ADVERTISEMENT

ದಾವಣಗೆರೆ: ‘ಸಂಘಟನೆ’ಗಾಗಿ ಮಾದರಿ ಗಣೇಶೋತ್ಸವ

‘ಮೂಗ ಮತ್ತು ಕಿವುಡ ಸ್ನೇಹಿತರ’ ಸಂಘದಿಂದ 11ನೇ ವರ್ಷದ ವಿನಾಯಕ ಪ್ರತಿಷ್ಠಾಪನೆ

ರಾಮಮೂರ್ತಿ ಪಿ.
Published 31 ಆಗಸ್ಟ್ 2025, 6:15 IST
Last Updated 31 ಆಗಸ್ಟ್ 2025, 6:15 IST
ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿನ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ಪೆಂಡಾಲ್‌ ಮುಂಭಾಗ ‘ಮೂಗ ಮತ್ತು ಕಿವುಡ ಸ್ನೇಹಿತರ’ ಸಂಘದ ಸದಸ್ಯರು
ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿನ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ಪೆಂಡಾಲ್‌ ಮುಂಭಾಗ ‘ಮೂಗ ಮತ್ತು ಕಿವುಡ ಸ್ನೇಹಿತರ’ ಸಂಘದ ಸದಸ್ಯರು   

ದಾವಣಗೆರೆ: ಮೂಗ ಮತ್ತು ಕಿವುಡಉತನದ ನ್ಯೂನತೆ ಇರುವ ಸ್ನೇಹಿತರೇ ಸೇರಿಕೊಂಡು ನಗರದಲ್ಲಿ 11 ವರ್ಷಗಳಿಂದ ಜಾತಿ, ಧರ್ಮಗಳ ಭೇದವಿಲ್ಲದೇ ನಗರದ ಪಿ.ಬಿ. ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ  ಗಣೇಶೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.

‘ಮೂಗ ಮತ್ತು ಕಿವುಡ ಸ್ನೇಹಿತರ’ ಸಂಘದಲ್ಲಿ ನೂರಕ್ಕೂ ಹೆಚ್ಚಿನ ಸದಸ್ಯರಿದ್ದಾರೆ. ವರ್ಷಕ್ಕೊಮ್ಮೆ ಈ ಎಲ್ಲಾ ಸದಸ್ಯರು ಕುಟುಂಬದವರೊಂದಿಗೆ ಸೇರಿಕೊಂಡು ಗಣೇಶೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಉತ್ಸವದ 5ನೇ ದಿನದ ಸಂಭ್ರಮದ ಭಾಗವಾಗಿ ಶನಿವಾರ ಸಂಘದಿಂದ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪಿ.ಬಿ. ರಸ್ತೆಯಲ್ಲಿ ಸಾಗುತ್ತಿದ್ದ ಸಾರ್ವಜನಿಕರನ್ನು ಸನ್ನೆ ಮೂಲಕವೇ ಕೈಬೀಸಿ ಕರೆದ ಸದಸ್ಯರು, ಗಣೇಶನ ಪ್ರಸಾದ ಹಾಗೂ ಕೇಸರಿಬಾತ್‌ ಹಾಗೂ ಪಲಾವ್ ಉಣಬಡಿಸಿದ್ದು ವಿಶೇಷವಾಗಿತ್ತು.

ADVERTISEMENT

‘ಗಣೇಶ ಪ್ರತಿಷ್ಠಾಪಿಸುವವರಲ್ಲಿ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ, ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದ ಸ್ನೇಹಿತರು ಪೂಜೆ, ಅನ್ನ ಸಂತರ್ಪಣೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದಾರೆ. ನಮ್ಮಂಥ ನ್ಯೂನತೆಯಿರುವ ಸ್ನೇಹಿತರು ಸೇರಿಕೊಂಡು ಪ್ರತ್ಯೇಕವಾಗಿ ಗಣೇಶ ಮೂರ್ತಿ ಕೂರಿಸುತ್ತಿರುವುದನ್ನು ಇಲ್ಲಿ ಮಾತ್ರ ಕಾಣಬಹುದು. ರಾಜ್ಯದ ಬೇರೆಲ್ಲೂ ಈ ರೀತಿ ಕಾಣಸಿಗುವುದಿಲ್ಲ’ ಎಂದು ಸಂಘದ ಸದಸ್ಯರು ಹೇಳಿದರು.

ಟೈಲ್ಸ್‌ ಅಂಗಡಿ, ಮಾಲ್‌, ಹೋಟೆಲ್‌ ಸೇರಿದಂತೆ ವಿವಿಧೆಡೆ ಕೆಲಸ ಮಾಡುತ್ತಿರುವ ಈ ಸ್ನೇಹಿತರು ಸಂಘಟಿತರಾಗಬೇಕು ಎನ್ನುವ ಉದ್ದೇಶದಿಂದ 11 ವರ್ಷಗಳ ಹಿಂದೆ ಚಿಕ್ಕದಾಗಿ ಗಣೇಶೋತ್ಸವ ಆಚರಣೆ ಪ್ರಾರಂಭಿಸಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಬಂದಿರುವ ಕೆಲವು ಸದಸ್ಯರ ಪೈಕಿ ಹಲವರು ಗಣೇಶ ಮೂರ್ತಿ ಪ್ರತಿಷ್ಠಾಪನೆ ದಿನದಿಂದ ವಿಸರ್ಜನೆಯ ದಿನದ ವರೆಗೂ ಬೀರಲಿಂಗೇಶ್ವರ ದೇವಸ್ಥಾನದಲ್ಲೇ ಉಳಿದುಕೊಳ್ಳುತ್ತಾರೆ.

