ತ್ಯಾವಣಿಗೆ: ಈ ಬಾರಿ ಭತ್ತದ ದರ ಕಡಿಮೆಯಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿ ರೈತರು ನಷ್ಟ ಅನುಭವಿಸಿದ್ದು, ಸಮೀಪದ ಬೆಳಲಗೆರೆ ಗ್ರಾಮದಲ್ಲಿ ಭತ್ತದ ಸಾಂಪ್ರದಾಯಿಕ ನಾಟಿಯ ಬದಲು ಡ್ರಮ್ ಸೀಡರ್‌ನಿಂದ ಭತ್ತದ ಬಿತ್ತನೆ ಮಾಡುತ್ತಿದ್ದಾರೆ.
ಭತ್ತದ ನಾಟಿಗೆ ಎಕರೆಗೆ ಸುಮಾರು 4,000ದಿಂದ 5,000 ಕೂಲಿ ನೀಡುವದನ್ನು ತಪ್ಪಿಸುವ ಸಲುವಾಗಿ ರೈತರು ಡ್ರಮ್ ಸೀಡರ್ ಮೂಲಕವೇ ಬಿತ್ತನೆ ಮಾಡುತ್ತಿದ್ದಾರೆ. ಅಲ್ಲದೆ, ನಾಟಿಗೆ 20 ದಿನಗಳ ಮುಂಚೆ ಭತ್ತದ ಸಸಿ ಮಡಿ ಸಿದ್ಧಪಡಿಸಿ, ಬೀಜದಲ್ಲಿ ಔಷಧಿ, ಗೊಬ್ಬರ ಹಾಕಿ ಬೆಳೆಸಿ ಕೂಲಿಕಾರರನ್ನು ಹೊಂದಿಸುವ ರಗಳೆ ಇಲ್ಲದೇ, ಹಣ ಉಳಿತಾಯಕ್ಕೆ ರೈತರು ಮುಂದಾಗಿದ್ದಾರೆ.
ಕಾಲುವೆ ಮೂಲಕ ನೀರು ಬಿಟ್ಟಾಗ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು ನಾಟಿ ಮಾಡಬೇಕೆಂದರೆ ಕೂಲಿಕಾರರು ಸಿಗುವುದೇ ಕಷ್ಟವಾಗಿದೆ. ಒಂದೇ ಬಾರಿ ಜಮೀನು ಸಿದ್ಧಪಡಿಸಿಕೊಂಡರೆ ನಾಟಿಗೆ ತಿಂಗಳು ಕಳೆದರೂ ಕೂಲಿಕಾರರು ಸಿಗದೇ, ಬದಲಾದ ಸಮಯದಲ್ಲಿ ನಾಟಿ ಮಾಡಿ ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತವಾಗಿ ಕೈ ಸುಟ್ಟುಕೊಂಡಿದ್ದ ರೈತರು ಈ ಬಾರಿ ಡ್ರಮ್ ಸೀಡರ್ ಮೂಲಕ ಸರಿಯಾದ ಸಮಯದಲ್ಲಿ ಭತ್ತದ ಬಿತ್ತನೆಗೆ ಸಿದ್ಧವಾಗಿದ್ದಾರೆ.
ಈ ಬಾರಿ ಉತ್ತಮವಾಗಿ ಮಳೆ ಬರುತ್ತಿರುವುದರಿಂದ ಜಮೀನುಗಳನ್ನು ನಾಟಿಗೆ ಸಿದ್ಧಪಡಿಸಿ 5 ಅಡಿ ಉದ್ದದ ಅಚ್ಚಿಗೆ ಅಳವಡಿಸಿದ್ದ ನಾಲ್ಕು ಡ್ರಮ್‌ಗಳಿಗೆ ಬೀಜ ತುಂಬಿ ಒಬ್ಬರು ನಿಧನಾವಾಗಿ ಗದ್ದೆಯಲ್ಲಿ ಎಳೆದುಕೊಂಡು ಹೋದಾಗ ಗೆರೆ ಎಳೆದ ರೀತಿಯಲ್ಲಿ ಬೀಜಗಳು ಗದ್ದೆಗೆ ಬೀಳ ತೊಡಗುತ್ತವೆ.
ಒಂದು ಎಕರೆಗೆ ನಾಟಿ ಪದ್ಧತಿಯಲ್ಲಿ ಸುಮಾರು 30 ಕೆ.ಜಿ. ಭತ್ತದ ಬೀಜ ಬೇಕಾಗುತ್ತದೆ. ಡ್ರಮ್ ಸೀಡರ್ ಮೂಲಕ ಕೇವಲ 8ರಿಂದ 10 ಕೆ.ಜಿ. ಬೀಜ ಸಾಕು. ಒಂದು ದಿನದಲ್ಲಿ 4 ಡ್ರಮ್‌ಗಳಿಂದ ಕೇವಲ 4ರಿಂದ 10 ಎಕರೆ ಬೀಜ ಬಿತ್ತನೆ ಮಾಡಲಾಗಿದ್ದು, ಅಂದಾಜು ₹ 40,000 ಉಳಿತಾಯವಾಗಿದೆ ಎನ್ನುತ್ತಾರೆ ರೈತರಾದ ಬಿ.ಎಂ. ರೇವಣಸಿದ್ದಪ್ಪ.
‘ಗ್ರಾಮದಲ್ಲಿ ನಾಲ್ವರು ಸೇರಿ 4 ಡ್ರಮ್ ಸೀಡರ್ ಖರೀದಿಸಿದ್ದು, ಒಂದಕ್ಕೆ ಬೆಲೆ ₹ 7,000. ಬಿತ್ತನೆಯಾದ 25 ದಿನಗಳಿಗೆ ಒಂದು ಬಾರಿ ಕಳೆನಾಶಕ ಸಿಂಪಡಿಸಿದರೆ ಸಾಕು ಕಳೆ ತೆಗೆಯುವುದೇ ಬೇಡ. ರಾಸಾಯನಿಕ ಗೊಬ್ಬರದ ಬಳಕೆ ನಾಟಿ ಪದ್ಧತಿಗಿಂತ ಕಡಿಮೆ. ಉತ್ತಮ ಇಳುವರಿ ಸಾಧ್ಯವಿದೆ. ಮಳೆಗಾಲವಾದ್ದರಿಂದ ಈಗಾಗಲೇ 30ರಿಂದ 40 ಎಕರೆ ಡ್ರಮ್ ಸೀಡರ್ ಮೂಲಕ ನಾಟಿ ಮಾಡಲಾಗಿದೆ’ ಎನ್ನುತ್ತಾರೆ ರೈತರಾದ ಮಹೇಶ್, ಗೋವಿಂದ್, ನವೀನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.