ADVERTISEMENT

ದಾವಣಗೆರೆ| ದರ್ಪ ತೋರಿದ ಅಯೂಬ್‌ ಪೈಲ್ವಾನ್‌ ಪುತ್ರರು: 3 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:46 IST
Last Updated 1 ಫೆಬ್ರುವರಿ 2026, 4:46 IST
ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾನ್‌ಸ್ಟೆಬಲ್‌ ಕೆಂಚಪ್ಪ
ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾನ್‌ಸ್ಟೆಬಲ್‌ ಕೆಂಚಪ್ಪ   

ದಾವಣಗೆರೆ: ಒಂದೇ ಸಮುದಾಯದ ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯು ಪೊಲೀಸರ ಮೇಲೆ ಹಲ್ಲೆ ನಡೆಸುವ ಹಂತಕ್ಕೆ ಹೋಗಿದೆ. ಕರ್ತ್ಯವ್ಯಕ್ಕೆ ಅಡ್ಡಿಪಡಿಸಿ, ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶವೂ ವ್ಯಕ್ತವಾಗಿದೆ. 

ಘಟನೆ ಹಿನ್ನೆಲೆ: 

ಜೆಡಿಎಸ್ ಮುಖಂಡ ಜೆ.ಅಮಾನುಲ್ಲಾ ಖಾನ್ ಪುತ್ರ ಹಾಗೂ ಕಾಂಗ್ರೆಸ್ ಮುಖಂಡ ಆಯೂಬ್‌ ಪೈಲ್ವಾನ್‌ ಪುತ್ರನ ಸ್ನೇಹಿತನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಈ ವಿಚಾರವನ್ನು ಸ್ನೇಹಿತ ಆಯೂಬ್ ಪೈಲ್ವಾನ್ ಪುತ್ರರ ಬಳಿ ಪ್ರಸ್ತಾಪಿಸಿದ್ದ ಎನ್ನಲಾಗಿದೆ. ಆ ಬಳಿಕ ಎರಡೂ ಗುಂಪಿನವರು ಬಡಿದಾಡಿಕೊಂಡಿದ್ದು, ಹಲವರು ಗಾಯಗೊಂಡಿದ್ದರು. 

ADVERTISEMENT

ಶನಿವಾರ ಮಧ್ಯಾಹ್ನ ನಡೆದ ಜಗಳದಲ್ಲಿ ಗಾಯಗೊಂಡು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ಜೆ.ಅಮಾನುಲ್ಲಾ ಖಾನ್ ಪುತ್ರನ ಕಡೆಯವರ ಮೇಲೆ ಆಯೂಬ್ ಪೈಲ್ವಾನ್‌ ಅವರ ಪುತ್ರ ಹಲ್ಲೆ ನಡೆಸಿದ್ದ. ಈ ವೇಳೆ ಎರಡೂ ಕಡೆಯವರ ನಡುವೆ ಮತ್ತೊಮ್ಮೆ ಹೊಡೆದಾಟ ನಡೆದಿದೆ. ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಜಗಳ ಬಿಡಿಸಲು ಹರಸಾಹಸಪಟ್ಟಿದ್ದಾರೆ. ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಸ್ಥಳದಲ್ಲಿದ್ದವರನ್ನು ಚದುರಿಸಿದ್ದರು.  

ಘಟನೆಗೆ ಸಂಬಂಧಿಸಿದಂತೆ ಹಲ್ಲೆಯ ಆರೋಪಿಗಳನ್ನು ಬಂಧಿಸಲು ಪೊಲೀಸರು ಆಯೂಬ್ ಪೈಲ್ವಾನ್‌ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಆಯೂಬ್ ಪೈಲ್ವಾನ್ ಪುತ್ರರಾದ ಹಸೇನ್‌, ಹುಸೇನ್‌ ಹಾಗೂ ಸಂಬಂಧಿಕ ಹಮ್ಜಾ ಪೊಲೀಸರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿ ಹಲ್ಲೆ ನಡೆಸಿದ್ದಾರೆ. 

‘ಇನ್‌ಸ್ಪೆಕ್ಟರ್‌ ಗಾಯತ್ರಿ ಅವರ ಮೊಬೈಲ್ ಕಸಿದುಕೊಂಡಿರುವ ಆರೋಪಿಗಳು, ಕಾನ್‌ಸ್ಟೆಬಲ್‌ಗಳಾದ ಕೆಂಚಪ್ಪ ಹಾಗೂ ಹರೀಶ್ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಗಾಯತ್ರಿ ಅವರನ್ನು ನೂಕಿ ಕೆಳಗೆ ಬೀಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಬರುತ್ತಿದ್ದಂತೆ ಸ್ಥಳದಲ್ಲಿದ್ದ ಕೆಲವರು ಅಲ್ಲಿಂದ ಹೋಗುವಂತೆ ಹೇಳಿದರೂ, ಆರೋಪಿಗಳು ವಾಗ್ವಾದ ಮುಂದುವರಿಸಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಪೊಲೀಸರ ಮೇಲೆ ಹಲ್ಲೆ ಮಾಡಿದ ವಿಚಾರ ತಿಳಿಯುತ್ತಿದ್ದಂತೆಯೇ ನಗರ ಡಿವೈಎಸ್‌ಪಿ ಬಿ.ಶರಣಬಸವೇಶ್ವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯ ತಂಡ ಸ್ಥಳಕ್ಕೆ ದೌಡಾಯಿಸಿದೆ. ಗಲಾಟೆಗೆ ಸಂಬಂಧಿಸಿ ಸ್ವಯಂಪ್ರೇರಿತ ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. 

ಆರೋಗ್ಯ ವಿಚಾರಿಸಿದ ಬಿಜೆಪಿ ಮುಖಂಡರು

ಬಿಜೆಪಿ ಶಾಸಕ ಬಿ.ಪಿ.ಹರೀಶ್ ಮುಖಂಡ ಯಶವಂತರಾವ್ ಜಾಧವ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡಿ ಪೊಲೀಸರ ಆರೋಗ್ಯ ವಿಚಾರಿಸಿದರು.  ‘ದಾಳಿಯು ಪೊಲೀಸರ ನೈತಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು  ಈ ವೇಳೆ ಮುಖಂಡರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.