ADVERTISEMENT

ದಾವಣಗೆರೆ: ಸಂವಿಧಾನದ ಬಗ್ಗೆ ಯುವಜನರಲ್ಲಿ ಹೆಚ್ಚಬೇಕಿದೆ ಅರಿವು

ಶರಣಬಸವೇಶ್ವರ ದಾಸೋಹ ಮಠದಲ್ಲಿ ಸಂವಿಧಾನ ಕುರಿತ ಭಾಷಣ, ಹಾಗೂ ಪ್ರಬಂಧ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:14 IST
Last Updated 23 ಫೆಬ್ರುವರಿ 2026, 6:14 IST
ಜಗಳೂರು ತಾಲ್ಲೂಕಿನ ದೊಣೆಹಳ್ಳಿಯ ಶರಣಬಸವೇಶ್ವರ ದಾಸೋಹ ಮಠದಲ್ಲಿ ಭಾನುವಾರ ಸಂವಿಧಾನ ಕುರಿತ ಭಾಷಣ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಜಗಳೂರು ತಾಲ್ಲೂಕಿನ ದೊಣೆಹಳ್ಳಿಯ ಶರಣಬಸವೇಶ್ವರ ದಾಸೋಹ ಮಠದಲ್ಲಿ ಭಾನುವಾರ ಸಂವಿಧಾನ ಕುರಿತ ಭಾಷಣ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಜಗಳೂರು: ‘ಮನುವಾದ ಪ್ರೇರಿತ ಶಕ್ತಿಗಳಿಂದ ದೇಶದ ಸಂವಿಧಾನ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಹುನ್ನಾರ ನಡೆಯುತ್ತಿದೆ’ ಎಂದು ನಿವೃತ್ತ ಪ್ರಾಚಾರ್ಯ ಯಾದವರೆಡ್ಡಿ ಆರೋಪಿಸಿದರು.

ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ಶರಣಬಸವೇಶ್ವರ ದಾಸೋಹ ಮಠದಲ್ಲಿ ಭಾನುವಾರ ನಡೆದ ಸಂವಿಧಾನ ಕುರಿತ ಭಾಷಣ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಚಾತುರ್ವರ್ಣ ಪದ್ಧತಿ ಹಾಗೂ ಅಸ್ಪೃಶ್ಯತೆ ಆಚರಣೆಗಳ ಮೂಲಕ ದೇಶದಲ್ಲಿ ಸಾವಿರಾರು ವರ್ಷಗಳಿಂದ ಮನುಷ್ಯ– ಮನುಷ್ಯರ ನಡುವೆ ಕಂದಕಗಳನ್ನು ನಿರ್ಮಿಸಲಾಗಿದೆ. ಅಂಬೇಡ್ಕರ್ ಅವರು ಜಗತ್ತಿನ ಅತ್ಯುತ್ತಮ ಸಂವಿಧಾನಗಳನ್ನು ಅಧ್ಯಯನ ಮಾಡಿ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಜಾರಿಯಾದಲ್ಲಿ ಮಾದರಿ ಸಮಾಜ ನಿರ್ಮಣ ಸಧ್ಯ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ವಿದ್ಯಾರ್ಥಿ, ಯುವಜನರು ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಬೇಕು. ಸಾವಿರಾರು ವರ್ಷಗಳಿಂದ ಜಾರಿಯಲ್ಲಿದ್ದ ಕಂದಾಚಾರ, ಮೌಢ್ಯ ಹಾಗೂ ಶೋಷಣೆಗೆ ಸಂವಿಧಾನದಿಂದ ಮುಕ್ತಿ ಸಿಕ್ಕಿದೆ. ಮಹಿಳೆಯರು, ಶೋಷಿತರು ಘನತೆಯ ಹಾಗೂ ಸ್ವಾತಂತ್ರ್ಯದ ಜೀವನ ನಡೆಸಲು ಸಂವಿಧಾನದಿಂದ ಸಾಧ್ಯವಾಗಿದೆ. ಆದರೂ ಸಂವಿಧಾನ ಈಗ ಅಪಾಯದಲ್ಲಿದೆ’ ಎಂದು ದಾಸೋಹ ಮಠದ ಸಂಚಾಲಕ ದೊಣೆಹಳ್ಳಿ ಗುರುಮೂರ್ತಿ ಅಭಿಪ್ರಾಯಪಟ್ಟರು.

ಮಾರ್ಚ್ 9ರಿಂದ 3 ದಿನಗಳವರೆಗೆ ಇಲ್ಲಿನ ಮಠದಲ್ಲಿ ಭಾರತ ಸಂವಿಧಾನದ ಕುರಿತು ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನ್ ದಾಸ್ ಮತ್ತು ಬಿಲ್ಲಪ್ಪ ಹಾಗೂ ಹಿರಿಯ ಪತ್ರಕರ್ತ ರಂಜಾನ್ ದರ್ಗಾ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಚಿತ್ರದುರ್ಗದ ಎಸ್‌ಜೆಎಂ ಕಾನೂನು ಕಾಲೇಜು, ಬಾಪೂಜಿ ಕಾಲೇಜು ಹಾಗೂ ಜಗಳೂರಿನ ವಿವಿಧ ಕಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾನಾಮಡುಗು ದಾಸೋಹ ಮಠದ ಐಮಡಿ ಶರಣಾರ್ಯರು, ರೈತ ಸಂಘದ ಮುಖಂಡರಾದ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್, ವಕೀಲ ಡಿ. ಶ್ರೀನಿವಾಸ್, ಮುಖಂಡರಾದ ದೊಣೆಹಳ್ಳಿ ಬಸವರಾಜಪ್ಪ, ಸತೀಶ್ ಮಲೆಮಾಚಿಕೆರೆ, ಉಪನ್ಯಾಸಕರಾದ ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.