ADVERTISEMENT

ದಾವಣಗೆರೆ: ಭತ್ತದ ಬೆಳೆಯಲ್ಲಿ ಎಕರೆಗೆ 40 ಕ್ವಿಂಟಲ್ ಇಳುವರಿ

ಕಣಿವೆಬಿಳಚಿಯ ರೈತ ಜನಾರ್ದನ ಜಾಧವ್ ಸಾಧನೆ

ಎನ್‌.ವಿ ರಮೇಶ್‌
Published 30 ಮೇ 2023, 23:30 IST
Last Updated 30 ಮೇ 2023, 23:30 IST
ಬಸವಾಪಟ್ಟಣ ಸಮೀಪದ ಕಣಿವೆಬಿಳಚಿಯ ತಮ್ಮ ಭತ್ತದ ಗದ್ದೆಯಲ್ಲಿ ರೈತ ಜನಾರ್ದನ ಜಾಧವ್
ಬಸವಾಪಟ್ಟಣ ಸಮೀಪದ ಕಣಿವೆಬಿಳಚಿಯ ತಮ್ಮ ಭತ್ತದ ಗದ್ದೆಯಲ್ಲಿ ರೈತ ಜನಾರ್ದನ ಜಾಧವ್   

ಬಸವಾಪಟ್ಟಣ: ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಪ್ರಮುಖ ಬೆಳೆ. ಇತ್ತೀಚಿನ ದಿನಗಳಲ್ಲಿ ಭತ್ತದ ಬೆಳೆಯುವಲ್ಲಿ ರೈತರು ನಿರಾಸಕ್ತಿ ಹೊಂದಿ, ಅಡಿಕೆಯತ್ತ ವಾಲುತ್ತಿದ್ದರೂ ಬೆರಳೆಣಿಕೆಯ ರೈತರು ಭತ್ತದ ಕೃಷಿಯಲ್ಲಿ ಹೊದ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಉತ್ತಮ ಆದಾಯವನ್ನೂ ಪಡೆಯುತ್ತಿದ್ದಾರೆ.

ಇದಕ್ಕೆ ಉತ್ತಮ ನಿದರ್ಶನ ಸಮೀಪದ ಕಣಿವೆಬಿಳಚಿಯ ಯುವ ರೈತ ಜನಾರ್ದನ ಜಾಧವ್‌. 

ನೀರಾವರಿ ಭೂಮಿಯಲ್ಲಿ ಲಾಭ ತರುವ ಅಡಿಕೆ ಬೆಳೆಗೆ ಬಹುಪಾಲು ರೈತರು ವಾಲುತ್ತಿದ್ದರೆ ಬೇಸಿಗೆ ಭತ್ತದ ಬೆಳೆಯ ಹಂಗಾಮಿನಲ್ಲಿ ಎಕರೆಗೆ 40 ಕ್ವಿಂಟಲ್‌ ಇಳುವರಿ ಪಡೆದು ಜನಾರ್ದನ ಸಾಧನೆ ಮಾಡಿದ್ದಾರೆ. ಇದರಿಂದ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ADVERTISEMENT

ತಮ್ಮ 15 ಎಕರೆ ಗದ್ದೆಯಲ್ಲಿ ಆರ್‌.ಎನ್‌.ಆರ್‌. ತಳಿಯ ಭತ್ತದ ಸಸಿಗಳ ನಾಟಿ ಮಾಡಿರುವ ಅವರು, 25 ವರ್ಷಗಳಿಂದ ಭತ್ತದ ಕೃಷಿಯಲ್ಲಿ ತೊಡಗಿದ್ದಾರೆ. ಬೇಸಿಗೆ ಭತ್ತದ ಬೆಳೆಯಲ್ಲಿ ಬಹುಪಾಲು ರೈತರು ಸರಾಸರಿ 25ರಿಂದ 30 ಕ್ವಿಂಟಲ್‌ ಇಳುವರಿ ಪಡೆಯುವುದು ಸಾಮಾನ್ಯ.  ಆದರೆ 40 ಕ್ವಿಂಟಲ್‌ ಇಳುವರಿ ಪಡೆದ ಜನಾರ್ದನ್‌ ಬಗ್ಗೆ ರೈತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

