ADVERTISEMENT

COTPA ACT |ದಾವಣಗೆರೆ: ಕೋಟ್ಪಾ; 260 ಪ್ರಕರಣ, ₹ 71,000 ದಂಡ

ಅನಾರೋಗ್ಯದ ಭೀತಿಯಿಲ್ಲ, ಜಾಗೃತಿ ಮೂಡಿಸಿದರೂ ತಂಬಾಕು ಉತ್ಪನ್ನಗಳ ಬಳಕೆ ನಿಲ್ಲುತ್ತಿಲ್ಲ

ರಾಮಮೂರ್ತಿ ಪಿ.
Published 15 ಫೆಬ್ರುವರಿ 2025, 6:32 IST
Last Updated 15 ಫೆಬ್ರುವರಿ 2025, 6:32 IST
ದಾವಣಗೆರೆಯ ಶಾಲೆಯೊಂದರ ಗೋಡೆ ಮೇಲೆ ‘ತಂಬಾಕು ಮುಕ್ತ ವಲಯ’ದ ಬರಹ
ಪ್ರಜಾವಾಣಿ ಚಿತ್ರ
ದಾವಣಗೆರೆಯ ಶಾಲೆಯೊಂದರ ಗೋಡೆ ಮೇಲೆ ‘ತಂಬಾಕು ಮುಕ್ತ ವಲಯ’ದ ಬರಹ ಪ್ರಜಾವಾಣಿ ಚಿತ್ರ   

ದಾವಣಗೆರೆ: ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆ (ಕೋಟ್ಪಾ) ಉಲ್ಲಂಘಿಸಿದ ವ್ಯಾಪಾರಿಗಳು ಹಾಗೂ ಗ್ರಾಹಕರ ವಿರುದ್ಧ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2024ರಲ್ಲಿ 260 ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು ಕೇವಲ ₹ 71,500 ದಂಡ ವಿಧಿಸಲಾಗಿದೆ. 2025ರ ಜನವರಿಯಲ್ಲಿ 11 ಪ್ರಕರಣ ದಾಖಲಿಸಿ, ಬರೀ ₹ 2,800 ದಂಡ ಸಂಗ್ರಹಿಸಲಾಗಿದೆ.

ಕೋಟ್ಪಾ ಕಾಯ್ದೆಯನ್ನು ರಾಜ್ಯಾದ್ಯಂತ 2003ರಲ್ಲಿ ಜಾರಿಗೊಳಿಸಿದ್ದರೂ, ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಯಾಗಿದ್ದು, 2012–13ರಲ್ಲಿ. ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರು ಹಾಗೂ ಬಳಕೆದಾರರ ವಿರುದ್ಧ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳ ಆರೋಗ್ಯ ನಿರೀಕ್ಷಕರು ದಂಡ ವಿಧಿಸಬಹುದಾಗಿದೆ. ಉತ್ಪನ್ನಗಳನ್ನು ಜಪ್ತಿ ಮಾಡಲೂ ಅವಕಾಶ ಇದೆ.

ಸಿಗರೇಟು, ಬೀಡಿ, ಪೈಪ್‌ ತಂಬಾಕು, ಹುಕ್ಕಾ ತಂಬಾಕು, ಅಗಿಯುವ ತಂಬಾಕು, ನಶ್ಯ, ಗುಟ್ಕಾ ಪಾನ್‌ ಮಸಾಲಾ ಹಾಗೂ ತಂಬಾಕಿನ ಘಟಕಾಂಶಗಳನ್ನು ಹೊಂದಿರುವ ಇತರೆ ಪದಾರ್ಥ, ಗುಟ್ಕಾ ಹಾಗೂ ಇನ್ನಿತರ ತಂಬಾಕು ಪದಾರ್ಥಗಳನ್ನು ಕೋಟ್ಪಾ ಕಾಯ್ದೆಯಡಿ ಸೇರಿಸಲಾಗಿದೆ. ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ತಂಬಾಕು ಉತ್ಪನ್ನ ಮಾರುವವರು ಹಾಗೂ ಬಳಸುವವರಿಗೆ ₹ 200 ದಂಡ ವಿಧಿಸಬಹುದಾಗಿದೆ.

