ದಾವಣಗೆರೆ: ಇಲ್ಲಿನ ಮಟ್ಟಿಕಲ್‌ನ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯನ್ನು ಸೋಮವಾರ ಯಾವುದೇ ಕಲಾತಂಡಗಳಿಲ್ಲದೇ, ಡಿ.ಜೆ ಅಬ್ಬರವಿಲ್ಲದೇ ನಡೆಸಲಾಯಿತು. ಆ ಮೂಲಕ ಆಯೋಜಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಸ್ವಾತಂತ್ರ್ಯ ವೀರ ಸಾವರ್ಕರ್ ಯುವಕರ ಬಳಗ’ದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಫ್ಲೆಕ್ಸ್ ತೆರವು, ಮಾರ್ಗ ಬದಲಾವಣೆಗೆ ಸೂಚನೆ, ಡಿ.ಜೆ ಬಳಕೆಗೆ ನಿಷೇಧ ಸೇರಿದಂತೆ ಶೋಭಾಯಾತ್ರೆಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಲವು ನಿರ್ಬಂಧಗಳನ್ನು ಹೇರುತ್ತಿದೆ ಎಂದು ದೂರಿದ ಹಿಂದೂ ಮುಖಂಡರು ಹಾಗೂ ಯುವಕರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನವಾಗಿಯೇ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಯಲ್ಲಿ ಪಾಲ್ಗೊಂಡರು.
ಮಟ್ಟಿಕಲ್‌ನಿಂದ ಪ್ರಾರಂಭವಾದ ಮೆರವಣಿಗೆಯು ಬಂಬೂಬಜಾರ್ ರಸ್ತೆ, ಗಣೇಶ ಹೋಟೆಲ್, ಪಿ.ಬಿ. ರಸ್ತೆ ಮೂಲಕ ಸಾಗಿ ಉಪವಿಭಾಗಾಧಿಕಾರಿ ಕಚೇರಿ ಬಳಿ ಕೊನೆಗೊಂಡಿತು. ನಂತರ ಹರಿಹರದ ಬಳಿಯ ತುಂಗಭದ್ರಾ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
‘ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಾ, ಹಿಂದೂ ಧರ್ಮದ ಆಚರಣೆಗಳಿಗೆ ಅವಕಾಶ ನೀಡುತ್ತಿಲ್ಲ. ಗಣೇಶ ವಿಸರ್ಜನಾ ಮೆರವಣಿಗೆಯ ಮಾರ್ಗಕ್ಕೂ ನಿರ್ಬಂಧವನ್ನು ಹೇರುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆರೋಪಿಸಿದರು.
‘ವೋಟಿಗೋಸ್ಕರ ಒಂದು ಸಮುದಾಯವನ್ನು ಕಾಂಗ್ರೆಸ್ ನಾಯಕರು ಓಲೈಕೆ ಮಾಡುತ್ತಿರುವುದನ್ನು ಖಂಡಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ, ಮೌನವಾಗಿಯೇ ಗಣೇಶ ವಿಸರ್ಜನಾ ಮೆರವಣಿಗೆ ನಡೆಸುತ್ತಿದ್ದೇವೆ’ ಎಂದರು.
ಧೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆಯ ಮಾಜಿ ಸದಸ್ಯ ಎಸ್.ಟಿ.ವೀರೇಶ್ ಸೇರಿದಂತೆ ನೂರಾರು ಯುವಕರು ಪಾಲ್ಗೊಂಡಿದ್ದರು. ಮಟ್ಟಿಕಲ್ ಭಾಗದಲ್ಲಿ ಕೆಲವು ದಿನಗಳ ಹಿಂದೆ ಛತ್ರಪತಿ ಶಿವಾಜಿ ಮಹಾರಾಜರ ಬ್ಯಾನರ್ ವಿಚಾರಕ್ಕೆ ವಾಗ್ವಾದ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.