
ದಾವಣಗೆರೆ: ನಗರದ ನಾಗರಿಕರಿಗೆ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ವಾಯುವಿಹಾರಕ್ಕೆ ಅನುಕೂಲ ಕಲ್ಪಿಸಬೇಕಿದ್ದ, ದಾರಿಹೋಕರು ಹಾಗೂ ಕಾರ್ಮಿಕರಿಗೆ ದಣಿವಾರಿಸಿಕೊಳ್ಳಲು ನೆರವಾಗಬೇಕಿದ್ದ, ಮಕ್ಕಳ ಆಟೋಟಗಳಿಗೆ ನೆಲೆಯಾಗಬೇಕಿದ್ದ ಉದ್ಯಾನಗಳು ಸಿಬ್ಬಂದಿ ಕೊರತೆಯಿಂದಾಗಿ ನಿರ್ವಹಣೆ ಇಲ್ಲದೆ ಸೊರಗಿವೆ. ಅದರಲ್ಲೂ ನಗರದ ಹೊರ ವಲಯದ ಉದ್ಯಾನಗಳು ಕಾಯಕಲ್ಪಕ್ಕೆ ಕಾಯುತ್ತಿವೆ.
ನಗರದ ಹೃದಯ ಭಾಗದಲ್ಲಿರುವ ಕೆಲವು ಉದ್ಯಾನಗಳನ್ನು ಹೊರತುಪಡಿಸಿದರೆ, ಬಹುತೇಕ ಕಡೆ ನಿರ್ವಹಣೆ ಎಂಬುದು ಮಹಾನಗರ ಪಾಲಿಕೆಗೆ ಸವಾಲಾಗಿದೆ. ಒಣಗುತ್ತಿರುವ ಗಿಡಗಳು, ಕಾಡಿನ ಸ್ವರೂಪದಲ್ಲಿ ಬೆಳೆದಿರುವ ಕಳೆ, ಅಲ್ಲಲ್ಲಿ ತುಂಬಿರುವ ತ್ಯಾಜ್ಯ, ದುರಸ್ತಿ ಕಾಣದ ಮಕ್ಕಳ ಆಟಿಕೆಗಳು ಉದ್ಯಾನಗಳ ದುಃಸ್ಥಿತಿಗೆ ಕನ್ನಡಿ ಹಿಡಿಯುವಂತಿವೆ.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮೂರು ವಲಯಗಳಿದ್ದು, ಸಣ್ಣಪುಟ್ಟವೂ ಸೇರಿದಂತೆ ಒಟ್ಟು 800 ಉದ್ಯಾನಗಳಿವೆ. ಆದರೆ ಈ ಎಲ್ಲ ಪಾರ್ಕ್‌ಗಳನ್ನು ನಿರ್ವಹಣೆ ಮಾಡಲು ಇರುವ ಸಿಬ್ಬಂದಿ 56 ಮಾತ್ರ. ಇವರಲ್ಲಿ ಕಾಯಂ ಸಿಬ್ಬಂದಿ ಸಂಖ್ಯೆ ಐದು ಮಾತ್ರ.
ನಗರದ ಪ್ರಮುಖ ಎನಿಸುವ 150 ಉದ್ಯಾನಗಳಲ್ಲಿ ನಿತ್ಯವೂ ಸ್ವಚ್ಛತೆ ಕಾಪಾಡಲಾಗುತ್ತಿದೆ. ಕೆಲವು ಉದ್ಯಾನಗಳಲ್ಲಿ ಬೋರ್‌ವೆಲ್ ಸೌಲಭ್ಯ ಇದ್ದು, ಗಿಡಗಳಿಗೆ ನೀರುಣಿಸಲಾಗುತ್ತಿದೆ. ಕೆಲವು ಕಡೆ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ ನೀರು ಪೂರೈಸಲಾಗುತ್ತಿದೆ. ಕ್ಯಾಸಲ್ ಶ್ರೀನಿವಾಸ ಶೆಟ್ಟಿ ಉದ್ಯಾನ, ವಿದ್ಯಾನಗರದ ಪಾರ್ಕ್, ಗಂಗೂಬಾಯಿ ಹಾನಗಲ್ ಉದ್ಯಾನ, ಮಾತೃಛಾಯಾ ಪಾರ್ಕ್, ವಿಶ್ವೇಶ್ವರಯ್ಯ ಸೇರಿದಂತೆ ಕೆಲವು ಪಾರ್ಕ್‌ಗಳನ್ನು ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ. ಆದರೆ, ಮಿಕ್ಕ ಪಾರ್ಕ್‌ಗಳ ನಿರ್ವಹಣೆ ಪಾಲಿಕೆಗೆ ಹೊರೆಯಾಗಿ ಪರಿಣಮಿಸಿದೆ.
