ADVERTISEMENT

ದಾವಣಗೆರೆ | ಭಕ್ತಿಯ ಅಲೆ ಸೃಷ್ಟಿಸಿದ ‘ಉಧೋ.. ಉಧೋ..’

ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಸಂಭ್ರಮ, ಉರುಳು ಸೇವೆಯಲ್ಲಿ ಹರಕೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 5:46 IST
Last Updated 25 ಫೆಬ್ರುವರಿ 2026, 5:46 IST
ದಾವಣಗೆರೆಯ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದ ಸುತ್ತ ದೀಡ್ ನಮಸ್ಕಾರ ಹಾಕಿದ ಭಕ್ತರು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದ ಸುತ್ತ ದೀಡ್ ನಮಸ್ಕಾರ ಹಾಕಿದ ಭಕ್ತರು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ   

ದಾವಣಗೆರೆ: ‘ದುಗ್ಗಮ್ಮ ನಿನ್ನಾಲಯಕ್ಕೆ ಉಧೋ.. ಉಧೋ....’ ಎಂಬ ಪ್ರಾರ್ಥನೆ ದುರ್ಗಾಂಬಿಕಾ ದೇಗುಲದ ಸುತ್ತ ಕಿವಿಗೆ ಇಂಪಾಗಿ ಕೇಳುತ್ತಿತ್ತು. ಉರುಳು ಸೇವೆ, ದೀಡ್‌ ನಮಸ್ಕಾರ ಹಾಕಿದ ಭಕ್ತರು ದೇವಿಯನ್ನು ಜಪಿಸುತ್ತ ಭಕ್ತಿಯ ಅಲೆ ಸೃಷ್ಟಿಸಿದರು. ದೇವಿ ದರ್ಶನಕ್ಕೆ ಸರತಿಯಲ್ಲಿ ಕಾಯುತ್ತಿದ್ದ ಭಕ್ತರು ಇದಕ್ಕೆ ಧ್ವನಿಗೂಡಿಸಿದರು.

ನಗರದೇವತೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ವೈಭವ ಪಡೆದುಕೊಂಡಿತು. ಸಿಹಿ ಅಡುಗೆ, ಪೂಜಾ ಸಾಮಗ್ರಿಗಳೊಂದಿಗೆ ದೇಗುಲಕ್ಕೆ ಬಂದು ಭಕ್ತಿ ಸಮರ್ಪಣೆ ಮಾಡಲಾಯಿತು.

ದೇವಿಯ ಉತ್ಸವವನ್ನು ನಗರದ ಪ್ರತಿ ಮನೆಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಹೋಳಿಗೆ, ಕರಿಗಡುಬು, ಹುಗ್ಗಿ, ಪಾಯಸ, ಕೋಸಂಬರಿ ತಯಾರಿಸಿ ದೇವಿಗೆ ನೈವೇದ್ಯ ಅರ್ಪಿಸಲಾಯಿತು. ಸಂಬಂಧಿಕರನ್ನು ಮನೆಗೆ ಆಹ್ವಾನಿಸಿ ಸಿಹಿ ಊಟ ಬಡಿಸಲಾಯಿತು.

ADVERTISEMENT

ಹರಕೆ ಸಲ್ಲಿಸಿದ ಭಕ್ತರು:

ಹರಕೆ ಹೊತ್ತಿದ್ದ ಭಕ್ತರು ದೇಗುಲಕ್ಕೆ ಧಾವಿಸಿ ಉರುಳು ಸೇವೆ, ದೀಡ್‌ ನಮಸ್ಕಾರ ಹಾಕಿದರು. ‘ದುಗ್ಗಮ್ಮ ನಿನ್ನಾಲಯಕ್ಕೆ ಉಧೋ.. ಉಧೋ....’ ಎಂದು ಹೇಳುತ್ತ ಹರಕೆ ತೀರಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ದೇವಿಯನ್ನು ಪ್ರಾರ್ಥಿಸಿದರು. ದೇಗುಲದ ಬದಿಯಲ್ಲಿ ಸ್ನಾನಕ್ಕೆ ಮಾಡಿದ ವಿಶೇಷ ವ್ಯವಸ್ಥೆಯಲ್ಲಿ ‘ಮಡಿ’ಯಾದರು. ಹೊಸ ಬಟ್ಟೆಗಳನ್ನು ತೊಟ್ಟು ತಾಯಿಯನ್ನು ಪ್ರಾರ್ಥಿಸಿದಿರು. ಇವರಿಗೆ ಕುಟುಂಬದ ಸದಸ್ಯರು ಆರತಿ ಬೆಳಗಿದರು.

ಜಾತ್ರಾ ಮಹೋತ್ಸವದಲ್ಲಿ ಮೌಢ್ಯಾಚರಣೆಗಳಿಗೆ ಅವಕಾಶವಿಲ್ಲ. ಬೆತ್ತಲೆ ಸೇವೆ ನಿಷೇಧಿಸಲಾಗಿದ್ದು, ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ನಿಗಾ ಇಟ್ಟಿದ್ದರು. ಬಟ್ಟೆಯ ಮೇಲೆ ಬೇವಿನಸೊಪ್ಪು ತೊಟ್ಟು ಕೆಲವರು ಹರಕೆ ತೀರಿಸಿದರು. ಇನ್ನೂ ಕೆಲವರು ಬೇವಿನ ಸೊಪ್ಪು ಹಿಡಿದು ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸರತಿಯಲ್ಲಿ ದೇವಿ ದರ್ಶನ:

