ADVERTISEMENT

ದಾವಣಗೆರೆ: ಜಿಲ್ಲಾ ಆಸ್ಪತ್ರೆಗೆ ಬಂದವು ಅತ್ಯಾಧುನಿಕ ಯಂತ್ರೋಪಕರಣ

ರಾಮಮೂರ್ತಿ ಪಿ.
Published 1 ಅಕ್ಟೋಬರ್ 2025, 8:12 IST
Last Updated 1 ಅಕ್ಟೋಬರ್ 2025, 8:12 IST
<div class="paragraphs"><p>ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿನ ಐಸಿಯು ವಾರ್ಡ್‌ನಲ್ಲಿ&nbsp;ನೂತನ ವೆಂಟಿಲೇಟರ್‌ಗಳನ್ನು ಬೆಡ್‌ಗಳಿಗೆ ಸಂಯೋಜಿಸಿರುವುದು</p></div>

ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿನ ಐಸಿಯು ವಾರ್ಡ್‌ನಲ್ಲಿ ನೂತನ ವೆಂಟಿಲೇಟರ್‌ಗಳನ್ನು ಬೆಡ್‌ಗಳಿಗೆ ಸಂಯೋಜಿಸಿರುವುದು

   

ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ

ದಾವಣಗೆರೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಅಂಗಸಂಸ್ಥೆಯಾದ ಮೈಸೂರಿನ ‘ಬ್ಯಾಂಕ್ ನೋಟ್ ಪೇಪರ್ ಮಿಲ್’ (ಬಿಎನ್‌ಪಿಎಂ) ಕಂಪನಿಯು ಇಲ್ಲಿನ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ₹ 2.50 ಕೋಟಿ ಮೊತ್ತದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಒದಗಿಸಿದೆ.

ADVERTISEMENT

ಕಂಪನಿಯು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಡಿ ನೀಡಿರುವ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಈಗಾಗಲೇ ಆಸ್ಪತ್ರೆ ಸೇರಿದ್ದು, ಕೆಲವು ಯಂತ್ರೋಪಕರಣಗಳ ಅಳವಡಿಕೆ (ಇನ್‌ಸ್ಟಾಲೇಷನ್‌) ಕಾರ್ಯ ನಡೆಯುತ್ತಿದೆ. ಇದರಿಂದಾಗಿ  ರೋಗಿಗಳಿಗೆ ಮತ್ತಷ್ಟು ಅತ್ಯಾಧುನಿಕ ಆರೋಗ್ಯ ಸೇವೆ ದೊರೆಯುವ ವಿಶ್ವಾಸವನ್ನು ಆಡಳಿತ ಮಂಡಳಿ ವ್ಯಕ್ತಪಡಿಸಿದೆ. 

ಗಂಭೀರ ಆರೋಗ್ಯ ಸಮಸ್ಯೆ ಇರುವ ರೋಗಿಗಳಿಗೆ ಜಿಲ್ಲಾ‌ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಲಭ್ಯವಾಗದ ಸಂದರ್ಭಗಳಲ್ಲಿ ಅವರನ್ನು ಬೆಂಗಳೂರು ಸೇರಿದಂತೆ ಇನ್ನಿತರ ನಗರಗಳ ಸರ್ಕಾರಿ ಆಸ್ಪತ್ರೆ ಇಲ್ಲವೇ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಿ ಕಳಿಸಲಾಗುತ್ತಿತ್ತು. 

ಅತ್ಯಾಧುನಿಕ ಯಂತ್ರೋಪಕರಣಗಳು ಲಭ್ಯವಾಗಲಿರುವ ಕಾರಣ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ಈ ಯಂತ್ರೋಪಕರಣಗಳು ಚಿಕಿತ್ಸೆಗೆ ಮಾತ್ರ ನೆರವಾಗದೇ, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೂ ಪ್ರಾಯೋಗಿಕ ಶಿಕ್ಷಣ ಕಲಿಕೆಗೆ ಪ್ರಯೋಜನಕಾರಿಯಾಗಲಿವೆ ಎಂದು ಹಿರಿಯ ವೈದ್ಯರು ಹೇಳುತ್ತಾರೆ.

ಕಂಪ್ಲೀಟ್ ಫಿಸಿಯೊಥೆರಪಿ ಯುನಿಟ್: 

ಅಂದಾಜು ₹40 ಲಕ್ಷ ವೆಚ್ಚದಲ್ಲಿ ಕಂಪ್ಲೀಟ್ ಫಿಸಿಯೊಥೆರಪಿ ಯೂನಿಟ್ ಆರಂಭಿಸಲಾಗುತ್ತಿದೆ. ಎನ್.ಸಿ.ಡಿ ವಿಭಾಗ ಹಾಗೂ ಕೆ.ಎ.ಬಿ.ಎಚ್‌.ಐ (ರಾಜ್ಯ ಮೆದುಳು ಆರೋಗ್ಯ ಕಾರ್ಯಕ್ರಮ) ಅಡಿ ಇಬ್ಬರು ಫಿಸಿಯೊಥೆರಪಿಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಪ್ರತ್ಯೇಕ ಯುನಿಟ್ ಇರಲಿಲ್ಲ. ಇದೀಗ ಪ್ರತ್ಯೇಕ ಯುನಿಟ್ ಸ್ಥಾಪಿಸಲಾಗುತ್ತಿದೆ. ಇದರಿಂದಾಗಿ ವಿಶೇಷ ಚಿಕಿತ್ಸೆಗಳಿಗಾಗಿ ಖಾಸಗಿ ಅಥವಾ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಿಗೆ ಕಳಿಸಲಾಗುತ್ತಿದ್ದ ರೋಗಿಗಳಿಗೆ ಇಲ್ಲಿಯೇ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎನ್ನುತ್ತಾರೆ ವೈದ್ಯರು.

