ADVERTISEMENT

ದಾವಣಗೆರೆ | ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’: ಹಸ್ತಾಂತರಕ್ಕೆ ಕಾದಿವೆ 54 ಯೋಜನೆ

‘ಸ್ಮಾರ್ಟ್ ಸಿಟಿ’ಯಡಿ ಪೂರ್ಣಗೊಂಡ ಯೋಜನೆಗಳ ನಿರ್ವಹಣೆಗೆ ಮಹಾನಗರ ಪಾಲಿಕೆ ಮೀನಮೇಷ

ಜಿ.ಬಿ.ನಾಗರಾಜ್
Published 25 ಜುಲೈ 2024, 6:55 IST
Last Updated 25 ಜುಲೈ 2024, 6:55 IST
<div class="paragraphs"><p>ದಾವಣಗೆರೆಯ ಎಸ್.ಎಸ್‌.ಬಡಾವಣೆಯಲ್ಲಿನ ಗಂಗೂಬಾಯಿ ಹಾನಗಲ್ ಉದ್ಯಾನದಲ್ಲಿ ಮುರಿದು ಬಿದ್ದಿರುವ ಸಂಚಾರ ನಿಯಮಗಳ ಫಲಕ&nbsp; &nbsp;</p></div>

ದಾವಣಗೆರೆಯ ಎಸ್.ಎಸ್‌.ಬಡಾವಣೆಯಲ್ಲಿನ ಗಂಗೂಬಾಯಿ ಹಾನಗಲ್ ಉದ್ಯಾನದಲ್ಲಿ ಮುರಿದು ಬಿದ್ದಿರುವ ಸಂಚಾರ ನಿಯಮಗಳ ಫಲಕ   

   

–ಪ್ರಜಾವಾಣಿ ಚಿತ್ರ

ದಾವಣಗೆರೆ: ಮೂಲಸೌಲಭ್ಯ ಕಲ್ಪಿಸಿ ನಗರದ ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’ ಪೂರ್ಣಗೊಳಿಸಿದ 54 ಯೋಜನೆಗಳು ಹಸ್ತಾಂತರಕ್ಕೆ ಕಾಯುತ್ತಿವೆ. ಯೋಜನೆಗಳನ್ನು ಸ್ವಾಧೀನಕ್ಕೆ ಪಡೆದು ನಿರ್ವಹಣೆಯ ಹೊಣೆ ಹೊರಲು ಮಹಾನಗರ ಪಾಲಿಕೆ ಮೀನ–ಮೇಷ ಎಣಿಸುತ್ತಿದೆ. ಇದರಿಂದ ಕೆಲ ಯೋಜನೆಗಳು ಆರಂಭದಲ್ಲಿಯೇ ಸೊರಗುತ್ತಿವೆ.

ADVERTISEMENT

‘ಸ್ಮಾರ್ಟ್‌ ಸಿಟಿ’ಯಡಿ ಕೈಗೆತ್ತಿಕೊಂಡ ಯೋಜನೆಗಳಲ್ಲಿ ಮಹಾನಗರ ಪಾಲಿಕೆಯ ಸುಪರ್ದಿಗೆ ಒಪ್ಪಿಸಬಹುದಾದ 71 ಕಾಮಗಾರಿಗಳಿವೆ. ಇವುಗಳಲ್ಲಿ 54 ಕಾಮಗಾರಿಗಳನ್ನು ಪೂರ್ಣಗೊಳಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಕ್ಕೆ ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’ ಮೂರು ವರ್ಷಗಳಿಂದ ಪತ್ರ ವ್ಯವಹಾರ ನಡೆಸುತ್ತಿದೆ. ಮಹಾನಗರ ಪಾಲಿಕೆ ಹಾಗೂ ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’ ನಡುವಿನ ಮುಸುಕಿನ ಗುದ್ದಾಟದಲ್ಲಿ ಯೋಜನೆಗಳು ಯಶಸ್ಸು ಕಾಣುವುದು ಅನುಮಾನವಾಗಿದೆ.

