ADVERTISEMENT

ದಾವಣಗೆರೆ | ಹಿಂಗಾರು; 26,404 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ

ಜಿಲ್ಲೆಯಲ್ಲಿ 9,000 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬೆಳೆ; ಕೃಷಿ ಇಲಾಖೆಯಿಂದ ಅಗತ್ಯ ಸಿದ್ಧತೆ

ರಾಮಮೂರ್ತಿ ಪಿ.
Published 13 ಅಕ್ಟೋಬರ್ 2025, 5:50 IST
Last Updated 13 ಅಕ್ಟೋಬರ್ 2025, 5:50 IST
ಕಡಲೆ ಬೆಳೆ (ಸಾಂದರ್ಬಿಕ ಚಿತ್ರ)
ಕಡಲೆ ಬೆಳೆ (ಸಾಂದರ್ಬಿಕ ಚಿತ್ರ)   

ದಾವಣಗೆರೆ: ಜಿಲ್ಲೆಯಾದ್ಯಂತ ಈ ಬಾರಿ ಮುಂಗಾರು ಮಳೆಯು ವಾಡಿಕೆಗಿಂತ ಹೆಚ್ಚಾಗಿಯೇ ಸುರಿದಿದ್ದು, ಅತಿವೃಷ್ಟಿಯಿಂದಾಗಿ ಜಿಲ್ಲೆಯ ಹಲವೆಡೆ ಬೆಳೆಗಳು ನೀರು ಪಾಲಾಗಿವೆ. ಸಂಕಷ್ಟದ ನಡುವೆ ರೈತರು ಹಿಂಗಾರು ಬಿತ್ತನೆಗೆ ಅಣಿಯಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ಕೃಷಿ ಇಲಾಖೆಯು ಅಂದಾಜು 26,404 ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಗುರಿಯನ್ನು ಹೊಂದಿದೆ. ಅದಕ್ಕೆ ಪೂರಕವಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ–ಗೊಬ್ಬರ ಸಂಗ್ರಹಿಸಿಟ್ಟಿದೆ. 

ಕಡಲೆಯೇ ಜಿಲ್ಲೆಯ ಪ್ರಧಾನ ಹಿಂಗಾರು ಬೆಳೆಯಾಗಿದೆ. 9,000 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬೆಳೆಯಲಾಗುತ್ತಿದೆ. ಈ ಪೈಕಿ ಜಗಳೂರು ತಾಲ್ಲೂಕೊಂದರಲ್ಲೇ 7,900 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಲಿದೆ. ಚನ್ನಗಿರಿ ಹಾಗೂ ಹರಿಹರ ಭಾಗದಲ್ಲೂ ರೈತರು ಕಡಲೆ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ.

ADVERTISEMENT

5,000 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯ ಗುರಿ ಇದ್ದು, ಅಕ್ಟೋಬರ್ ಅಂತ್ಯ ಅಥವಾ ನವೆಂಬರ್‌ನ ಆರಂಭದಲ್ಲಿ ಬಿತ್ತನೆ ಆರಂಭಿಸುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಜಿಲ್ಲೆಯ ನ್ಯಾಮತಿ ಹಾಗೂ ಹೊನ್ನಾಳಿ ಭಾಗದ ಪ್ರಮುಖ ಹಿಂಗಾರು ಬೆಳೆ ಜೋಳ. 4,000 ಹೆಕ್ಟೇರ್‌ನಲ್ಲಿ ಬಿತ್ತನೆ ನಿರೀಕ್ಷೆ ಇದೆ. ನೀರಾವರಿ ಸೌಲಭ್ಯ ಹೊಂದಿರುವ ರೈತರು 2,900 ಹೆಕ್ಟೇರ್‌ ಪ್ರದೇಶದಲ್ಲಿ ಬೇಸಿಗೆ ಅವಧಿಯ ಮೆಕ್ಕೆಜೋಳ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. 

2,100 ಹೆಕ್ಟೇರ್‌ನಲ್ಲಿ ಅಲಸಂದಿ, 1,100 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆಯ ಗುರಿ ಇದೆ. ಶೇಂಗಾ, ಅವರೆ, ಹತ್ತಿಯ ಬಿತ್ತನೆಯೂ ಅಲ್ಪ ಪ್ರಮಾಣದಲ್ಲಿ ಇರಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. 

