ADVERTISEMENT

ದಾವಣಗೆರೆ: ಅಭಿವೃದ್ಧಿಗೆ ತೆರೆದುಕೊಳ್ಳದ ಪ್ರಾಣಿ ಸಂಗ್ರಹಾಲಯ

ಸೊರಗುತ್ತಿದೆ ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯ; ‌ಹೆಚ್ಚಲಿ ವನ್ಯಜೀವಿಗಳ ಕಲರವ

ಚಂದ್ರಶೇಖರ ಆರ್‌.
Published 5 ಮೇ 2025, 6:04 IST
Last Updated 5 ಮೇ 2025, 6:04 IST
ದಾವಣಗೆರೆ ಹೊರವಲಯದ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿರುವ ಜಿಂಕೆಗಳು ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್
ದಾವಣಗೆರೆ ಹೊರವಲಯದ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿರುವ ಜಿಂಕೆಗಳು ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್   

ದಾವಣಗೆರೆ: ಪ್ರವಾಸಿಗರನ್ನು, ಪ್ರಾಣಿ–ಪಕ್ಷಿ ಪ್ರಿಯರನ್ನು ಸೆಳೆಯಬೇಕಿದ್ದ ನಗರದ ಹೊರವಲಯದ ಆನಗೋಡಿನ ‘ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯ’ ಕಳೆಗುಂದುತ್ತಿದೆ. ವೈವಿಧ್ಯಮಯ ಪ್ರಾಣಿ–ಪಕ್ಷಿಗಳ ಕಲರವದ ಬೀಡಾಗಬೇಕಿದ್ದ ಪ್ರಾಣಿ ಸಂಗ್ರಹಾಲಯ ಇನ್ನೂ ಅಭಿವೃದ್ಧಿಗೆ ತೆರೆದುಕೊಂಡಿಲ್ಲ.

ಆಕರ್ಷಣೆ ಕಳೆದುಕೊಳ್ಳುತ್ತಿರುವ ಕಾರಣ ಪ್ರವಾಸಿಗರು, ಸ್ಥಳೀಯರು ಇತ್ತ ಸುಳಿಯುತ್ತಲೂ ಇಲ್ಲ. ಪ್ರಚಾರದ ಕೊರತೆ, ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ಸಂಘ–ಸಂಸ್ಥೆಗಳ ನಿರಾಸಕ್ತಿ ಕಾರಣ ಜಿಲ್ಲೆಯ ಪ್ರಸಿದ್ಧ ‘ಪಿಕ್‌ನಿಕ್‌’ ತಾಣವಾಗಬೇಕಿದ್ದ ಈ ಪ್ರಾಣಿ ಸಂಗ್ರಹಾಲಯ ಸದ್ಯ ಸೊರಗುತ್ತಿದೆ. 

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿ ರಾಜ್ಯದ ಕೆಲವು ಮೃಗಾಲಯಗಳು ಅಭಿವೃದ್ಧಿಗೊಳ್ಳುತ್ತಿವೆ. ಆದರೆ ಈ ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸುವತ್ತ ಇಲ್ಲಿನ ಅಧಿಕಾರಿಗಳು ಚಿತ್ತ ಹರಿಸಿಲ್ಲ.

