
ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಿಯ ಜಾತ್ರೆಯು ಫೆಬ್ರುಬರಿ 22ರಿಂದ 25ರ ವರೆಗೆ ನಡೆಯಲಿದೆ.
ನಗರದ ದುರ್ಗಾಂಬಿಕಾ ದೇವಸ್ಥಾನದ ಬಳಿ ಇರುವ ದಾಸೋಹ ಮಂದಿರದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ವೈಭವಯುತವಾಗಿ ಜಾತ್ರೆ ನಡೆಸಲು ನಿರ್ಣಯ ಕೈಗೊಳ್ಳಲಾಯಿತು. ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆಯೂ ಚರ್ಚಿಸಲಾಯಿತು.
ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ನ ಕಾರ್ಯಾಧ್ಯಕ್ಷರೂ ಆದ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಧರ್ಮದರ್ಶಿಗಳು, ಗೌಡರು, ಶಾನಬೋಗರು, ರೈತರು, ಬಣಕಾರರು, ಕುಂಬಾರರು, ತಳವಾರರು, ಬಡಿಗಾರರು, ಮಡಿವಾಳರು, ಬಾಬುದಾರರು, ಕಾರ್ಯಕರ್ತರು ಹಾಗೂ ಭಕ್ತರು ಭಾಗವಹಿಸಿದ್ದರು.
ಜಾತ್ರೆಯ ಅಂಗವಾಗಿ ಜನವರಿ 20ರಂದು ಬೆಳಿಗ್ಗೆ 10.30ರಿಂದ 11.30ರ ವರೆಗೆ ದೇವಸ್ಥಾನದ ಮುಂಭಾಗ ಹಂದರಗಂಬ ಪೂಜೆ ನಡೆಯಲಿದೆ. ಆ ಮೂಲಕ ಜಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ.
ಫೆಬ್ರುವರಿ 22ರಂದು (ಭಾನುವಾರ) ಬೆಳಿಗ್ಗೆ 6 ಗಂಟೆಗೆ ದುರ್ಗಾಂಬಿಕಾ ದೇವಿಗೆ ಪಂಚಾಮೃತ ಅಭಿಷೇಕ, ಪುಣ್ಯಾಹ ಹಾಗೂ ಇನ್ನಿತರ ಪೂಜಾ ಕೈಕರ್ಯ ನಡೆಯಲಿವೆ. ಅಂದು ಸಂಜೆ ನಗರದಲ್ಲಿ ಸಾರು ಹಾಕಲಾಗುತ್ತದೆ. ಫೆ.23 ಹಾಗೂ 24 ರಂದು ದೇವಿಗೆ ವಿಶೇಷ ಪೂಜೆ, ಉಡಿ ತುಂಬುವ ಕಾರ್ಯ ನಡೆಯಲಿವೆ.
24ರಂದು (ಮಂಗಳವಾರ) ರಾತ್ರಿ 11ರಿಂದ ದುರ್ಗಾಂಬಿಕಾ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಫೆ. 25ರಂದು ಬೆಳಿಗ್ಗೆ ಚರಗ ಚೆಲ್ಲುವ ಕಾರ್ಯಕ್ರಮ ಹಾಗೂ ಇನ್ನಿತರ ಪೂಜಾ ವಿಧಿವಿಧಾನಗಳು ನಡೆದ ಬಳಿಕ ಬಾಗಿಲು ತೆಗೆಯಲಾಗುತ್ತದೆ.
ಅಂದು ಬೆಳಿಗ್ಗೆ 10 ರಿಂದ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ದೇವಸ್ಥಾನದ ಬಳಿ 24, 25ರಂದು ದೀಡ್ ನಮಸ್ಕಾರ, ಉರುಳು ಸೇವೆ ಹೆಚ್ಚಾಗಿ ನಡೆಯಲಿದೆ.
ಯಾವುದೇ ಕುಂದುಕೊರತೆ ಉಂಟಾಗದಂತೆ ವ್ಯವಸ್ಥಿತವಾಗಿ ಜಾತ್ರೆ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಾಂಸ್ಕೃತಿಕ ಸಮಿತಿ, ಕುಸ್ತಿ ಸಮಿತಿ, ದಾಸೋಹ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸುವ ನಿರ್ಣಯ ಕೈಗೊಳ್ಳಲಾಯಿತು.
ಮಾಜಿ ಮೇಯರ್‌ಗಳಾದ ಎಚ್.ಬಿ.ಗೋಣೆಪ್ಪ, ವಿನಾಯಕ ಪೈಲ್ವಾನ್, ಖಜಾಂಚಿ ಅಥಣಿ ವೀರಣ್ಣ, ಟ್ರಸ್ಟ್‌ನ ಸದಸ್ಯ ಗುರುರಾಜ್ ಸೊಪ್ಪಿನ್, ಗೌಡ್ರು ಸುರೇಶ್, ರಾಜನಹಳ್ಳಿ ಶಿವಕುಮಾರ್, ಎಲ್.ಡಿ.ಗೋಣೆಪ್ಪ, ಕರಿಗಾರ ಬಸಪ್ಪ, ಮಾಲತೇಶರಾವ ಜಾಧವ್, ನಾಗರಾಜ ಜೋಯಿಸ್, ಶಂಕರರಾವ್ ಶಿಂಧೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ಇನ್ನಿತರರಿದ್ದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ನಿರ್ಧರಿಸುತ್ತೇವೆಎಸ್.ಎಸ್.ಮಲ್ಲಿಕಾರ್ಜುನ್ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.