ADVERTISEMENT

ದಾವಣಗೆರೆಯ 56,941 ಮತದಾರರಿಗೆ ನೋಟಿಸ್‌: ವದಂತಿಗೆ ಕಿವಿಗೊಡಬೇಡಿ ಎಂದ ಡಿಸಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 13:59 IST
Last Updated 19 ಫೆಬ್ರುವರಿ 2026, 13:59 IST
   

ದಾವಣಗೆರೆ: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ ಪೂರ್ವಭಾವಿ ಪ್ರಕ್ರಿಯೆಗಳು (ಪ್ರೀ ಎಸ್‌ಐಆರ್) ನಡೆಯುತ್ತಿದ್ದು, ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಪುನರಾವರ್ತನೆಯಾದ 56,941 ಮತದಾರರಿಗೆ ನೋಟಿಸ್‌ ನೀಡಲಾಗಿದೆ. ದಾಖಲೆಗಳನ್ನು ಪರಿಶೀಲಿಸಿ ಲೋಪದೋಷಗಳನ್ನು ಸರಿಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.

‘ಹಲವು ಕ್ಷೇತ್ರಗಳಲ್ಲಿ ಪುನರಾವರ್ತನೆಯಾಗಿರುವ ಮತದಾರರ ಹೆಸರುಗಳನ್ನು ಚುನಾವಣಾ ಆಯೋಗ ಒದಗಿಸಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರು, ಚಿತ್ರ ಹಾಗೂ ವಯಸ್ಸು ಆಧರಿಸಿ ಪುನರಾವರ್ತಿತ ಮತದಾರರನ್ನು ಪತ್ತೆ ಮಾಡಲಾಗಿದೆ. ಇಂತಹ ಮತದಾರರು ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 8,000 ಪುನರಾವರ್ತಿತ ಮತದಾರರಿದ್ದಾರೆ. ಒಬ್ಬರ ಹೆಸರು 2 ಅಥವಾ 3 ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಇರುವುದು ಖಚಿತವಾಗಿದೆ. ಹೀಗೆ ಹಲವು ಕ್ಷೇತ್ರಗಳಲ್ಲಿ ಮತದಾನ ಮಾಡುವುದು ಅಪರಾಧ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ’ ಎಂದರು.

ADVERTISEMENT

‘ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಇನ್ನೂ ಆರಂಭವಾಗಿಲ್ಲ. ಇದರ ಪೂರ್ವಭಾವಿ ಪ್ರಕ್ರಿಯೆಗಳು ಮಾತ್ರ ಶುರುವಾಗಿವೆ. ಮತದಾರರ ಪಟ್ಟಿಯಿಂದ ಮೃತಪಟ್ಟವರ ಹೆಸರನ್ನು ಹೊರತುಪಡಿಸಿ ಯಾರೊಬ್ಬರನ್ನೂ ಕೈಬಿಡುವುದಿಲ್ಲ. ಈ ಕುರಿತು ಕೆಲವರು ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ಕಿವಿಗೊಡಬಾರದು’ ಎಂದು ಮನವಿ ಮಾಡಿದರು.

‘2002 ಹಾಗೂ 2025ರ ಮತದಾರರ ಪಟ್ಟಿಯಲ್ಲಿರುವ ಹೆಸರುಗಳಲ್ಲಿ ಹೊಂದಾಣಿಕೆ ಇದೆಯೇ ಎಂಬುದನ್ನು ಮತಗಟ್ಟೆ ಅಧಿಕಾರಿ ಪರಿಶೀಲಿಸುತ್ತಿದ್ದಾರೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪಾಲಕರ ಮತದಾರರ ಚೀಟಿಯನ್ನು ನೀಡಿ ಕುಟುಂಬದ ಮ್ಯಾಪಿಂಗ್‌ ಮಾಡಿಸಿಕೊಳ್ಳಬೇಕು’ ಎಂದು ಸ್ಪಷ್ಟಪಡಿಸಿದರು.

