ADVERTISEMENT

ದಾವಣಗೆರೆ: ಸ್ವಚ್ಛತಾ ಕಾರ್ಮಿಕರ ಮೇಲೆ ಹಲ್ಲೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 2:44 IST
Last Updated 15 ಫೆಬ್ರುವರಿ 2026, 2:44 IST
<div class="paragraphs"><p>ಗುಂಪು ಹಲ್ಲೆ</p></div>

ಗುಂಪು ಹಲ್ಲೆ

   

– ಗೆಟ್ಟಿ ಚಿತ್ರ

ದಾವಣಗೆರೆ: ಇಲ್ಲಿನ ಮೆಹಬೂಬ್ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ಇಬ್ಬರು ಸ್ವಚ್ಛತಾ ಕಾರ್ಮಿಕರ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ADVERTISEMENT

ಪದೇ ಪದೆ ಸ್ವಚ್ಛತಾ ಕಾರ್ಮಿಕರ ಮೇಲೆ ಹಲ್ಲೆ ನಡೆಯುತ್ತಿದ್ದು, ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ. ಪೌರ ಕಾರ್ಮಿಕರ ಮೇಲಿನ ಹಲ್ಲೆ, ದೌರ್ಜನ್ಯ ತಡೆಗೆ ಕಾಯ್ದೆ ರೂಪಿಸುವ ಅಗತ್ಯವಿದೆ ಎಂದೂ ಪ್ರತಿಪಾದಿಸಿದ್ದಾರೆ. 

ಏನಿದು ಘಟನೆ: 

ಶುಕ್ರವಾರ ಬೆಳಿಗ್ಗೆ ಎಂದಿನಂತೆ ಮೆಹಬೂಬ್ ನಗರದಲ್ಲಿ ಪಾಲಿಕೆಯ ವಾಹನದೊಂದಿಗೆ ಕಸ ಸಂಗ್ರಹಿಸಲು ಸ್ವಚ್ಛತಾ ಕಾರ್ಮಿಕರು ತೆರಳಿದ್ದರು. ಈ ವೇಳೆ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕೊಡುವಂತೆ ಅಲ್ಲಿನ ನಿವಾಸಿಗಳಿಗೆ ಹೇಳಿದ್ದರು. 

ಇಷ್ಟಕ್ಕೇ ಸಿಟ್ಟಿಗೆದ್ದ ದುಷ್ಕರ್ಮಿಗಳು ಪಾಲಿಕೆಯ ವಾಹನ ಚಾಲಕ ಕರಿಬಸಪ್ಪ ಮತ್ತು ಸಹಾಯಕಿ ಜಿ.ಆರ್.ರಾಜೇಶ್ವರಿ ಅವರ ಮೇಲೆ ಹಲ್ಲೆ ನಡೆಸಿ, ವಾಹನವನ್ನೂ ಜಖಂಗೊಳಿಸಿದ್ದಾರೆ. ಘಟನೆಯಲ್ಲಿ ಕರಿಬಸಪ್ಪ ಅವರ ಬಲ ಭುಜ, ಎದೆ, ಮುಖ ಹಾಗೂ ತಲೆಗೆ ಒಳಪೆಟ್ಟು ಬಿದ್ದಿದ್ದು, ರಾಜೇಶ್ವರಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಘಟನೆ ಬಗ್ಗೆ ತಿಳಿದು ಸ್ವಚ್ಛತಾ ಕಾರ್ಮಿಕರು ಆಜಾದ್ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಠಾಣೆ ಆವರಣದಲ್ಲಿ 20ಕ್ಕೂ ಹೆಚ್ಚು ವಾಹನಗಳನ್ನು ನಿಲ್ಲಿಸಿ, ಆರೋಪಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

‘ಪದೇ ಪದೇ ಹಲ್ಲೆಯಾಗುತ್ತಿದೆ. ನಮಗೆ ಭದ್ರತೆ ಇಲ್ಲ. ಮೆಹಬೂಬ್ ನಗರ, ಆಜಾದ್ ನಗರ, ಶಿವನಗರ, ಭಾಷಾನಗರ, ಕೆ.ಟಿ.ಜೆ ನಗರ ಸೇರಿ ಕೆಲವು ಪ್ರದೇಶಗಳಲ್ಲಿ ಕೆಲಸ ಮಾಡಲು ಭಯ ಪಡುವಂತಾಗಿದೆ’ ಎಂದು ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.   

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡು ಆರೋಪಿಗಳಾದ ನೂರ್ ಮತ್ತು ಅಜ್ಜು ಅವರನ್ನು ಬಂಧಿಸಿದ್ದಾರೆ. 

2 ತಿಂಗಳಲ್ಲಿ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ನಾಲ್ಕನೇ ಘಟನೆ ಇದಾಗಿದೆ. ಹಲವು ಪ್ರಕರಣಗಳಲ್ಲಿ ದೂರು ದಾಖಲಾಗುತ್ತಿಲ್ಲ. ಸ್ಥಳೀಯ ಮುಖಂಡರೇ ಸಂಧಾನ ನಡೆಸಿ, ಸುಮ್ಮನಾಗಿಸುತ್ತಿದ್ದಾರೆ ಸ್ವಚ್ಛತಾ ಕಾರ್ಮಿಕರು ದೂರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.