ಕಿವುಡ ಮತ್ತು ಮೂಗರಾದ ಕಾರಣ ಸಂವಹನ ಸಾಧ್ಯವಾಗದೇ ಯಾರ ಬಳಿಯೂ ಹೆಚ್ಚಿನ ದೇಣಿಗೆ ಸಂಗ್ರಹಿಸಲಾಗುತ್ತಿಲ್ಲ. ಹೀಗಾಗಿ ಸ್ನೇಹಿತರೇ ವೈಯಕ್ತಿಕವಾಗಿ ದೇಣಿಗೆ ನೀಡುವ ಮೂಲಕ ಹಬ್ಬ ಆಚರಿಸುತ್ತಿದ್ದಾರೆ. ಕಳೆದ ವರ್ಷ ₹ 60,000 ಖರ್ಚಾಗಿತ್ತು. ಈ ಬಾರಿ ₹ 80,000ದಿಂದ ₹ 1 ಲಕ್ಷ ಖರ್ಚಾಗಲಿದೆ. ಆಗಸ್ಟ್ 31ರಂದು ವಿನಾಯಕ ಮೂರ್ತಿಯ ವಿಸರ್ಜನೆ ಕಾರ್ಯ ಪಟಾಕಿ, ಧ್ವನಿವರ್ಧಕಗಳ ಸದ್ದಿಲ್ಲದೇ ಸರಳವಾಗಿ ನಡೆಯಲಿದೆ ಎಂದು ಸದಸ್ಯರು ತಿಳಿಸಿದ್ದಾರೆ.

‘ಮೂಗ ಮತ್ತು ಕಿವುಡ ಸ್ನೇಹಿತರ’ ಸಂಘದ ಸದಸ್ಯರು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ 
ಸಮಾಜವು ನಮ್ಮನ್ನು ಬೇರೆ ರೀತಿಯೇ ನೋಡುತ್ತಿದ್ದು ನಾವೆಲ್ಲ ಒಂದುಗೂಡಬೇಕು. ಎಲ್ಲರಂತೆ ನಾವೂ ಕುಟುಂಬದವರೊಂದಿಗೆ ಹಬ್ಬವನ್ನು ಸಂಭ್ರಮಿಸಬೇಕು ಎಂಬ ಉದ್ದೇಶದಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ
ಎ.ನಾಗರಾಜ್ ‘ಮೂಗ ಮತ್ತು ಕಿವುಡ ಸ್ನೇಹಿತರ’ ಸಂಘದ ಅಧ್ಯಕ್ಷ
ಅಂಗವಿಕಲೆಯ ನೆರವು
‘ಮೂಗ ಮತ್ತು ಕಿವುಡ ಸ್ನೇಹಿತರ’ ಸಂಘದ ಸದಸ್ಯರಿಗೆ ಗಣೇಶೋತ್ಸವ ವೇಳೆ ಸಾರ್ವಜನಿಕರು ವ್ಯಾಪಾರಿಗಳೊಂದಿಗೆ ಸಂವಹನ ಸಾಧಿಸಲು ಸಮಸ್ಯೆಯಾಗುತ್ತದೆ. ಹೀಗಾಗಿ ಅವರ ನೆರವಿಗೆ ಅಂಗವಿಕಲೆಯಾದ ಮೇಘನಾ ಕೆ.ಜಿ.ಎಚ್. ಮುಂದಾಗಿದ್ದಾರೆ. 6 ವರ್ಷಗಳಿಂದ ಸಂಘದ ಸದಸ್ಯರೊಂದಿಗೆ ಗುರುತಿಸಿಕೊಂಡಿರುವ ಮೇಘನಾ ಅವರು ಕಿವುಡ ಮತ್ತು ಮೂಗರಿಗೆ ನೆರವಾಗುವ ಉದ್ದೇಶದಿಂದ ‘ಇಂಡಿಯನ್‌ ಸೈನ್‌ ಲಾಂಗ್ವೇಜ್’ ತರಬೇತಿಯನ್ನೂ ಪಡೆದಿದ್ದಾರೆ. ಪಕ್ಕದಲ್ಲೇ ಚಹಾ ಅಂಗಡಿ ಹೊಂದಿರುವ ಮೇಘನಾ ಗಣೇಶ ಮೂರ್ತಿ ಖರೀದಿ ಅನ್ನ ಸಂತರ್ಪಣೆ ಸೇರಿದಂತೆ ಎಲ್ಲಾ ಕಾರ್ಯಗಳಲ್ಲೂ ಸಾರ್ವಜನಿಕರು ವ್ಯಾಪಾರಿಗಳೊಂದಿಗೆ ಸಂವಹನ ಸಾಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.