
ದಾವಣಗೆರೆ: ‘ಸಂವಿಧಾನದ ಆಶಯಗಳೇ ಪ್ರಜಾಪ್ರಭುತ್ವದ ಮಾನದಂಡಗಳಾಗಿದ್ದು, ಇವುಗಳ ಯಶಸ್ಸಿಗೆ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸಬೇಕಿದೆ’ ಎಂದು ವಕೀಲರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.
ನಗರದ ಪಿ.ಬಿ. ರಸ್ತೆಯ ಡಿಆರ್‌ಆರ್ ಶಾಲೆಯಲ್ಲಿ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ, ರಾಜ್ಯ ಬಾಲ ಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಮತ್ತು ಗಣರಾಜ್ಯ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶ ಗಣರಾಜ್ಯವಾಗಿ 77 ವರ್ಷಗಳು ಕಳೆದರೂ ರಾಜಕೀಯ ಸ್ವಾತಂತ್ರ್ಯ ಪಡೆಯುವಲ್ಲಿ ಮಾತ್ರ ಸಫಲರಾಗಿದ್ದೇವೆ. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ಇಂದಿಗೂ ಮುಂದುವರಿಯುತ್ತಿರುವುದು ವಿಷಾದನೀಯ. ಶಿಕ್ಷಣದ ಹಕ್ಕಿನ ಜೊತೆಗೆ ಉದ್ಯೋಗದ ಹಕ್ಕು ಮತ್ತು ವಸತಿ ಹಕ್ಕನ್ನು ಸಹ ಮೂಲಭೂತ ಹಕ್ಕುಗಳನ್ನಾಗಿ ಘೋಷಿಸಬೇಕು’ ಎಂದು ಪ್ರತಿಪಾದಿಸಿದರು.
ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಭಿಕುಮಾರ್ ಜಿ.ಎಸ್., ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ, ಡಿಆರ್‌ಆರ್ ಶಾಲೆಗಳ ಆಡಳಿತಾಧಿಕಾರಿ ಎಂ. ಬಸವರಾಜಪ್ಪ, ಎಸ್.ಬಿ. ಶಿಲ್ಪಾ, ಆರ್. ಭೋಜರಾಜ ಯಾದವ್, ಎಚ್.ಎಸ್. ಹಾಲೇಶ್, ಎ.ಎಂ. ಬಸವನಗೌಡ, ಕೆ.ಎಲ್. ರಾಧಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.