ADVERTISEMENT

ದಾವಣಗೆರೆ | ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯಕ್ಕೆ ಚಾಲನೆ

ಗಣತಿದಾರರಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮನವಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:44 IST
Last Updated 23 ಸೆಪ್ಟೆಂಬರ್ 2025, 5:44 IST
ದಾವಣಗೆರೆಯ ಎಸ್.ಎಸ್. ಬಡಾವಣೆಯ ಮನೆಯೊಂದರಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ  ಅವರು ಸೋಮವಾರ ಚಾಲನೆ ನೀಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಎಸ್.ಎಸ್. ಬಡಾವಣೆಯ ಮನೆಯೊಂದರಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ  ಅವರು ಸೋಮವಾರ ಚಾಲನೆ ನೀಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಸೋಮವಾರ ಚಾಲನೆ ನೀಡಿದರು. ಜಿಲ್ಲೆಯ ಹಲವೆಡೆ ಗಣತಿದಾರರು ಮನೆ–ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು.

ನಗರದ ಎಸ್‌.ಎಸ್‌. ಬಡಾವಣೆಯ ‘ಬಿ’ ಬ್ಲಾಕ್‌ನ 12ನೇ ಕ್ರಾಸಿನ ಮನೆಯೊಂದಕ್ಕೆ ತೆರಳಿ ಸಮೀಕ್ಷೆಗೆ ಮುನ್ನುಡಿ ಬರೆದರು. ಸಮೀಕ್ಷೆಗೂ ಮುನ್ನ ಜಿಲ್ಲೆಯ 4,91,981 ಮನೆಗಳಿಗೆ ಜಿಯೊ ಟ್ಯಾಗ್ ಕಾರ್ಯ ಪೂರ್ಣಗೊಂಡಿದೆ. ಸೆ.22ರಿಂದ ಆರಂಭವಾಗಿರುವ ಈ ಸಮೀಕ್ಷೆ ಅ.7ರವರೆಗೆ ನಡೆಯಲಿದೆ.

‘ಜಿಲ್ಲೆಯಲ್ಲಿ 4,462 ಬ್ಲಾಕ್‌ಗಳಿದ್ದು, ಅಗತ್ಯಕ್ಕೆ ಅನುಗುಣವಾಗಿ ಗಣತಿದಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಇದಕ್ಕೆ ಅಭಿವೃದ್ಧಿಪಡಿಸಿದ ಆ್ಯಪ್‌ ಕೂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಸಮೀಕ್ಷೆ ಇನ್ನಷ್ಟು ಸುಲಭವಾಗಿದೆ. ಸಮೀಕ್ಷೆಗೆ ಸಂಬಂಧಿಸಿದಂತೆ ಆಕ್ಷೇಪ, ಗೊಂದಲ, ಸಮಸ್ಯೆ ಇದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಬಹುದು’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ADVERTISEMENT

‘ಗಣತಿದಾರರು ಮನೆಗೆ ಬಂದಾಗ ನಾಗರಿಕರು ಸಹಕರಿಸಬೇಕು. 150 ಕುಟುಂಬಗಳಿಗೆ ಒಬ್ಬ ಗಣತಿದಾರರು ಮತ್ತು 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಗಣತಿದಾರರು ಪ್ರತಿದಿನ 15 ರಿಂದ 20 ಮನೆಗಳ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲಿದ್ದಾರೆ. ಪ್ರತಿ ಮನೆಯ ಗಣತಿ 30 ರಿಂದ 40 ನಿಮಿಷ ತೆಗೆದುಕೊಳ್ಳಲಿದೆ’ ಎಂದರು.

ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ಪಾಲಿಕೆ ಆಯುಕ್ತೆ ರೇಣುಕಾ, ಡಿಡಿಪಿಐ ಜಿ.ಕೊಟ್ರೇಶ್, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ರೇಣುಕಾದೇವಿ, ಬಿಇಓ ವಿಶಾಲಾಕ್ಷಿ ಹಾಜರಿದ್ದರು.