‘ಜಿಲ್ಲೆಯಲ್ಲಿ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರು ಅವಧಿಯ ಬೆಳೆಗಳ ಕಟಾವು ಸಾಧ್ಯವಾಗಿಲ್ಲ. ಜಮೀನುಗಳಲ್ಲಿ ನೀರು ನಿಂತಿದೆ. ಇದು ಹಿಂಗಾರು ಬಿತ್ತನೆ ವಿಳಂಬವಾಗುವ ಲಕ್ಷಣ’ ಎಂದು ಚನ್ನಗಿರಿ ತಾಲ್ಲೂಕಿನ ರೈತರು ಹೇಳಿದರು. 

ಗೊಬ್ಬರ ದಾಸ್ತಾನು 

‘ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಮಾಡುವ ರೈತರಿಗೆ ಪೂರೈಸಲು ಅಗತ್ಯ ಪ್ರಮಾಣದ ಬೀಜ, ಗೊಬ್ಬರದ ದಾಸ್ತಾನು ಇದೆ. 5,000 ಟನ್‌ ಯೂರಿಯಾ, 3,176 ಟನ್‌ ಡಿಎಪಿ, 22,000 ಟನ್ ಕಾಂಪ್ಲೆಕ್ಸ್‌ ಸದ್ಯಕ್ಕೆ ಲಭ್ಯ ಇದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಕೆಲ ರೈತರು ಈಗಾಗಲೇ ಖರೀದಿಸುತ್ತಿದ್ದಾರೆ’ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿ ಪುಟ್ಟರಾಜ ಜಿ. ಹಾವನೂರ ತಿಳಿಸಿದರು. 

ರಾಗಿ ಬೆಳೆ ಹೆಚ್ಚಳ

ದಾವಣಗೆರೆ ತಾಲ್ಲೂಕಿನಲ್ಲಿ ರೈತರು ರಾಗಿ ಬೆಳೆಯತ್ತ ವಾಲುತ್ತಿದ್ದಾರೆ. ಈ ಹಿಂದೆ ರಾಗಿ ಬಿತ್ತನೆ, ಕಟಾವು ಹಾಗೂ ಪೆಂಡಿ ಕಟ್ಟಲು ರೈತರು ಕಾರ್ಮಿಕರ ಸಮಸ್ಯೆ ಎದುರಿಸುತ್ತಿದ್ದರು. ಕೃಷಿ ಇಲಾಖೆಯಿಂದ 2 ವರ್ಷಗಳ ಹಿಂದೆ ಸಬ್ಸಿಡಿ ದರದಲ್ಲಿ ಕಟಾವು ಯಂತ್ರ ಹಾಗೂ ರಾಶಿ ಪೆಂಡಿ ಕಟ್ಟುವ ಯಂತ್ರಗಳನ್ನು ವಿತರಿಸಲಾಯಿತು. ಇದರಿಂದಾಗಿ ರೈತರು ಎದುರಿಸುತ್ತಿದ್ದ ಕಾರ್ಮಿಕರ ಕಡಿಮೆಯಾಗಿದೆ. ಯಂತ್ರಗಳಿಂದ ಆರ್ಥಿಕವಾಗಿಯೂ ರೈತರಿಗೆ ಲಾಭವಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. 

10– 15 ದಿನದಲ್ಲಿ ಬಿತ್ತನೆ ಕಾರ್ಯ ಶುರುವಾಗಲಿದೆ. ಜೋಳ ಗೋಧಿ ಕಡಲೆ ಹುರುಳಿ ಬಿತ್ತನೆಗೆ ರೈತರು ಸಿದ್ಧತೆ ನಡೆಸುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರಕ್ಕೆ ಬೀಜ ಬಂದಿದ್ದು ಖರೀದಿಸಬೇಕಿದೆ
ಸುಂಕದಕಟ್ಟೆ ಕರಿಬಸಪ್ಪ ರೈತ ಮುಖಂಡ ಹೊನ್ನಾಳಿ
ಅತಿವೃಷ್ಟಿಯಿಂದಾಗಿ ತಾಲ್ಲೂಕಿನಲ್ಲಿ ಮೆಕ್ಕೆಜೋಳದ ಕಟಾವು ಮುಗಿದಿಲ್ಲ. ಭಾರಿ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಈ ಬಾರಿ ಹಿಂಗಾರು ಬಿತ್ತನೆ ವಿಳಂಬವಾಗಲಿದೆ
ಕೆ.ಬಿ.ರವಿ ರೈತ ಮುಖಂಡ ಅಸಗೋಡು ಜಗಳೂರು

