ADVERTISEMENT

ಸಂವಿಧಾನಕ್ಕೆ ಧಕ್ಕೆಯಾದಾಗ ಇತರರೂ ಧ್ವನಿ ಎತ್ತಲಿ: ಸತೀಶ್ ಜಾರಕಿಹೊಳಿ

ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಸತೀಶ್ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 4:31 IST
Last Updated 31 ಜನವರಿ 2022, 4:31 IST
ಹರಿಹರದ ಪ್ರೊ.ಬಿ. ಕೃಷ್ಣಪ್ಪ ಸ್ಮಾರಕ ಭವನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿಭಾಗೀಯ ಸಂಘಟನಾ ಸಮಾವೇಶದ ಸಮಾರೋಪದಲ್ಲಿ ವೇದಿಕೆ ಸ್ಥಾಪಕ ಸತೀಶ್ ಜಾರಕಿಹೊಳಿ ಮಾತನಾಡಿದರು. ಅನಂತನಾಯ್ಕ್, ಶಾಸಕ ಎಸ್. ರಾಮಪ್ಪ, ರೈತ ಮುಖಂಡ ಮಹಿಮ ಪಟೇಲ್, ಡಾ.ಎ.ಬಿ. ರಾಮಚಂದ್ರಪ್ಪ ಇದ್ದರು.
ಹರಿಹರದ ಪ್ರೊ.ಬಿ. ಕೃಷ್ಣಪ್ಪ ಸ್ಮಾರಕ ಭವನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿಭಾಗೀಯ ಸಂಘಟನಾ ಸಮಾವೇಶದ ಸಮಾರೋಪದಲ್ಲಿ ವೇದಿಕೆ ಸ್ಥಾಪಕ ಸತೀಶ್ ಜಾರಕಿಹೊಳಿ ಮಾತನಾಡಿದರು. ಅನಂತನಾಯ್ಕ್, ಶಾಸಕ ಎಸ್. ರಾಮಪ್ಪ, ರೈತ ಮುಖಂಡ ಮಹಿಮ ಪಟೇಲ್, ಡಾ.ಎ.ಬಿ. ರಾಮಚಂದ್ರಪ್ಪ ಇದ್ದರು.   

ಹರಿಹರ: ಸಂವಿಧಾನದ ಆಶಯ, ಡಾ.ಬಿ.ಆರ್. ಅಂಬೇಡ್ಕರ್‌ ಅವರ ವಿಚಾರಧಾರೆಗಳಿಗೆ ಧಕ್ಕೆ ಎದುರಾದಾಗ ದಲಿತರೊಂದಿಗೆ ಇತರೆ ವರ್ಗದವರೂ ಧ್ವನಿ ಎತ್ತಬೇಕು ಎಂದು ಮಾನವ ಬಂಧುತ್ವ ವೇದಿಕೆ ಸ್ಥಾಪಕ, ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಹೇಳಿದರು.

ಇಲ್ಲಿನ ಪ್ರೊ.ಬಿ. ಕೃಷ್ಣಪ್ಪ ಸ್ಮಾರಕ ಭವನದಲ್ಲಿ ಮಾನವ ಬಂಧುತ್ವ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ವಿಭಾಗೀಯ ಸಂಘಟನಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಈಚೆಗೆ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರು ಡಾ.ಬಿ.ಆರ್. ಅಂಬೇಡ್ಕರ್‌ ಅವರಿಗೆ ಅವಮಾನಿಸಿದ ಪ್ರಕರಣದಲ್ಲಿ ರಾಜ್ಯದಾದ್ಯಂತ ಬಹುತೇಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಪ್ರತಿಭಟನೆ ನಡೆಸಿದರು.
ಸಂವಿಧಾನದಲ್ಲಿ ಕೇವಲ ಅವರಿಗೆ ಮಾತ್ರ ಸೌಲಭ್ಯ ನೀಡಿಲ್ಲ. ಉದ್ಯೋಗ, ಶಿಕ್ಷಣದಲ್ಲಿ ಯಾರೆಲ್ಲಾ ಮೀಸಲಾತಿ ಪಡೆಯುತ್ತಿದ್ದಾರೋ ಆ ಎಲ್ಲಾ ಜಾತಿ, ಜನಾಂಗದವರೂ ಇಂತಹ ಸಂದರ್ಭದಲ್ಲಿ ಕೂಗು ಎಬ್ಬಿಸಬೇಕು ಅಲ್ಲವೇ?’ ಎಂದು ಪ್ರಶ್ನಿಸಿದರು.