ಮಾರ್ಚ್‌ 15ರವರೆಗೆ ಅವಕಾಶ:

‘ಜಿಲ್ಲೆಯ 298 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ. ಹಾವೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲೆಯ 12,000 ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಅತಿ ಹೆಚ್ಚು ಜನರಿಗೆ ಹಕ್ಕುಪತ್ರ ನೀಡಿದ ಜಿಲ್ಲೆಗಳ ಪಟ್ಟಿಯಲ್ಲಿ ದಾವಣಗೆರೆ 2ನೇ ಸ್ಥಾನದಲ್ಲಿದೆ. ಇನ್ನೂ ಕೆಲವರು ಹಕ್ಕುಪತ್ರ ಪಡೆಯುವುದು ಬಾಕಿ ಇದೆ. ಮಾರ್ಚ್‌ 15ರವರೆಗೆ ಇದಕ್ಕೆ ಕಾಲಾವಕಾಶವಿದೆ’ ಎಂದರು.

‘ಸರ್ಕಾರಿ ಜಮೀನು ಮಂಜೂರಾದ ನಂತರ ಪೋಡಿ ಮಾಡಿಕೊಳ್ಳದವರಿಗೆ ‘ಗೈರು ವಿಲೇವಾರಿ ಕಡತ’ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯ 4,000 ಜನರಿಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿ ಮಾಡಿಸಿ ಪಹಣಿ ನೀಡಲಾಗಿದೆ. ಜಿಲ್ಲೆಯಲ್ಲಿ ಇನ್ನೂ 10,000 ಇಂತಹ ಕಡತಗಳು ವಿಲೇವಾರಿಗೆ ಬಾಕಿ ಇವೆ. ಇಂತಹ ಸಮಸ್ಯೆ ಇರುವವರು ತಹಶೀಲ್ದಾರ್‌ ಕಚೇರಿ ಸಂಪರ್ಕಿಸಬೇಕು’ ಎಂದು ವಿವರಿಸಿದರು.

‘ಮೃತರ ಹೆಸರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಪಹಣಿ ಇವೆ. ಇವುಗಳಲ್ಲಿ 24,000 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಮನೆ–ಮನೆಗೆ ಭೇಟಿ ನೀಡಿ ಪೌತಿಖಾತೆ ಮಾಡುತ್ತಿದ್ದಾರೆ. ಈ ಆಂದೋಲನ ಮಾರ್ಚ್‌ ಅಂತ್ಯಕ್ಕೆ ಶೇ 75ರಷ್ಟು ಪ್ರಗತಿ ಸಾಧಿಸಬೇಕಿದೆ. ಇಂತಹ ದಾಖಲೆಗಳ ತಿದ್ದುಪಡಿ, ವಿತರಣೆಗೆ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಾವತಿಸಬೇಕು. ಹೆಚ್ಚುವರಿ ಹಣಕ್ಕೆ ಪೀಡಿಸುವವರ ವಿರುದ್ಧ ದೂರು ನೀಡಬಹುದು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಮತಾ ಹೊಸಗೌಡರ್‌ ಹಾಜರಿದ್ದರು.

ಜನಗಣತಿಗೆ ಸಿದ್ಧತೆ

‘ಜನಗಣತಿಗೆ ಸರ್ಕಾರದಿಂದ ಸೂಚನೆ ಬಂದಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗಣತಿದಾರರ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಪ್ರಾಥಮಿಕ ಮಾಹಿತಿಯ ಆಧಾರದ ಮೇರೆಗೆ ಏ.16ರಿಂದ ಮೇ 15ರವರೆಗೆ ಗಣತಿ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.

‘ಏ.1ರಿಂದ ಏ.15ರವರೆಗೆ ಸ್ವಯಂ ದೃಢೀಕರಣಕ್ಕೆ ಅವಕಾಶವಿದೆ. 30 ಪ್ರಶ್ನಾವಳಿ ಇರಲಿದ್ದು, ಪ್ರತಿ ಪ್ರಶ್ನೆಗೂ ಉತ್ತರ ಪಡೆಯಲಾಗುತ್ತದೆ. ಇದೇ ಮೊದಲ ಬಾರಿಗೆ ಗಣತಿ ಡಿಜಿಟಲ್‌ ರೂಪದಲ್ಲಿ ನಡೆಯಲಿದೆ’ ಎಂದರು.

