ಡಾಗ್ ಪೀಜೀ ದೃಶ್ಯ
ದಾವಣಗೆರೆ: ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನೆಮಂದಿಯೆಲ್ಲ ದೂರದೂರಿಗೆ ಪ್ರಯಾಣ ಬೆಳೆಸಬೇಕೆಂದಾಗ ಮನೆಯಲ್ಲಿರುವ ಮುದ್ದಿನ ನಾಯಿಯನ್ನು ಬಿಟ್ಟುಹೋಗದೇ ಅನಿವಾರ್ಯವಾಗಿ ತಮ್ಮ ಜೊತೆಗೇ ಕರೆದೊಯ್ದು ಸಾಕಷ್ಟು ‘ಕಿರಿಕಿರಿ’ ಅನುಭವಿಸುತ್ತಿದ್ದ ನಾಯಿ ಪ್ರಿಯರಿಗೆ ಪರಿಹಾರವಾಗಿ ನಗರದಲ್ಲೊಂದು ‘ನಾಯಿಗಳ ಅತಿಥಿ ಗೃಹ’ (ಡಾಗ್ ಪೀಜೀ ಅಥವಾ ಹೋಂ) ಆರಂಭವಾಗಿದೆ.
ನಗರದ ಬೂದಾಳ್ ರಸ್ತೆಯಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ, ಫ್ರೆಷ್ ಬೇಕರಿ ಹಿಂಭಾಗದಲ್ಲಿ ಅಂಥದ್ದೊಂದು ಸುಸಜ್ಜಿತ ಡಾಗ್ ಹೋಂ ಆರಂಭವಾಗಿದೆ. ಬಾಲ್ಯದಿಂದಲೂ ನಾಯಿಗಳೊಂದಿಗೆ ಒಡನಾಡಿರುವ, ನಾಯಿಗಳನ್ನು ಅತಿಯಾಗಿ ಪ್ರೀತಿಸುವ ದುರ್ಗಮ್ಮ ದೇವಸ್ಥಾನದ ಬಳಿಯ ಶಿವಾಜಿ ನಗರದ ನಿವಾಸಿ ಎಂ.ನಿಂಗರಾಜ್ ತಮ್ಮ ಸ್ನೇಹಿತ ಡಿ.ಮನು ಅವರೊಂದಿಗೆ ಈ ಅತಿಥಿಗೃಹ ಆರಂಭಿಸಿದ್ದಾರೆ.
‘ನಾಯಿ ಸಾಕಿದವರು ದಿಢೀರ್ ಊರಿಗೆ ಹೋಗಬೇಕಾದಾಗ ಮುದ್ದಿನ ನಾಯಿಯನ್ನು ನೆರೆಹೊರೆಯವರ, ಸ್ನೇಹಿತರ ಅಥವಾ ಸಂಬಂಧಿಗಳ ಮನೆಯಲ್ಲಿ ಬಿಟ್ಟು ಹೋಗಲಾಗದೇ, ಕರೆದುಕೊಂಡೂ ಹೋಗಲಾಗದೇ ಪಡಿಪಾಟಲು ಅನುಭವಿಸುತ್ತಿದ್ದರು. ಅಂಥವರ ಸಮಸ್ಯೆ ನೀಗಿಸಲು, ನಾಯಿಗಳ ಸೇವೆಯನ್ನು ಮಾಡಲು ಮಾಲೀಕರ ಅನುಪಸ್ಥಿತಿಯಲ್ಲಿ ಅವುಗಳ ಪಾಲನೆಗಾಗಿ ಶುಲ್ಕ ಆಕರಿಸಿ ಈ ಅತಿಥಿಗಳಿಗೆ ಆಸರೆಯಾಗಲು ಪೀಜೀ ಆರಂಭಿಸಿದ್ದೇನೆ’ ಎಂದು ನಿಂಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾಯಿಗಳು ಎಷ್ಟೇ ಮುದ್ದಾಗಿರಲಿ, ಆಕರ್ಷಕವಾಗಿರಲಿ. ಅದು ಬೊಗಳುವ ಅಥವಾ ಕಚ್ಚುವ ಭಯದಿಂದ ಅನೇಕರು ತಮ್ಮಲ್ಲಿ ಇರಿಸಿಕೊಂಡು ಆಶ್ರಯ ನೀಡಲು ಹೆದರುತ್ತಾರೆ. ಎಷ್ಟೇ ಆಪ್ತರಾದವರೂ, ನಮ್ಮ ಮನೆಯಲ್ಲಿ ಮಾತ್ರ ನಿಮ್ಮ ನಾಯಿ ಬಿಡುವುದು ಬೇಡ ಎಂಬುದನ್ನೇ ಕೇಳಿಕೇಳಿ ಬೇಸತ್ತಿದ್ದವರ ಬೇಗೆಯನ್ನು ನೀಗಿಸಬೇಕು ಎಂಬ ಆಲೋಚನೆ ಮನಸಲ್ಲಿ ಮೂಡಿದ್ದರಿಂದ ಈ ಸಾಹಸಕ್ಕೆ ಕೈಹಾಕಿದ್ದೇವೆ’ ಎಂದು ಅವರು ಹೇಳಿದರು.