ಸಮೀಕ್ಷೆಗೆ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್‌ ಜನಸ್ನೇಹಿಯಾಗಿದೆ. ಸಮೀಕ್ಷೆ ನಡೆಸುವಾಗ ತಾಂತ್ರಿಕ ದೋಷ ಸಮಸ್ಯೆ ಉಂಟಾದರೆ ಸ್ಥಳದಲ್ಲಿಯೇ ಪರಿಹರಿಸಲಾಗುವುದು
ಜಿ.ಎಂ. ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

ಸಮೀಕ್ಷೆಗೆ ಗುರುತಿಸಿರುವ ಮನೆಗಳು ತಾಲ್ಲೂಕು; ಮನೆಗಳ ಸಂಖ್ಯೆ ಚನ್ನಗಿರಿ; 86897 ದಾವಣಗೆರೆ; 234481 ಹರಿಹರ; 69053 ಜಗಳೂರು; 40192 ಹೊನ್ನಾಳಿ; 39024 ನ್ಯಾಮತಿ; 22334

ತಾಂತ್ರಿಕ ದೋಷ: ಸಮೀಕ್ಷೆ ವಿಳಂಬ

ಸಮೀಕ್ಷೆಗೆ ಆಯೋಗ ಅಭಿವೃದ್ಧಿಪಡಿಸಿದ ಮೊಬೈಲ್‌ ಆ್ಯಪ್‌ನಲ್ಲಿ ಮೊದಲ ದಿನವೇ ತಾಂತ್ರಿಕ ದೋಷಗಳು ಕಾಣಿಸಿಕೊಂಡವು. ಹೀಗಾಗಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗಣತಿ ಕಾರ್ಯ ವಿಳಂಬವಾಯಿತು. ಆ್ಯಪ್‌ ಅಪ್ಡೇಟ್‌ ಪ್ರಕ್ರಿಯೆ ಪೂರ್ಣಗೊಳ್ಳುವುದು ತಡವಾಯಿತು. ಇದರಿಂದ ಗಣತಿದಾರರು ಮನೆ–ಮನೆಗೆ ಭೇಟಿ ನೀಡಲು ಸೋಮವಾರ ಬೆಳಿಗ್ಗೆ ಸಾಧ್ಯವಾಗಲಿಲ್ಲ. ಆ್ಯಪ್‌ ಕಾರ್ಯನಿರ್ವಹಿಸುವ ಹೊತ್ತಿಗೆ ಗಣತಿದಾದರು ಕಾದು ಸುಸ್ತಾಗಿದ್ದರು. ಸಮೀಕ್ಷೆ ಪ್ರಾರಂಭಿಸಿದರೂ ಒಟಿಪಿ ಸಮಸ್ಯೆ ಎದುರಾಗಿತ್ತು. ಒಟಿಪಿ ಬರುವಲ್ಲಿ ವಿಳಂಬವಾಗಿ ನಿರೀಕ್ಷಿತ ಪ್ರಗತಿ ಕಾಣಲಿಲ್ಲ. ಇನ್ನೂ ಕೆಲವರಿಗೆ ಒಟಿಪಿಯೇ ಬರಲಿಲ್ಲ. ಆಧಾರ್‌ ಇಕೆವೈಸಿ ಮಾಡಿಸಿದರೂ ಏಕೆ ಈ ಸಮಸ್ಯೆ ಎಂಬ ಗೊಂದಲ ಸೃಷ್ಟಿಯಾಗಿತ್ತು. ಜಿಯೊ ಮ್ಯಾಪಿಂಗ್‌ ಆಗಿರುವ ಮನೆಗಳನ್ನು ಆಧರಿಸಿ ಸಮೀಕ್ಷೆಗೆ ಬ್ಲಾಕ್‌ಗಳನ್ನು ರೂಪಿಸಲಾಗಿದೆ. ಈ ಬ್ಲಾಕ್‌ಗಳಿಗೆ ನಿಯೋಜಿತರಾದ ಸಿಬ್ಬಂದಿಯ ಮೊಬೈಲ್‌ ಆ್ಯಪ್‌ನಲ್ಲಿ ಸ್ಥಳ ನಮೂದಾಗಬೇಕು. ಆದರೆ ನಿಗದಿತ ಸ್ಥಳ ತೋರಿಸದೇ ಇರುವುದರಿಂದ ಸಮೀಕ್ಷೆ ಸಾಧ್ಯವಾಗಲಿಲ್ಲ. ‘ಆ್ಯಪ್‌ನಲ್ಲಿ ತಾಂತ್ರಿಕ ತೊಡಕು ಕಾಣಿಸಿಕೊಂಡಿದ್ದು ನಿಜ. ಈ ಸಮಸ್ಯೆಗಳನ್ನು ಪರಿಹರಿಸಲಾಗಿದ್ದು ಮಂಗಳವಾರದಿಂದ ಸಮೀಕ್ಷೆ ಕಾರ್ಯ ಸುಗಮವಾಗಲಿದೆ. ಕಾರ್ಯನಿರ್ವಹಿಸದ ಸ್ಥಳಕ್ಕೆ ಭೇಟಿ ನೀಡದ ಸಿಬ್ಬಂದಿಯ ಮಾಹಿತಿ ಕೂಡ ತಂತ್ರಾಂಶದಲ್ಲಿ ಲಭ್ಯವಾಗಲಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.