‘ಸ್ಮಾರ್ಟ್‌ ಸಿಟಿ’ ಯೋಜನೆ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೀಮಿತವಾಗಿ ಅನುಷ್ಠಾನಗೊಂಡಿದೆ. ನಗರದ ಜನಜೀವನ ಮಟ್ಟವನ್ನು ಸುಧಾರಿಸುವ ಹಾಗೂ ಮೂಲಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರಸ್ತೆ, ನೀರು, ಚರಂಡಿ, ನಗರದ ಸೌಂದರ್ಯ ಹೆಚ್ಚಿಸುವ ಕಾರಂಜಿ ನಿರ್ಮಾಣ ಕಾಮಗಾರಿಗಳು ಮುಕ್ತಾಯಗೊಂಡಿವೆ. ಹಸ್ತಾಂತರವಾಗದ ಕಾರಣಕ್ಕೆ ನಿರ್ವಹಣೆಯೇ ಇಲ್ಲದೆ ಹೊಸ ಸವಾಲುಗಳು ಎದುರಾಗಿವೆ.

‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ನಡೆಸಿದ ಕಾಮಗಾರಿ ಮುಕ್ತಾಯಗೊಂಡ ಆರಂಭದ ಎರಡು ವರ್ಷ ನಿರ್ವಹಣೆಯ ಹೊಣೆ ಗುತ್ತಿಗೆದಾರರದ್ದು. ಆ ಬಳಿಕ ಸಂಬಂಧಪಟ್ಟ ಇಲಾಖೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಯುವಜನ ಮತ್ತು  ಕ್ರೀಡಾ ಇಲಾಖೆ, ಆರೋಗ್ಯ, ಶಿಕ್ಷಣ, ತೋಟಗಾರಿಕೆ ಇಲಾಖೆಗಳು ನಿಗದಿತ ಯೋಜನೆಗಳನ್ನು ಕಾಲಮಿತಿಯಲ್ಲಿ ಸ್ವಾಧೀನಕ್ಕೆ ಪಡೆದಿವೆ. ಥೀಮ್‌ ಪಾರ್ಕ್‌ ಸುಪರ್ದಿಗೆ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಪೊಲೀಸ್‌ ಚೌಕಿಗಳನ್ನು ಸ್ವಾಧೀನಕ್ಕೆ ಪಡೆಯಲು ಪೊಲೀಸ್‌ ಇಲಾಖೆ ಉತ್ಸುಕತೆ ತೋರಿವೆ. ಆದರೆ, ಮಹಾನಗರ ಪಾಲಿಕೆ ಮಾತ್ರ ಈವರೆಗೆ ಒಂದು ಯೋಜನೆಯ ನಿರ್ವಹಣೆಯ ಜವಾಬ್ದಾರಿ ಪಡೆದುಕೊಂಡಿಲ್ಲ.