ADVERTISEMENT

ನಿರ್ವಹಣೆ ಕೊರತೆ, ಪ್ರಚಾರದ ಕೊರತೆ, ಬೆರಳೆಣಿಕೆಯ ಪ್ರಾಣಿ–ಪಕ್ಷಿಗಳು ಇರುವ ಕಾರಣ ಕಿರು ಪ್ರಾಣಿ ಸಂಗ್ರಹಾಲಯ ಜನರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆಡಳಿತ ವ್ಯಾಪ್ತಿಗೆ ಒಳಪಟ್ಟಿರುವ ‘ಇಂದಿರಾ ಪ್ರಿಯದರ್ಶಿನಿ’ ಕಿರು ಮೃಗಾಲಯ, 26 ಎಕರೆ ಪ್ರದೇಶದಲ್ಲಿದೆ. ಇದನ್ನು 1993ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆನಗೋಡು ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಮೃಗಾಲಯದಲ್ಲಿ 195ಕ್ಕೂ ಅಧಿಕ ಜಿಂಕೆ, ಕೃಷ್ಣಮೃಗ, ಎರಡು ಸ್ಲಾತ್‌ ಕರಡಿ, 6 ನವಿಲು, ಬಜರಿಗಾರ್‌, ಲವ್‌ ಬರ್ಡ್ಸ್‌, ಗಿಳಿ, ಸಿಲ್ವರ್‌ ಫಿಸಂಟ್‌, ಕಾಡುಕೋಳಿಯಂತಹ ಪಕ್ಷಿಗಳಿವೆ. 

ಚಿತ್ರದುರ್ಗ – ದಾವಣಗೆರೆ ನಡುವಣ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಕಿರು ಮೃಗಾಲಯ ಜಿಲ್ಲಾ ಕೇಂದ್ರದಿಂದ 18 ಕಿ.ಮೀ. ದೂರದಲ್ಲಿದೆ. ಆನಗೋಡಿನಿಂದ 1.5 ಕಿ.ಮೀ ದೂರದಲ್ಲಿದೆ. ದಾವಣಗೆರೆ ಸುತ್ತಲಿನ ಸ್ಥಳೀಯರಿಗೆ ಸದ್ಯ ಇರುವ ಪ್ರಾಣಿ ಸಂಗ್ರಹಾಲಯ ಇದೊಂದೇ. ಈ ಕಾರಣ ವಾರಾಂತ್ಯದಲ್ಲಿ ಇಲ್ಲಿಗೆ ಹೆಚ್ಚು ಜನರು ಭೇಟಿ ಕೊಡುತ್ತಾರೆ.

ಕುಟುಂಬದೊಂದಿಗೆ ಬರುವ ಜನರೇ ಹೆಚ್ಚು. ಅಲ್ಲಲ್ಲಿ ‘ಪ್ರಣಯ ಪಕ್ಷಿ’ಗಳನ್ನೂ ಕಾಣಬಹುದು. ನಗರದಿಂದ ಕೊಂಚ ದೂರವಿದ್ದು, ಆನಗೋಡು–ಹೆಬ್ಬಾಳು ನಡುವಿನ ಬೆಟ್ಟದ ತಪ್ಪಲಲ್ಲಿರುವ ಕಾರಣ ಪ್ರಕೃತಿಯ ಸೊಬಗು ಸವಿಯಲು ಬರುವವರೇ ಹೆಚ್ಚು. ಆದರೆ ನಿರೀಕ್ಷಿತ ಅಭಿವೃದ್ಧಿ ಕಾಣದೇ ಇರುವುದರಿಂದ, ಇಲ್ಲಿಗೆ ಭೇಟಿ ನೀಡಿದವರೆಲ್ಲಾ ಅಭಿವೃದ್ಧಿ ಯಾವಾಗ ಎಂಬ ಪ್ರಶ್ನೆ ಕೇಳುವಂತಾಗಿದೆ. 

ಮಕ್ಕಳ ಆಟಿಕೆಗಳು, ತಂಪಾದ ವಾತಾವರಣ ಇರುವುದರಿಂದ ಸಮಯ ಕಳೆಯಲು ಬಹುತೇಕರು ಬರುತ್ತಾರೆ. ವಾರಾಂತ್ಯದಲ್ಲಿ 300ಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ. ಒಬ್ಬರಿಗೆ ಟಿಕೆಟ್ ದರ ₹ 20 ಇದ್ದು, ಮಕ್ಕಳಿಗೆ ₹10 ಇದೆ.