ADVERTISEMENT

ಪರವಾನಗಿ ಅಗತ್ಯ:

ಪಾಲಿಕೆ ವ್ಯಾಪ್ತಿಯಲ್ಲಿ ನೂರಾರು ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ, ಪಾಲಿಕೆಗೆ ಶುಲ್ಕ ಪಾವತಿಸಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ (ಲೈಸೆನ್ಸ್‌) ಪಡೆದಿರುವುದು 79 ವ್ಯಾಪಾರಿಗಳು ಮಾತ್ರ. ಪಾಲಿಕೆ ವ್ಯಾಪ್ತಿಯಲ್ಲಿ ₹ 500, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 100 ಪಾವತಿಸಿ ವರ್ಷದ ಅವಧಿಗೆ ಪರವಾನಗಿ ಪಡೆಯಬಹುದು. ಒಂದೇ ಬಾರಿ 5 ವರ್ಷದ ಅವಧಿಗೆ ಪರವಾನಗಿ ಪಡೆಯಲು ಹಾಗೂ ಪ್ರತೀ ವರ್ಷ ನವೀಕರಣ ಮಾಡಿಸಿಕೊಳ್ಳಲು ಅವಕಾಶ ಇದೆ.

‘ಈ ಹಿಂದೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಪಡೆಯಬೇಕಿತ್ತು. ಇದೀಗ ಅಂಗಡಿಗಳಿಗೆ ನೀಡುವ ಪರವಾನಗಿ (ಟ್ರೇಡ್ ಲೈಸೆನ್ಸ್) ಜೊತೆಗೇ ತುಂಬಾಕು ಉತ್ಪನ್ನಗಳ ಮಾರಾಟಕ್ಕೂ ಅನುಮತಿ ನೀಡಲು ಅವಕಾಶ ಇದೆ. ಏಪ್ರಿಲ್‌ನಿಂದ ಪರವಾನಗಿ ನವೀಕರಣ ಆರಂಭವಾಗಲಿದ್ದು, 400ರಿಂದ 500 ವ್ಯಾಪಾರಿಗಳು ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಪಡೆಯುವ ಅಂದಾಜಿದೆ. ನಗರದಲ್ಲಿ 900ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳಿವೆ. ಬೀಡಿ, ಸಿಗರೇಟ್, ಗುಟ್ಕಾ ಮಾರಾಟ ಮಾಡುವ ಸಾವಿರಾರು ಪೆಟ್ಟಿಗೆ ಅಂಗಡಿಗಳು, ಹೋಟೆಲ್‌ಗಳಿವೆ’ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

ತಂಬಾಕು ಪದಾರ್ಥಗಳ ಬಳಕೆ ತಡೆಗಟ್ಟಲು ಹಾಗೂ ಅರಿವು ಮೂಡಿಸಲು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ರಚಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ತಂಡದಲ್ಲಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಪಾಲಿಕೆ ಆಯುಕ್ತರ ನೇತೃತ್ವದ ತಂಬಾಕು ನಿಯಂತ್ರಣ ಕೋಶ ಇದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಕೋಶಗಳನ್ನು ರಚಿಸಲಾಗಿದೆ.

ಆತ್ಮಹತ್ಯೆ ಬೆದರಿಕೆ:

ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಸಣ್ಣಪುಟ್ಟ ಗೂಡಂಗಡಿಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ತಂಬಾಕು ಉತ್ಪನ್ನಗಳನ್ನು ಜಪ್ತಿ ಮಾಡಲು ಮುಂದಾದಾಗ ಕೆಲವು ವ್ಯಾಪಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡುತ್ತಾರೆ. ಸಾಮಾನ್ಯವಾಗಿ ಅಂಗವಿಕಲರು, ದೈಹಿಕವಾಗಿ ದುರ್ಬಲವಾಗಿರುವವರು ಸಣ್ಣಪುಟ್ಟ ಗೂಡಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುತ್ತಾರೆ. ದಂಡ ವಿಧಿಸಿ, ಮಾಲು ಜಪ್ತಿ ಮಾಡಲು ಮುಂದಾದರೆ, ‘ಹೊಟ್ಟೆಪಾಡಿಗಾಗಿ ಅನಿವಾರ್ಯವಾಗಿ ಸಣ್ಣಪುಟ್ಟ ವ್ಯಾಪಾರ ನಡೆಸುತ್ತಿದ್ದೇವೆ. ಸಾಲ ಮಾಡಿ ಅಂಗಡಿ ಶುರು ಮಾಡಿದ್ದೇವೆ’ ಎಂದು ಗೋಳಾಡುತ್ತಾರೆ. ಮಾನವೀಯ ಹಿನ್ನೆಲೆಯಲ್ಲಿ ದಂಡ ವಿಧಿಸಿ ನಿಯಮ ಉಲ್ಲಂಘಿಸದಂತೆ ಸೂಚಿಸುತ್ತೇವೆ’ ಎನ್ನುತ್ತಾರೆ ಪಾಲಿಕೆಯ ಆರೋಗ್ಯ ನಿರೀಕ್ಷಕರು.