ನಗರದಲ್ಲಿ ನಿರ್ಮಾಣಗೊಂಡ ಮಳೆ ನೀರು ಚರಂಡಿ, ರಾಜಕಾಲುವೆ, ಕೆ.ಆರ್‌. ಮಾರುಕಟ್ಟೆಯ ರಸ್ತೆಗಳು, ಕುಂದವಾಡ ಕೆರೆ, ಮಂಡಕ್ಕಿ ಭಟ್ಟಿ ರಸ್ತೆ, ಖಾಸಗಿ ಬಸ್‌ ನಿಲ್ದಾಣ, ಜಗಳೂರು ರಸ್ತೆಯ ಬಸ್‌ ನಿಲ್ದಾಣ, ಹೊಂಡದ ವೃತ್ತದ ಕಲ್ಯಾಣಿ, ಉದ್ಯಾನಗಳಲ್ಲಿರುವ ಜಿಮ್‌ಗಳು, ವಿದ್ಯುತ್ ಚಿತಾಗಾರ, ಶೌಚಾಲಯ ಸೇರಿ ಹಲವು ಕಾಮಗಾರಿ ಪೂರ್ಣಗೊಂಡು ಆಯಾ ಸ್ಥಳಗಳು ನಿರ್ಹಹಣೆಗಾಗಿ ಹಸ್ತಾಂತರಕ್ಕೆ ಕಾಯುತ್ತಿವೆ. ಶಾಮನೂರು ಬಳಿ ₹ 3.10 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ವಿದ್ಯುತ್‌ ಚಿತಾಗಾರ ಗುತ್ತಿಗೆದಾರರ ನಿರ್ವಹಣೆಯ ಅವಧಿಯೂ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ನಗರ ವ್ಯಾಪ್ತಿಯ 31 ಉದ್ಯಾನಗಳಲ್ಲಿ ₹ 7.35 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಜಿಮ್‌ ಹಾಗೂ ಆಟಿಕೆಗಳು ದೂಳು ಹಿಡಿಯುತ್ತಿವೆ. ನಗರದ 29 ಸ್ಥಳಗಳಲ್ಲಿ ನಿರ್ಮಿಸಿದ ‘ಸ್ಮಾರ್ಟ್‌’ ಶೌಚಾಲಯಗಳು ಸೇವೆಯನ್ನು ಒದಗಿಸದಾಗಿವೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಅಂತರ ಇಲಾಖೆಯ ಸಮನ್ವಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಪೂರ್ಣ ಗೊಂಡ ಯೋಜನೆಗಳ ಕಾಮಗಾರಿಗಳನ್ನು ನಿರ್ವಹಣೆಗಾಗಿ ಸ್ವೀಕರಿಸುವಂತೆ ಜಿಲ್ಲಾಧಿಕಾರಿ ನೀಡಿದ ಸೂಚನೆಗೆ ಮಹಾನಗರ ಪಾಲಿಕೆ ಪೂರಕವಾಗಿ ಸ್ಪಂದಿ ಸಿತ್ತು. 48 ಯೋಜನೆಗಳನ್ನು ಪರಿಶೀಲಿಸಿದ ಮಹಾನಗರ ಪಾಲಿಕೆ ಒಪ್ಪಿಗೆಯನ್ನೂ ಸೂಚಿಸಿತ್ತು. ಹಸ್ತಾಂತರ ಪ್ರಕ್ರಿಯೆ ಮಾತ್ರ ಕಾಲಮಿತಿಯಲ್ಲಿ ನಡೆಯುತ್ತಿಲ್ಲ.

‘ಸ್ಮಾರ್ಟ್‌ ಸಿಟಿ’ ಲಿಮಿಟೆಡ್‌ನ 15 ನಿರ್ದೇಶಕರ ಸಮಿತಿಯಲ್ಲಿ ಮಹಾನಗರ ಪಾಲಿಕೆಯ ಪ್ರಾತಿನಿಧ್ಯ ದೊಡ್ಡದು. ಮೇಯರ್‌ ಹಾಗೂ ಪಾಲಿಕೆಯ ಆಯುಕ್ತರು ನಿರ್ದೇಶಕರಾಗಿದ್ದರೆ, ನಾಲ್ವರು ಕಾರ್ಪೊರೇಟರ್‌ಗಳು ಸಹ ನಿರ್ದೇಶಕರಾಗಿದ್ದಾರೆ. ಪ್ರತಿ ಯೋಜನೆಗೆ ನಿರ್ದೇಶಕರ ಅನುಮತಿ ಕಡ್ಡಾಯ. ಯೋಜನೆಗಳು ಪೂರ್ಣಗೊಂಡ ಬಳಿಕ ನಿರ್ವಹಣೆಗೆ ಮಹಾನಗರ ಪಾಲಿಕೆ ವಿಳಂಬ ಮಾಡುತ್ತಿರುವುದು ಎಷ್ಟು ಸರಿ ಎಂಬುದು ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’ ಅಧಿಕಾರಿಗಳ ಪ್ರಶ್ನೆ.

