ADVERTISEMENT

ದಾವಣಗೆರೆ | ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:48 IST
Last Updated 17 ಫೆಬ್ರುವರಿ 2026, 2:48 IST
<div class="paragraphs"><p>ಬಾಂಬ್ ಪತ್ತೆ ದಳ ಮತ್ತು ಶ್ವಾನ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು</p></div>

ಬಾಂಬ್ ಪತ್ತೆ ದಳ ಮತ್ತು ಶ್ವಾನ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು

   

ದಾವಣಗೆರೆ: ಇಲ್ಲಿನ ದೇವರಾಜ ಅರಸು ಬಡಾವಣೆಯ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಬಾಂಬ್‌ ಇಡಲಾಗಿದೆ ಎಂಬ ‘ಇ–ಮೇಲ್‌’ ಸಂದೇಶ ಸೋಮವಾರ ಆತಂಕ ಸೃಷ್ಟಿಸಿತ್ತು. ಪೊಲೀಸರು ಸುದೀರ್ಘ ಪರಿಶೀಲನೆ ನಡೆಸಿದ ಬಳಿಕ ಇದೊಂದು ಹುಸಿ ಬೆದರಿಕೆ ಎಂಬುದು
ಖಚಿತವಾಗಿದೆ.

ಇದರಿಂದ ವಾರದ ಮೊದಲ ದಿನದ ನ್ಯಾಯಾಲಯದ ಕಲಾಪ ಮಧ್ಯಾಹ್ನದವರೆಗೂ ನಡೆಯಲಿಲ್ಲ. ನ್ಯಾಯಾಲಯದ ಆವರಣದಲ್ಲಿ ಬಾಂಬ್‌ ಇಲ್ಲ ಎಂಬುದನ್ನು ಪೊಲೀಸರು ಖಚಿತಪಡಿಸಿದ ನಂತರ ಕಲಾಪಗಳು ನಡೆದವು. ವಕೀಲರು, ಕಕ್ಷಿದಾರರು ಬಹುಹೊತ್ತು ನ್ಯಾಯಾಲಯದ ಹೊರಭಾಗದಲ್ಲಿ ಕಾಯುವಂತಾಗಿತ್ತು.

ADVERTISEMENT

ನ್ಯಾಯಾಲಯದ ಕಚೇರಿಯ ಅಧಿಕೃತ ಮೇಲ್‌ಗೆ ಬಾಂಬ್ ಬೆದರಿಕೆಯ ‘ಇ–ಮೇಲ್‌’ ಸಂದೇಶ ಬಂದಿದೆ. ಬೆಳಿಗ್ಗೆ 9.30ಕ್ಕೆ ಕಚೇರಿಗೆ ಬಂದ ಸಿಬ್ಬಂದಿ ಮೇಲ್‌ ಪರಿಶೀಲಿಸಿದಾಗ ಇದು ಗಮನಕ್ಕೆ ಬಂದಿದೆ. ತಕ್ಷಣವೇ ಜಿಲ್ಲಾ ನ್ಯಾಯಾಧೀಶರು ಹಾಗೂ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ನ್ಯಾಯಾಲಯದ bಕಟ್ಟಡದಲ್ಲಿದ್ದ ಎಲ್ಲರನ್ನು ಹೊರಗೆ ಕಳುಹಿಸಿದರು.

ಸ್ಥಳಕ್ಕೆ ಬಂದ ಶ್ವಾನ ದಳ ಹಾಗೂ ಬಾಂಬ್‌ ಪತ್ತೆ ದಳ ನ್ಯಾಯಾಲಯದ ಆವರಣವನ್ನು ಕೂಲಂಕಷವಾಗಿ ಪರಿಶೀಲಿಸಿದವು. ಕಟ್ಟಡದ ಒಳಭಾಗ, ಕಲಾಪ ನಡೆಯುವ ಸ್ಥಳ, ವಕೀಲರ ಭವನ, ಕಕ್ಷಿದಾರರು ಕಾಯುವ ಆವರಣ ಸೇರಿದಂತೆ ಎಲ್ಲೆಡೆ ಪರಿಶೀಲನೆ ನಡೆಸಲಾಯಿತು. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವಕೀಲರು ಮತ್ತು ಕಕ್ಷಿದಾರರು ನ್ಯಾಯಾಲಯದ ಹೊರಗಿದ್ದರು. ‘ಮಧ್ಯಾಹ್ನ 12.30ಕ್ಕೆ ಆರ್‌ಡಿಎಕ್ಸ್‌’ ಸ್ಫೋಟಗೊಳ್ಳಲಿದೆ ಎಂಬ ಸಂದೇಶ ಇದ್ದ ಪರಿಣಾಮ
ಮಧ್ಯಾಹ್ನದವರೆಗೂ ಆತಂಕ ಮನೆ ಮಾಡಿತ್ತು.

