ದಾವಣಗೆರೆ: ‘ಮನೆಯವರಿಗೆ (ಪತ್ನಿ) ಮೂರ್ನಾಲ್ಕು ದಿನಗಳಿಂದ ಚಳಿ ಜ್ವರ ಇದೆ. ಎರಡ್ಮೂರು ದಿನಗಳಿಂದ ಆಸ್ಪತ್ರೆಗೆ ಅಲೆಯುತ್ತಿದ್ದೇವೆ. ಡಾಕ್ಟ್ರು ಬರೆದುಕೊಟ್ಟ ಮಾತ್ರೆ ತಗೊಂಡಿದ್ರು. ಆದ್ರೂ, ಜ್ವರ ಕಡಿಮೆಯಾಗಿಲ್ಲ. ಇವತ್ತು ರಕ್ತ ಪರೀಕ್ಷೆ ಮಾಡಿಸಿ, ರಿಪೋರ್ಟ್ ತೋರಿಸಲು ಬಂದೀವಿ’..
ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯೊಂದಿಗೆ ವಾರ್ಡ್‌ನಿಂದ ವಾರ್ಡ್‌ಗೆ ಅಲೆಯುತ್ತಿದ್ದ ವೀರಪ್ಪ ವೈ.ಜೆ. ಅವರ ನೋವಿನ ನುಡಿಗಳಿವು. ದಾವಣಗೆರೆ ತಾಲ್ಲೂಕಿನ ಹಾಲೂರಟ್ಟಿ ಗ್ರಾಮದ ವೀರಪ್ಪ, ಬೆಳಿಗ್ಗೆಯೇ ಆಸ್ಪತ್ರೆಗೆ ಧಾವಿಸಿ, ಪತ್ನಿಗೆ ಚಿಕಿತ್ಸೆ ಕೊಡಿಸಲು ಒದ್ದಾಡುತ್ತಿದ್ದುದು ಕಂಡುಬಂತು.
‘ಒಂದು ವಾರದಿಂದ ಜ್ವರ, ಶೀತ ಇದೆ. ಕಡಿಮೆಯಾಗಬಹುದು ಎಂದು ಭಾವಿಸಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದೆ. ಜ್ವರ ಮತ್ತಷ್ಟು ಜಾಸ್ತಿಯಾಗಿದ್ದರಿಂದ ಆಸ್ಪತ್ರೆಗೆ ಬಂದೆ’ ಎಂದು ಜಿಲ್ಲಾ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಕೊಠಡಿಯ ಮುಂದೆ ವೈದ್ಯರ ಭೇಟಿಗಾಗಿ ಸರದಿ ಸಾಲಿನಲ್ಲಿ ನಿಂತಿದ್ದ ಎಂಸಿಸಿ ‘ಬಿ’ ಬ್ಲಾಕ್‌ನ ನಿವಾಸಿ ವೀಣಾ ಕೆ. ಅವರು ಬೇಸರದಿಂದಲೇ ಹೇಳಿದರು.
ಇದು ಒಂದಿಬ್ಬರ ಕತೆಯಲ್ಲ. ಜಿಲ್ಲೆಯ ಯಾವುದೇ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ತೆರಳಿದರೂ ಜ್ವರ, ಶೀತ, ಕೆಮ್ಮು, ನೆಗಡಿಯಂತಹ ವೈರಾಣು ಜ್ವರದಿಂದ (ವೈರಲ್ ಫೀವರ್) ಬಳಲುತ್ತಿರುವವರ ವ್ಯಥೆಯಾಗಿದೆ.
ಮೋಡಕವಿದ ವಾತಾವರಣ, ಆಗಾಗ ಸುರಿಯುವ ಜಿಟಿ ಜಿಟಿ ಮಳೆ, ಮಧ್ಯಾಹ್ನ ಕೆಲ ಹೊತ್ತು ಬಂದು ಮರೆಯಾಗುವ ಸೂರ್ಯನ ಬಿಸಿಲು, ಮೈಕೊರೆವ ಚಳಿಯಿಂದಾಗಿ ಜಿಲ್ಲೆಯಲ್ಲಿ ವೈರಾಣು ಜ್ವರ ಬಾಧಿತರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಮಕ್ಕಳು, ವೃದ್ಧರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ವಾತಾವರಣದ ಏರುಪೇರಿನಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ರೋಗಿಗಳು ಒಪಿಡಿ ವಿಭಾಗದಲ್ಲಿ ಸರದಿಯಲ್ಲಿ ನಿಂತು ಚಿಕಿತ್ಸೆ ಪಡೆಯುತ್ತಿದ್ದಾರೆ.