ಪಾಲಿಕೆ ವಾದ ಏನು?
ಪೂರ್ಣಗೊಂಡ ಯೋಜನೆಯ ಹಸ್ತಾಂತರಕ್ಕೆ ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’ ಪತ್ರ ವ್ಯವಹಾರ ನಡೆಸುತ್ತದೆ. ನಿರ್ದಿಷ್ಟ ಯೋಜನೆಯನ್ನು ಸ್ವೀಕರಿಸುವ ಇಲಾಖೆಯ ಪ್ರತಿನಿಧಿಗಳು ಹಾಗೂ ‘ಸ್ಮಾರ್ಟ್‌ ಸಿಟಿ’ ಎಂಜಿನಿಯರುಗಳ ತಂಡ ಜಂಟಿ ಸಮೀಕ್ಷೆ ನಡೆಸುತ್ತದೆ. ದೋಷಗಳನ್ನು ಪತ್ತೆಹಚ್ಚಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಪೂರ್ಣಗೊಂಡ ಯೋಜನೆಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ‘ಸ್ಮಾರ್ಟ್‌ ಸಿಟಿ ಲಿಮಿಟೆಡ್‌’ ಪತ್ರ ಬರೆದಿದೆ. ನ್ಯಾಯಾಲಯದ ಮೆಟ್ಟಿಲೇರಿದ ಯೋಜನೆಗಳನ್ನು ಹೊರತುಪಡಿಸಿ ಉಳಿದವುಗಳನ್ನು ಸ್ವಾಧೀನಕ್ಕೆ ಪಡೆಯಲು ಮಹಾನಗರ ಪಾಲಿಕೆ ಸಮ್ಮತಿಸಿದೆ. ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಯ ಎಂಜಿನಿಯರುಗಳ ತಂಡ ಜಂಟಿ ಸಮೀಕ್ಷೆ ಕೂಡ ನಡೆಸಿದೆ. ರಸ್ತೆ ಅಭಿವೃದ್ಧಿ, ಒಳಚರಂಡಿ ದುರಸ್ತಿಯಲ್ಲಿ ಕೆಲ ದೋಷಗಳನ್ನು ಪತ್ತೆ ಮಾಡಲಾಗಿದೆ. ಮಾರ್ಗಸೂಚಿ ಪ್ರಕಾರ ಸರಿಪಡಿಸುವಂತೆ ‘ಸ್ಮಾರ್ಟ್‌ ಸಿಟಿ’ಗೆ ಸೂಚಿಸಿದೆ. ಇದರಲ್ಲಿ ವಿಳಂಬ ಆಗುತ್ತಿದೆ ಎಂಬುದು ಮಹಾನಗರ ಪಾಲಿಕೆಯ ವಾದ.

‘ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಕುಡಿಯುವ ನೀರು ಸೇರಿ ಕೆಲ ಪೈಪ್‌ಲೈನ್‌ಗಳಿಗೆ ಹಾನಿಯುಂಟಾಗಿದೆ. ಮಳೆನೀರು ಚರಂಡಿಗಳಲ್ಲಿ ಹೂಳು ತುಂಬಿರುವುದು ಕಂಡುಬಂದಿದೆ. ಇವುಗಳನ್ನು ಸರಿಪಡಿಸಲು ಸಲಹೆ ನೀಡಿದ್ದೇವೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯೋಜನೆ ಸುಪರ್ದಿಗೆ ಪಡೆಯುತ್ತೇವೆ’ ಎನ್ನುತ್ತಾರೆ ಮಹಾನಗರ ಪಾಲಿಕೆಯ ಎಂಜಿನಿಯರುಗಳು.

ನಿಗದಿತ ಅನುದಾನದಲ್ಲಿ ಯೋಜನೆಗಳನ್ನು ರೂಪಿಸುವುದಷ್ಟೇ ‘ಸ್ಮಾರ್ಟ್‌ ಸಿಟಿ’ಯ ಗುರಿ. ಮಹಾನಗರ ಪಾಲಿಕೆ ಹೊರತುಪಡಿಸಿ ಉಳಿದ ಇಲಾಖೆಗಳು ಯೋಜನೆಗಳನ್ನು ಸ್ವಾಧೀನಕ್ಕೆ ಪಡೆದುಕೊಂಡಿವೆ.
ವೀರೇಶಕುಮಾರ್‌, ವ್ಯವಸ್ಥಾಪಕ ನಿರ್ದೇಶಕ, ಸ್ಮಾರ್ಟ್‌ ಸಿಟಿ ಲಿಮಿಟೆಡ್‌
ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಗುತ್ತಿಗೆದಾರರ ನಿರ್ವಹಣೆಯ ಅವಧಿ ಪೂರ್ಣಗೊಂಡ ಯೋಜನೆಗಳನ್ನು ಸ್ವೀಕರಿಸಲು ಪಾಲಿಕೆ ಕಾರ್ಯೋನ್ಮುಖವಾಗಿದೆ. ಯಾವುದೇ ಯೋಜನೆಯನ್ನು ನಿರಾಕರಿಸಿಲ್ಲ.
ರೇಣುಕಾ, ಆಯುಕ್ತರು, ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.