ನಗರದ ವ್ಯಾಪ್ತಿ ವಿಸ್ತರಿಸಿದಂತೆಲ್ಲಾ ಹೊಸ ಹೊಸ ಬಡಾವಣೆಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿವೆ. ಈ ಪೈಕಿ ನಗರದ ಹೊರವಲಯದಲ್ಲಿರುವ ಜೆ.ಎಚ್. ಪಟೇಲ್ ಬಡಾವಣೆಯ ಉದ್ಯಾನಗಳ ಕಳಪೆ ನಿರ್ವಹಣೆ ಬಗ್ಗೆ ಅಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಇಲ್ಲಿ ಐದಾರು ಉದ್ಯಾನಗಳಿದ್ದು, ಇವುಗಳನ್ನು ನೋಡಿಕೊಳ್ಳಲು ಸಿಬ್ಬಂದಿ ಇಲ್ಲ. ಒಂದು ಉದ್ಯಾನದಲ್ಲಿ ಸ್ವಚ್ಛ ಕಲಿಕಾ ಕೇಂದ್ರ ನಿರ್ಮಿಸಲಾಗಿದೆ. ಖಾಸಗಿ ಏಜೆನ್ಸಿಯ ಇಬ್ಬರು ಸಿಬ್ಬಂದಿ ಈ ಕೇಂದ್ರವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಬಡಾವಣೆಯ ಉಳಿದ ಉದ್ಯಾನಗಳಲ್ಲಿ ಸ್ವಚ್ಛತೆ ಕಾಣುವುದಿಲ್ಲ.
‘ಉದ್ಯಾನದ ಗೇಟ್‌ಗಳು ಸದಾ ತೆರೆದಿರುತ್ತವೆ. ನಡಿಗೆ ಪಥ ನಿರ್ಮಿಸಿದ್ದರೂ ಅದರ ಮೇಲೆಲ್ಲಾ ಕಸ ತುಂಬಿದೆ. ಓಡಾಡಲು ಸಾಧ್ಯವಿಲ್ಲದಂತೆ ಗಿಡಗಂಟಿಗಳು ಬೆಳೆದಿವೆ. 5ನೇ ಪಾರ್ಕ್‌ನಲ್ಲಿ ಅಡುಗೆ ಮಾಡಿರುವ ಕುರುಹು ಇದೆ. ಮದ್ಯಪಾನ ಮಾಡಿ ಎಸೆದಿರುವ ಬಾಟಲ್‌ಗಳು ಕಾಣಿಸುತ್ತವೆ. ನಾಲ್ಕನೇ ಪಾರ್ಕ್‌ನಲ್ಲಿ ಅಳವಡಿಸಿದ್ದ ಸೌರ ವಿದ್ಯುತ್ ದೀಪಗಳೇ ಕಾಣೆಯಾಗಿದ್ದು, ಕಂಬಗಳು ಮಾತ್ರ ಉಳಿದಿವೆ’ ಎಂದು ಸ್ಥಳೀಯರಾದ ಸಂದೇಶ ಎಸ್. ಬೇಸರ ವ್ಯಕ್ತಪಡಿಸಿದರು.
