ಸಂತೇಬೆನ್ನೂರು: ಇಲ್ಲಿನ ನೀರಾವರಿ ಇಲಾಖೆ ವಸತಿ ಗೃಹದ ನಿವೇಶನದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿದ್ದ ವಾರದ ಸಂತೆ ನಿರಂತರ ಮಳೆಯಿಂದಾಗಿ ಚತುಷ್ಪಥ ರಸ್ತೆಗೆ ಸ್ಥಳಾಂತರಗೊಂಡಿತು.
ತಾತ್ಕಾಲಿಕ ಸಂತೆ ಮೈದಾನ ಮಳೆಯಿಂದಾಗಿ ಕೆಸರುಗದ್ದೆಯಂತಾಗಿದ್ದು, ಗ್ರಾಹಕರು ಬಾರದ ಕಾರಣ ವ್ಯಾಪಾರಿಗಳು ರಸ್ತೆ ಬದಿ ಸಂತೆ ಸ್ಥಳಾಂತರಿಸಿದರು.
ಬೆಸ್ಕಾಂ ಕಚೇರಿಯಿಂದ ಪೊಲೀಸ್ ಠಾಣೆವರೆಗೆ ವ್ಯಾಪಾರಿಗಳ ಸಾಲು ಸಾಲು ಟೆಂಟ್‌ಗಳು ಕಾಣಿಸಿದವು. ರಸ್ತೆ ಮಧ್ಯದಲ್ಲಿ ಜನರು ಗುಂಪಿನ ಖರೀದಿ ಭರಾಟೆ ಜೋರಾಗಿತ್ತು. ಜನದಟ್ಟಣೆಯಿಂದ ವಾಹನ ಸಂಚಾರ ಒಂದೆಡೆ ದ್ವಿಪಥ ರಸ್ತೆಯಲ್ಲೇ ಸಾಗಿದವು.
ಸಂತೆ ನಡೆಸಲು ಶಾಶ್ವತ ಮೈದಾನ, ಕಟ್ಟಡ ಇಲ್ಲ. ಪ್ರತಿ ಗುರುವಾರ ಇಲ್ಲಿ ಸೇರುವ ಬೃಹತ್ ಸಂತೆಯಿಂದಾಗಿಯೇ ಗ್ರಾಮಕ್ಕೆ ಸಂತೇಬೆನ್ನೂರು ಎಂಬ ಹೆಸರು ಬಂದಿದೆ.
70-80ರ ದಶಕದವರೆಗೂ ಇಲ್ಲಿನ ಪುಷ್ಕರಿಣಿ ಬಳಿಯಲ್ಲಿಯೇ ಸಂತೆ ನಡೆಯುತ್ತಿತ್ತು. ಪುರಾತತ್ವ ಇಲಾಖೆ ತೆರವುಗೊಳಿಸದ ನಂತರ ಸಂತೆ ನೀರಾವರಿ ಇಲಾಖೆ ನಿವೇಶನದಲ್ಲಿ ನಡೆಯುತ್ತಿದೆ. ಸಂತೆ ನಡೆಸಲು ಶಾಶ್ವತ ಸೂರು ಕಲ್ಪಿಸಬೇಕು ಎಂದು ವ್ಯಾಪಾರಿಗಳು, ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.