
ದಾವಣಗೆರೆ: ನಗರದ ಅಧಿದೇವತೆ ದುರ್ಗಾಂಬಿಕಾ ದೇವಿ ಹಾಗೂ ವಿನೋಬನಗರದ ಚೌಡೇಶ್ವರಿ ಜಾತ್ರೆ ಅಂಗವಾಗಿ ಭಕ್ತರ ಮನೆಗಳಲ್ಲಿ ವಾರವಿಡೀ ಬಾಡೂಟದ ಘಮ ಹರಡಲಿದೆ. ಇಡೀ ನಗರದಲ್ಲಿ ಹಬ್ಬದೂಟದ ಸಂಭ್ರಮ ಮನೆ ಮಾಡಲಿದೆ.
ಜಾತ್ರೆ ಅಂಗವಾಗಿ ನಗರದ ನಿವಾಸಿಗಳ ಬಹುತೇಕರ ಮನೆಗಳಲ್ಲಿ ಮಂಗಳವಾರ ಹೋಳಿಗೆ, ಕರಿಗಡುಬು ಸೇರಿದಂತೆ ಇನ್ನಿತರ ಸಿಹಿ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಕೆಲವರು ಮನೆಗಳಲ್ಲೇ, ಇನ್ನೂ ಕೆಲವರು ದೇವಸ್ಥಾನಕ್ಕೆ ತೆರಳಿ ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ. ನಂತರವೇ ಊಟ ಸವಿಯುತ್ತಾರೆ. ಜಾತ್ರೆಯ ವಿಶೇಷವಾಗಿ ಸಂಬಂಧಿಕರು, ಆತ್ಮೀಯರನ್ನು ಮನೆಗೆ ಆಹ್ವಾನಿಸಿ ಉಣಬಡಿಸುವ ಸಂಪ್ರದಾಯವಿದೆ.
ಮರುದಿನವಾದ ಬುಧವಾರ ದುರ್ಗಾಂಬಿಕಾ ದೇವಿ ಹಾಗೂ ಚೌಡೇಶ್ವರಿ ದೇವಿಯ ‘ಬಾಡೂಟದ ಭಕ್ತರ’ ಮನೆಗಳಲ್ಲಿ ಜಾತ್ರೆಯ ಸಂಭ್ರಮ ಎರಡು ಪಟ್ಟು ಹೆಚ್ಚಾಗುತ್ತದೆ. ಪ್ರತಿ ಮನೆಯಲ್ಲೂ ಕುರಿ ಹಾಗೂ ಕೋಳಿ ಮಾಂಸದ ಅಡುಗೆ ಸಿದ್ಧವಾಗುತ್ತದೆ.
ಚಿಕನ್ ಫ್ರೈ, ಚಿಕನ್ ಸಾಂಬಾರು, ಮಟನ್ ಫ್ರೈ, ಮಟನ್ ಸಾಂಬಾರು, ಬೋಟಿ ಫ್ರೈ, ಲಿವರ್ ಫ್ರೈ ಹಾಗೂ ಮೊಟ್ಟೆ ಸಾಂಬರಿನ ಘಮ ನಗರದೆಲ್ಲೆಡೆ ಹಬ್ಬಲಿದೆ. ನಾನ್‌ವೆಜ್ ಜೊತೆಗೆ ಖಡಕ್ ರೊಟ್ಟಿ, ಚಪಾತಿ, ಮುದ್ದೆ, ಪಲಾವ್, ಅನ್ನ, ಮೊಸರನ್ನ ಹಾಗೂ ಇನ್ನಿತರ ಖಾದ್ಯಗಳು ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಜಾತ್ರೆಯ ಅಂಗವಾಗಿ ಪ್ರತಿ ಮನೆಗಳ ಮುಂದೆಯೂ ಶಾಮಿಯಾನಾಗಳು ತಲೆ ಎತ್ತುತ್ತವೆ. ಬೆಳಿಗ್ಗೆಯಿಂದಲೇ ಬಾಡೂಟ ತಯಾರಿಸುವ ಸಿದ್ಧತೆ ಆರಂಭಗೊಳ್ಳುತ್ತದೆ. ಮಧ್ಯಾಹ್ನದ ವೇಳೆಗೆ ಬಾಡೂಟ ಸಿದ್ಧವಾಗುತ್ತದೆ. ಕೆಲವರು ಮನೆಯಲ್ಲೇ ದೇವಿಗೆ ಎಡೆ ಇಟ್ಟು ಪೂಜೆ ಸಲ್ಲಿಸಿದರೆ, ಇನ್ನೂ ಕೆಲವರು ದೇವಸ್ಥಾನಗಳಿಗೆ ತೆರಳಿ ಎಡೆ ಅರ್ಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.
