ADVERTISEMENT

ಕಾಂಗ್ರೆಸ್‌ ದ್ವಂದ್ವದಿಂದ ದೇಶಕ್ಕೆ ಹಾನಿ: ಬಸವರಾಜ ಬೊಮ್ಮಾಯಿ

ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 4:50 IST
Last Updated 20 ಸೆಪ್ಟೆಂಬರ್ 2021, 4:50 IST
ದಾವಣಗೆರೆಯ ತ್ರಿಶೂಲ್‌ ಕಲಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಲಕವಿಟ್ಟು ಆರತಿ ಮಾಡಿ ಸ್ವಾಗತಿಸಲಾಯಿತು.–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ತ್ರಿಶೂಲ್‌ ಕಲಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಲಕವಿಟ್ಟು ಆರತಿ ಮಾಡಿ ಸ್ವಾಗತಿಸಲಾಯಿತು.–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ರಾಷ್ಟ್ರೀಕರಣ ಮಾಡಿದ ಕಾಂಗ್ರೆಸ್‌ ಖಾಸಗೀಕರಣವನ್ನು ಕೂಡ ಮಾಡಿತು. ಸಮಾಜವಾದದ ಮಾತನಾಡುತ್ತಲೇ ಬಂಡವಾಳ ಶಾಹಿಗಳಿಗೆ ಅವಕಾಶ ನೀಡಿತು. ಆಡಳಿತದುದ್ದಕ್ಕೂ ಇದೇ ರೀತಿಯ ದ್ವಂದ್ವ ಪ್ರದರ್ಶಿಸಿದ್ದರಿಂದ ದೇಶಕ್ಕೆ ಹಾನಿ ಆಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ನಗರದ ತ್ರಿಶೂಲ್ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಗೆ ಗಟ್ಟಿಯಾದ ಅಡಿಪಾಯ ಹಾಕದ ಕಾಂಗ್ರೆಸ್‌ ಕೇಂದ್ರದಲ್ಲಿಯೂ ರಾಜ್ಯದಲ್ಲಿಯೂ ದುರ್ಬಲವಾಗಿತ್ತು. ಇದರಿಂದಾಗಿ ಅಲ್ಲಲ್ಲಿ ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾರಣವಾಯಿತು. ಪ್ರಾದೇಶಿಕ ಪಕ್ಷಗಳು ಬಹುಮತ ಪಡೆದಾಗ ಅವುಗಳು ಅಧಿಕಾರ ಹಿಡಿಯದಂತೆ ಕುಟಿಲ ನೀತಿಯನ್ನು ಅನುಸರಿಸಿತು. ಇಂಥ ಸಂದರ್ಭದಲ್ಲಿ ಸ್ಪಷ್ಟ ಸಿದ್ಧಾಂತ, ನಿಖರ ವೈಚಾರಿಕತೆಯೊಂದಿಗೆ ಜನರ ನಾಡಿಮಿಡಿತವನ್ನು ಅರಿತು, ಅವರ ಭಾವನೆಗಳಿಗೆ ಗೌರವ ನೀಡಿ ದೇಶದ ಅಭಿವೃದ್ಧಿಗಾಗಿ ಬಿಜೆಪಿ ಹುಟ್ಟಿಕೊಂಡಿತು ಎಂದು ವಿವರಿಸಿದರು.

ADVERTISEMENT

ಬಿಜೆಪಿ ಹುಟ್ಟಿ ನಾಲ್ಕು ದಶಕಗಳಷ್ಟೇ ಆಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಎಲ್ಲೆಡೆ ಬೂತ್‌, ಕಾರ್ಯಕರ್ತರು ಇರುವ ಪಕ್ಷವಾಗಿ ಬೆಳೆದಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ನರೇಂದ್ರಮೋದಿ ಅವರು ಸಣ್ಣ ಸಣ್ಣ ವಿಚಾರಗಳ ಮೂಲಕ ದೇಶವನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಸ್ವಚ್ಛತೆ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು. ಸ್ವಚ್ಛ ಭಾರತ್‌ ಅಭಿಯಾನವನ್ನು ಮಾಡಿ ಜಾಗೃತಿ ಮೂಡಿಸಿದರು. ಒಲಿಂಪಿಕ್ಸ್‌ ಬಗ್ಗೆ ಹಿಂದೆ ಯಾರಾದರೂ ಮಾತನಾಡಿದ್ರಾ? ಕೇಲ್‌ ಇಂಡಿಯಾ, ಜೀತ್‌ ಇಂಡಿಯಾ ಎಂದು ನರೇಂದ್ರ ಮೋದಿ ಹೇಳಬೇಕಾಯಿತು ಎಂದು ಶ್ಲಾಘಿಸಿದರು.

