ADVERTISEMENT

ಸಂತೇಬೆನ್ನೂರು | ‘ಸರ್ಕಾರಿ ಶಾಲೆ: ಪ್ರವೇಶಾತಿ ಹೆಚ್ಚಿಸಲು ಪ್ರಯತ್ನಿಸಿ’

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 16:22 IST
Last Updated 13 ಜುಲೈ 2024, 16:22 IST
ಸಂತೇಬೆನ್ನೂರಿನ ಎಸ್‌ಎಸ್ ಜೆವಿಪಿ ಕೆಪಿಎಸ್ ಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮವನ್ನು ಶಾಸಕ ಬಸವರಾಜು ವಿ.ಶಿವಗಂಗಾ ಉದ್ಘಾಟಿಸಿದರು
ಸಂತೇಬೆನ್ನೂರಿನ ಎಸ್‌ಎಸ್ ಜೆವಿಪಿ ಕೆಪಿಎಸ್ ಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮವನ್ನು ಶಾಸಕ ಬಸವರಾಜು ವಿ.ಶಿವಗಂಗಾ ಉದ್ಘಾಟಿಸಿದರು   

ಸಂತೇಬೆನ್ನೂರು: ಬೋಧನಾ ಮಾದರಿಯಲ್ಲಿ ಪರಿಣಾಮಕಾರಿ ಬದಲಾವಣೆ ತರುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಸಲಹೆ ನೀಡಿದರು.

ಇಲ್ಲಿನ ಎಸ್‌ಎಸ್ ಜೆವಿಪಿ ಕೆಪಿಎಸ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಶೈಕ್ಷಣಿಕ ಗುಣಮಟ್ಟದ ಬಲವರ್ಧನೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರವೇಶಾತಿಗೆ ಅನುಗುಣವಾಗಿ ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ನೀಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಕುಸಿಯುತ್ತಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ 30 ಶಾಲಾ ಕೊಠಡಿಗಳು ಮಂಜೂರಾಗಿವೆ. ಶಿಕ್ಷಕರ ತುರ್ತು ಸಮಸ್ಯೆಗಳ ಬಗ್ಗೆ ಶಿಕ್ಷಣ ಸಚಿವರು ಹಾಗೂ ಆಯುಕ್ತರ ಬಳಿ ಸುದೀರ್ಘ ಚರ್ಚೆ ನಡೆಸಿದ್ದೇನೆ’ ಎಂದರು.

ADVERTISEMENT

‘ತಾಲ್ಲೂಕಿನಲ್ಲಿ ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 70 ಬಂದಿದ್ದು, ಶ್ರಮವಹಿಸಿ ಫಲಿತಾಂಶ ಹೆಚ್ಚಲು ಪ್ರಯತ್ನಿಸಿ. ಶಿಕ್ಷಕರ ಸಂಘದ ಪದಾಧಿಕಾರಿಗಳು ಗುಣಮಟ್ಟ ವೃದ್ಧಿಸಲು ವಿಶೇಷ ಗಮನ ನೀಡಿ’ ಎಂದು ಸಲಹೆ ನೀಡಿದರು.

ಶಾಲೆಯಲ್ಲಿ ವಿಷಯವಾರು ಶಿಕ್ಷಕರನ್ನು ನಿಯುಕ್ತಿಗೊಳಿಸಲು ಮೇಲಧಿಕಾರಿಗೊಳೊಂದಿಗೆ ಚರ್ಚಿಸಬೇಕು ಎಂದು ಡಿಡಿಪಿಐ ಜಿ. ಕೊಟ್ರೇಶ್ ಹೇಳಿದರು.

ಬಿಇಒ ಎಲ್. ಜಯಪ್ಪ, ಬಿಆರ್‌ಸಿ ಶಂಕರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಜಗದೀಶ್, ತಾಲ್ಲೂಕು ಘಟಕದ ಕಾರ್ಯದರ್ಶಿ ಗುರುಮೂರ್ತಿ, ಉಪ ಪ್ರಾಚಾರ್ಯ ಜಯಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ನಯಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.