ದೇವಿಗೆ ಎಡೆ ಅರ್ಪಿಸುತ್ತಿದ್ದಂತೆಯೇ ಪೆಂಡಾಲ್‌ಗಳ ಕೆಳಗೆ ಅಳವಡಿಸಿದ ಟೇಬಲ್‌ಗಳಲ್ಲಿ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಒಟ್ಟಾಗಿ ಕುಳಿತು ಬಾಡೂಟ ಸವಿಯುವ ದೃಶ್ಯ ನಗರದ ಎಲ್ಲೆಡೆ ಕಾಣುವುದು ಸಹಜವಾಗಿದೆ.
ಜಾತ್ರೆಯ ಅಂಗವಾಗಿ ಹೆಚ್ಚಿನ ಭಕ್ತರು ಹಲವು ತಿಂಗಳುಗಳ ಹಿಂದೆಯೇ ತಮ್ಮ ಶಕ್ತ್ಯಾನುಸಾರ ಚಿಕ್ಕ ಹಾಗೂ ದೊಡ್ಡ ಗಾತ್ರದ ಕುರಿಗಳನ್ನು ಖರೀದಿಸಿದ್ದಾರೆ. ನಿರ್ವಹಣೆ ಸಾಧ್ಯವಾಗದವರು ಜಾತ್ರೆ ಸಮೀಪಿಸುತ್ತಿದ್ದಂತೆ ಕುರಿ, ಟಗರುಗಳನ್ನು ಖರೀದಿಸಿ ತರುತ್ತಾರೆ.
ಇನ್ನೂ ಕೆಲವರು ಮಾಂಸದಂಗಡಿಗಳಿಂದ ತಮ್ಮ ಕುಟುಂಬಕ್ಕೆ ಅಗತ್ಯವಿರುವಷ್ಟು ಚಿಕನ್ ಹಾಗೂ ಮಟನ್ ಖರೀದಿಸುತ್ತಾರೆ.
ಬುಧವಾರದಿಂದ ಶುರುವಾಗುವ ಬಾಡೂಟದ ಸೊಗಡು ಶುಕ್ರವಾರದವರೆಗೂ ಹಲವರ ಮನೆಗಳಲ್ಲಿ ಮುಂದುವರಿಯುತ್ತದೆ. ಕೆಲವರ ಮನೆಗಳಲ್ಲಿ ಜಾತ್ರೆಗೆ ಬರುವ ಸಂಬಂಧಿಕರು, ಮರಳಿ ಅವರ ಊರುಗಳಿಗೆ ತೆರಳುವವರೆಗೂ ಮಾಂಸದ ಅಡುಗೆಯನ್ನೇ ನಿತ್ಯ ಮಾಡುವುದು ವಿಶೇಷ ಎನ್ನುತ್ತಾರೆ ಭಕ್ತರು.