‘ರಾಗಿ ಕಡಲೆ ಬಿತ್ತನೆ ಬೀಜಕ್ಕೆ ಸಬ್ಸಿಡಿ’ 

‘ಸರಿಯಾದ ಸಮಯದಲ್ಲಿ ಮಳೆಯಾಗುತ್ತಿದೆ. ಬೆಳಿಗ್ಗೆ ಮಂಜು ಬೀಳುತ್ತಿರುವುದರಿಂದ ವಾತಾವರಣವು ಬಿತ್ತನೆಗೆ ಪೂರಕವಾಗಿದೆ. ಭೂಮಿಯ ತೇವಾಂಶ ನೋಡಿಕೊಂಡು ರೈತರು ಹಿಂಗಾರು ಅವಧಿಗೆ ಬಿತ್ತನೆ ಶುರು ಮಾಡಬಹುದು. ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ರಾಗಿ ಕಡಲೆ ಬಿತ್ತನೆ ಬೀಜಗಳ ಖರೀದಿಗೆ ಸಬ್ಸಿಡಿ ನೀಡಲಾಗುತ್ತಿದೆ. ಬಿತ್ತನೆಗೂ ಮುನ್ನ ರೈತರು ಬೀಜೋಪಚಾರ ಮಾಡಬೇಕು’ ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಅಶೋಕ್ ಎಸ್‌. ಸಲಹೆ ನೀಡಿದರು. ‘ಅಡಿಕೆ ತೋಟಗಳಲ್ಲಿ ಅಂತರ ಬೆಳೆಯಾಗಿ ಅಲಸಂದೆ ಬೆಳೆಯಲಾಗುತ್ತಿದೆ. ಕೆಲವೆಡೆ ಮುಂಗಾರು ಬೆಳೆಗಳ ಕಟಾವು ಇನ್ನೂ ಮುಗಿದಿಲ್ಲ. ಕಟಾವು ಬಳಿಕ ಬಿತ್ತನೆ ಆರಂಭವಾಗಲಿದೆ’ ಎಂದು ತಿಳಿಸಿದರು.

ಹಿಂಗಾರು ಬಿತ್ತನೆ ವಿಳಂಬವಾದರೆ.. 

‘ಮುಂದಿನ ದಿನಗಳಲ್ಲಿ ಮತ್ತೆ ಜೋರು ಮಳೆ ಸುರಿದರೆ ಹಿಂಗಾರು ಬಿತ್ತನೆಗೆ ಹಿನ್ನಡೆ ಉಂಟಾಗಲಿದೆ. ಮಳೆ ನಿಂತು ಬಿಸಿಲು ಹೆಚ್ಚಾದರೆ ಮುಂಗಾರು ಬೆಳೆಗಳ ಕಟಾವು ಪೂರ್ಣಗೊಂಡು ಹಿಂಗಾರು ಬಿತ್ತನೆ ಶುರುವಾಗಲಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ತಿಳಿಸಿದರು.  ‘ಕಡಲೆ ಬೆಳೆಯು ವಾತಾವರಣದಲ್ಲಿನ ತೇವಾಂಶವನ್ನು ಹೀರಿಕೊಂಡು ಬೆಳೆಯುತ್ತದೆ. ಇಬ್ಬನಿಯನ್ನು ಹೆಚ್ಚಾಗಿ ಬೇಡುತ್ತದೆ. ಇಬ್ಬನಿ ಕಡಿಮೆಯಾದರೆ ಮ್ಯಾಲಿಕ್‌ ಆ್ಯಸಿಡ್ ಅಂಶವು ಎಲೆಯ ಮೇಲೆ ಬೀಳುವುದು ಕಡಿಮೆಯಾಗುವುದರಿಂದ ಬೆಳೆ ಕುಂಠಿತವಾಗುವ ಸಾಧ್ಯತೆಯೂ ಇರುತ್ತದೆ. ಹಿಂಗಾರು ಕೃಷಿ ವಿಳಂಬವಾದರೆ ರೈತರು ಕಡಲೆ ಬದಲು ರಾಗಿ ಹಲಸಂದೆ ಬೆಳೆ ಬೆಳೆಯಬಹುದು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.