ಕೆಲವರು ಎರಡು– ಮೂರು ದಿನ, ಒಂದು ವಾರ, 15 ದಿನ ಅಥವಾ ತಿಂಗಳುಗಟ್ಟಲೇ ಬೇರೆ ಊರಗೆ ತೆರಳುತ್ತಾರೆ. ವಿದೇಶದಲ್ಲಿ ಉದ್ಯೋಗದಲ್ಲಿರುವ ಅನೇಕರ ವೃದ್ಧ ತಂದೆ–ತಾಯಿ ಮಕ್ಕಳನ್ನು ನೋಡಲು ಮೂರರಿಂದ ಆರು ತಿಂಗಳವರೆಗೆ ಹೋಗುತ್ತಾರೆ. ಅಂಥವರು ಸಾಕಿಕೊಂಡ ನಾಯಿಗಳಿಗೆ ವಾಪಸ್ ಬರೋವರೆಗೂ ಆಶ್ರಯದಾತರಾಗುತ್ತಿದ್ದೇವೆ’ ಎಂದರು.
ಪೀಜೀಯಲ್ಲಿ ಶ್ವಾನಗಳ ಆರೈಕೆ
ಸ್ವಾವಲಂಬೀ ಜೀವನ
10ನೇ ತರಗತಿವರೆಗೆ ಓದಿರುವ 24 ವರ್ಷ ವಯಸ್ಸಿನ ನಿಂಗರಾಜ್ 12ನೇ ವಯಸ್ಸಿನಿಂದಲೇ ನಾಯಿಗಳ ಬಗ್ಗೆ ಒಲವು ಹೊಂದಿದ್ದು, ಅವುಗಳ ಚಲನವಲನ, ಜೀವನಶೈಲಿ, ಆಹಾರ, ದೈನಂದಿನ ಚಟುವಟಿಕೆ ಕುರಿತು ಅರಿತಿದ್ದಾರೆ. ಶ್ವಾನ ಜಗತ್ತನ್ನು ಹತ್ತಿರದಿಂದ ಬಲ್ಲವರಾಗಿದ್ದು, ಚಿಕ್ಕಂದಿನಿಂದಲೇ ವಿವಿಧ ತಳಿಗಳ ನಾಯಿಗಳನ್ನು ಸಾಕುವುದರಲ್ಲಿ ಆಸಕ್ತಿ ತಾಳಿದ್ದಾರೆ.
ಕುಸ್ತಿ ಪಟುವೂ ಆಗಿದ್ದ ಇವರು ನಾಯಿಗಳನ್ನು ಮರಿ ಮಾಡಿಸಿ ಮಾರಾಟ ಮಾಡುವುದು, ವಿಶಿಷ್ಟ ತಳಿಯ ಶ್ವಾನಗಳ ಸಂತಾನೋತ್ಪತ್ತಿ ಕುರಿತು ಆಸಕ್ತರ ಸಂಪರ್ಕಿಸಿ ಮರಿಗಳನ್ನು ಪಡೆಯುವುದು, ಶ್ವಾನ ಪ್ರದರ್ಶನ, ವಿಶಿಷ್ಟ ತಳಿಯ ನಾಯಿಗಳ ಸಾಕಣೆ ಮತ್ತು ಪೋಷಣೆ ಕುರಿತು ವಿವಿಧೆಡೆ ನಡೆಯುವ ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಬರಬರುತ್ತ ವಿದೇಶದ ವಿಶಿಷ್ಟ ತಳಿಯ ಶ್ವಾನಗಳ ಮರಿಗಳ ಮಾರಾಟವನ್ನೇ ಆದಾಯದ ಮೂಲವಾಗಿಸಿಕೊಂಡು ಸ್ವಾವಲಂಬೀ ಜೀವನ ನಡೆಸುತ್ತಿದ್ದಾರೆ.
‘ಬಾಲ್ಯ ಸ್ನೇಹಿತ ಡಿ.ಮನು ಅವರೊಂದಿಗೆ ಸೇರಿಕೊಂಡು ಆರು ತಿಂಗಳಿಂದ ನಾಯಿಗಳ ಪೀಜೀ ಆರಂಭಿಸಿದ್ದೇನೆ. ದಾವಣಗೆರೆಯ ಬಾಡಾ ಕ್ರಾಸ್ ಬಳಿ ಒಬ್ಬ ಆಸಕ್ತರು ಇಂಥ ಒಂದು ಪೀಜೀ ಆರಂಭಿಸಿದ್ದರು. ಇದೀಗ ನಾವು ಆರಂಭಿಸಿದ್ದೇವೆ. ಹಣ ಗಳಿಸುವುದೇ ಮುಖ್ಯ ಉದ್ದೇಶವಲ್ಲ. ಬದಲಿಗೆ, ಶ್ವಾನ ಲೋಕದ ಆಸಕ್ತರ ಒಡನಾಟ ಬೆಳೆಯುತ್ತದೆ. ವಿವಿಧ ತಳಿಯ, ಮಾದರಿಯ ಶ್ವಾನಗಳ ಬಗ್ಗೆ ತಿಳಿಯುತ್ತದೆ. ನಾಯಿ ಸಾಕಿದವರ ಬವಣೆಯನ್ನೂ ನೀಗಿಸಿದಂತಾಗುತ್ತದೆ’ ಎಂದು ನಿಂಗರಾಜ್ ಹೇಳಿದರು.