‘ರಾಜ್ಯದಲ್ಲಿ ಇಬ್ಬರಿರಲಿ, 40 ಮಂದಿ ಇರಲಿ, 102 ಮಂದಿ ಇರಲಿ ದಣಿವರಿಯದೇ ಹೋರಾಟ ಮಾಡಿದವರು ಬಿ.ಎಸ್‌. ಯಡಿಯೂರಪ್ಪ ಅವರು. ಸುತ್ತಮುತ್ತಲ ರಾಜ್ಯಗಳಲ್ಲಿ ಬಿಜೆಪಿ ಇನ್ನೂ ಆಡಳಿತ ಮಾಡಲು ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರ ಹೋರಾಟದಿಂದಾಗಿ ಕರ್ನಾಟಕದಲ್ಲಿ ಸಾಧ್ಯವಾಗಿದೆ. ಅವರ ಆಡಳಿತ, ಹೋರಾಟದ ದಾರಿಯಲ್ಲಿ ಜನಮೆಚ್ಚುಗೆ ಆಡಳಿತವನ್ನು ನೀಡಿ, ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿ ಕಾರ್ಯವನ್ನು ಈ ಸರ್ಕಾರ ಮಾಡಲಿದೆ. 2023ರಲ್ಲಿ ಚುನಾವಣೆಗೆ ಹೋಗುವಾಗ ಕಾರ್ಯಕರ್ತರು ತಲೆ ಎತ್ತಿ, ಎದೆ ಉಬ್ಬಿಸಿ ಮತ ಕೇಳುವಂತೆ ಕೆಲಸಗಳನ್ನು ಮಾಡುತ್ತೇವೆ’ ಎಂದು ಹೇಳಿದರು.

ರಾಜ್ಯ ಪ್ರಭಾರಿ ಅರುಣ್ ಸಿಂಗ್‌ ಮಾತನಾಡಿ, ‘20 ವರ್ಷಗಳ ಹಿಂದೆ ನರೇಂದ್ರ ಮೋದಿ ಗುಜರಾತ್‌ನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ತನ್ನ ತಾಯಿಯ ಬಳಿ ಹೋಗಿದ್ದರು. 1 ರೂಪಾಯಿ ಕೂಡ ಭ್ರಷ್ಟಾಚಾರ ಮಾಡಲ್ಲ ಎಂದು ತಾಯಿಗೆ ಹೇಳಿದ್ದರು. 20 ವರ್ಷಗಳು ಕಳೆದ ಮೇಲೆ ನೋಡಿದರೆ ಇಂದಿಗೂ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಮಾಡಿದ ಆರೋಪ ಮೋದಿಯ ಮೇಲಿಲ್ಲ’ ಎಂದು ಶ್ಲಾಘಿಸಿದರು.

‘ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು ಬಹುಮತ ಪಡೆದಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೂಡ ಪೂರ್ಣ ಬಹುಮತ ಪಡೆಯುತ್ತೇವೆ ಎಂಬ ವಿಶ್ವಾಸ ನಮಗಿದೆ. ಈವರೆಗಿನ 19 ಉಪ ಚುನಾವಣೆಗಳಲ್ಲಿ 18 ಗೆದ್ದಿರುವ ದಾಖಲೆ ನಮ್ಮದು. ಮುಂದಿನ ಸ್ಥಳೀಯಾಡಳಿತ ಚುನಾವಣೆ, ಉಪ ಚುನಾವಣೆ, ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಕೂಡ ಗೆಲ್ಲಬೇಕು. ಪಕ್ಷದ ಸಿದ್ಧಾಂತದ ಅಡಿಯಲ್ಲಿ ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡಿದರೆ ಇದೆಲ್ಲ ಸಾಧ್ಯ’ ಎಂದು ಹೇಳಿದರು.

ಅಧಿವೇಶನ ಮುಗಿದ ಕೂಡಲೇ ಆಡಳಿತಕ್ಕೆ ಚುರುಕು

ವಿಧಾನಮಂಡಲ ಅಧಿವೇಶನದ ಬಳಿಕ ರಾಜ್ಯದಾದ್ಯಂತ ಪ್ರವಾಸ ಮಾಡುವ ಮೂಲಕ ಆಡಳಿತಕ್ಕೆ ಚುರುಕು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭಾನುವಾರ ದಾವಣಗೆರೆಯಲ್ಲಿ‌ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.‌

ರಾಜ್ಯ ಬಿಜೆಪಿ ಕಾರ್ಯಕಾರಣಿ ಅತ್ಯಂತ ಯಶಸ್ವಿಯಾಗಿದೆ. ಇದರ ಯಶಸ್ಸು ಪಕ್ಷದ ಪ್ರತಿಯೊಬ್ಬ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಲ್ಲುತ್ತದೆ. ಹಲವಾರು ವಿಚಾರಗಳ ಬಗ್ಗೆ ಇಲ್ಲಿ ಚರ್ಚೆಗಳು ನಡೆದಿವೆ ಎಂದರು.

71 ಕುಂಭಗಳಿಂದ ಸ್ವಾಗತ

ಪ್ರಧಾನಿ ನರೇಂದ್ರ ಮೋದಿ ಅವರಿಗೆ 71 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬಿಜೆಪಿಯ 71 ಮಹಿಳೆಯರು 71 ಪೂರ್ಣಕುಂಭಗಳನ್ನು ಹಿಡಿದುಕೊಂಡು ಕಾರ್ಯಕಾರಣಿಗೆ ಬಂದ ಎಲ್ಲ ನಾಯಕರನ್ನು ವಿಶಿಷ್ಠವಾಗಿ ಸ್ವಾಗತಿಸಿದರು.

ಮುಖ್ಯಮಂತ್ರಿ ಸಹಿತ ಬಂದ ಎಲ್ಲ ಗಣ್ಯರಿಗೆ ಆರತಿ ಬೆಳಗಿ ತಿಲಕ ಇಟ್ಟು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.