ಸಿಗದ ಅಭಿವೃದ್ಧಿ ಭಾಗ್ಯ:

ವಾರಾಂತ್ಯದಲ್ಲಿ ಹೆಚ್ಚಿನ ಜನರು ಭೇಟಿ ಕೊಡುತ್ತಿದ್ದರೂ ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿ ಭಾಗ್ಯ ಕಂಡಿಲ್ಲ. ಇದನ್ನು ಅಭಿವೃದ್ಧಿಪಡಿಸಲು ‘ಮಾಸ್ಟರ್‌ ಪ್ಲಾನ್’ ಸಿದ್ಧಗೊಂಡು ವರ್ಷಗಳೇ ಕಳೆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಪ್ರಾಣಿ ಸಂಗ್ರಹಾಲಯ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಡುತ್ತದೆ. ಇದು ಅಭಿವೃದ್ಧಿಗೆ ತೆರೆದುಕೊಳ್ಳಲು ತೊಡಕಾಗಿ ಪರಿಣಮಿಸಿದೆ.  

ಸಂಘ–ಸಂಸ್ಥೆಗಳು, ದಾನಿಗಳಿಂದ ಪ್ರಾಣಿಗಳ ದತ್ತು ಪ್ರಕ್ರಿಯೆ, ನಿರ್ವಹಣೆಗೆ ಅನುದಾನ ಹಾಗೂ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಿರು ಪ್ರಾಣಿ ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅವಕಾಶಗಳಿದ್ದರೂ ಅದು ಆಗಿಲ್ಲ. ಪ್ರಚಾರದ ಕೊರತೆಯೂ ಎದ್ದು ಕಾಣುತ್ತಿದೆ. ನರೇಗಾ ಅಡಿ ಅಭಿವೃದ್ಧಿ ಸಾಧ್ಯತೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. 

ಹೆದ್ದಾರಿ ವಿಸ್ತರಣೆಯಾಗಿದ್ದರಿಂದ ಮೇಲ್ಸೇತುವೆ ಅಡ್ಡಬರುವ ಕಾರಣ ಹೆದ್ದಾರಿಯಲ್ಲಿ ಸಾಗುವ ಹೆಚ್ಚಿನ ಜನರಿಗೆ ಪ್ರಾಣಿ ಸಂಗ್ರಹಾಲಯ ಇರುವುದೇ ತಿಳಿಯುತ್ತಿಲ್ಲ. ಈ ಬಗ್ಗೆ ಹೆಚ್ಚು ಪ್ರಚಾರವೂ ನಡೆಯದ ಕಾರಣ ಸಂಗ್ರಹಾಲಯ ಸೊರಗುತ್ತಿದೆ. ಹಸಿರಿನಿಂದ ಕಂಗೊಳಿಸಬೇಕಿದ್ದ ಅಲ್ಲಿನ ಗಿಡಗಳು ಸೊಬಗು ಕಳೆದುಕೊಳ್ಳುತ್ತಿವೆ. ಜಿಂಕೆ, ಕೃಷ್ಣಮೃಗಗಳು ಇರುವ ಸ್ಥಳದಲ್ಲಿ ಈ ಮೊದಲು ಇದ್ದ ಹಸಿರ ಹೊದಿಕೆ ಈಗ ಕಾಣುತ್ತಿಲ್ಲ. ಪ್ರಾಣಿಗಳೂ ಸೊರಗಿದಂತೆ ಕಾಣುತ್ತಿವೆ. ಪಕ್ಷಿಗಳ ಕಲರವವೂ ಮರೆಯಾಗಿದೆ.