ಇತ್ತ ದೇಗುಲದ ಸುತ್ತ ಜಾತ್ರಾ ಸಂಭ್ರಮ ಕಳೆಗಟ್ಟಿತ್ತು. ನಸುಕಿನಿಂದಲೇ ದೇವಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ದೇಗುಲ ಪ್ರವೇಶಕ್ಕೆ ಸರತಿ ಸಾಲಿನಲ್ಲಿ ಸಾಗಿದ ಭಕ್ತರು ದೇವಿಯನ್ನು ಕಣ್ತುಂಬಿಕೊಂಡು ಪುಳಕಿತರಾದರು. ಬೆಳಿಗ್ಗೆ ಮತ್ತು ಸಂಜೆ ಸರತಿ ಸಾಲು ವಿರಕ್ತಮಠದವರೆಗೂ ಬೆಳೆದಿತ್ತು. ವಿಶೇಷ ಪಾಸ್‌, ₹ 50 ಟಿಕೆಟ್‌ ಹೊಂದಿದವರು ಒಂದೇ ಸರತಿಯಲ್ಲಿ ಸಾಗಬೇಕಿತ್ತು.

ಸರತಿಯಲ್ಲಿ ಸಾಗುತ್ತಿದ್ದ ಭಕ್ತರಿಗೆ ನೀರು, ಮಜ್ಜಿಗೆಯನ್ನು ನೀಡಿ ಕೆಲವರು ಸೇವೆ ಸಲ್ಲಿಸಿದರು. ಮಧ್ಯಾಹ್ನದ ಬಿಸಿಲಿನಲ್ಲಿ ಸರತಿಯಲ್ಲಿ ಕಾಯುವುದು ಭಕ್ತರಿಗೆ ಕಷ್ಟವಾಗಿತ್ತು. ದೇಗುಲದ ಬಲಬದಿಯ ವಿಶೇಷ ಮಾರ್ಗದ ಮೂಲಕ ನುಗ್ಗಲು ಭಕ್ತರು ಪ್ರಯತ್ನಿಸುತ್ತಿದ್ದರು. ಇದನ್ನು ತಪ್ಪಿಸಲು ಧ್ವನಿವರ್ಧಕದಲ್ಲಿ ನಿರಂತರವಾಗಿ ಎಚ್ಚರಿಕೆ ನೀಡಲಾಗುತ್ತಿತ್ತು.

ದಾವಣಗೆರೆಯ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದ ಸುತ್ತ ದೀಡ್ ನಮಸ್ಕಾರ ಹಾಕಿದ ಭಕ್ತರು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಭಕ್ತರು ಸ್ನಾನ ಮಾಡಿದರು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಭಕ್ತರು ಸ್ನಾನ ಮಾಡಿದರು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಹರಿಕೆ ತೀರಿಸಿದ ನಂತರ ಆರತಿ ಮಾಡುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಎಸ್‌ಕೆಪಿ ರಸ್ತೆಯಲ್ಲಿ ಕಂಡು ಬಂದ ಜನದಟ್ಟಣೆ –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ಚೌಡೇಶ್ವರಿ ದೇವಿ ಜಾತ್ರೆ ಅಂಗವಾಗಿ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಿರುವುದು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ

ದೇವಿಯ ಅದ್ದೂರಿ ಮೆರವಣಿಗೆ ಮಹಿಳೆಯರು ಒಂದುತ್ತಿನ ವ್ರತವನ್ನು ಮಂಗಳವಾರ ರಾತ್ರಿ ಮುಗಿಸಿದರು. ಮನೆಯಿಂದ ತಂದಿದ್ದ ಪ್ರಸಾದವನ್ನು ದೇಗುಲದಲ್ಲಿ ಸ್ವೀಕರಿಸಿದರು. ಆಗ ದೇವಿಯು ಮಹಿಷಾಸುರ ಮರ್ದಿನಿಯ ಅಲಂಕಾರದಲ್ಲಿ ಕಂಗೊಳಿಸಲಾರಂಭಿಸಿದಳು. ರಾತ್ರಿ 9ರಿಂದ ಸಾಂಸ್ಕೃತಿಕ ಮೇಳ ಡೊಳ್ಳು ಕುಣಿತದೊಂದಿಗೆ ಬೆಳ್ಳಿಯ ರಥದಲ್ಲಿ ಅಮ್ಮನ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು. ಪಟ್ಟದ ಕೋಣ ಕೂಡ ಮೆರವಣಿಗೆಯಲ್ಲಿ ಸಾಗಿತು. ದೇಗುಲದ ಸುತ್ತ ಪೊಲೀಸರು ಬಿಗಿಬಂದೋಬಸ್ತ್‌ ಕೈಗೊಂಡಿದ್ದರು.

ಚೌಡೇಶ್ವರಿ ಜಾತ್ರೆ ಆರಂಭ ಇಲ್ಲಿನ ವಿನೋಬನಗರದ ಚೌಡೇಶ್ವರಿದೇವಿ ಜಾತ್ರಾ ಮಹೋತ್ಸವ ಮಂಗಳವಾರ ಆರಂಭವಾಯಿತು. ಎರಡು ದಿನಗಳ ಈ ಜಾತ್ರಾ ಮಹೋತ್ಸವ ದುಗ್ಗಮ್ಮನ ಜಾತ್ರೆಯ ನಡುವೆಯೇ ಮೆರುಗು ಪಡೆದುಕೊಂಡಿತು. ಮಂಗಳವಾರ ಬೆಳಿಗ್ಗೆ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ಆ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದೇಗುಲದ ಮುಂಭಾಗದಲ್ಲಿ ವಿಶೇಷ ಮಂಟಪ ನಿರ್ಮಿಸಲಾಗಿದ್ದು ಸಂಜೆ ಹೊತ್ತಿಗೆ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ವಿವಿಧ ಕಲಾ ತಂಡಗಳೊಂದಿಗೆ ದೇವಿಯ ಮೆರವಣಿಗೆ ರಾತ್ರಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.