ಹಬ್ಬದೂಟದ ಕಾರಣಕ್ಕೆ ಮಾರುಕಟ್ಟೆಗಳಲ್ಲಿ ಈರುಳ್ಳಿ, ಮಸಾಲೆ ಪದಾರ್ಥ, ನಿಂಬೆಹಣ್ಣಿನ ಖರೀದಿಯೂ ಹೆಚ್ಚಾಗಿರಲಿದೆ. ಕುರಿ ಚರ್ಮದ ವ್ಯಾಪಾರ, ಚಾಕು, ಚೂರಿ, ಕುಡುಗೋಲುಗಳಿಗೆ ಸಾಣೆ ಹಿಡಿಯುವ ವ್ಯಾಪಾರಿಗಳಿಗೂ ಈಗ ಶುಕ್ರದೆಸೆ.
ಲಕ್ಷಾಂತರ ಖರ್ಚು ಮಾಡುವ ಭಕ್ತರು
ದುರ್ಗಾಂಬಿಕಾ ದೇವಿ ಹಾಗೂ ಚೌಡೇಶ್ವರಿ ದೇವಿಯ ಜಾತ್ರೆ ಆಚರಿಸುವ ಪ್ರತೀ ಕುಟುಂಬವೂ ಲಕ್ಷಾಂತರ ರೂಪಾಯಿ ವ್ಯಯಿಸುತ್ತದೆ. ಒಂದು ಕುರಿಗೆ ಮಾರುಕಟ್ಟೆಯಲ್ಲಿ ಸರಾಸರಿ ₹25000 ದಿಂದ ₹30000 ದರವಿದೆ. ಜಾತ್ರೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಟಗರುಗಳಿಗೆ ₹ 80,000ದವರೆಗೂ ದರ ಇದೆ. ಹೆಚ್ಚಿನ ಕುಟುಂಬಗಳು 2 ಇಲ್ಲವೇ 4 ಕುರಿಗಳನ್ನು ಬಾಡೂಟಕ್ಕಾಗಿ ಖರೀದಿಸಿವೆ. ಕುರಿಗಳ ಖರೀದಿಗಾಗಿಯೇ ₹1 ಲಕ್ಷದಿಂದ ₹ 1.5 ಲಕ್ಷ ಖರ್ಚು ಮಾಡಿವೆ.
ಇನ್ನು ಮನೆಯ ಎಲ್ಲಾ ಸದಸ್ಯರಿಗೂ ಜಾತ್ರೆ ಅಂಗವಾಗಿ ಹೊಸ ಉಡುಪುಗಳನ್ನು ಖರೀದಿಸಿದ್ದಾರೆ. ಕೆಲವು ಕುಟುಂಬದವರು ಜಾತ್ರೆಗೆ ಆಗಮಿಸುವ ಸಂಬಂಧಿಕರಿಗೂ ಹೊಸ ಉಡುಪುಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ರೇಷನ್ ಶಾಮಿಯಾನಾ ಸೇರಿದಂತೆ ವಿವಿಧ ಖರ್ಚುಗಳು ಹೆಚ್ಚುವರಿಯಾಗಿ ಇರಲಿವೆ.
‘ಜಾತ್ರೆಯಲ್ಲಿ ಪ್ರತೀ ಕುಟುಂಬವೂ ಸರಾಸರಿ ₹ 4 ಲಕ್ಷದಿಂದ ₹ 5 ಲಕ್ಷ ಖರ್ಚು ಮಾಡುತ್ತದೆ. ಸಣ್ಣ ಸಣ್ಣ ಕುಟುಂಬಗಳು ಎಷ್ಟೇ ಸರಳವಾಗಿ ಜಾತ್ರೆ ಆಚರಿಸಿದರೂ ₹ 2 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುತ್ತವೆ. ಆರ್ಥಿಕವಾಗಿ ಸದೃಢರಾಗಿರುವ ದೊಡ್ಡ ಕುಟುಂಬಗಳು ₹ 10 ಲಕ್ಷಕ್ಕೂ ಹೆಚ್ಚು ಖರ್ಚು ಮಾಡುತ್ತವೆ’ ಎಂದು ಹಳೆ ದಾವಣಗೆರೆಯ ನಿವಾಸಿ ದುರ್ಗಾಂಬಿಕಾ ದೇವಿಯ ಭಕ್ತರಾದ ಅರುಣ್‌ಕುಮಾರ್ ಕೆ. ತಿಳಿಸಿದರು.