‘ಎಕರೆಗೆ ₹ 22,000 ಖರ್ಚಾಗಿದೆ. ನಾಟಿಗೆ ಕೂಲಿ ಕಾರ್ಮಿಕರನ್ನು ಬಳಸಿದ್ದು ಬಿಟ್ಟರೆ ಉಳಿದ ಎಲ್ಲಾ ಕೃಷಿ ಕಾರ್ಯಗಳನ್ನು ತಮ್ಮಂದಿರಾದ ರಾಘವೇಂದ್ರ ಮತ್ತು ರವೀಂದ್ರ ಅವರೊಂದಿಗೆ ನಿರ್ವಹಿಸಿದ್ದೇನೆ. ಮುಂಜಾಗ್ರತಾ ಕ್ರಮವಾಗಿ ಒಂದು ಬಾರಿ ಕೀಟ ನಾಶಕ ಒಂದು ಬಾರಿ ರೋಗ ನಾಶಕ ಸಿಂಪಡಿಸಿದ್ದೆ. ಇದರಿಂದ ರೋಗ ಬಾಧೆ ಇರಲಿಲ್ಲ. ಆರಂಭದಲ್ಲಿ ಒಮ್ಮೆ ಮಾತ್ರ ಕಳೆ ನಾಶಕ ಸಿಂಪಡಣೆ ಮಾಡಿದ್ದೇವೆ. ಗ್ರೋಮೋರ್‌ ಕಂಪನಿಯ ಕಾಂಪ್ಲೆಕ್ಸ್‌ ಗೊಬ್ಬರವನ್ನು ಎಕರೆಗೆ ಮೂರು ಕ್ವಿಂಟಲ್‌ನಂತೆ ಮೂರು ಬಾರಿ ಬಳಕೆ ಮಾಡಿದ್ದೇನೆ’ ಎಂದು ಜನಾರ್ದನ್ ತಮ್ಮ ಕೃಷಿ ಅನುಭವ ಹಂಚಿಕೊಂಡರು.

ಈ ಬಾರಿ ಕ್ವಿಂಟಲ್‌ ಭತ್ತಕ್ಕೆ ₹ 2,300 ‌ಬೆಲೆ ಇದೆ. ಇದರಿಂದ ಉತ್ತಮ ಲಾಭವಾಗಿದೆ. ಎಲ್ಲರೂ ಅಡಿಕೆ ಬೆಳೆದರೆ ಪ್ರಮುಖ ಆಹಾರ ಧಾನ್ಯವಾದ ಭತ್ತ ಬೆಳೆಯುವವರಾರು ಎಂದು ಪ್ರಶ್ನಿಸುತ್ತಾರೆ ಅವರು.

‘ಭತ್ತಕ್ಕೆ ಬೆಲೆ ಇಲ್ಲ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಉತ್ಪಾದನಾ ವೆಚ್ಚವೂ ಹೆಚ್ಚು. ನಾಟಿ, ನಿರ್ವಹಣೆ, ಕಳೆ, ರೋಗ, ಕೊಯ್ಲು, ಒಕ್ಕಲು ಎಂದು ಕೃಷಿ ಕೆಲಸವೂ ಕಷ್ಟ. ಕಡಿಮೆ ಅವಧಿಯ ದುಡಿಮೆಗೆ ಹೆಚ್ಚು ಲಾಭ ತರುವ ಅಡಿಕೆಯೇ ಸೂಕ್ತ ಎಂದು ಎಲ್ಲಾ ರೈತರು ಅಡಿಕೆಯತ್ತ ಮುಖ ಮಾಡಿರುವ ಈ ಸಂದರ್ಭದಲ್ಲಿ ಜನಾರ್ದನ್‌ ಅವರ ಸಾಧನೆ ರೈತರಿಗೆ ಮಾದರಿ. ಸರ್ಕಾರ ಭತ್ತದ ಖರೀದಿ ಕೇಂದ್ರಗಳನ್ನು ತೆರೆದು ಕ್ವಿಂಟಲ್‌ಗೆ ₹ 3,000ದಂತೆ ಖರೀದಿಸಿದರೆ ಎಲ್ಲಾ ರೈತರಿಗೂ ಅನುಕೂಲವಾಗುತ್ತದೆ’ ಎಂಬುದು ಕಣಿವೆಬಿಳಚಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಶೇಖರಪ್ಪ ಅವರ ಅಭಿಪ್ರಾಯ.

ಬಸವಾಪಟ್ಟಣ ಸಮೀಪದ ಕಣಿವೆಬಿಳಚಿಯಲ್ಲಿ ತಾವು ಬೆಳೆದ ಭತ್ತದ ರಾಶಿಯ ಮುಂದೆ ರೈತ ಜನಾರ್ದನ ಜಾಧವ್

ಮನೆಯವರೊಂದಿಗೆ ಕೃಷಿ ಕಾಯಕ ಭತ್ತದ ಕೃಷಿಯಲ್ಲಿ ಯುವ ರೈತನ ಪ್ರಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.