ರಿ ಉಷ್ಣಾಂಶ ದಾಖಲಾಗಿದೆ’ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಗ್ರಾಮೀಣ ಹವಾಮಾನ ಸೇವಾ ಪ್ರಾಯೋಜನೆಯ ಪ್ರಧಾನ ನೋಡಲ್ ಅಧಿಕಾರಿ ಶ್ರೀಧರ್ ಎಸ್‌. ತಿಳಿಸಿದರು.

ADVERTISEMENT

‘ಜನವಸತಿ ಪ್ರದೇಶಕ್ಕೆ ಹೋಲಿಸಿದರೆ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ 18 ಡಿಗ್ರಿ ಗಿಂತಲೂ ಕಡಿಮೆ ಉಷ್ಣಾಂಶ ದಾಖಲಾಗಿದೆ. ನಗರದಲ್ಲಿ ವಾಹನಗಳ ಓಡಾಟದ ಕಾರಣಕ್ಕೆ ಉಷ್ಣಾಂಶ ಸ್ವಲ್ಪ ಜಾಸ್ತಿ ದಾಖಲಾಗುತ್ತಿದೆ. ಈ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಚಳಿಯೂ ತೀವ್ರವಾಗಿರಲಿದೆ. ಇನ್ನು 2–3 ದಿನ ರೈತರು ಬೆಳೆಗಳ ಕಟಾವಿಗೆ ಮುಂದಾಗಬಾರದು’ ಎಂದು ಅವರು ಸಲಹೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಬೆಳಿಗ್ಗೆ ಹತ್ತಾರು ಜನ ಒಂದೆಡೆ ಸೇರಿ ಬೆಂಕಿ ಕಾಯಿಸುವ ದೃಶ್ಯ ಸಹಜವಾಗಿದೆ. ನಗರ ಹೊರವಲಯದಲ್ಲೂ ಅಲ್ಲಲ್ಲಿ ಈ ದೃಶ್ಯಗಳನ್ನು ಕಾಣಬಹುದು.

‘ನಸುಕಿನ ಜಾವ ಎದ್ದು ದ್ವಿಚಕ್ರ ವಾಹನದಲ್ಲಿ ಮಾರುಕಟ್ಟೆಗೆ ತೆರಳುವಾಗ ಮೈಕೊರೆಯುವ ಚಳಿಯು ಇನ್ನಿಲ್ಲದಂತೆ ಕಾಡುತ್ತದೆ. ಒಮ್ಮೊಮ್ಮೆ ಈ ಚಳಿಯೊಂದಿಗೆ ತುಂತುರು ಮಳೆಹನಿಯೂ ಸೇರಿದರೆ ಮೈಮೇಲೆ ಮಂಜುಗಡ್ಡೆ ಇಟ್ಟಂತಹ ಅನುಭವವಾಗುತ್ತದೆ. ಮಳೆ, ಗಾಳಿ ಏನೇ ಬಂದರೂ ಕಾಯಕ ನಿಲ್ಲಿಸಲಾಗುವುದಿಲ್ಲ. ಹೀಗಾಗಿ ಮೈ ನಡುಗುತ್ತಿದ್ದರೂ ವ್ಯಾಪಾರಕ್ಕೆ ತೆರಳುತ್ತೇವೆ’ ಎಂದು ಸೊಪ್ಪಿನ ವ್ಯಾಪಾರಿ ಪಿ.ಶೀಲಮ್ಮ ಚಳಿಯ ತೀವ್ರತೆಯನ್ನು ಬಿಚ್ಚಿಟ್ಟರು. 

ಶಕ್ತಿನಗರದ ನಿವಾಸಿ ಶೀಲಮ್ಮ ಬೆಳಿಗ್ಗೆ 4 ಗಂಟೆಗೆ ಮಂಡಿಪೇಟೆ ಮಾರುಕಟ್ಟೆಗೆ ತೆರಳಿ ಸೊಪ್ಪು ಖರೀದಿಸುತ್ತಾರೆ. ಆ ಸೊಪ್ಪನ್ನು ವಸತಿನಿಲಯ ಹಾಗೂ ಹೋಟೆಲ್‌ಗಳಿಗೆ ಪೂರೈಸುತ್ತಾರೆ. ಚಳಿಯಲ್ಲಿ ಕೆಲಸ ಮಾಡುವುದು ಅಭ್ಯಾಸವಾಗಿದೆ. ಆದರೆ, ವಾರದಿಂದೀಚೆಗೆ ಚಳಿಯು ತೀವ್ರ ಹೆಚ್ಚಾಗಿದೆ ಎನ್ನುತ್ತಾರೆ ಅವರು.

ಬೆಳಿಗ್ಗೆ 4 ಗಂಟೆಯಿಂದಲೇ ಕಾಯಕದಲ್ಲಿ ತೊಡಗುವ ದಿನಪತ್ರಿಕೆ ವಿತರಕರಿಗೂ ಚಳಿಯು ತೀವ್ರವಾಗಿ ಕಾಡುತ್ತಿದೆ. ಅದರಲ್ಲೂ ಇಳಿವಯಸ್ಸಿನವರಿಗೆ ಇನ್ನಿಲ್ಲದ ಸಂಕಷ್ಟ ಸೃಷ್ಟಿಸುತ್ತಿದೆ.

‘ಮುಂಜಾನೆಯೇ ಪತ್ರಿಕೆಗಳನ್ನು ಹೊಂದಿಸಿಕೊಂಡು, ಮನೆ ಮನೆಗೆ ವಿತರಿಸುವುದು ಸುಲಭದ ಕೆಲಸವಲ್ಲ. ತೀವ್ರ ಚಳಿಯಿಂದಾಗಿ ಬೈಕ್‌ ಹ್ಯಾಂಡಲ್‌ ಹಿಡಿಯುವುದು ಕೂಡ ಕಷ್ಟವಾಗುತ್ತಿದೆ. ಯುವಕರು ಹೇಗೋ ನಿಭಾಯಿಸುತ್ತಾರೆ. ಹಿರಿಯರಿಗೆ ತುಂಬಾ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಕುಮಾರಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.