ADVERTISEMENT

ದಾವಣಗೆರೆ| ಅಂಗವಿಕಲರಿಗೆ ಹತ್ತಾರು ಸೌಲಭ್ಯ: ಫಲಾನುಭವಿಗಳೇ ವಿರಳ

ರಾಮಮೂರ್ತಿ ಪಿ.
Published 8 ಡಿಸೆಂಬರ್ 2025, 5:46 IST
Last Updated 8 ಡಿಸೆಂಬರ್ 2025, 5:46 IST
ದಾವಣಗೆರೆ ಹೊರವಲಯದಲ್ಲಿರುವ ದಿವ್ಯಾಂಗರ ಕೌಶಲಾಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ)
ದಾವಣಗೆರೆ ಹೊರವಲಯದಲ್ಲಿರುವ ದಿವ್ಯಾಂಗರ ಕೌಶಲಾಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ)   

ದಾವಣಗೆರೆ: ನಗರದ ಹೊರವಲಯದಲ್ಲಿರುವ ದಿವ್ಯಾಂಗರ ಕೌಶಲಾಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರವು (ಸಿಆರ್‌ಸಿ) ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಆದರೆ, ಸಮರ್ಪಕ ಮಾಹಿತಿ ಹಾಗೂ ಪ್ರಚಾರದ ಕೊರತೆಯ ಕಾರಣಕ್ಕೆ ಈ ಕೇಂದ್ರಕ್ಕೆ ಭೇಟಿ ನೀಡುವ ಹಾಗೂ ಇಲ್ಲಿನ ಸೌಲಭ್ಯಗಳ ಸದುಪಯೋಗ ಪಡೆಯುವ ಅಂಗವಿಕಲರ ಸಂಖ್ಯೆ ಅತೀ ವಿರಳವಾಗಿದೆ. 

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ದಿವ್ಯಾಂಗರ ಸಬಲೀಕರಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಏಕೈಕ ಸಿಆರ್‌ಸಿ ಇದಾಗಿದೆ. ಇಲ್ಲಿ ಅಂಗವಿಕಲರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಹಾಗೂ ವಿವಿಧ ಉದ್ಯೋಗಾಧಾರಿತ ತರಬೇತಿ ನೀಡಲಾಗುತ್ತಿದೆ. 

ಹಿಂದೆ ಸಂಸದರಾಗಿದ್ದ ಜಿ.ಎಂ.ಸಿದ್ದೇಶ್ವರ ಅವರು 2017ರಲ್ಲಿ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಸಿಆರ್‌ಸಿ ಮಂಜೂರು ಮಾಡಿಸಿದ್ದರು. ಆರಂಭದಲ್ಲಿ ಈ ಕೇಂದ್ರವು ದೇವರಾಜ ಅರಸು ಬಡಾವಣೆಯಲ್ಲಿ ರಾಜ್ಯ ಸರ್ಕಾರದ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿತ್ತು. 

ADVERTISEMENT

ನಗರದಿಂದ 8 ಕಿ.ಮೀ. ದೂರದಲ್ಲಿ (ವಡ್ಡಿನಹಳ್ಳಿ ರಸ್ತೆಯಲ್ಲಿ) 2022ರಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ₹24 ಕೋಟಿ ವೆಚ್ಚದಲ್ಲಿ ಭವ್ಯವಾಗಿ ತಲೆ ಎತ್ತಿರುವ ನೂತನ ಕಟ್ಟಡವು 2024ರ ಮಾರ್ಚ್‌ನಿಂದ ಅಂಗವಿಕಲರ ಸೇವೆಗೆ ತೆರೆದುಕೊಂಡಿದೆ. ರಾಜ್ಯ ಸರ್ಕಾರ ನೀಡಿದ್ದ 16.23 ಎಕರೆ ಪೈಕಿ 9 ಎಕರೆ ಜಾಗವನ್ನು ಕಟ್ಟಡಕ್ಕಾಗಿ ಬಳಸಿಕೊಳ್ಳಲಾಗಿದೆ. 

