ADVERTISEMENT

ಮಹಾಶಿವರಾತ್ರಿ ಸಂಭ್ರಮ: ಮಾರುಕಟ್ಟೆಯಲ್ಲಿ ಹಣ್ಣು, ಹೂವುಗಳ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 2:54 IST
Last Updated 15 ಫೆಬ್ರುವರಿ 2026, 2:54 IST
<div class="paragraphs"><p>ದಾವಣಗೆರೆಯಲ್ಲಿ ಗ್ರಾಹಕರು ಶನಿವಾರ&nbsp;ಹಣ್ಣುಗಳನ್ನು ಖರೀದಿಸಿದರು </p></div>

ದಾವಣಗೆರೆಯಲ್ಲಿ ಗ್ರಾಹಕರು ಶನಿವಾರ ಹಣ್ಣುಗಳನ್ನು ಖರೀದಿಸಿದರು

   

ಪ್ರಜಾವಾಣಿ ಚಿತ್ರಗಳು

ದಾವಣಗೆರೆ: ಮಹಾಶಿವರಾತ್ರಿ ಅಂಗವಾಗಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಭಾನುವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ADVERTISEMENT

ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ– ಕೈಂಕರ್ಯಗಳು ನಡೆಯಲಿವೆ. ಭಕ್ತರು ಉಪವಾಸ ಹಾಗೂ ರಾತ್ರಿ ಜಾಗರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. 

ಸಂಗೀತ, ಪ್ರವಚನ ಕಾರ್ಯಕ್ರಮ: 

ನಗರದ ಸರಸ್ವತಿ ಬಡಾವಣೆಯ ಉದ್ಯಾನವನ ಅಭಿವೃದ್ಧಿ ಸಮಿತಿ ವತಿಯಿಂದ ನಾಗರಿಕರ ಸಹಯೋಗದೊಂದಿಗೆ ಫೆ.15 ರಂದು ರಾತ್ರಿ ಮಹಾಶಿವರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿದೆ. 

ರಾತ್ರಿ 9 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಾನವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಜಿ.ಯಲ್ಲಪ್ಪ ವಹಿಸಲಿದ್ದು, ‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಪಾಲಿಕೆ ಮಾಜಿ ಸದಸ್ಯ ಕೆ.ಎಂ. ವೀರೇಶ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ನಿವೃತ್ತ ಸೈನಿಕ ಎಂ.ದಾಸಪ್ಪ ಅವರನ್ನು ಸನ್ಮಾನಿಸಲಾಗುತ್ತದೆ. ಸಂಜೆ 7 ರಿಂದ 12ರ ವರೆಗೆ ಸಂಗೀತ ಮತ್ತು ಪ್ರವಚನ ಕಾರ್ಯಕ್ರಮವಿರುತ್ತದೆ ಎಂದು ಮಹಿಳಾ ಅಧ್ಯಕ್ಷೆ ಕೆ.ಎಂ. ಮಂಜುಳಾ ತಿಳಿಸಿದ್ದಾರೆ. 

ಹಾಲು ವಿತರಣೆ: 

ರೈತ ಸಂಘ ಹಸಿರು ಸೇನೆಯ ದಾವಣಗೆರೆ ತಾಲ್ಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ್ ಅವರು ಶಿವರಾತ್ರಿ ಪ್ರಯುಕ್ತ ಬಿಲ್ವಪತ್ರೆ, ಉತ್ತರಾಣಿಕಡ್ಡಿ ಮತ್ತು ಅಭಿಷೇಕಕ್ಕೆ ಹಾಲನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ವಿನೋಬ ನಗರದ 4ನೇ ಮುಖ್ಯರಸ್ತೆಯ ಉದ್ಯಾನವನದ ಹತ್ತಿರವಿರುವ ಅವರ ನಿವಾಸಕ್ಕೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ: 9964241490 ಸಂಪರ್ಕಿಸಬಹುದು. 

ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ: 

ನಗರದ ಬಂಬೂ ಬಜಾರ್‌ನಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ.16 ರಂದು ಸ್ವಾಮಿಯ ರಥೋತ್ಸವ ನಡೆಯಲಿದೆ. 

ಫೆ.15ರಂದು ರುದ್ರಾಭಿಷೇಕ ಮತ್ತು ಭಕ್ತರಿಂದ ಅಖಂಡ ಭಜನಾ ಕಾರ್ಯಕ್ರಮವೂ ಜರುಗಲಿದೆ. ಫೆ. 16ರಂದು ವಿವಿಧ ಸ್ವಾಮೀಜಿಗಳ ಸಮ್ಮುಖದಲ್ಲಿ ರಥೋತ್ಸವ ನಡೆಯಲಿದೆ. 

ಭಕ್ತರಿಗೆ ಅನ್ನ ಸಂತರ್ಪಣೆ ಇರುತ್ತದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ವಿವಿಧ ಕಾರ್ಯಕ್ರಮ: 

ಹಳೇಕುಂದವಾಡದ ಕರಿಬಸವೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಫೆ.15ರಿಂದ 24 ರವರೆಗೆ ಮಹಾಶಿವರಾತ್ರಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಕ್ಷೇತ್ರದ ಧರ್ಮಾಧಿಕಾರಿ ಜೆ.ರಾಜಣ್ಣ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಫೆ.15ರಂದು ಬೆಳಿಗ್ಗೆ 10 ಗಂಟೆಗೆ ಧ್ವಜಾರೋಹಣ ನೆರೆವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಬಿಐಇಟಿ ಕಾಲೇಜಿನ ಪ್ರಾಂಶುಪಾಲ ಎಚ್.ಬಿ.ಅರವಿಂದ್, ‘ಧೂಡಾ’ ಆಯುಕ್ತ ಹುಲ್ಲುಮನೆ ತಿಮ್ಮಣ್ಣ, ಯುವಮುಖಂಡ ಶಾಮನೂರು ಸಮರ್ಥ್, ಪಾಲಿಕೆ ಮಾಜಿ ಸದಸ್ಯ ಹುಲ್ಲುಮನೆ ಗಣೇಶ್, ಮರಾಠ ಸಮಾಜದ ಮುಖಂಡ ಬಸವರಾಜ ಮಾನೆ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 

ದಾವಣಗೆರೆಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವತಿಯಿಂದ  ಆಟೊಗಳಲ್ಲಿ ಶಿವಲಿಂಗಗಳ ಮೆರವಣಿಗೆ ನಡೆಸಲಾಯಿತು

ಫೆ.17ರಂದು ಮುಂಜಾನೆ ಮಹಾರುದ್ರಾಭಿಷೇಕ, ಬೆಳಿಗ್ಗೆ 7. 30ಕ್ಕೆ ನಡೆಯುವ ಗುಗ್ಗಳ ಮಹೋತ್ಸವದ ಸಾನಿಧ್ಯವನ್ನು ಆವರಗೊಳ್ಳ ಪುರವರ್ಗ ಮಠದ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಸಂಜೆ 7 ಗಂಟೆಗೆ ಕರಿಬಸವೇಶ್ವರ ಅಜ್ಜಯ್ಯನವರ ಬೆಳ್ಳಿ ಮೂರ್ತಿಯ ಪಲ್ಲಕ್ಕಿ ಉತ್ಸವ ಜರುಗಲಿದೆ. 

24ರಂದು ಬೆಳಿಗ್ಗೆ 10 ಗಂಟೆಗೆ ಮಾತೃಶ್ರೀ ರಾಜಮಾತೆಯವರ 34ನೇ ವರ್ಷದ ಪುಣ್ಯರಾಧನೆ ಹಾಗೂ ಅಜ್ಜಯ್ಯನವರ ಪಳಾರ ಹಂಚುವ ಕಾರ್ಯಕ್ರಮ ನಡೆಯಲಿದೆ ಎಂದು ಸದ್ಗುರು ಕರಿಬಸವೇಶ್ವರ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ. 

ಹೂವು ಹಣ್ಣುಗಳ ದರ ಏರಿಕೆ

 ಶಿವರಾತ್ರಿ ಅಂಗವಾಗಿ ನಗರದ ಪ್ರವಾಸಿ ಮಂದಿರ ರಸ್ತೆ ಕೆ.ಆರ್‌.ಮಾರುಕಟ್ಟೆ ಪಿ.ಬಿ.ರಸ್ತೆ ಸೇರಿದಂತೆ ವಿವಿಧೆಡೆ ಶನಿವಾರ ಹಣ್ಣು ಹೂವು ಹಾಗೂ ಪೂಜಾ ಸಾಮಗ್ರಿಯನ್ನು ಜನರು ಖರೀದಿಸಿದರು.

ಮಧ್ಯಾಹ್ನ ಬಿಸಿಲಿನ ಕಾರಣಕ್ಕೆ ಮಾರುಕಟ್ಟೆಯಲ್ಲಿ ಗ್ರಾಹಕರು ಹೆಚ್ಚು ಕಂಡುಬರಲಿಲ್ಲ. ಬೆಳಿಗ್ಗೆ ಹಾಗೂ ಸಂಜೆ ಉತ್ತಮ ವ್ಯಾಪಾರ ನಡೆಯಿತು.  ಕೆ.ಜಿ.ಗೆ ₹200 ಇದ್ದ ದಾಳಿಂಬೆ ಹಣ್ಣಿನ ದರ ₹ 250ಕ್ಕೆ ಏರಿಕೆಯಾಗಿದೆ. ತೆಂಗಿನಕಾಯಿ ₹ 40 ತುಳಸಿಮಾಲೆ ₹ 80 ನಿಂಬೆ ₹5 ರಂತೆ ಮಾರಾಟವಾದವು.

 ದರ ಏರಿಕೆ ಕಾರಣಕ್ಕೆ ಹಣ್ಣುಗಳ ಖರೀದಿ ನಿರೀಕ್ಷಿಸಿದಷ್ಟು ನಡೆಯಲಿಲ್ಲ ಎಂದು ಹಣ್ಣಿನ ವ್ಯಾಪಾರಿ ದುಗ್ಗೇಶ್ ಹೇಳಿದರು.  ಚೆಂಡು ಹೂವು ಶಾವಂತಿಗೆ ಕಾಕಡ ಮಲ್ಲಿಗೆ ದುಂಡು ಮಲ್ಲಿಗೆ ಸೇರಿದಂತೆ ಬಹುತೇಕ ಹೂವುಗಳ ದರ ₹ 80 ರಿಂದ ₹ 100 (ಮಾರು) ಇತ್ತು. ರೋಸ್ ದರ ಕೆ.ಜಿ.ಗೆ ₹ 300 ಇತ್ತು.   ಹಣ್ಣುಗಳು;ದರ (₹ ಗಳಲ್ಲಿ) ಸೇಬು;220 ಮೂಸಂಬಿ;140 ದಾಳಿಂಬೆ;250 ದ್ರಾಕ್ಷಿ;150 ಕಲ್ಲಂಗಡಿ;25- 30 ಪೇರಲ;100ಕಿತ್ತಳೆ;100- 120 ಸಪೋಟ;100ಕರ್ಜೂರ;200ಏಲಕ್ಕಿಬಾಳೆ;80 (ಡಜನ್‌ಗೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.