ADVERTISEMENT

ದಾವಣಗೆರೆ | '₹310 ಕೋಟಿ ವೆಚ್ಚದಲ್ಲಿ ಮೆಗಾಡೈರಿ'

ಶಿಮೂಲ್ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 6:32 IST
Last Updated 21 ಅಕ್ಟೋಬರ್ 2025, 6:32 IST
ಶಿಮೂಲ್ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಮಾತನಾಡಿದರು. ಇರ್ಫಾನ್ ಉಪಸ್ಥಿತರಿದ್ದರು
ಶಿಮೂಲ್ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಮಾತನಾಡಿದರು. ಇರ್ಫಾನ್ ಉಪಸ್ಥಿತರಿದ್ದರು   

ಚಳ್ಳಕೆರೆ: ‘ದಾವಣಗೆರೆಯಲ್ಲಿ ಪ್ರತ್ಯೇಕವಾಗಿ 14 ಎಕರೆ ಪ್ರದೇಶದಲ್ಲಿ ₹310 ಕೋಟಿ ವೆಚ್ಚದ ಮೆಗಾಡೈರಿ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಶಿಮೂಲ್ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ತಿಳಿಸಿದರು.  

ನಗರದ ಶಿಮೂಲ್ ಒಕ್ಕೂಟದ ಉಪ ಕಚೇರಿ ಕುರಿಯಾನ್ ಸಂಭಾಗಣದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

‘ಸರ್ಕಾರದ ಅನುದಾನ ವಿಳಂಬವಾಗಿರುವ ಕಾರಣ ಮೆಗಾಡೈರಿ ಸ್ಥಾಪನೆಗೆ ಹಾಲು ಒಕ್ಕೂಟದಿಂದ ಸಾಲ ಪಡೆಯಲಾಗಿದೆ. ಶಿಮೂಲ್‍ಗೆ ಪ್ರತಿ ದಿನ ಬರುವ 8.5 ಲಕ್ಷ ಲೀಟರ್ ಹಾಲಿನಲ್ಲಿ 4 ಲಕ್ಷ ಹಾಲು ಮಾರಾಟವಾಗುತ್ತಿದೆ. ಇನ್ನುಳಿದ ಹಾಲಿನಲ್ಲಿ ತುಪ್ಪ, ಬೆಣ್ಣೆ, ಸಿಹಿ ತಿನಿಸುಗಳು ಮತ್ತು ವಿದ್ಯಾರ್ಥಿಗಳಿಗೆ ಕ್ಷೀರಾ ಭಾಗ್ಯ ಹಾಲು ನೀಡಲಾಗುತ್ತಿದೆ’ ಎಂದರು.  

ADVERTISEMENT

‘ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ರೈತರ ಆರ್ಥಿಕ ಸಂಕಷ್ಟ ಸುಧಾರಣೆಗೆ ಹಾಲು ಉತ್ಪಾದಕರ ಸಂಘಗಳಿಗೆ ಹೆಚ್ಚು ಉತ್ತೇಜನ ನೀಡಲಾಗಿದೆ. ಸಹಕಾರ ಸಂಘಗಳ ಸಂಖ್ಯೆ 326ರಿಂದ 380ಕ್ಕೆ ಏರಿಕೆಯಾಗಿದೆ. ದೊಡ್ಡಉಳ್ಳಾರ್ತಿ, ಸಿದ್ದಾಪುರ ಗ್ರಾಮದಲ್ಲಿ ಬಿಸಿಎಂ ಘಟಕ ತೆರೆಯಲಾಗಿದೆ’ ಎಂದು ತಿಳಿಸಿದರು. 

‘ಗುಣಮಟ್ಟದ ನಂದಿನಿ ಸಿಹಿ ಉತ್ಪನ್ನಗಳನ್ನು ಗ್ರಾಹಕರು ಬಳಸುವ ಮೂಲಕ ರೈತರಿಗೆ ಉತ್ತೇಜನ ನೀಡಬೇಕಾಗಿದೆ. ಸಿಹಿ ಉತ್ಪನ್ನಗಳ ಪ್ರಚಾರದ ಸಲುವಾಗಿ ಚಿತ್ರದುರ್ಗ 10, ಚಳ್ಳಕೆರೆ 2, ನಾಯಕನಹಟ್ಟಿ 1 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 13 ನಂದಿನಿ ಪಾರ್ಲರ್ ತೆರೆಯಲು ಸಿದ್ಧತೆ ನಡೆಸಲಾಗಿದೆ. ಚಳ್ಳಕೆರೆ ನಗರ ಪ್ರದೇಶದಲ್ಲಿ ನಂದಿನಿ ಬ್ರೆಡ್ ಮತ್ತು ಶುದ್ಧ ಕುಡಿಯುವ ನೀರಿನ ಕಾರ್ಖಾನೆ ಆರಂಭಿಸಲಾಗುವುದು’ ಎಂದು
ಹೇಳಿದರು. 

ಶಿಮೂಲ್ ಮಾರಾಟ ವಿಭಾಗದ ಅಧಿಕಾರಿ ಇರ್ಫಾನ್, ‘ಶಿಮೂಲ್‍ನಿಂದ ನಂದಿನಿಯ 172 ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಪ್ರತಿ ಮನೆಗೂ ತಲುಪಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ’ ಎಂದು ಹೇಳಿದರು.

ಕಚೇರಿ ಸಿಬ್ಬಂದಿ ಸುರೇಶ್‍ಬಾಬು, ಅಭಿಷೇಕ್, ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.