
ದಾವಣಗೆರೆ: ಮುನಿಸಿಕೊಂಡ ಮಕ್ಕಳಿಬ್ಬರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದರಿಂದ ಭೀತಿಗೊಂಡ ಬಿಜೆಪಿ ಮುಖಂಡ ಚಂದ್ರಶೇಖರ್ ಸಂಕೋಳ್ (56), ಸ್ವತಃ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆಹುತಿಯಾದರು ಎಂಬುದನ್ನು ಶಾಮನೂರು ಗ್ರಾಮಸ್ಥರು ನಂಬಲು ಕಷ್ಟಪಡುತ್ತಿದ್ದಾರೆ.
ಶಾಮನೂರಿನ ಚಂದ್ರಶೇಖರ ಸಂಕೋಳ್ ಐತಿಹಾಸಿಕ ಆಂಜನೇಯಸ್ವಾಮಿ ದೇಗುಲದ ಧರ್ಮದರ್ಶಿಯಾಗಿದ್ದರು. ರಾಜಕೀಯವಾಗಿ ಮಹತ್ವಕಾಂಕ್ಷೆ ಇಟ್ಟುಕೊಂಡು ಜನಸೇವೆಯಲ್ಲಿ ತೊಡಗಿಕೊಂಡಿದ್ದರು. ಸ್ಥಿತಿವಂತರಾಗಿದ್ದ ಅವರು ಆರ್ಥಿಕವಾಗಿ ಸಮಸ್ಯೆಯ ಸುಳಿಗೆ ಸಿಲುಕಿದ್ದರು ಎಂಬುದನ್ನು ಜನರು ಅನುಮಾನದಿಂದಲೇ ನೋಡುತ್ತಿದ್ದಾರೆ.
2007–08ರಲ್ಲಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ 45ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದರು. ಆಶ್ರಯ ಮನೆ ನಿರ್ಮಾಣ, ಮೂಲಸೌಲಭ್ಯ, ದೇಗುಲ ಜೀರ್ಣೋದ್ಧಾರ ಸೇರಿದಂತೆ ಹಲವು ಕಾರ್ಯಗಳನ್ನು ಮಾಡಿದ್ದರು. ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು 2018ರಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಸೆ ಇಟ್ಟುಕೊಂಡಿದ್ದರು. ಆದರೆ, ಅವರಿಗೆ ಟಿಕೆಟ್ ಕೈತಪ್ಪಿತ್ತು.
ಕೃಷಿ, ರಿಯಲ್ ಎಸ್ಟೇಟ್, ಕಬ್ಬಿಣ ಮತ್ತು ಸಿಮೆಂಟ್ ಸೇರಿ ಇತರ ಉದ್ಯಮಗಳಲ್ಲಿ ತೊಡಗಿಕೊಂಡಿದ್ದ ಸಂಕೋಳ್ ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ವಿಪರೀತ ಸಾಲ ಮಾಡಿಕೊಂಡಿದ್ದರಿಂದ ಮನೆಯಲ್ಲಿ ಕಲಹಗಳು ಶುರುವಾಗಿದ್ದವು. ಇದರಿಂದ ಮನನೊಂದು ನಿತ್ಯ ರಾತ್ರಿ ಮನೆಗೆ ತಡವಾಗಿ ಹೋಗುತ್ತಿದ್ದರು ಎನ್ನಲಾಗಿದೆ.
‘ಚಿಕ್ಕ ವಯಸ್ಸಿನಿಂದಲೇ ಜನಸೇವೆಯಲ್ಲಿ ತೊಡಗಿಕೊಂಡಿದ್ದರು. ಜನರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. ಬಡವರ ಪರ ಕಾಳಜಿ ಇಟ್ಟುಕೊಂಡಿದ್ದರು. ಯಾರಾದರೂ ನಿಧನರಾದರೆ ನೆರವು ನೀಡುತ್ತಿದ್ದರು. ದುಡಿಮೆಯಲ್ಲಿ ತೊಂದರೆ ಅನುಭವಿಸಿದ್ದ ಚಂದ್ರಶೇಖರ್, ಸಾಲ ಮಾಡಿಕೊಂಡಿದ್ದರು’ ಎಂದು ಅವರ ಸೋದರಮಾವ ಕರಿಬಸಪ್ಪ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ದೂರದ ಸಂಬಂಧಿಯಾಗಿದ್ದ ಚಂದ್ರಶೇಖರ್ ಉತ್ತಮ ಕೆಲಸ ಮಾಡಿದ್ದರು. ಜೀವನ ಕೊನೆಗೊಳಿಸಿಕೊಳ್ಳುವ ನಿರ್ಧಾರ ಕೈಗೊಳ್ಳಬಾರದಿತ್ತು. ಕೌಟುಂಬಿಕ ಕಲಹದ ವಿಚಾರದಲ್ಲಿ ಅನೇಕರು ಬುದ್ದಿವಾದ ಹೇಳಿದ್ದರುಎಸ್.ಎ. ರವೀಂದ್ರನಾಥ್ ಮಾಜಿ ಸಚಿವ