ನಿರ್ವಹಣೆ ಕೊರತೆ:

ಮಕ್ಕಳ ಆಟಿಕೆಗಳು ಮುರಿದಿವೆ. ಸಂಗ್ರಹಾಲಯವನ್ನು ಒ‌ಂದು ಸುತ್ತು ಹಾಕಿ ಬಂದು ಏನಾದರೂ ತಿನ್ನಬೇಕು ಅಂದುಕೊಂಡರೆ ಗುಣಮಟ್ಟದ ಕ್ಯಾಂಟೀನ್‌ ಇಲ್ಲ. ಈ ಮೊದಲು ಇದ್ದ ಕ್ಯಾಂಟೀನ್‌ನಲ್ಲಿ ಕೆಲ ಕುರುಕಲು, ತಿಂಡಿ, ನೀರು ಸಿಗುತ್ತಿತ್ತು. ಟೆಂಡರ್‌ಗಾಗಿ ಪರವಾನಗಿ ಪಡೆಯದ ಕಾರಣ ಅದು ಮುಚ್ಚಿದೆ.

ಇರುವ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲ ಎಂದು ಪ್ರವಾಸಿಗರು ಬೇಸರಿಸುತ್ತಾರೆ.  

‘ಹಾವೇರಿಯಿಂದ ಇಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದೆ. ಪ್ರಾಣಿ ಸಂಗ್ರಹಾಲಯವನ್ನು ನೋಡೋಣ ಎಂದು ಕುಟುಂಬದೊಂದಿಗೆ ಬಂದಿರುವೆ. ಇಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಇಷ್ಟೊಂದು ಜಾಗ ಇದ್ದರೂ ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ. ಇನ್ನೂ ಹೆಚ್ಚಿನ ಪ್ರಾಣಿಗಳಿದ್ದರೆ ನೋಡಲು ಚೆಂದ’ ಎಂದು ಪ್ರವಾಸಿಗ ನಾಗರಾಜ ಕಮತಳ್ಳಿ ಹೇಳಿದರು.

‘ಗಿಡಗಳು ಒಣಗುತ್ತಿವೆ. ಪ್ರಾಣಿಗಳಿಗೆ ಆಹಾರ ಕೊಟ್ಟಿಲ್ಲವೇನೂ ಎಂಬಂತೆ ಕಾಣುತ್ತಿದೆ. ಎರಡು ವರ್ಷದ ಹಿಂದೆ ಬಂದಿದ್ದಾಗ ಹೆಚ್ಚಿನ ಗಿಳಿಗಳು, ನವಿಲುಗಳು ಇದ್ದವು. ಈಗ ಅವು ಕಾಣುತ್ತಿಲ್ಲ. ಕೃಷ್ಣಮೃಗದ ಜತೆ ಬೇರೆ ಪ್ರಾಣಿಗಳಿದ್ದರೆ ಚೆನ್ನಾಗಿತ್ತು. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ರಘು ಒತ್ತಾಯಿಸಿದರು.

‘ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿದೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ಸಂಘ–ಸಂಸ್ಥೆಗಳೂ ಮುಂದೆ ಬರುತ್ತಿಲ್ಲ. ಪ್ರಚಾರ ಮಾಡಿದ್ದರೂ ಹೆದ್ದಾರಿಯಾದ ಬಳಿಕ ಪ್ರಾಣಿ ಸಂಗ್ರಹಾಲಯ ಇರುವುದು ಬಹುತೇಕರಿಗೆ ಗೊತ್ತಾಗುತ್ತಿಲ್ಲ. ಹಂತ ಹಂತವಾಗಿ ಅಭಿವೃದ್ಧಿಯಾಗುವ ನಿರೀಕ್ಷೆ ಇದೆ’ ಎಂದು ಸಿಬ್ಬಂದಿ ವಿಶ್ವನಾಥ್ ಹೇಳಿದರು.

