
239 ಕೆರೆಗಳ ಒತ್ತುವರಿ ಖಚಿತ | 24 ಕೆರೆಗಳ ಉತ್ತುವರಿ ತೆರವು | ಬಾಕಿ ಕೆರೆಗಳಲ್ಲಿದೆ ಶೇ 60ರಷ್ಟು ನೀರು
ದಾವಣಗೆರೆ: ಜಲಮೂಲಗಳ ಸಂರಕ್ಷಣೆಗೆ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ, ಒಟ್ಟು 215 ಕೆರೆಗಳ ಒತ್ತುವರಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ. ಬಾಕಿ ಇರುವ 24 ಕೆರೆಗಳನ್ನು ಖಾಸಗಿ ಹಿಡಿತದಿಂದ ಮುಕ್ತಗೊಳಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ.
ಜಿಲ್ಲೆಯಲ್ಲಿ 23,617 ಎಕರೆ ಪ್ರದೇಶದಲ್ಲಿ ಒಟ್ಟು 533 ಕೆರೆಗಳಿವೆ. ಇದರಲ್ಲಿ ಸೂಳೆಕೆರೆ ಸೇರಿದಂತೆ 22 ದೊಡ್ಡ ಕೆರೆಗಳು ಜಲಸಂಪನ್ಮೂಲ ಇಲಾಖೆ, 72 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿವೆ. ಉಳಿದ ಕೆರೆಗಳು ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿವೆ. ಎಲ್ಲ ಕೆರೆಗಳ ಸಮೀಕ್ಷೆ ವೇಳೆ 239 ಕೆರೆಗಳು ಒತ್ತುವರಿಯಾಗಿದ್ದು ಖಚಿತವಾಗಿತ್ತು.
ಕಂದಾಯ ಇಲಾಖೆಯ ನೇತೃತ್ವದಲ್ಲಿ ಕೆರೆ ಸಂರಕ್ಷಣೆಗೆ ಸರ್ಕಾರ ಸೂಚನೆ ನೀಡಿತ್ತು. ಜಲಮೂಲಗಳಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ರೂಪಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ‘ಜಿಲ್ಲಾ ಕೆರೆ ಸಂರಕ್ಷಣಾ ಸಮಿತಿ’ ಕೂಡ ಅಸ್ತಿತ್ವಕ್ಕೆ ಬಂದಿದೆ. ಈ ಸಮಿತಿಯು 2025ರಲ್ಲಿ ಹಲವು ಬಾರಿ ಸಭೆ ಸೇರಿ ಕೆರೆಗಳ ರಕ್ಷಣೆ ಕುರಿತು ಸುದೀರ್ಘ ಚರ್ಚೆ ನಡೆಸಿತ್ತು. ಒತ್ತುವರಿ ತೆರವುಗೊಳಿಸಿರುವುದನ್ನು ಖಚಿತಪಡಿಸಲು ದಾಖಲೆ ಸಮೇತ ವರದಿ ನೀಡುವಂತೆ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿತ್ತು.
ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆ ಸುರಿದರೆ ಬಹುತೇಕ ಕೆರೆಗಳು ಭರ್ತಿಯಾಗುತ್ತವೆ. ಜಲರಾಶಿ ಕೆರೆಯ ಅಂಗಳವನ್ನು ಆವರಿಸಿದಾಗ ಒತ್ತುವರಿ ಆಗುವುದು ಕಷ್ಟ. ನಿರೀಕ್ಷೆಯಷ್ಟು ವರ್ಷಧಾರೆ ಆಗದಿದ್ದಾಗ ಕೆರೆಯ ಒಡಲು ಬರಿದಾಗುತ್ತದೆ. ಆಗ ಕೆರೆಗಳಿಗೆ ಒತ್ತುವರಿಯ ಆತಂಕ ಸೃಷ್ಟಿಯಾಗುತ್ತದೆ. ಎರಡು ವರ್ಷಗಳ ಹಿಂದೆ ಸರಿಯಾಗಿ ಮಳೆಯಾಗದೇ ಇದ್ದ ಪರಿಣಾಮ ಹಲವು ಕೆರೆಗಳನ್ನು ರೈತರು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆದಿರುವುದು ಪತ್ತೆಯಾಗಿತ್ತು.