‘ವಾತಾವರಣದಲ್ಲಿ ಉಷ್ಣತೆ ಕಡಿಮೆ ಆದಾಗ ‘ಅವಕಾಶವಾದಿ’ ಸೂಕ್ಷ್ಮಾಣುಗಳು ವೇಗವಾಗಿ ಬೆಳವಣಿಗೆ ಹೊಂದುತ್ತವೆ. ಸಾಧಾರಣವಾಗಿ ಬಿಸಿಲು ಹೆಚ್ಚಿದ್ದಾಗ ಈ ಸೂಕ್ಷ್ಮಾಣುಗಳು ಸಾಯುತ್ತವೆ. ಆದರೆ, ಉಷ್ಣಾಂಶ ಕುಸಿತವಾಗಿರುವುದರಿಂದ ವೈರಾಣುಗಳ ಬೆಳವಣಿಗೆಗೆ ಅದು ಪೂರಕವಾಗಿದೆ. ಇದರಿಂದ ಮಾನವನ ದೇಹದ ರೋಗ ನಿರೋಧಕ ಶಕ್ತಿಯೂ ಕುಂದುತ್ತದೆ. ಈ ಕಾರಣಕ್ಕೆ ಸಹಜವಾಗಿಯೇ ವೈರಲ್ ಫೀವರ್ ಹೆಚ್ಚುತ್ತದೆ’ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್.
‘ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಏರಿಕೆ ಕಂಡುಬಂದಿದೆ. ಅದರಲ್ಲೂ ಹೊರರೋಗಿಗಳ ಸಂಖ್ಯೆಯಲ್ಲಿ (ಒಪಿಡಿ) ಜಾಸ್ತಿ ಏರಿಕೆ ಕಂಡುಬಂದಿದೆ. ಪ್ರತಿ ನಿತ್ಯ ಒಪಿಡಿ ವಿಭಾಗದಲ್ಲಿ ಹೊಸದಾಗಿ ಸರಾಸರಿ 1,500 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಮಾತ್ರವಲ್ಲದೇ ನಿತ್ಯವೂ 700ಕ್ಕೂ ಹೆಚ್ಚು ಪುನರಾವರ್ತಿತ ರೋಗಿಗಳು (ರಿಪೀಟರ್ಸ್) ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹವಾಮಾನದಲ್ಲಿನ ಏರುಪೇರಿನಿಂದ 2–3 ವಾರಗಳಿಂದ ಶೇ 20ರಷ್ಟು ಹೆಚ್ಚಿನ ರೋಗಿಗಳು ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಎಂ.ಬಿ. ನಾಗೇಂದ್ರಪ್ಪ.
‘ಬಹುತೇಕ ರೋಗಿಗಳು ಜ್ವರ, ಶೀತ, ನೆಗಡಿ, ಕೆಮ್ಮು, ಕಫ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಲ್ಲಿ ಬಹುತೇಕರು ಒಪಿಡಿ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮನೆಗಳಿಗೆ ತೆರಳುತ್ತಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಮಾತ್ರ ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಸದ್ಯಕ್ಕೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿಲ್ಲ. ವೈರಾಣು ಸಂಬಂಧಿತ ಅನಾರೋಗ್ಯಕ್ಕೆ ಸಮರ್ಪಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. 3 ತಿಂಗಳಿಗೆ ಆಗುವಷ್ಟು ಔಷಧಿ ದಾಸ್ತಾನು ಇದೆ. ರೇಬಿಸ್ ಸೇರಿದಂತೆ ಇನ್ನಿತರ ಹಲವು ಲಸಿಕೆಗಳೂ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯ ಇವೆ’ ಎಂದು ನಾಗೇಂದ್ರಪ್ಪ ತಿಳಿಸಿದರು.
ಕೆಮ್ಮು ನೆಗಡಿ ಶೀತ ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ವಹಿಸದೇ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯಬೇಕು. ಇದರಿಂದ ಬೇಗ ಗುಣಮುಖರಾಗಲು ಸಾಧ್ಯವಾಗುತ್ತದೆ.ಡಾ.ಎಂ.ಬಿ.ನಾಗೇಂದ್ರಪ್ಪ ಜಿಲ್ಲಾ ಶಸ್ತ್ರ ಚಿಕಿತ್ಸಕ
ವಾತಾವರಣದಲ್ಲಿನ ಏರುಪೇರಿನಿಂದ ಫ್ಲೂ ತರಹದ ಪ್ರಕರಣಗಳು ಕಳೆದ ಮೂರು ವಾರಗಳಲ್ಲಿ ಸ್ವಲ್ಪ ಏರಿಕೆ ಕಂಡುಬಂದಿವೆ. ಬಿಸಿಲಿನ ವಾತಾವರಣ ಹೆಚ್ಚಾದರೆ ವೈರಾಣು ಸೋಂಕು ಕಡಿಮೆಯಾಗುವ ಸಾಧ್ಯತೆ ಇದೆಡಾ.ಜಿ.ಡಿ.ರಾಘವನ್ ಜಿಲ್ಲಾ ಸರ್ವೇಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.