ಆನಗೋಡಿನ ಕಿರು ಮೃಗಾಲಯದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕರಡಿ 
ಕಿರು ಮೃಗಾಲಯದಲ್ಲಿನ ಲವ್‌ಬರ್ಡ್
ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದ ನೋಟ
ಕುಟುಂಬದೊಂದಿಗೆ ಬರಬಹುದು. ಆದರೆ ಮಕ್ಕಳ ಆಟಿಕೆಗಳು ಮುರಿದಿವೆ. ಹೆಚ್ಚಿನ ಪ್ರಾಣಿಗಳನ್ನು ತಂದು ಅಭಿವೃದ್ಧಿಪಡಿಸಿದರೆ ಸುಂದರ ಪಿಕ್‌ನಿಕ್‌ ತಾಣವಾಗಲಿದೆ
ಸ್ವಾತಿ, ದಾವಣಗೆರೆ
ಪ್ರಾಣಿ ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಿದರೆ ದಾವಣಗೆರೆಗೊಂದು ಉತ್ತಮ ಪ್ರವಾಸಿ ತಾಣ ದೊರೆಯಲಿದೆ. ಆದರೆ ಹಲವು ವರ್ಷಗಳೇ ಕಳೆದರೂ ಅಭಿವೃದ್ಧಿಯಾಗಿಲ್ಲ. ಭೂ ವಿವಾದ ಅಭಿವೃದ್ಧಿಗೆ ತೊಡಕಾಗಿದೆ ಎಂಬ ಮಾತಿದೆ
ದುರ್ಗಪ್ಪ, ನರಗನಹಳ್ಳಿ

ಸಿಬ್ಬಂದಿ ಕೊರತೆ

ಸಿಬ್ಬಂದಿಗೆ ವೇತನ ಪ್ರಾಣಿ–ಪಕ್ಷಿಗಳ ನಿರ್ವಹಣೆ ಸೇರಿದಂತೆ ಸದ್ಯ ವಾರ್ಷಿಕವಾಗಿ ₹ 20 ಲಕ್ಷ  ವ್ಯಯಿಸಲಾಗುತ್ತಿದೆ. ಪ್ರಾಣಿ ಸಂಗ್ರಹಾಲಯದಲ್ಲಿ ಇಬ್ಬರು ಕೇರ್ ಟೇಕರ್ಸ್ (ಆರೈಕೆ ಮಾಡುವವರು) ಒಬ್ಬರು ಸ್ವಚ್ಛತೆ ಕೈಗೊಳ್ಳುವವರು ಒಬ್ಬರು ಟಿಕೆಟ್ ಕೊಡುವವರು ಹಾಗೂ ಇಬ್ಬರು ವಾಚರ್‌ ಇದ್ದಾರೆ. ರಜೆ ತೆಗೆದುಕೊಂಡರೆ ಸಿಬ್ಬಂದಿ ಕೊರತೆ ಎದುರಾಗುತ್ತದೆ. ಇನ್ನೂ ಇಬ್ಬರು ಸಿಬ್ಬಂದಿಯ ಅಗತ್ಯವಿದೆ.

ಆಕರ್ಷಣೀಯವಾಗಿಸಲು ‘ಮಾಸ್ಟರ್ ಪ್ಲಾನ್’