ದೇವರಾಜ ಅರಸು ಬಡಾವಣೆಗೆ ಸಂಪರ್ಕ ಕಲ್ಪಿಸುವ ನ್ಯಾಯಾಲಯದ ಮುಂದಿನ ರಸ್ತೆಯಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ವಾಹನ ಸವಾರರು, ಸಾರ್ವಜನಿಕರು ಆತಂಕದಿಂದ ನ್ಯಾಯಾಲಯದತ್ತ ದೃಷ್ಟಿ ನೆಟ್ಟಿದ್ದರು. ಭದ್ರತೆ ಬಿಗಿಗೊಳಿಸಿದ ಪೊಲೀಸರು, ಸ್ಥಳದಿಂದ ದೂರ ತೆರಳುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದರು. ಸುದೀರ್ಘ ಪರಿಶೀಲನೆ ನಡೆಸಿದರೂ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ.

ಡಿ.16ರಂದು ಜಿಲ್ಲಾಧಿಕಾರಿ ಕಚೇರಿಗೂ ಇದೇ ರೀತಿಯ ಬಾಂಬ್‌ ಬೆದರಿಕೆ ಬಂದಿತ್ತು. ಪರಿಶೀಲನೆಯ ಬಳಿಕ ಇದು ಹುಸಿ ಬೆದರಿಕೆ ಎಂಬುದು ಖಚಿತವಾಗಿತ್ತು.

ಆರ್‌ಡಿಎಕ್ಸ್‌ ಸ್ಫೋಟಿಸುವುದಾಗಿ ಮಧ್ಯಾಹ್ನ ಬೆದರಿಕೆ

ತಮಿಳುನಾಡಿನಿಂದ ಬಂದಿರುವ ‘ಇ–ಮೇಲ್‌’ ಸಂದೇಶ

ಡಿ.16ರಂದು ಜಿಲ್ಲಾಧಿಕಾರಿ ಕಚೇರಿಗೂ ಬಂದಿತ್ತು ಬೆದರಿಕೆ

ನ್ಯಾಯಾಲಯದ ಆವರಣದಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ‘ಇ–ಮೇಲ್‌’ ತಮಿಳುನಾಡಿನಿಂದ ಬಂದಿದೆ ಎಂಬುದು ಗೊತ್ತಾಗಿದೆ. ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ
ಎಚ್‌.ಟಿ. ಶೇಖರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಬಾಂಬ್ ಬೆದರಿಕೆಗಳು ಆತಂಕಕಾರಿ ಹಾಗೂ ಪ್ರಜಾಪ್ರಭುತ್ವದ ನ್ಯಾಯಾಂಗ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ. ಸರ್ಕಾರ ಸೂಕ್ತ ತನಿಖೆಗೆ ಆದೇಶಿಸಬೇಕು. ಮತ್ತು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು
ಟಿ.ಆರ್.ಗುರುಬಸವರಾಜ್,ಅಧ್ಯಕ್ಷರು, ದಾವಣಗೆರೆ ಜಿಲ್ಲಾ ವಕೀಲರ ಸಂಘ

‘ ಕಕ್ಷಿದಾರರು, ವಕೀಲರಿಗೆ ತೊಂದರೆ’

ಬಾಂಬ್‌ ಬೆದರಿಕೆಯಿಂದ ನ್ಯಾಯಾಲಯದ ಕಲಾಪಗಳು ಕೆಲಹೊತ್ತು ನಡೆಯಲಿಲ್ಲ. ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಕಕ್ಷಿದಾರರು, ವಕೀಲರು ಇದರಿಂದ ತೊಂದರೆ ಅನುಭವಿಸುವಂತಾಯಿತು.

‘ಬೆಳಿಗ್ಗೆಯ ಕಲಾಪಕ್ಕೆ ಹಾಜರಾಗಲು ನ್ಯಾಯಾಲಯಕ್ಕೆ ಬಂದಾಗ ಬಾಂಬ್‌ ಬೆದರಿಕೆಯ ಬಗ್ಗೆ ಗೊತ್ತಾಯಿತು. ಕಲಾಪಕ್ಕೆ ಬಂದಿದ್ದ ನೂರಾರು ಜನರು ಆತಂಕದಿಂದ ಎದುರು ನೋಡುವಂತಾಯಿತು. ನ್ಯಾಯಾಲಯದ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದರೆ ಅನುಕೂಲ’ ಎಂದು ವಕೀಲ ಎಲ್‌.ಎಚ್‌. ಅರುಣ್‌ಕುಮಾರ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.