ಮದ್ಯಪ್ರಿಯರಿಗೆ ಆಹ್ವಾನ: ಬಾಡೂಟ ಎಂದ ಮೇಲೆ ಮದ್ಯದ ಘಮಲೂ ಅದಕ್ಕೆ ಜೊತೆಯಾಗಲೇಬೇಕು. ಮದ್ಯಪ್ರಿಯರಿಗಂತೂ ದುಗ್ಗಮ್ಮನ ಜಾತ್ರೆ ಎಂದರೆ ಎಲ್ಲಿಲ್ಲದ ಹಿಗ್ಗು. ಮದ್ಯದೊಂದಿಗೆ ಬಾಡೂಟದ ಔತಣಕೂಟಗಳ ಆಹ್ವಾನಕ್ಕಂತೂ ಬರವೇ ಇಲ್ಲದ್ದರಿಂದ ದಾವಣಗೆರೆಯ ಪ್ರತಿ ಮದ್ಯದಂಗಡಿಯ ವ್ಯಾಪಾರವೂ ಈ ಸಂದರ್ಭ ಹತ್ತಾರು ಪಟ್ಟು ಹೆಚ್ಚುತ್ತದೆ. ಜಾತ್ರೆಯ ಔತಣಕೂಟಗಳಿಂದಾಗಿ ನಾನ್ ವೆಜ್ ಹೋಟೆಲ್ ರೆಸ್ಟೋರಂಟ್‌ಗಳ ವ್ಯಾಪಾರ ಸ್ವಲ್ಪ ಮಂಕಾಗುವುದೂ ಉಂಟು ಎಂದು ವ್ಯಾಪಾರಿಗಳು ಹೇಳುತ್ತಾರೆ.
ಕೋಟ್ಯಂತರ ರೂಪಾಯಿ ವಹಿವಾಟು
ಜಾತ್ರೆ ಅಂಗವಾಗಿ ಹತ್ತಾರು ದಿನಗಳ ಕಾಲ ನಗರದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಹೊಂಡ ಸರ್ಕಲ್‌ನಿಂದ ದುಗ್ಗಮ್ಮ ದೇವಸ್ಥಾನ ಹಾಗೂ ದುಗ್ಗಮ್ಮ ದೇವಸ್ಥಾನದಿಂದ ಎಸ್‌ಕೆಪಿ ರಸ್ತೆ ವರೆಗೂ 150ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗುತ್ತದೆ. ದೇವಸ್ಥಾನದ ಸುತ್ತಮುತ್ತಲಿನ ಭಾಗದಲ್ಲೂ ಜಾತ್ರೆ ವೇಳೆ ಸಾಕಷ್ಟು ಮಳಿಗೆಗಳನ್ನು ಕಾಣಬಹುದು. ಬಳೆ ಸಿಹಿ ಪದಾರ್ಥ ಮಕ್ಕಳ ಆಟಿಕೆ ಬಟ್ಟೆ ಪಾತ್ರೆ ಸಾಮಗ್ರಿ ಸೇರಿದಂತೆ ಹಲವು ಬಗೆಯ ಮಳಿಗೆಗಳು ಭರ್ಜರಿ ವ್ಯಾಪಾರ ನಡೆಸುತ್ತವೆ. ಜಾತ್ರೆಯ ಸಂದರ್ಭದಲ್ಲಿ ಹಳೆ ದಾವಣಗೆರೆಯಲ್ಲಿ ಸಂಚರಿಸುವುದೇ ತ್ರಾಸದಾಯಕವಾಗಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.