‘ಫ್ಲೆಕ್ಸ್‌ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ’

ದುರ್ಗಾಂಬಿಕಾ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ವಿವಿಧೆಡೆ ಫ್ಲೆಕ್ಸ್‌ ಹಾವಳಿ ಶುರುವಾಗಿದೆ. ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯದೇ ಫ್ಲೆಕ್ಸ್‌ ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಎಲ್ಲೆಂದರಲ್ಲಿ ಫ್ಲೆಕ್ಸ್‌ ಅಳವಡಿಸುವುದರಿಂದ ನಗರದ ಸಂಧರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಅಲ್ಲದೇ ಕಾನೂನು ಮತ್ತು ಸುವ್ಯವಸ್ಥೆಗೂ ತೊಡಕಾಗುವ ಸಾಧ್ಯತೆ ಇದೆ. ಮಹಾನಗರ ಪಾಲಿಕೆ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಅನುಮತಿ ಪಡೆದು ಫ್ಲೆಕ್ಸ್‌ ಹಾಕಬಹುದು. ಇಲ್ಲವಾದರೆ, ಸಂಬಂಧಿಸಿದ ವ್ಯಕ್ತಿ, ಮುದ್ರಣ ಮಾಡಿದವರ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದರು.

ಭದ್ರಾ ನಾಲೆ ಸುತ್ತ ನಿಷೇಧಾಜ್ಞೆ

‘ಭದ್ರಾ ನಾಲೆಯಿಂದ ಅನಧಿಕೃತವಾಗಿ ನೀರು ಎತ್ತುವುದನ್ನು ತಡೆಯಲು ಫೆಬ್ರುವರಿ ಅಂತ್ಯದವರೆಗೆ ನಾಲೆಯ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

‘ನಾಲೆಗೆ ಹಾಕಿರುವ ಅನಧಿಕೃತ ಪಂಪ್‌ಸೆಟ್‌ಗಳನ್ನು ರೈತರು ತೆರವುಗೊಳಿಸಬೇಕು. ಸ್ವಯಂ ಪ್ರೇರಿತವಾಗಿ ತೆರವುಗೊಳಿಸದೇ ಇದ್ದರೆ ಜಪ್ತಿ ಮಾಡಲಾಗುತ್ತದೆ. ನೀರಾವರಿ ಇಲಾಖೆಯ ಸಿಬ್ಬಂದಿ ರಾತ್ರಿ ವೇಳೆ ಗಸ್ತು ತಿರುಗಲಿದ್ದಾರೆ. ಇದಕ್ಕೂ ರೈತರು ಮಣಿಯದೇ ಇದ್ದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕನ್ನಡ ನಮ್ಮ ಅಸ್ಮಿತೆ, ಸಂಸ್ಕೃತಿ. ಕನ್ನಡವನ್ನು ಆಡಳಿತ ಭಾಷೆಯಾಗಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ‘ಕನ್ನಡ ಭವನ’ ನಿರ್ಮಾಣಕ್ಕೆ ನಿವೇಶನ ಒದಗಿಸಲಾಗುತ್ತಿದೆ.
ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ಸಾಮಾಜಿಕ ಜಾಲತಾಣ ಸಂಪೂರ್ಣ ನಂಬಬೇಡಿ. ಇಲ್ಲಿ ಸಂದೇಶ ಹಂಚಿಕೊಳ್ಳುವ ಮುನ್ನ ಆಲೋಚಿಸಿ. ತಪ್ಪು ಮಾಹಿತಿ ರವಾನಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕ್ರಮ ನಿಶ್ಚಿತ.
ಡಾ.ಎಚ್‌.ಟಿ.ಶೇಖರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.