3 ಅಂತಸ್ತಿನ ಕಟ್ಟಡವು 50 ವಿವಿಧ ಕೊಠಡಿಗಳನ್ನು ಒಳಗೊಂಡಿದೆ. ಕಾನ್ಫರೆನ್ಸ್‌ ಹಾಲ್‌, ಗ್ರಂಥಾಲಯ, ವಿವಿಧ ಥೆರಪಿಗಳ ಯೂನಿಟ್‌ಗಳು ಸೇರಿದಂತೆ ಅಂಗವಿಕಲರಿಗೆ ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನೂ ಈ ಕೇಂದ್ರ ಹೊಂದಿದೆ. ಮುಂಭಾಗ ವಿಶಾಲವಾದ ಉದ್ಯಾನ, ವಾಹನಗಳ ನಿಲುಗಡೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. 

ಸಿಆರ್‌ಸಿ ಕೇಂದ್ರದಲ್ಲಿ ಒಟ್ಟು 21 ಬಗೆಯ ವಿವಿಧ ಅಂಗವೈಕಲ್ಯತೆಗೆ ಚಿಕಿತ್ಸೆ, ಪರಿಹಾರ ಒದಗಿಸಲಾಗುತ್ತಿದೆ. ಕಣ್ಣು, ಕಿವಿ, ಬುದ್ದಿಮಾಂದ್ಯ, ಆಪ್ತ ಸಮಾಲೋಚನೆ, ಫಿಸಿಯೊಥೆರಪಿ, ಸ್ಪರ್ಶಜ್ಞಾನ ಚಿಕಿತ್ಸೆ ಸೇರಿದಂತೆ ಇನ್ನಿತರ ಹತ್ತಾರು ಬಗೆಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕೈ– ಕಾಲು ತುಂಡಾದವರಿಗೆ ಕೇಂದ್ರದಲ್ಲಿಯೇ ಕೃತಕ ಕೈ–ಕಾಲುಗಳನ್ನು ತಯಾರಿಸಿ ಅಳವಡಿಸಲಾಗುತ್ತಿದೆ. ಬ್ರೈಲ್‌ ಲಿಪಿ ಶಿಕ್ಷಣವನ್ನೂ ನೀಡಲಾಗುತ್ತಿದೆ. 

ಉಪಕರಣಗಳ ವಿತರಣೆ: 

2025ರ ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ ವಿವಿಧ ಅಂಗವೈಕಲ್ಯಕ್ಕೆ ತುತ್ತಾದವರಿಗೆ ₹2 ಕೋಟಿ ಮೊತ್ತದ ಉಪಕರಣಗಳನ್ನು ಕೇಂದ್ರದಿಂದ ಉಚಿತವಾಗಿ ವಿತರಿಸಲಾಗಿದೆ. ತ್ರಿಚಕ್ರ ವಾಹನ (ಮೋಟರ್‌), ವಾಕಿಂಗ್‌ ಸ್ಟಿಕ್‌, ಬ್ರೈಲ್‌ ಕಿಟ್‌, ಶ್ರವಣ ಸಾಧನ, ಕನ್ನಡಕ ಸೇರಿದಂತೆ ಅಂಗವಿಕಲರಿಗೆ ಅಗತ್ಯವಿರುವ ಹತ್ತಾರು ಉಪಕರಣಗಳನ್ನು ಅರ್ಹರಿಗೆ ವಿತರಿಸಲಾಗಿದೆ. 

ವಿವಿಧ ತರಬೇತಿ: 