ನಮ್ಮ ಪೀಜೀಯಲ್ಲಿ ಪ್ರತಿ ನಾಯಿಗೆ ದಿನವೊಂದಕ್ಕೆ ₹ 450 ಬಾಡಿಗೆ ಪಡೆಯುತ್ತೇವೆ. ನಮ್ಮಲ್ಲಿ ಇರುವ ನಾಯಿಗಳಿಗೆ ಎರಡು ಹೊತ್ತು (ಮಾಲೀಕರು ರೂಢಿಸಿದಂತೆ ಮೊಟ್ಟೆ, ಮೊಸರು, ರೊಟ್ಟಿ, ಅನ್ನ, ಚಿಕನ್ ಸೇರಿ) ಊಟ ಮಾಡಿಸುತ್ತೇವೆ. ಎರಡು ಹೊತ್ತು ವಾಕಿಂಗ್ ಮಾಡಿಸುತ್ತೇವೆ ಎಂದು ಅವರು ವಿವರಿಸಿದರು.
ಲ್ಯಾಬ್, ಗೋಲ್ಡನ್ ರಿಟ್ರಿವರ್, ಡಾಬರ್‌ಮನ್, ಗ್ರೇಟ್ ಡೆನ್, ರಾಟ್ ವೀಲರ್, ಜರ್ಮನ್ ಶೆಫರ್ಡ್, ಸೇಂಟ್ ಬರ್ನಾರ್ಡ್, ಸುಡ್ಜು, ಪಗ್, ಫ್ರೆಂಚ್ ಬುಲ್ಡರ್, ಡ್ಯಾಷ್ ಅಂಡ್ ಡ್ಯಾಷ್, ಮುಧೋಳ್, ಕಾಕರ್ಸ್ ಸ್ಪೈನಲ್, ಪಮೋರಿಯನ್, ಡಾಲ್ಮಿಷನ್, ಪೂಡಲ್ ಅಕಿಟಾ, ಸೈಬಿರಿಯನ್ ಹಸ್ಕಿ, ಪಿಟ್ ಬುಲ್, ಅಮೆರಿಕನ್ ಬುಲ್ಲಿ ಸೇರಿದಂತೆ ನಗರದಲ್ಲಿ ಅನೇಕ ತಳಿಗಳ ನಾಯಿಗಳಿವೆ. ವಾತಾವರಣಕ್ಕೆ ಅನುಗುಣವಾಗಿ ಅವುಗಳ ಲಾಲನೆ– ಪಾಲನೆಯ ವ್ಯವಸ್ಥೆ ಮಾಡಬೇಕು. ಕೆಲವರು ಅವುಗಳ ಸ್ವಭಾವ, ಮೂಲ ಅರಿಯದೇ ತಂದು ದುಃಖಕ್ಕೀಡಾಗುತ್ತಾರೆ. ಈ ಕುರಿತು ಸಲಹೆಯನ್ನೂ ನೀಡಲಾಗುತ್ತದೆ. ಆಸಕ್ತರು ಸಂಪರ್ಕಿಸಬಹುದು ಎಂದು ಅವರು ಕೋರಿದರು.
ಎಂ.ನಿಂಗರಾಜ್ ಸಂಪರ್ಕ ಸಂಖ್ಯೆ: 78922– 44207
ಚಿಕ್ಕ ಮರಿಗಳೊಂದಿಗೆ ಅವುಗಳನ್ನು ಹೆತ್ತ ಬಾಣಂತಿ ನಾಯಿಗಳ ಪಾಲನೆ, ಪೋಷಣೆ ಚಾಕರಿಯನ್ನೂ ನಾವು ಮಾಡುತ್ತೇವೆ. ನಾಯಿಗಳಿಗೆ ವಾಕಿಂಗ್ ಮಾಡಿಸಲು ನಮ್ಮ ಬಳಿ ಕೆಲಸಗಾರರಿದ್ದು, ಯಾರಾದರೂ ಕರೆದರೆ ಹೋಗಿ ಅವರ ನಾಯಿಗಳಿಗೆ ಎರಡು ಹೊತ್ತು ವಾಕ್ ಮಾಡಿಸಿ ಬರುತ್ತಾರೆಎಂ.ನಿಂಗರಾಜ್ ಶ್ವಾನಗಳ ಪೀಜೀ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.