ADVERTISEMENT

ದಾವಣಗೆರೆ | ಮೆಕ್ಕೆಜೋಳ ಖರೀದಿಗೆ ರೈತರ ಪಟ್ಟು, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 2:45 IST
Last Updated 24 ಜನವರಿ 2026, 2:45 IST
ದಾವಣಗೆರೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು
ದಾವಣಗೆರೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು   

ದಾವಣಗೆರೆ: ಬೆಂಬಲ ಬೆಲೆ ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಂಡ ರೈತರ ಮೆಕ್ಕೆಜೋಳ ಖರೀದಿಸುವಂತೆ ಒತ್ತಾಯಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಅವರಗೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದ ರೈತರು ಮೆಕ್ಕೆಜೋಳವನ್ನು ಶುಕ್ರವಾರ ಎಪಿಎಂಸಿ ಆವರಣಕ್ಕೆ ತಂದಿದ್ದರು. ಖರೀದಿಗೆ ಹಿಂದೇಟು ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

‘ಜಿಲ್ಲೆಯ ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ಘಟಕಗಳು ಶೇ 20 ರಷ್ಟು ಮುಂಗಡ ಹಣ ಪಾವತಿಸಿ 455 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಬೇಕು. ಎಸ್.ಎಸ್. ಗಣೇಶ್ ಮಾಲೀಕತ್ವದ ಕುಕ್ಕುವಾಡ ಶುಗರ್ ಡಿಸ್ಟಿಲರಿ ಶೇ 50 ರಷ್ಟು ಮುಂಗಡ ಹಣ ಪಾವತಿಸಿ 729 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ, ಖರೀದಿ ಪ್ರಕ್ರಿಯೆ ಸಕಾಲಕ್ಕೆ ನಡೆಯುತ್ತಿಲ್ಲ’ ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಆರೋಪಿಸಿದರು.

ADVERTISEMENT

‘ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ಘಟಕಗಳು ಶೇ 20ರಷ್ಟು ಮುಂಗಡ ಹಣ ಪಾವತಿಸಿವೆ. ಹೆಸರು ನೋಂದಣಿ ಮಾಡಿಕೊಂಡ ರೈತರು ಮೆಕ್ಕೆಜೋಳವನ್ನು ಟ್ರ್ಯಾಕ್ಟರಿಗಳಲ್ಲಿ ಎಪಿಎಂಸಿ ಆವರಣಕ್ಕೆ ತಂದಿದ್ದಾರೆ. ಆದರೆ, ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ಕುಕ್ಕುವಾಡ ಶುಗರ್ ಡಿಸ್ಟಿಲರಿ ಮಾಲೀಕರು ಈವರೆಗೂ ಮುಂಗಡ ಹಣ ಪಾವತಿಸಿಲ್ಲ. ಇದು ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಶುವೈದ್ಯಕೀಯ ಮತ್ತು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಮಹೇಶ್ ಮತ್ತು ಎಪಿಎಂಸಿ ಉಪಕಾರ್ಯದರ್ಶಿ ಹರೀಶ ನಾಯ್ಕ ಅವರು ಸ್ಥಳಕ್ಕೆ ಧಾವಿಸಿ ರೈತರ ಅಹವಾಲು ಆಲಿಸಿದರು. ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ಘಟಕಗಳ ಮಾಲೀಕರನ್ನು ಸಂಪರ್ಕಿಸಿ ಖರೀದಿ ಪ್ರಕ್ರಿಯೆ ಆರಂಭಿಸುವ ಭರವಸೆ ನೀಡಿದರು.

ರೈತ ಮುಖಂಡರಾದ ತುಂಬಿಗೆರೆ ದಿನೇಶಗೌಡ, ಬುಳ್ಳಾಪುರ ಹನುಮಂತಪ್ಪ, ಪವಾಡರಂಗವ್ವನಹಳ್ಳಿ ಮಲ್ಲೇಶಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.