ಸಂಯುಕ್ತ ಪ್ರಾದೇಶಿಕ ಕೇಂದ್ರದಲ್ಲಿ ಚಿಕಿತ್ಸೆ ಮಾತ್ರವಲ್ಲದೇ ಅಂಗವಿಕಲರಿಗೆ ಕೌಶಲ ಆಧಾರಿತ ವಿವಿಧ ತರಬೇತಿಯನ್ನೂ ನೀಡಲಾಗುತ್ತಿದೆ. ಕೃಷಿ, ತೋಟಗಾರಿಕೆ, ಅಟೆಂಡರ್‌, ಗಾರ್ಡನರ್‌, ಹೋಟೆಲ್‌ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ವಿವಿಧ ಉದ್ಯೋಗಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಅಂಗವಿಕಲರಿಗೆ ಅವಶ್ಯಕವಾದ ತರಬೇತಿಯನ್ನೂ ನೀಡಲಾಗುತ್ತಿದೆ. ಈ ಹಿಂದೆ (ಮೊದಲ ಬ್ಯಾಚ್‌) ತರಬೇತಿ ಪಡೆದ 15 ಅಂಗವಿಕಲರ ಪೈಕಿ 12 ಜನ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇದೀಗ 2ನೇ ಬ್ಯಾಚ್‌ನಲ್ಲೂ 15 ಅಂಗವಿಕಲರು ತರಬೇತಿ ನಿರತರಾಗಿದ್ದಾರೆ. 

ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪೂರೈಸಿದ ಅಂಗವಿಕಲ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ವಿಶೇಷ ತರಬೇತಿ, ಮಾರ್ಗದರ್ಶನ ನೀಡಲಾಗುತ್ತಿದೆ. ತರಬೇತಿ ವೇಳೆ ಪ್ರತೀ ತಿಂಗಳು ₹6,000 ವಿದ್ಯಾರ್ಥಿ ವೇತನವನ್ನೂ ನೀಡಲಾಗುತ್ತಿದೆ. 6 ತಿಂಗಳ ತರಬೇತಿ ಇದಾಗಿದೆ. 

ಇಷ್ಟೆಲ್ಲಾ ಸೌಲಭ್ಯಗಳನ್ನು ಹೊಂದಿರುವ ಈ ಕೇಂದ್ರಕ್ಕೆ ನಿತ್ಯ 20ರಿಂದ 30 ಹೊಸ ರೋಗಿಗಳು ಹಾಗೂ 100ರಿಂದ 120 ಜನ ಪುನರಾವರ್ತಿತ ಅಂಗವಿಕಲರು ಮಾತ್ರ ಭೇಟಿ ನೀಡುತ್ತಿದ್ದಾರೆ. ದಾವಣಗೆರೆ ನಗರ ಹಾಗೂ ದಾವಣಗೆರೆ ಮತ್ತು ಮಾಯಕೊಂಡ ತಾಲ್ಲೂಕುಗಳ ನಾಗರಿಕರಿಗೆ ಈ ಕೇಂದ್ರದ ಬಗ್ಗೆ ಕಿರು ಮಾಹಿತಿ ಇದೆ.

ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಜಗಳೂರು, ಹರಿಹರ ತಾಲ್ಲೂಕುಗಳ ಗ್ರಾಮೀಣ ಭಾಗದ ಜನರಿಗೆ ವಿಶೇಷವಾಗಿ ಅಂಗವಿಕಲರಿಗೆ ಈ ಕೇಂದ್ರದ ಸೌಲಭ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಈ ಕೇಂದ್ರದಲ್ಲಿ ಅಂಗವಿಕಲರು ಮಾತ್ರವಲ್ಲದೇ ಸಾಮಾನ್ಯರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳ ವೈದ್ಯರ ಶಿಫಾರಸು ಪತ್ರ ಅವಶ್ಯಕವಾಗಿದೆ. 

ಅಂಗವಿಕಲರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ‘ಪವರ್‌ ಗ್ರಿಡ್‌’ ಕಂಪನಿಯು ಸಿಎಸ್‌ಆರ್‌ ನಿಧಿಯಡಿ ನೀಡಿರುವ ವಾಹನವನ್ನು ಬಳಸಿಕೊಂಡು ನಿತ್ಯವೂ ವಿವಿಧ ಗ್ರಾಮಗಳಿಗೆ ತೆರಳಿ ಜನರಲ್ಲಿ ಈ ಕೇಂದ್ರದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಆದರೆ, ಒಂದೇ ವಾಹನ ಇರುವ ಕಾರಣಕ್ಕೆ ಇಡೀ ಜಿಲ್ಲೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಆಸ್ಪತ್ರೆಯ ಆಡಳಿತ ಅಧಿಕಾರಿ ವೈ.ಶ್ರೀನಾಥ್. 