ADVERTISEMENT

ಆಡಳಿತದಿಂದ ಪರಂಪರೆ ಬದಲಾವಣೆ: ‘ಈಗ ಆಡಳಿತದಲ್ಲಿರುವವರು ಹೊಸ ಪಾರ್ಲಿಮೆಂಟ್, ಅಮರ್ ಜವಾನ್ ಜ್ಯೋತಿ ಸ್ಥಾಪನೆ ಮಾಡುತ್ತಿದ್ದಾರೆ. ನೆಹರೂ, ಇಂದಿರಾಗಾಂಧಿ ಅವರು ಸೇರಿ ಸ್ವಾತಂತ್ರ್ಯಪೂರ್ವ ಮತ್ತು ನಂತರದಲ್ಲಿ ತ್ಯಾಗ ಮಾಡಿದ ಮಹಾನ್ ನಾಯಕರ ಹೆಸರು ಪರಂಪರೆ ಮರೆಸಿ, ಹೊಸತನ್ನು ಸ್ಥಾಪಿಸುವ ಹುನ್ನಾರವಿದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎನ್‍ಇಪಿ ಸರಿಯಿಲ್ಲ: ‘ಹೊಸ ಶಿಕ್ಷಣ ನೀತಿ ಜಾರಿಯಲ್ಲಿ ಶೋಷಿತರು ಮತ್ತೆ ತಮ್ಮ ಹೀನ ಕುಲಕಸುಬನ್ನು ಮುಂದುವರಿಸುವ ಹುನ್ನಾರವಿದೆ. 7, 9ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ಪ್ರಮಾಣಪತ್ರ ಪಡೆದರೆ ಯಾವ ಶ್ರೇಷ್ಠ ಉದ್ಯೋಗ ಪಡೆಯಲು ಸಾಧ್ಯ? ಮಲ, ಮೂತ್ರ, ಕಸ ಸ್ವಚ್ಛಗೊಳಿಸುವುದು, ಬೇಟೆಯಾಡುವುದು, ಕುರಿ ಕಾಯುವ ವೃತ್ತಿಗೆ ಸೀಮಿತಗೊಳ್ಳುತ್ತಾರೆ. ಹೊಸ ಶಿಕ್ಷಣ ನೀತಿಯು, ಸಕ್ಕರೆಯ ಲೇಪನವುಳ್ಳ ಕಹಿ ಔಷಧವಾಗಿದೆ. ಇದು ಗುಲಾಮಗಿರಿಯ ಪುನರ್‌ಜನ್ಮಕ್ಕೆ ಕಾರಣವಾಗುತ್ತದೆ’ ಎಂದು ಸತೀಶ್ ಜಾರಕಿಹೊಳಿ ಅವರು ಅಭಿಪ್ರಾಯಪಟ್ಟರು.

ಮೌಢ್ಯ ನಿವಾರಿಸಿ: ‘ಪಟ್ಟಭದ್ರರು ಧರ್ಮ, ದೇವರು, ದೇವತೆ ಹೆಸರಿನಲ್ಲಿ ದಲಿತರು, ಬಡವರನ್ನು ಮೌಢ್ಯಕ್ಕೆ ತಳ್ಳುತ್ತಿದ್ದಾರೆ. ಈ ಹಿಂದೆ ಚಂದ್ರಗುತ್ತಿ, ಉಚ್ಚಂಗಿದುರ್ಗ, ಯಲ್ಲಮ್ಮ ಕ್ಷೇತ್ರಗಳಲ್ಲಿ ಧರ್ಮದ ಹೆಸರಿನಲ್ಲಿ ನಡೆಯಬಾರದ್ದು ನಡೆಯುತ್ತಿತ್ತು. ಬೆತ್ತಲೆ ಸೇವೆ ನಿಂತಿದೆಯಾದರೂ ಮುತ್ತು ಕಟ್ಟುವುದು, ದೇವದಾಸಿ ಪದ್ಧತಿ ಇನ್ನೂ ಅಲ್ಪ ಪ್ರಮಾಣದಲ್ಲಿ ಆಚರಣೆಯಲ್ಲಿದೆ. ಇಂತಹ ಮೌಢ್ಯಾಚರಣೆಗಳಿಂದ ಜನರನ್ನು ರಕ್ಷಿಸಲು, ಶೋಷಣೆ ತಪ್ಪಿಸಲು, ಜಾಗೃತಿ ಮೂಡಿಸಲು ಮಾನವ ಬಂಧುತ್ವ ವೇದಿಕೆ ಸ್ಥಾಪಿಸಲಾಗಿದೆ. ಇದು ಒಂದು, ಜಾತಿ, ಧರ್ಮಕ್ಕೆ ಸೀಮಿತವಲ್ಲ. ವೈಚಾರಿಕ ಮನೋಭಾವದ ಎಲ್ಲರಿಗೂ ಅವಕಾಶವಿದೆ. ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್‌ ಅವರ ಚಿಂತನೆಯನ್ನು ಜನ ಸಾಮಾನ್ಯರಿಗೆ ತಲುಪಿಸಬೇಕಿದೆ’ ಎಂದರು.

ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‌ನ ಟ್ರಸ್ಟಿ ರುದ್ರಪ್ಪ ಹನಗವಾಡಿ ಮಾತನಾಡಿ, ‘ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹೋನ್ನತ ಉದ್ದೇಶದ ಬಂಧುತ್ವ ವೇದಿಕೆ ಚಟುವಟಿಕೆ ಜನಪರ ಚಳವಳಿಯಾಗಿ ಹೊರಹೊಮ್ಮಲಿ’ ಎಂದು ಆಶಿಸಿದರು.

ವೇದಿಕೆ ವಿಭಾಗೀಯ ಸಂಚಾಲಕ ಅನಂತನಾಯ್ಕ್, ‘ಸಮಾವೇಶದಲ್ಲಿ 9 ಜಿಲ್ಲೆಯ 112 ಪದಾಧಿಕಾರಿಗಳು ಭಾವಹಿಸಿದ್ದರು. ವೇದಿಕೆಯ ಕಾರ್ಯಚಟುವಟಿಕೆ ರಾಜ್ಯದ 30 ಜಿಲ್ಲೆಯ 112 ತಾಲ್ಲೂಕುಗಳಲ್ಲಿದೆ. ನಾಡಿನ ಹಲವೆಡೆ ನಾಗರಪಂಚಮಿಯಂದು ಹುತ್ತಕ್ಕೆ ಹಾಲೆರೆಯುವ ಬದಲು ಮಕ್ಕಳು, ಬಾಣಂತಿಯರಿಗೆ ಹಾಲು ನೀಡುವ ವೇದಿಕೆಯ ಕರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಇತರೆ ಕ್ಷೇತ್ರಗಳತ್ತಲೂ ವೇದಿಕೆ ಕೆಲಸ ಆರಂಭಿಸುತ್ತಿದೆ’ ಎಂದು ಹೇಳಿದರು.

ಉಪನ್ಯಾಸಕ ಮಂಜುನಾಥ ದೊಡ್ಮನಿ ರಚಿತ ‘ಉಕ್ಕಡಗಾತ್ರಿ ಕರಿಬಸಜ್ಜನ ದೆವ್ವಗಳ ಜಾನಪದೀಯ ಅಧ್ಯಯನ’ ಕೃತಿಯನ್ನು ಇದೇ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಲೋಕಾರ್ಪಣೆ ಮಾಡಿದರು.

ಶಾಸಕ ಎಸ್. ರಾಮಪ್ಪ, ರೈತ ಮುಖಂಡ ಮಹಿಮ ಪಟೇಲ್, ಮಲೆಬೆನ್ನೂರಿನ ಸಾಬಿರ್ ಜಯಸಿಂಹ, ಶಿವಕುಮಾರ್ ಮಾಡಾಳ್, ಬೆಳಗಾವಿಯ ತೋಳಿ ಭರಮಣ್ಣ, ಇರ್ಫಾನ್ ಮುದಗಲ್, ಸೈಯದ್ ಏಜಾಜ್ ಅಹಮದ್, ಸಂತೋಷ್ ನೋಟದವರ್, ಪಾರ್ವತಿ, ಡಿ.ವೈ. ಇಂದಿರಾ, ಡಾ.ಎ.ಬಿ. ರಾಮಚಂದ್ರಪ್ಪ, ಶ್ರೀನಿವಾಸ್ ನಂದಿಗಾವಿ, ಮಂಜುನಾಥ್ ಪಟೇಲ್, ರಾಜನಹಳ್ಳಿ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.