ಪಕ್ಷದ ನಾಯಕರಾಗಿದ್ದ ಚಂದ್ರಶೇಖರ್ ಧೈರ್ಯವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಜನರ ಸಂಕಷ್ಟಗಳಿಗೆ ಮಿಡಿಯುತ್ತಿದ್ದರು. ಹಳ್ಳಿ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರುಎನ್.ರಾಜಶೇಖರ್ ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ
ತನಿಖೆಯ ಬಳಿಕ ದೃಢ: ಎಸ್‌ಪಿ
‘ಬಿಸ್ಲೇರಿ ಗ್ರಾಮದ ಜಮೀನಿನಲ್ಲಿ ಸುಟ್ಟ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಇರುವ ಬಗ್ಗೆ ಸಾರ್ವಜನಿಕರು ಭಾನುವಾರ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೂಳೆಗಳು ಮಾತ್ರ ಪತ್ತೆಯಾಗಿವೆ. ಚಂದ್ರಶೇಖರ ಸಂಕೋಳ್ ಮೃತಪಟ್ಟಿರುವ ಅನುಮಾನದ ಮೇರೆಗೆ ತನಿಖೆ ನಡೆಸಲಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಯಲದ ಸಿಬ್ಬಂದಿ ಮಾದರಿಗಳನ್ನು ಸಂಗ್ರಹಿಸಿದ್ದು ಪರೀಕ್ಷೆಯ ಬಳಿಕ ಮೃತರ ಗುರುತು ಪತ್ತೆಯಾಗಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ‘ನಿತ್ಯ ತಡವಾಗಿ ಮನೆಗೆ ಬರುತ್ತಿದ್ದ ತಂದೆಯ ಜೊತೆಗೆ ಮಕ್ಕಳು ಶನಿವಾರ ರಾತ್ರಿ ಗಲಾಟೆ ಮಾಡಿದ್ದಾರೆ. ದೂರವಾಣಿ ಕರೆ ಮಾಡಿ ತಕ್ಷಣ ಮನೆಗೆ ಬರುವಂತೆ ಪಟ್ಟು ಹಿಡಿದಿದ್ದಾರೆ. ಕಲಹದ ಬಳಿಕ ಮಕ್ಕಳಿಬ್ಬರು ಕೊಠಡಿಗೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಕುಟುಂಬದ ಸದಸ್ಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪವಿತ್ರಾ ಪರಿಸ್ಥಿತಿ ಗಂಭೀರವಾಗಿದೆ. ವಿಷಯ ತಿಳಿದು ಚಂದ್ರಶೇಖರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು’ ಎಂದು ವಿವರಿಸಿದರು.
ಬರಗಾಲದಲ್ಲಿ ಜಲ ನೆರವು ದಾವಣಗೆರೆ ನಗರ ಮತ್ತು ತಾಲ್ಲೂಕಿನ ವಿವಿಧ ಗ್ರಾಮದ ಜನರಿಗೆ ಬರಗಾಲದಲ್ಲಿ ಕುಡಿಯುವ ನೀರು ಉಚಿತವಾಗಿ ಒದಗಿಸಿದ್ದ ಚಂದ್ರಶೇಖರ್ ಜನ ಮೆಚ್ಚುಗೆ ಪಡೆದಿದ್ದರು. 2017ರಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿತ್ತು. ಆಗ ಕುಡಿಯುವ ನೀರಿಗೆ ತೊಂದರೆ ಉಂಟಾಗಿತ್ತು. ಹಣ ಕೊಟ್ಟು ಖರೀದಿಸಬೇಕಾಗಿದ್ದ ಟ್ಯಾಂಕರ್ ನೀರನ್ನು ಚಂದ್ರಶೇಖರ್ ಸಂಕೋಳ್ ಉಚಿತವಾಗಿ ಸರಬರಾಜು ಮಾಡುತ್ತಿದ್ದರು. ದೂರವಾಣಿ ಕರೆ ಮಾಡಿ ನೀರು ಕೇಳಿದ ಜನರ ಮನೆಬಾಗಿಲಿಗೆ ಟ್ಯಾಂಕರ್ ಕಳುಹಿಸುತ್ತಿದ್ದರು. ಪಕ್ಷಿ ಪ್ರೇಮಿಯಾಗಿದ್ದ ಅವರು ಬೆಳೆದ ಜೋಳವನ್ನು ಕೊಯ್ಲು ಮಾಡುತ್ತಿರಲಿಲ್ಲ. 3 ಎಕರೆ ಜೋಳವನ್ನು ಪಕ್ಷಿಗಳಿಗೆ ಆಹಾರವಾಗಿ ಬಿಟ್ಟಿದ್ದು ಜನಮೆಚ್ಚುಗೆಗೂ ಪಾತ್ರವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.