ದಾವಣಗೆರೆ ಹೊರವಲಯದಲ್ಲಿರುವ ದಿವ್ಯಾಂಗರ ಕೌಶಲಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ)
ಸಿಆರ್‌ಸಿ ಮುಂಭಾಗದ ಮೆಟ್ಟಿಲುಗಳ ಮೇಲೆ ಬಸ್‌ಗಾಗಿ ಕಾದು ಕುಳಿತಿದ್ದ ಅಂಗವಿಕಲರು ಹಾಗೂ ಪೋಷಕರು
ಅಂಗವಿಕಲರಿಗೆ ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸಿಆರ್‌ಸಿಯಲ್ಲಿ ಕಲ್ಪಿಸಲಾಗುತ್ತಿದೆ. ಕೇಂದ್ರದ ಕುರಿತ ಮಾಹಿತಿಯನ್ನು ಅಂಗವಿಕಲರಿಗೆ ತಲುಪಿಸುವ ಕಾರ್ಯವನ್ನು ಮತ್ತಷ್ಟು ಹೆಚ್ಚಿಸಲಾಗುವುದು
ಮಾರುತಿಕೃಷ್ಣ ಗೌಡ ನಿರ್ದೇಶಕ ಸಿಆರ್‌ಸಿ
ಮಗನಿಗೆ ಕಿವಿ ಕೇಳಿಸುತ್ತಿರಲಿಲ್ಲ. ಉಪಕರಣದಿಂದ ಈಗ ಕಿವಿ ಕೇಳಿಸುತ್ತವೆ. ಮಾತು ಕಲಿಸುವ ಶಿಕ್ಷಣಕ್ಕಾಗಿ ಮೈಸೂರಿಗೆ ಹೋಗಿ ಬರುತ್ತಿದ್ದೆವು. ಇದೀಗ ಈ ಕೇಂದ್ರದಲ್ಲಿಯೇ ತರಬೇತಿ ಕೊಡಿಸುತ್ತಿದ್ದೇವೆ
ಅಶ್ವಿನಿ ಜಿ.ಎಂ. ಹನುಮನಹಳ್ಳಿ ದಾವಣಗೆರೆ
ಕಾಲು ಶಕ್ತಿ ಹೀನವಾಗಿವೆ. ಬಿ.ಕಾಂ ಪದವಿ ಮುಗಿಸಿದ್ದು ಸಿಆರ್‌ಸಿ ಕೇಂದ್ರದಲ್ಲಿ ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವೆ. ಸಾರಿಗೆ ಸಮಸ್ಯೆ ಹೊರತುಪಡಿಸಿ ಬೇರೆಲ್ಲಾ ಸೌಲಭ್ಯವೂ ಇವೆ
ಹರ್ಷ ವಿ. ದಾವಣಗೆರೆ
ಸಾರಿಗೆ ಸಂಪರ್ಕ ಸಮಸ್ಯೆ 
ದಾವಣಗೆರೆಯಿಂದ ಚಿತ್ರದುರ್ಗಕ್ಕೆ ತೆರಳುವ ಮಾರ್ಗದಲ್ಲಿರುವ ಸಂಯುಕ್ತ ಪ್ರಾದೇಶಿಕ ಕೇಂದ್ರಕ್ಕೆ ತೆರಳುವವರಿಗೆ ಸಾರಿಗೆ ಸಂಪರ್ಕದ ಸಮಸ್ಯೆ ಎದುರಾಗಿದೆ. ನಗರ ಸಾರಿಗೆಯ ಬಸ್‌ ದಾವಣಗೆರೆಯಿಂದ ಸಿಆರ್‌ಸಿ ಕೇಂದ್ರಕ್ಕೆ ಬೆಳಿಗ್ಗೆ 9.30ಕ್ಕೆ ಮಧ್ಯಾಹ್ನ 1.30ಕ್ಕೆ ಹಾಗೂ ಸಂಜೆ 5 ಗಂಟೆಗೆ ನಿತ್ಯವೂ ಸಂಚರಿಸುತ್ತಿದೆ. ಅಂಗವಿಕಲರು ಈ ಸಮಯಕ್ಕೆ ಮಾತ್ರವೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಬೇರೆ ಸಮಯದಲ್ಲಿ ದಾವಣಗೆರೆಯಿಂದ ಬಾಡ ಕ್ರಾಸ್‌ವರೆಗೆ ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸಿದರೂ ಅಲ್ಲಿಂದ ಮತ್ತೆ ನಡೆದು ಸಾಗಬೇಕು. ಇಲ್ಲವೇ ಆಟೊಗಳಿಗೆ ದುಬಾರಿ ಹಣ ಪಾವತಿಸಬೇಕಾದ ಅನಿವಾರ್ಯತೆ ಇದೆ.  