‘ಕೆರೆ ಒಡಲು ಖಾಲಿಯಾದಾಗ ಒತ್ತುವರಿ ಮಾಡಿಕೊಂಡು ರೈತರು ಬೆಳೆ ಬೆಳೆಯುತ್ತಾರೆ. ಇಂತಹ ಒತ್ತುವರಿಯನ್ನು ಗುರುತಿಸಿ ತೆರವುಗೊಳಿಸಲಾಗುತ್ತಿದೆ. ಕೆರೆಗಳು ಭರ್ತಿಯಾದರೆ ನೈಸರ್ಗಿಕವಾಗಿ ಒತ್ತುವರಿ ತೆರವುಗೊಳ್ಳುತ್ತದೆ. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಶೇ 60ರಷ್ಟು ನೀರು ಸಂಗ್ರಹವಿದೆ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಕೆ. ಪ್ರವೀಣ್ ವಿವರಿಸಿದರು.
ದಾವಣಗೆರೆ ತಾಲ್ಲೂಕಿನ ಹೊನ್ನೂರು ಗ್ರಾಮದ 392 ಎಕರೆ ವಿಸ್ತೀರ್ಣದ ಕೆರೆ ಒತ್ತುವರಿ ಮಾಡಿಕೊಂಡು ರೈತರು ಮೆಕ್ಕೆಜೋಳ ಬೆಳೆದಿದ್ದರು. ಈ ಕುರಿತು ಅಚ್ಚುಕಟ್ಟು ಪ್ರದೇಶದ ರೈತರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಒತ್ತುವರಿ ತೆರವುಗೊಳಿಸಿತ್ತು. ಕಬ್ಬೂರು ಕೆರೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ ತೋಟಗಳನ್ನು ಕೂಡ ತೆರವುಗೊಳಿಸಲಾಗಿತ್ತು.
ಕೆರೆಗಳ ಮೇಲೆ ನಿರಂತರವಾಗಿ ನಿಗಾ ಇಡಲಾಗುತ್ತಿದೆ. ಒತ್ತುವರಿ ಮಾಡಿಕೊಂಡಿದ್ದು ಖಚಿತವಾದರೆ ತಕ್ಷಣ ತೆರವು ಮಾಡಲಾಗುತ್ತಿದೆ. ಕೆರೆ ಸಂರಕ್ಷಣೆಗೆ ಒತ್ತು ನೀಡಲಾಗಿದೆಬಿ.ಕೆ. ಪ್ರವೀಣ್ ಎಇಇ ಸಣ್ಣ ನೀರಾವರಿ ಇಲಾಖೆ
ಸೂಳೆಕೆರೆ ಸಂರಕ್ಷಣೆ ಯಾರ ಹೆಗಲಿಗೆ?
5447 ಎಕರೆ ವಿಸ್ತೀರ್ಣ ಹೊಂದಿರುವ ಸೂಳೆಕೆರೆಯ ಸಂರಕ್ಷಣೆಯ ಹೊಣೆ ಹೊರುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಕಂದಾಯ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಕೆರೆಯ 280 ಎಕರೆ ಒತ್ತುವರಿಯಾಗಿದ್ದು ಖಚಿತವಾಗಿತ್ತು. ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ ಸಂರಕ್ಷಣೆಗೆ ಜಲಸಂಪನ್ಮೂಲ ಇಲಾಖೆಗೆ ಸೂಚಿಸಿತ್ತು. ‘ಭೂ ದಾಖಲೆಗಳಲ್ಲಿ ಅಮೃತ್ ಮಹಲ್ ಕಾವಲು ಎಂಬುದಾಗಿ ಉಲ್ಲೇಖವಾಗಿದೆ. ಇದು ಪಶುಪಾಲನಾ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಕೆರೆ ಸಂರಕ್ಷಣೆಯ ಹೊಣೆಯನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯೇ ಮಾಡಬೇಕು’ ಎಂಬುದು ಜಲಸಂಪನ್ಮೂಲ ಇಲಾಖೆಯ ವಾದ. ‘ಕೆರೆಯ 144 ಎಕರೆ ಮಾತ್ರ ಅಮೃತ್ ಮಹಲ್ ಕಾವಲು ವ್ಯಾಪ್ತಿಯಲ್ಲಿದೆ. ಇದರಲ್ಲಿ 19 ಎಕರೆ ಮಾತ್ರ ಒತ್ತುವರಿಯಾಗಿದ್ದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಉಳಿದ ಭೂಪ್ರದೇಶ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಗೆ ಸೇರುತ್ತದೆ. ಸಂರಕ್ಷಣೆಯ ಹೊಣೆ ನಮ್ಮದಲ್ಲ’ ಎಂಬುದಾಗಿ ಪಶುಪಾಲನಾ ಇಲಾಖೆ ಹೇಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.