ದಾವಣಗೆರೆಯಲ್ಲಿ ಕೋಟ್ಪಾ ಕಾಯ್ದೆಯ ನಿಯಮ ಉಲ್ಲಂಘಿಸಿದ ಅಂಗಡಿಯೊಂದರ ಮಾಲೀಕರಿಗೆ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದರು
ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ದಿನವೊಂದಕ್ಕೆ 13ರಿಂದ 15 ವರ್ಷದೊಳಗಿನ 293 ಮಕ್ಕಳು ತಂಬಾಕು ಉತ್ಪನ್ನಗಳ ಬಳಕೆಯ ಚಟಕ್ಕೆ ದಾಸರಾಗುತ್ತಿರುವುದು ಆತಂಕಕಾರಿ
ಸತೀಶ್ ಕಲಹಳ್ ಜಿಲ್ಲಾ ಸಲಹೆಗಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶ

ಕೋಟ್ಪಾ ಕಾಯ್ದೆ ಏನು ಹೇಳುತ್ತೆ?

* ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ.

* ಶಾಲಾ – ಕಾಲೇಜುಗಳ ಆವರಣದಿಂದ 100 ಮೀಟರ್ ಒಳಗಡೆ ತಂಬಾಕು ಉತ್ಪನ್ನ ಮಾರುವಂತಿಲ್ಲ.

* 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಬಾರದು.

* ತಂಬಾಕು ಉತ್ಪನ್ನಗಳ ಬಗ್ಗೆ ಜಾಹೀರಾತು ಫಲಕಗಳ ಪ್ರದರ್ಶನಕ್ಕೆ ಅವಕಾಶ ಇಲ್ಲ.

* ತಂಬಾಕು ಉತ್ಪನ್ನಗಳ ಶೇ 85ರಷ್ಟು ಭಾಗದಲ್ಲಿ ದುಷ್ಪರಿಣಾಮಗಳ ಬಗ್ಗೆ ಚಿತ್ರ ಸಹಿತ ವಿವರಿಸುವುದು.

* ಅಂಗಡಿಗಳ ಬಳಿ ತಂಬಾಕು ಉತ್ಪನ್ನಗಳ ಬಳಕೆಗೆ ಅವಕಾಶ ನೀಡಬಾರದು.

* ತಂಬಾಕು ಉತ್ಪನ್ನಗಳ ಬಿಡಿ ಮಾರಾಟಕ್ಕೆ ಅವಕಾಶವಿಲ್ಲ ಪೂರ್ಣ ಪ್ಯಾಕೇಟ್ ಮಾರಬಹುದು.

* ತಂಬಾಕು ಉತ್ಪನ್ನಗಳಿಂದಾಗುವ ಅನಾರೋಗ್ಯದ ಬಗ್ಗೆ ಅಂಗಡಿ ಬಳಿ ಬರಹ ಚಿತ್ರದ ಮೂಲಕ ಪ್ರಚುರಪಡಿಸುವುದು

ಶಾಲೆ– ಕಾಲೇಜುಗಳಿಂದ ದೂರವಿರಲಿ ಮದ್ಯದಂಗಡಿ

ದಾವಣಗೆರೆ: ನಗರದ ವಿವಿಧೆಡೆ ಶಾಲೆ– ಕಾಲೇಜುಗಳಿಂದ 100 ಮೀಟರ್‌ ಆಚೆ ಮದ್ಯದಂಗಡಿ ಇರಬೇಕು ಎಂಬ ನಿಯಮವೂ ಉಲ್ಲಂಘನೆಯಾಗಿದೆ. ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಣ್ಣಿಗೆ ಕಾಣಿಸುವಂತೆ ಹುಡುಗಿಯರಲ್ಲಿ ತೀವ್ರ ಮುಜುಗರ ಉಂಟುಮಾಡುವಂತೆ ಮದ್ಯದ ಅಂಗಡಿಗಳಿವೆ. ಆ ದಾರಿ ಮೂಲಕ ಹಾದುಹೋಗುವಾಗ ಕುಡುಕರ ಹಾವಳಿ ಹಾವಭಾವ ವಿಚಿತ್ರವಾಗಿ ಕಂಡುಬರುತ್ತದೆ. ಇದರಿಂದ ಸಂಕೋಚ ಉಂಟಾಗುತ್ತಿದೆ’ ಎಂದು ಕೆಲವು ವಿದ್ಯಾರ್ಥಿನಿಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.