ನಿತ್ಯವೂ ತರಬೇತಿ ಹಾಗೂ ಚಿಕಿತ್ಸೆಗೆ ತೆರಳುವ ಅಂಗವಿಕಲರನ್ನು ಕರೆದೊಯ್ಯಲು ಹಾಗೂ ಬಿಟ್ಟು ಬರಲು ಕೇಂದ್ರದಿಂದ ಒಂದು ವಾಹನ ಕಲ್ಪಿಸಿದ್ದರೂ ಅದು ಸಾಲುತ್ತಿಲ್ಲ. ಹೆಚ್ಚಿನ ವಾಹನಗಳ ಅವಶ್ಯಕತೆ ಇದೆ. ದಾವಣಗೆರೆಯಿಂದ ಸಿಆರ್‌ಸಿ ಕೇಂದ್ರಕ್ಕೆ ನಗರ ಸಾರಿಗೆಯಿಂದ ಹೆಚ್ಚಿನ ಬಸ್‌ಗಳನ್ನು ಓಡಿಸಲು ಮುಂದಾಗಬೇಕು ಎನ್ನುತ್ತಾರೆ ಅಂಗವಿಕಲರು ಹಾಗೂ ಅವರ ಪೋಷಕರು. 
ವಸತಿ ನಿಲಯ ಮಂಜೂರು
 ದಿವ್ಯಾಂಗರ ಕೌಶಲಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರದ ಸಮೀಪವೇ ಅಂಗವಿಕಲರಿಗಾಗಿ ವಸತಿ ನಿಲಯ ತಲೆ ಎತ್ತಲಿದೆ. ಚಿಕಿತ್ಸೆ ಹಾಗೂ ತರಬೇತಿಗೆಂದು ವಿವಿಧೆಡೆಯಿಂದ ಬರುವ ಅಂಗವಿಕಲರಿಗೆ ಈ ವಸತಿ ನಿಲಯದಿಂದ ಹೆಚ್ಚಿನ ಅನುಕೂಲ ಆಗಲಿದೆ.  ಅಂದಾಜು ₹16 ಕೋಟಿ ವೆಚ್ಚದಲ್ಲಿ 100 ಬೆಡ್‌ಗಳ ವಸತಿ ನಿಲಯ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರ ಹಾಸ್ಟೆಲ್ ಮಂಜೂರು ಮಾಡಿದ್ದು ಒಂದೆರಡು ತಿಂಗಳಲ್ಲಿಯೇ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ.  ‘ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಿಂದ ಇಲ್ಲಿಗೆ ವಾರ ಅಥವಾ 10 ದಿನಕ್ಕೊಮ್ಮೆ ಮಗನನ್ನು ಚಿಕಿತ್ಸೆಗೆಂದು ಕರೆತರುತ್ತೇನೆ. ಪ್ರಯಾಣವು ತ್ರಾಸದಾಯಕವಾಗಿದೆ. ಇಲ್ಲಿಯೇ ವಸತಿ ನಿಲಯ ನಿರ್ಮಿಸುವುದರಿಂದ ಹೆಚ್ಚಿನ ಅನುಕೂಲ ಆಗಲಿದೆ’ ಎಂದು ಮಗನನ್ನು ಚಿಕಿತ್ಸೆಗೆಂದು ಕರೆ ತಂದಿದ್ದ ಸೌಮ್ಯಾ ಎಚ್‌. ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.