ADVERTISEMENT

ದಾವಣಗೆರೆ: ಜಾತ್ರೆ ಯಶಸ್ಸಿಗೆ ಜಿಲ್ಲಾಡಳಿತದ ಸಹಕಾರ

ವಾಲ್ಮೀಕಿ ಜಾತ್ರೆ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:50 IST
Last Updated 31 ಜನವರಿ 2026, 6:50 IST
ವಾಲ್ಮೀಕಿ ಜಾತ್ರಾ ಮಹೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿದರು
ವಾಲ್ಮೀಕಿ ಜಾತ್ರಾ ಮಹೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿದರು   

ಹರಿಹರ: ಫೆ.8 ಮತ್ತು 9 ರಂದು ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. 

ಗುರುಪೀಠದ ಆವರಣದಲ್ಲಿ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ‘ಕುಡಿಯುವ ನೀರು, ವಿದ್ಯುತ್, ಭದ್ರತೆ, ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು, ಇದಕ್ಕಾಗಿ ಮಠದ ಸಹಕಾರ ಪಡೆದು ಸಂಬಂಧಿತ ಇಲಾಖಾಧಿಕಾರಿಗಳು ಗಮನಹರಿಸಬೇಕು’ ಎಂದು ಸೂಚಿಸಿದರು. 

‘ಸ್ವಸಹಾಯ ಸಂಘಗಳಿಂದ ಉತ್ಪಾದಿತ ವಸ್ತುಗಳ ಮಾರಾಟದ ಮಳಿಗೆಗಳನ್ನು ಜಾತ್ರೆಯಲ್ಲಿ ತೆರೆಯುವ ಮೂಲಕ ಮಹಿಳೆಯರ ಆರ್ಥಿಕ ಸಬಲತೆಗೆ ಕ್ರಮ ಕೈಗೊಳ್ಳಬೇಕು’  ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ADVERTISEMENT

‘ಈ ಹಿಂದೆ ಹೆಲಿಕಾಪ್ಟರ್ ಇಳಿಸಲು ಪೈಲಟ್‌ಗಳಿಗೆ ಆಗಿದ್ದ ಗೊಂದಲ ಈ ಬಾರಿ ಆಗದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯಬಿದ್ದರೆ ಸಮೀಪದ ಕನಕ ಗುರುಪೀಠದಲ್ಲಿ ಒಂದು ಹೆಲಿಪ್ಯಾಡ್ ರಚಿಸಿ’ ಎಂದು ಸೂಚಿಸಿದರು.  

ಹರಿಹರ ಮತ್ತು ದಾವಣಗೆರೆ ಬಸ್ ನಿಲ್ದಾಣದಿಂದ ಗಂಟೆಗೆ ಒಂದರಂತೆ ರಾಜನಹಳ್ಳಿಗೆ ಮಿನಿ ಬಸ್ ವ್ಯವಸ್ಥೆ ಮಾಡಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಹೇಳಿದರು.

‘ಸಿನಿಮಾ ನಟರು ಬರುವುದಿದ್ದರೆ ಮುಂಚೆಯೇ ತಿಳಿಸಿದರೆ ಬಂದೋಬಸ್ತ್ ಮಾಡಲು ಅನುಕೂಲವಾಗುತ್ತದೆ. ಗುರುಪೀಠದ ಆವರಣದ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾಗಳನ್ನು  ಅಳವಡಿಸಬೇಕಿದೆ, ವಾಹನ ನಿಲುಗಡೆಗೆ ಸ್ಥಳ ನಿಗದಿ, ಪೊಲೀಸ್ ಸಿಬ್ಬಂದಿಗೆ ರಾತ್ರಿ ವಿಶ್ರಾಂತಿಗೆ ವ್ಯವಸ್ಥೆ ಆಗಬೇಕಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು. 

‘ವಾಲ್ಮೀಕಿ ಜಾತ್ರೆಯಲ್ಲಿ ಸಮುದಾಯದ ಜನರಲ್ಲಿ ವೈಚಾರಿಕತೆ, ಜಾಗೃತಿ ಬೆಳೆಸಲು ಆದ್ಯತೆ ನೀಡಲಾಗುವುದು’ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಬಸನಗೌಡ ದದ್ದಲ್ ತಿಳಿಸಿದರು. 

ಪ್ರಸನ್ನಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಜಾತ್ರಾ ಸಮಿತಿ ಸಂಚಾಲಕ ಎಂ.ಜಿ.ಪಂಪಾಪತಿ, ಮಠದ ಧರ್ಮದರ್ಶಿ ಕೆ.ಬಿ.ಮಂಜುನಾಥ, ಹೊದಿಗೆರೆ ರಮೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.