‘ನಗರದ ಹೊರವಲಯದ ಪಾರ್ಕ್ ನಿರ್ವಹಣೆಗೆ ಸಿಬ್ಬಂದಿಯನ್ನು ಮೊದಲು ನಿಯೋಜಿಸಬೇಕು. ಗುತ್ತಿಗೆ ಆಧಾರದಲ್ಲಾದರೂ ಕೆಲಸಗಾರರನ್ನು ನಿಯೋಜಿಸದಿದ್ದರೆ ಮರಗಿಡಗಳು ಬೇಸಿಗೆಯಲ್ಲಿ ಒಣಗಿ, ಇಡೀ ಉದ್ಯಾನ ಬರಡಾಗುವ ಸಾಧ್ಯತೆಯಿದೆ. ಬಜೆಟ್‌ನಲ್ಲಿ ಉದ್ಯಾನಗಳಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ಸಿಎಸ್‌ಆರ್ ನಿಧಿ ಬಳಸಿಕೊಂಡು ಉದ್ಯಾನಗಳು ಕಂಗೊಳಿಸುವಂತೆ ಮಾಡಬೇಕು’ ಎಂದು ಸ್ಥಳೀಯರೊಬ್ಬರು ಆಗ್ರಹಿಸಿದರು.ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಧೂಡಾ) ಹೊಸ ಬಡಾವಣೆಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಉದ್ಯಾನಗಳ ನಿರ್ವಹಣೆಯನ್ನು ಪಾಲಿಕೆಗೆ ವಹಿಸಲಾಗಿದೆ ಹುಲ್ಮನಿ ತಿಮ್ಮಣ್ಣ ‘ಧೂಡಾ’ ಆಯುಕ್ತ
ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವ: ಆಯುಕ್ತೆ ರೇಣುಕಾ
ನಗರದ ಎಲ್ಲ ಉದ್ಯಾನಗಳನ್ನು ನೋಡಿಕೊಳ್ಳುವಷ್ಟು ಸಿಬ್ಬಂದಿ ಪಾಲಿಕೆಯಲ್ಲಿ ಇಲ್ಲ ಎಂದು ಆಯುಕ್ತೆ ರೇಣುಕಾ ಹೇಳಿದರು. ‘ಉದ್ಯಾನ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದ್ದು ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಸಾಧ್ಯವಾದಷ್ಟು ಕಡೆಗಳಲ್ಲಿ ಸ್ವಚ್ಛತೆ ಕಾಪಾಡಲಾಗುತ್ತಿದೆ. ನಿತ್ಯವೂ ನಿಗಾ ವಹಿಸಲು ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಆದರೆ ಸಿಬ್ಬಂದಿ ನೇಮಕಕ್ಕೆ ನಮಗೆ ಅಧಿಕಾರ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಕಾಮಗಾರಿಗೆ ₹5 ಕೋಟಿ ಅನುದಾನ
ತೋಟಗಾರಿಕೆ ಇಲಾಖೆ ಸಚಿವರ ನಿಧಿಯಿಂದ ನಗರದ ವಿವಿಧ ಉದ್ಯಾನಗಳಲ್ಲಿ ಸಿವಿಲ್ ಕಾಮಗಾರಿ ಕೈಗೊಳ್ಳಲು ಕಳೆದ ವರ್ಷ ₹5 ಕೋಟಿ ವೆಚ್ಚ ಮಾಡಲಾಗಿದೆ. ಬೇಲಿ ಅಳವಡಿಕೆ ಬೋರ್‌ವೆಲ್ ನಿರ್ವಹಣೆ ಕೆಲಸಗಳನ್ನು ಕೈಗೊಳ್ಳಲಾಗಿತ್ತು. ಆದರೆ ನಗರದ ಎಲ್ಲ ಉದ್ಯಾನಗಳ ನಿರ್ವಹಣೆಗೆ ತಗಲುವ ವೆಚ್ಚವನ್ನು ಭರಿಸಲು ಪ್ರತ್ಯೇಕ ಅನುದಾನವನ್ನು ತೆಗೆದಿರಿಸಿಲ್ಲ. ಬಜೆಟ್‌ನಲ್ಲಿ ನಿಗದಿಪಡಿಸುವ ಅಲ್ಪಸ್ವಲ್ಪ ಅನುದಾನ ಬಳಸಿ ಸದ್ಯಕ್ಕೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ದಾವಣಗೆರೆ ಮಹಾನಗರ ಪಾಲಿಕೆಯು ಗ್ರೇಡ್–4ರಡಿ ಬರುತ್ತಿದ್ದು ಮೇಲ್ದರ್ಜೆಗೆ ಏರಿದರೆ ಅಧಿಕ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲು ಸಾಧ್ಯವಿದೆ. ಆಗ ಅನುದಾನವೂ ಹೆಚ್ಚಲಿದೆ. ಸದ್ಯಕ್ಕೆ ಇರುವ ನಿಗದಿತ ಸಂಖ್ಯೆಯ ಸಿಬ್ಬಂದಿಯಿಂದ ಎಲ್ಲ ಉದ್ಯಾನಗಳನ್ನೂ ನೋಡಿಕೊಳ್ಳುವುದು ಕಷ್ಟ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಉದ್ಯಾನಗಳಲ್ಲಿ ಜನರ ಉತ್ಸಾಹ
ನಗರದ ಪ್ರಮುಖ ಉದ್ಯಾನಗಳಲ್ಲಿ ದಿನ ಬೆಳಗಾದರೆ ಯುವಕ ಯುವತಿಯರು ವಯಸ್ಸಾದವರು ಹಾಗೂ ಮಕ್ಕಳ ಕಲರವ ಕಂಡುಬರುತ್ತದೆ. ಸಂಜೆ ವೇಳೆಯಲ್ಲಿ ಮಹಿಳೆಯರು ಹೆಚ್ಚಾಗಿ ಉದ್ಯಾನಗಳಲ್ಲಿ ವಾಯುವಿಹಾರ ಮಾಡುತ್ತಾರೆ. ರಜಾ ದಿನಗಳಲ್ಲಿ ಮಕ್ಕಳಿಗೆ ಸಮಯ ಕಳೆಯಲು ಪಾರ್ಕ್‌ಗಳು ನೆರವಾಗಿವೆ. ಮಾತೃಛಾಯಾ ಚಿಣ್ಣರ ಉದ್ಯಾನದಲ್ಲಿ ಮಕ್ಕಳ ರೈಲು ಗಮನ ಸೆಳೆಯುತ್ತದೆ. ಕ್ಯಾಸಲ್ ಕಾಸಲ್ ಶ್ರೀನಿವಾಸ ಶೆಟ್ಟಿ ಉದ್ಯಾನದಲ್ಲಿ ಗಿಡಗಳಿಗೆ ಟ್ರೆಂಚ್ ಹೊಡೆದು ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತಿದೆ. ವಿದ್ಯಾನಗರದ ಪಾರ್ಕ್ ಗಂಗೂಬಾಯಿ ಹಾನಗಲ್ ಉದ್ಯಾನ ವಿಶ್ವೇಶ್ವರಯ್ಯ ಉದ್ಯಾನಗಳಲ್ಲಿ ನೀರಿನ ಸೌಲಭ್ಯ ಇರುವುದರಿಂದ ಗಿಡಗಳು ಹಸಿರಾಗಿವೆ. ಇಲ್ಲಿ ಪಾಲಿಕೆಯ ಸಿಬ್ಬಂದಿ ಇರುವುದರಿಂದ ನಿರ್ವಹಣೆಯೂ ಚೆನ್ನಾಗಿದೆ ಎಂದು ವಾಯುವಿಹಾರಿಯೊಬ್ಬರು ತಿಳಿಸಿದರು.
ಸಿಬ್ಬಂದಿ ಕೊರತೆಯ ನಡುವೆಯೂ ಉದ್ಯಾನಗಳಲ್ಲಿ ಸ್ವಚ್ಛತೆಗೆ ಅದ್ಯತೆ ನೀಡಲಾಗಿದೆ. ನಗರದ ಹೊರವಲಯದ ಉದ್ಯಾನಗಳಲ್ಲಿ 2–3 ಬಾರಿ ಜಂಗಲ್ ತೆರವು ಮಾಡಲಾಗಿದೆರೇಣುಕಾ, ಪಾಲಿಕೆ ಆಯುಕ್ತೆ
ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಧೂಡಾ) ಹೊಸ ಬಡಾವಣೆಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಉದ್ಯಾನಗಳ ನಿರ್ವಹಣೆಯನ್ನು ಪಾಲಿಕೆಗೆ ವಹಿಸಲಾಗಿದೆಹುಲ್ಮನಿ ತಿಮ್ಮಣ್ಣ, ‘ಧೂಡಾ’ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.