ಪ್ರಾಣಿ ಸಂಗ್ರಹಾಲಯವನ್ನು ವಿಸ್ತರಿಸಿ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆಯಿಂದ ಮಾಸ್ಟರ್ ಪ್ಲಾನ್ ತಯಾರಿಸಿ ಡಿಪಿಆರ್‌ ಅನುಮೋದನೆಗಾಗಿ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಆದರೆ ಕೇಂದ್ರದಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಮೃಗಾಲಯ ಅಭಿವೃದ್ಧಿಪಡಿಸಿದರೆ ಸಿಂಹ ಹುಲಿ ಚಿರತೆಯಂತಹ ಪ್ರಾಣಿಗಳು ಬರಲಿವೆ. ಸಫಾರಿ ಆರಂಭಿಸುವ ಚಿಂತನೆಯೂ ಇದೆ. ಈಗ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಸರಳುಗಳ ಹಿಂದೆ ಕೂಡಿ ಹಾಕಲಾಗುತ್ತಿದ್ದು ಪ್ರವಾಸಿಗರಿಗೆ ಅವುಗಳನ್ನು ಬಂಧನದಲ್ಲಿಟ್ಟಿರುವ ಭಾವನೆ ಮೂಡುತ್ತಿತ್ತು. ಆದರೆ ಆಧುನೀಕರಣದ ನಂತರ ಪಾರದರ್ಶಕ ಗಾಜಿನ ಗೋಡೆಗಳ (ಗ್ಲಾಸ್‌ ಎನ್‌ಕ್ಲೋಸರ್) ನಡುವೆ ಪ್ರಾಣಿಗಳು ಕಾಣಸಿಗುತ್ತವೆ. ‘ಮಾಸ್ಟರ್ ಪ್ಲಾನ್‌ಗೆ’ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮೋದನೆ ಸಿಕ್ಕ ಬಳಿಕ ಅಭಿವೃದ್ಧಿಪಡಿಸಲಾಗುವುದು. ಹೆಚ್ಚಿನ ಜಾಗವಿದ್ದು ಇದು ಅಭಿವೃದ್ಧಿಯಾದರೆ ರಾಜ್ಯದಲ್ಲಿಯೇ ಅತಿ ದೊಡ್ಡ ಪ್ರಾಣಿ ಸಂಗ್ರಹಾಲಯವಾಗಲಿದೆ. ಮೈಸೂರಿನ ಮೃಗಾಲಯದಂತೆ ಆಧುನೀಕರಣಗೊಳ್ಳಲಿದೆ. ಕರಡಿ ಜಿಂಕೆ ಇವೆ. ಇನ್ನೂ ಹೆಚ್ಚಿನ ಪ್ರಾಣಿಗಳನ್ನು ತರುವ ಚಿಂತನೆ ಇದೆ. 2024ರಲ್ಲೇ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಆದರೆ ಅಲ್ಲಿಂದ ಅನುಮೋದನೆಯಾಗಿ ಬಂದಿಲ್ಲ’ ಎಂದು ಆನಗೋಡು ಮೃಗಾಲಯದ ವಲಯ ಅರಣ್ಯಾಧಿಕಾರಿ ಹಿದಾಯತ್‌ ಉಲ್ಲಾ ಎಂ.ಬಿ. ಮಾಹಿತಿ ನೀಡಿದರು. ‘ಹಲವು ವರ್ಷಗಳ ಹಿಂದೆಯೇ ‌ಸಂಗ್ರಹಾಲಯದ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಇದು ಮೀಸಲು ಅರಣ್ಯ ವ್ಯಾಪ್ತಿಗೆ ಬರುವ ಕಾರಣ ಜಾಗದ ವಿವಾದ ಇದೆ. ಈ ಕಾರಣವೂ ‘ಮಾಸ್ಟರ್ ಪ್ಲಾನ್’ಗೆ ಒಪ್ಪಿಗೆ ಸಿಗಲು ತೊಡಕಾಗಿದೆ’ ಎಂದು ಅಭಿವೃದ್ಧಿಯಾಗದ ಹಿಂದಿನ ವಾಸ್ತವ ತೆರೆದಿಟ್ಟರು. ‘ಪ್ರಾಣಿಗಳ ದತ್ತು ಪ್ರಕ್ರಿಯೆಗೆ ಹಲವು ಕಂಪನಿ ಸಂಘ–ಸಂಸ್ಥೆಗಳಿಗೆ ಮನವಿ ಮಾಡಿದ್ದರೂ ಯಾರೂ ಮುಂದೆ ಬಂದಿಲ್ಲ. ಬಂದರೆ ಅನುಕೂಲವಾಗಲಿದೆ. ಇನ್ನು ನರೇಗಾ ಅಡಿ ಅಭಿವೃದ್ಧಿ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು. ನರೇಗಾ ಅಡಿ ಅಭಿವೃದ್ಧಿಗೆ ಅವಕಾಶ ಇದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.