ಯೂನಿಟ್‌ನಲ್ಲಿ ವಿವಿಧ ಬಗೆಯ 45 ವೈದ್ಯಕೀಯ ಉಪಕರಣಗಳಿವೆ. ಇವುಗಳ ಸಹಾಯದಿಂದ ಬೆನ್ನು ನೋವು, ಮೂಳೆ ಸಂಬಂಧಿತ ಶಸ್ತ್ರಚಿಕಿತ್ಸೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಬಹುದು. ಇವುಗಳ ಅವಶ್ಯಕತೆ ಇತ್ತು ಎಂದೂ ಅವರು ಹೇಳಿದ್ದಾರೆ.

6 ವೆಂಟಿಲೇಟರ್ಸ್:

ತುರ್ತು ನಿಗಾ ಘಃಟಕದಲ್ಲಿ (ಐಸಿಯು) 6 ಸುಧಾರಿತ ವೆಂಟಿಲೇಟರ್ಸ್ ಅಳವಡಿಸಲಾಗುತ್ತಿದೆ. ಈವರೆಗೂ 5  ವೆಂಟಿಲೇಟರ್ಸ್ ಬೆಡ್ ಇದ್ದವು. ಇದೀಗ ಅವುಗಳ ಸಂಖ್ಯೆ 10ಕ್ಕೆ ಏರಿಕೆ ಆಗಲಿದೆ.

ಲ್ಯಾಪ್ರೊಸ್ಕೊಪಿಕ್ ಯುನಿಟ್: 

ಉದರ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಈ ಯುನಿಟ್‌ನಿಂದ ಹೆಚ್ಚಿನ ಅನುಕೂಲ ಆಗಲಿದೆ. ಶಸ್ತ್ರಚಿಕಿತ್ಸೆಗಳನ್ನು ಸುಗಮವಾಗಿ ನಡೆಸಲು ಈ ಯುನಿಟ್‌ನಿಂದ ಅನುಕೂಲ ಆಗಲಿದೆ. 

ಅನಸ್ತೇಷಿಯಾ ವರ್ಕ್‌ ಸ್ಟೇಷನ್‌ ಉಪಕರಣಗಳು

ಇದಲ್ಲದೇ 2 ಅನಸ್ತೇಷಿಯಾ ವರ್ಕ್ ಸ್ಟೇಷನ್ ದೊರೆತಿವೆ. ಆಪರೇಷನ್ ಥಿಯೇಟರ್‌ಗೂ (ಒಟಿ) ಸುಸಜ್ಜಿತ ಲೈಟ್ಸ್ ವ್ಯವಸ್ಥೆ, ಟೇಬಲ್, ಫ್ಯಾನ್ ಹಾಗೂ ಇನ್ನಿತರ ಉಪಕರಣಗಳ‌ನ್ನು ಪೂರೈಸಲಾಗಿದೆ. ಇನ್ನಿತರ ಹಲವು ವೈದ್ಯಕೀಯ ಉಪಕರಣಗಳನ್ನು ಬಿಎನ್‌ಪಿಎಂ ಕಂಪನಿಯು ಒದಗಿಸಿದೆ.

ನೂತನ ಒಟಿ ಟೇಬಲ್‌
ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದ ಬೇಡಿಕೆಯ ಪ್ರಸ್ತಾವಕ್ಕೆ ಕಂಪನಿಯ ಆಡಳಿತ ಮಂಡಳಿ ಒಪ್ಪಿ ಅತ್ಯಾಧುನಿಕ ಉಪಕರಣಗಳನ್ನು ಪೂರೈಸಿದೆ‌‌. ಶೀಘ್ರವೇ ಅವುಗಳನ್ನು ಲೋಕಾರ್ಪಣೆಗೊಳಿಸಿ ರೋಗಿಗಳಿಗೆ ಮತ್ತಷ್ಟು ಆರೋಗ್ಯ ಸೇವೆ ಒದಗಿಸಲಾಗುವುದು
ನಾಗೇಂದ್ರಪ್ಪ ಎಂ.ಬಿ. ಜಿಲ್ಲಾ ಶಸ್ತ್ರಚಿಕಿತ್ಸಕ
ಸರ್ಕಾರದ ಅನುದಾನ ಮಾತ್ರವಲ್ಲದೇ ಬೇರೆ ಬೇರೆ ಕಂಪನಿಗಳ ಸಿಎಸ್‌ಆರ್‌ ನಿಧಿ ಬಳಸಿಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗುತ್ತಿದೆ. ಉತ್ತಮ ಆರೋಗ್ಯ ಸೇವೆ ಒದಗಿಸುವುದೇ ಮುಖ್ಯ ಗುರಿ
ಜಿ.ಎಂ.ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.