ADVERTISEMENT

6 ಪೇಟೆಂಟ್‌ ಪಡೆಯಲು ನೆರವಾದ ದಾವಣಗೆರೆ ವಿವಿಯ ಐಪಿಆರ್‌

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 13:02 IST
Last Updated 19 ಆಗಸ್ಟ್ 2021, 13:02 IST
ಗಾಯತ್ರಿ ದೇವರಾಜ
ಗಾಯತ್ರಿ ದೇವರಾಜ   

ದಾವಣಗೆರೆ: ‘ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೌದ್ಧಿಕ ಆಸ್ತಿ ಕೋಶದ (ಐ.ಪಿ.ಆರ್‌) ಆರಂಭಗೊಂಡ ಒಂದು ವರ್ಷದ ಅವಧಿಯಲ್ಲಿ 24 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಲಾಗಿದ್ದು, ಇವುಗಳ ಪೈಕಿ ಈಗಾಗಲೇ 6 ಪೇಟೆಂಟ್‌ಗಳು ಅವಾರ್ಡ್‌ ಆಗಿವೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ತಿಳಿಸಿದರು.

‘14 ಭಾರತೀಯ ಹಾಗೂ 10 ಆಸ್ಟ್ರೇಲಿಯಾ ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಆಂತರಿಕ ಗುಣಮಟ್ಟ ಕೋಶ (ಐ.ಕ್ಯೂ.ಎ.ಸಿ) ಹಾಗೂ ಐ.ಪಿ.ಆರ್‌ ವಿಭಾಗದಿಂದ ವಿಶ್ವವಿದ್ಯಾಲಯದ ಹಲವು ವಿಭಾಗಗಳ ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಏಳು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ 100 ಪೇಟೆಂಟ್‌ ಹಾಗೂ 500 ಕಾಪಿರೈಟ್‌ಗಳನ್ನು ಫೈಲ್‌ ಮಾಡುವ ಗುರಿ ಹೊಂದಲಾಗಿದೆ’ ಎಂದು ಪ್ರೊ.ಗಾಯತ್ರಿ ದೇವರಾಜ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕರೂ ಆಗಿರುವ ತಮಗೆ ಹಾಗೂ ಗಣಿತ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪ್ರಸನ್ನ ಜಿ.ಡಿ. ಅವರ ಸಂಶೋಧನಾ ಪ್ರಬಂಧಕ್ಕೆ ವಿ.ಜಿ.ಎಸ್‌.ಟಿ, ಎಸ್‌.ಟಿ, ಐ.ಟಿ ಆ್ಯಂಡ್‌ ಬಿ.ಟಿ, ರಾಜ್ಯ ಸರ್ಕಾರದಿಂದ ‘ಬೆಸ್ಟ್‌ ಪೇಪರ್‌ ಅವಾರ್ಡ್‌’ ಲಭಿಸಿದೆ. ಒಂದು ವರ್ಷದಿಂದ ಸಂಶೋಧನೆಗಾಗಿ ₹ 1.50 ಕೋಟಿ ಅನುದಾನ ಬಂದಿದೆ. 2019–20ನೇ ಸಾಲಿನಲ್ಲಿ 33 ಪ್ರಾಧ್ಯಾಪಕರಿಗೆ ಸಂಶೋಧನಾ ಪ್ರೋತ್ಸಾಹ ಧನ ನೀಡಲಾಗಿದೆ. 2020–21ನೇ ಸಾಲಿನಲ್ಲಿ 13 ಪ್ರಾಧ್ಯಾಪಕರು ಹಾಗೂ 12 ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರೋತ್ಸಾಹ ಧನ ನೀಡಲು ಗುರುತಿಸಲಾಗಿದೆ. ವಿಭಾಗವಾರು ಒಬ್ಬ ಪ್ರಾಧ್ಯಾಪಕರಿಗೆ ‘ಬೆಸ್ಟ್‌ ಪಬ್ಲಿಕೇಷನ್‌ ಅವಾರ್ಡ್‌’ ನೀಡಲಾಗಿದೆ. 40ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

‘ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಭೌಗೋಳಿಕ ಸೂಚಕಗಳನ್ನು ಗುರುತಿಸಿ ನೋಂದಣಿ ಮಾಡಲು ಸಮಿತಿ ರಚಿಸಲಾಗಿದೆ. ಮೊಳಕಾಲ್ಮುರಿನ ರೇಷ್ಮೆ ಸೀರೆ, ಕುಂಬಳೂರಿನ ದೇಸಿ ತಳಿಯ ಅಕ್ಕಿ, ದಾವಣಗೆರೆಯ ಮಂಡಕ್ಕಿ ಸೇರಿ ಇಲ್ಲಿನ ವಿಶೇಷತೆಗಳನ್ನು ಗುರುತಿಸಿ ಭೌಗೋಳಿಕ ಸೂಚಕ ಮಾನ್ಯತೆ ಕೊಡಿಸುವ ಕೆಲಸ ನಡೆಯುತ್ತಿದೆ’ ಎಂದೂ ಪ್ರೊ.ಗಾಯತ್ರಿ ದೇವರಾಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.