ADVERTISEMENT

ದಾವಣಗೆರೆ: ವಿವಿಧೆಡೆ ನಾಗರಪಂಚಮಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 12:59 IST
Last Updated 5 ಆಗಸ್ಟ್ 2019, 12:59 IST
ದಾವಣಗೆರೆಯ ಲೆನಿನ್ ನಗರದ ಚೌಡೇಶ್ವರಿ ದೇವಸ್ಥಾನದಲ್ಲಿ (ಐಟಿಐ ಕಾಲೇಜಿನ ಆವರಣ) ನಾಗರಕಲ್ಲಿನ ಮೂರ್ತಿಗೆ ಹಾಲೆರೆಯುವ ಮೂಲಕ ನಾಗರಪಂಚಮಿ ಹಬ್ಬವನ್ನು ಆಚರಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಲೆನಿನ್ ನಗರದ ಚೌಡೇಶ್ವರಿ ದೇವಸ್ಥಾನದಲ್ಲಿ (ಐಟಿಐ ಕಾಲೇಜಿನ ಆವರಣ) ನಾಗರಕಲ್ಲಿನ ಮೂರ್ತಿಗೆ ಹಾಲೆರೆಯುವ ಮೂಲಕ ನಾಗರಪಂಚಮಿ ಹಬ್ಬವನ್ನು ಆಚರಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಜಿಲ್ಲೆಯ ವಿವಿಧೆಡೆ ನಾಗರಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಭಾನುವಾರದಿಂದಲೇ ಆರಂಭವಾದ ಈ ಹಬ್ಬ ಸೋಮವಾರವೂ ಮುಂದುವರೆಯಿತು.

ಮಳೆಯ ನಡುವೆಯೂ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಕಲ್ಲುನಾಗರಕ್ಕೆ ಹಾಲೆರೆದರು. ಶ್ರಾವಣ ಸಂಭ್ರಮ ವಾರಗಟ್ಟಲೆ ನಡೆಯುವುದಾದರೂ ಮೊದಲ ಮೂರು ದಿನ ನಾಗರ ಪಂಚಮಿ ನಡೆಯುತ್ತದೆ. ಮಳೆಯ ಕೊರತೆ, ಬೆಳೆಯ ವೈಫಲ್ಯ ಹಾಗೂ ಬೆಲೆ ಏರಿಕೆ ನಡುವೆಯೂ ಜನರು ಹಬ್ಬವನ್ನು ಆಚರಿಸಿದರು. ಹೂವು, ಹಣ್ಣುಗಳ ಬೆಲೆ ಹೆಚ್ಚಿತ್ತು. ಆದರೂ ಉತ್ಸಾಹ ಕುಂದಿರಲಿಲ್ಲ.

ನಾಗರ ಪಂಚಮಿ ಅಂಗವಾಗಿ ಬಗೆಬಗೆಯ ಲಾಡುಗಳನ್ನು ಹಬ್ಬಕ್ಕಾಗಿ ತಯಾರಿಸಿದ್ದರು. ಭಾನುವಾರ ಎಳ್ಳು ಹಚ್ಚಿ ತಯಾರಿಸಿದ ರೊಟ್ಟಿ ಚಪಾತಿ, ಕಡ್ಲೇಕಾಳು ಹುಸುಳಿ, ತಂಬಿಟ್ಟು, ಬದನೇಕಾಯಿ ಎಣ್ಣೆಗಾಯಿ ಪಲ್ಯ ಸೇವಿಸಿದ್ದ ಜನರು ಸೋಮವಾರ ಕಡಲೆ ಹುಂಡೆ, ಎಳ್ಳುಂಡೆ, ಶೇಂಗಾ ಹುಂಡೆಯನ್ನು ನೈವೇದ್ಯ ಮಾಡಿ ನೆರೆಹೊರೆಯವರಿಗೆ ಹಂಚಿಸಿದರು. ಮಂಗಳವಾರ ಹೋಳಿಗೆ ತಯಾರಿಸುವ ಸಂಪ್ರದಾಯವಿದೆ.

ADVERTISEMENT

ಚನ್ನಗಿರಿ ತಾಲ್ಲೂಕಿನಲ್ಲಿ ನಾಗರಪಂಚಮಿ ಹಬ್ಬವನ್ನು ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಸೋಮವಾರ ಸಡಗರದಿಂದ ಆಚರಿಸಲಾಯಿತು.

ಮಹಿಳೆಯರು ಹುತ್ತದ ಮಣ್ಣನ್ನು ತಂದು ನಾಗರ ಹಾವಿನ ಪ್ರತಿರೂಪವನ್ನು ಮಾಡಿ ಹಾಗೂ ಬೆಳ್ಳಿಯ ನಾಗರ ಮೂರ್ತಿಯನ್ನು ತಂದು ಪೂಜಿಸಿದರು. ಜೋಳದ ಅರಳು, ಚಿಗಳಿ, ತಂಬಿಟ್ಟುಗಳನ್ನು ವೀಳ್ಯದೆಲೆಯಲ್ಲಿ ಇಟ್ಟು, ಪೂಜೆ ಸಲ್ಲಿಸಿ, ಹಾಲೆರೆದರು.

ಶ್ರಾವಣ ಮಾಸದ ತಿಂಗಳು ಮುಕ್ತಾಯವಾಗುವವರೆಗೆ ಈ ಭಾಗದಲ್ಲಿ ನಾಗರಪಂಚಮಿ ಆಚರಿಸುವುದು ಹಿಂದಿನಿಂದಲೂ ನಡೆಸಿಕೊಂಡು ಬಂದ ಸಂಪ್ರದಾಯ. ಸೋಮವಾರ ಅಥವಾ ಶುಕ್ರವಾರ ನಾಗಪ್ಪನಿಗೆ ಹಾಲು ಹಾಕುವ ಹಬ್ಬವನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾಡುತ್ತಾರೆ.

ಹಬ್ಬದ ಅಂಗವಾಗಿ ಹಣ್ಣು ಹೂವುಗಳ ಬೆಲೆ ಗಗನಕ್ಕೇರಿದೆ. 1 ಕೆಜಿ ಬಾಳೆಹಣ್ಣಿನ ಬೆಲೆ ₹ 80ಕ್ಕೆ ಏರಿಕೆಯಾಗಿತ್ತು. ಸೇವಂತಿ ಹೂವು ₹120 ಇತ್ತು.

ತಾಲ್ಲೂಕಿನ ಅಜ್ಜಿಹಳ್ಳಿ, ಚಿಕ್ಕೂಲಿಕೆರೆ, ದೋಣಿಹಳ್ಳಿ, ಚನ್ನಗಿರಿ ಪಟ್ಟಣ, ಬೆಂಕಿಕೆರೆ, ಹೊದಿಗೆರೆ, ಪಾಂಡೋಮಟ್ಟಿ, ತಾವರೆಕೆರೆ, ನುಗ್ಗಿಹಳ್ಳಿ, ನೀತಿಗೆರೆ, ನಲ್ಲೂರು, ಹಿರೇಮಳಲಿ, ನಾರಶೆಟ್ಟಿಹಳ್ಳಿ, ಸೋಮಶೆಟ್ಟಿಹಳ್ಳಿ, ಸಿದ್ದಾಪುರ, ಹಿರೇಉಡ, ದೇವರಹಳ್ಳಿ, ಯರಗಟ್ಟಿಹಳ್ಳಿ ಗ್ರಾಮಗಳಲ್ಲಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.