
ದಾವಣಗೆರೆ: ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಕಳವು, ದರೋಡೆ ಸೇರಿದಂತೆ 173 ಪ್ರಕರಣಗಳಲ್ಲಿ ಜಪ್ತಿ ಮಾಡಿದ ಅಂದಾಜು ₹ 20.38 ಕೋಟಿ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ಶುಕ್ರವಾರ ವಾರಸುದಾರರಿಗೆ ಹಸ್ತಾಂತರಿಸಿದರು. ಕಳೆದುಕೊಂಡಿದ್ದ ವಸ್ತುಗಳನ್ನು ಮರಳಿಪಡೆದ ಜನರ ಮುಖಗಳು ಸಂತಸದಿಂದ ಅರಳಿದವು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ‘ಸ್ವತ್ತು ಮರಳಿಸುವ ಪೆರೇಡ್’ ನಡೆಸಿದ ಪೊಲೀಸರು, ವಾರಸುದಾರರಿಗೆ ಹಸ್ತಾಂತರಿಸಿದರು. ನ್ಯಾಮತಿಯ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಚಿನ್ನಾಭರಣ ಕಳೆದುಕೊಂಡಿದ್ದ ಗ್ರಾಹಕರು ಕೂಡ ಸ್ವತ್ತು ಮರಳಿ ಪಡೆದರು.
2025ರಲ್ಲಿ ಡಿಸೆಂಬರ್‌ನಿಂದ ನವೆಂಬರ್‌ವರೆಗೆ ಜಿಲ್ಲೆಯ ಪೊಲೀಸರು 173 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಇದರಲ್ಲಿ ₹ 19.64 ಕೋಟಿ ಮೌಲ್ಯದ 24 ಕೆ.ಜಿ 726 ಗ್ರಾಂ ಚಿನ್ನಾಭರಣ, ₹ 24.35 ಲಕ್ಷ ಮೌಲ್ಯದ 26 ಕೆ.ಜಿ 672 ಗ್ರಾಂ ತೂಕದ ಬೆಳ್ಳಿ ಸಾಮಗ್ರಿ, ₹85.68 ಲಕ್ಷ ನಗದು ಜನರಿಗೆ ಮರಳಿತು. ₹ 46.28 ಲಕ್ಷ ಮೌಲ್ಯದ 90 ವಾಹನಗಳು, ₹ 16 ಲಕ್ಷ ಮೌಲ್ಯದ ಕೃಷಿ ಉಪಕರಣ, 492 ವಿವಿಧ ಮಾದರಿಯ ಮೊಬೈಲ್ ಫೋನ್‌ಗಳು ವಾರಸುದಾರರ ಕೈಸೇರಿದವು.
ಕಳೆದುಕೊಂಡಿದ್ದ ವಸ್ತುಗಳನ್ನು ಮರಳಿ ಪಡೆದ ಅನೇಕರು ಭಾವಪರವಶರಾದರು. ಮಾಂಗಲ್ಯವನ್ನು ಹಿಂಪಡೆದ ಮಹಿಳೆಯರ ಕಣ್ಣಾಲಿಗಳಲ್ಲಿ ನೀರು ಜಿನುಗಿತು. ದುಡಿದು ಸಂಪಾದಿಸಿದ್ದ ಹಣ, ವಾಹನ, ಮೊಬೈಲ್ ಫೋನ್‌ಗಳನ್ನು ಹಿಂಪಡೆದವರು ಸಂಭ್ರಮಿಸಿದರು.
ಪೂರ್ವ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ಮಾತನಾಡಿ, ‘ಕಳವು ಪ್ರಕರಣಗಳನ್ನು ಭೇದಿಸಿದ ಪರಿಣಾಮವಾಗಿ ಶೇ 90ಕ್ಕೂ ಹೆಚ್ಚು ಸ್ವತ್ತು ಪತ್ತೆಯಾಗಿದೆ. ಇದರಿಂದ ಪೊಲೀಸರ ಮೇಲಿನ ವಿಶ್ವಾಸ ಹೆಚ್ಚಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ನ್ಯಾಮತಿಯ ಬ್ಯಾಂಕ್ ದರೋಡೆ ಸೇರಿದಂತೆ ಪ್ರಮುಖ ಪ್ರಕರಣಗಳಲ್ಲಿ ಸ್ವತ್ತು ಜಪ್ತಿ ಮಾಡಲಾಗಿದೆ. ಆರು ಸರಗಳವು, ದರೋಡೆ, ಅತ್ಯಾಚಾರ ಸೇರಿದಂತೆ 53 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ನವೀನ್ ಪೊಲೀಸರಿಗೆ ಬೇಕಾಗಿದ್ದ. ಒಂಟಿ ಮಹಿಳೆಯರು ಹಾಗೂ ಒಂಟಿ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಕಾರ್ಯ ಶ್ಲಾಘನೀಯ. ಇದರಿಂದ ಸಾರ್ವಜನಿಕರಿಗೆ ಧೈರ್ಯ ನೀಡಿದಂತೆ ಆಗಿದೆ’ ಎಂದು ಹೇಳಿದರು.
‘ವಿದ್ಯಾನಗರ, ಕೆಟಿಜೆ ನಗರ, ನ್ಯಾಮತಿ ಸೇರಿದಂತೆ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಮುಖ ಪ್ರಕರಣಗಳನ್ನು ಭೇದಿಸಲಾಗಿದೆ. ಅಪರಾಧ ತಡೆ ಮಾಸಾಚರಣೆಯ ಸಂದರ್ಭದಲ್ಲಿ ವಾರಸುದಾರರಿಗೆ ಸ್ವತ್ತು ಹಿಂದಿರುಗಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸ್ಯಾಮ್ ವರ್ಗಿಸ್, ಡಿವೈಎಸ್ಪಿಗಳಾದ ಬಸವರಾಜ್ ಬಿ.ಎಸ್., ಶರಣಬಸವೇಶ್ವರ ಬಿ., ಪ್ರಕಾಶ್ ಪಿ.ಬಿ. ಹಾಜರಿದ್ದರು.
ಕಳುವಾಗಿದ್ದ 110 ಗ್ರಾಂ ಚಿನ್ನಾಭರಣ ಮರಳಿ ಸಿಗುವುದಿಲ್ಲ ಎಂದೇ ಭಾವಿಸಿದ್ದೆ. ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಚಿನ್ನಾಭರಣ ಹಿಂದಿರುಗಿಸಿದರುಸಾಗರಿಕಾ ಗೃಹಿಣಿ ಹೊನ್ನಾಳಿ
ಕಷ್ಟಪಟ್ಟು ದುಡಿದು ಖರೀದಿಸಿದ್ದ ಚಿನ್ನ ಬೆಳ್ಳಿ ಆಭರಣ ಕಳೆದುಕೊಂಡಾಗ ಸಾಕಷ್ಟು ನೋವು ಅನುಭವಿಸಿದೆವು. ಪೊಲೀಸರು 2 ತಿಂಗಳಲ್ಲಿ ಆರೋಪಿಗಳನ್ನು ಬಂಧಿಸಿ ಸ್ವತ್ತು ಹಿಂದಿರುಗಿಸಿದ್ದಾರೆವನಜಾಕ್ಷಿ ಮಂಜುನಾಥ್ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.