ADVERTISEMENT

ಲಾಕ್‌ಡೌನ್ ನಿರ್ಬಂಧ ಸಡಿಲಿಕೆ: ಸಹಜ ಸ್ಥಿತಿಗೆ ಮರಳಿದ ದಾವಣಗೆರೆ

ಖರೀದಿಗೆ ಮುಗಿಬಿದ್ದ ಜನರು

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:04 IST
Last Updated 24 ಜೂನ್ 2021, 5:04 IST
ಲಾಕ್‌ಡೌನ್‌ ತೆರವುಗೊಂಡ ಬಳಿಕ ದಾವಣಗೆರೆಯ ಅಶೋಕ ರಸ್ತೆಯಲ್ಲಿ ಬುಧವಾರ ಕಂಡು ಬಂದ ವಾಹನ ದಟ್ಟಣೆ       ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಲಾಕ್‌ಡೌನ್‌ ತೆರವುಗೊಂಡ ಬಳಿಕ ದಾವಣಗೆರೆಯ ಅಶೋಕ ರಸ್ತೆಯಲ್ಲಿ ಬುಧವಾರ ಕಂಡು ಬಂದ ವಾಹನ ದಟ್ಟಣೆ       ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಲಾಕ್‌ಡೌನ್ ನಿರ್ಬಂಧ ಸಡಿಲಿಸಿದ್ದರಿಂದ ಬುಧವಾರ ನಗರದ ಜನಜೀವನ ಸಹಜಸ್ಥಿತಿಗೆ ಮರಳಿತು.

ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಣೆಯಾದ ಎರಡು ತಿಂಗಳ ಬಳಿಕ ಖರೀದಿಗೆ ಮಧ್ಯಾಹ್ನ 1 ಗಂಟೆಯವರೆಗೂ ಸಂಪೂರ್ಣ ಸಡಿಲಿಕೆ ನೀಡಿದ್ದು, ಜನರು ಕೋವಿಡ್ ಭಯ ಮರೆತಂತೆ ರಸ್ತೆಗಿಳಿದರು.

ಹವಾ ನಿಯಂತ್ರಿತ ಅಂಗಡಿಗಳು ಹವಾ ನಿಯಂತ್ರಿತ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಮಾಲ್‌ಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿದ್ದರಿಂದ ವ್ಯಾಪಾರಸ್ಥರು ಖುಷಿಯಾಗಿದ್ದರು. ಬಹಳ ದಿನಗಳ ನಂತರ ಅಂಗಡಿ ತೆರೆದಿದ್ದರಿಂದ ಸ್ವಚ್ಛಗೊಳಿಸುವುದಕ್ಕೇ ಒಂದೆರಡು ಗಂಟೆಗಳನ್ನು ಮೀಸಲಿಟ್ಟರು. ಅಂಗಡಿಗಳ ಬಾಗಿಲು ತೆರೆದಿದ್ದನ್ನು ಕಂಡ ಗ್ರಾಹಕರು ಖರೀದಿಗೆ ಮುಗಿಬಿದ್ದರು.

ADVERTISEMENT

ಪಾದರಕ್ಷೆ, ಬಟ್ಟೆ ಅಂಗಡಿಗಳು ಹಾಗೂ ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ದೂಳು ಹಿಡಿದಿದ್ದ ವಸ್ತುಗಳನ್ನು ಸ್ವಚ್ಛಗೊ
ಳಿಸುವಲ್ಲಿ ತಲ್ಲೀನರಾಗಿದ್ದರು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗಷ್ಟೇ ಅವಕಾಶ ನೀಡಿದ್ದರೂ ಅಷ್ಟಾಗಿ ಜನರು ಕಂಡುಬರಲಿಲ್ಲ.

ಪ್ರಮುಖ ವೃತ್ತಗಳು, ಸಿಗ್ನಲ್‌ಗಳಲ್ಲಿ ವಾಹನ ದಟ್ಟಣೆ ಕಂಡು ಬಂದಿತು. ಹಲವು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ್ದು, ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.ದಾವಣಗೆರೆ ಹಳೇ ಭಾಗದಲ್ಲಿ ಜನಸಂದಣಿ ಹೆಚ್ಚಿತ್ತು. ರೈಲ್ವೆ ಅಂಡರ್ ಬ್ರಿಡ್ಜ್‌ನಲ್ಲಿ ವಾಹನಗಳ ಸಂಚಾರ ಹೆಚ್ಚಾಗಿ ಕಂಡುಬಂದಿತು.ಮಧ್ಯಾಹ್ನದ ನಂತರ ಜನಸಂದಣಿ ಕರಗಿತು.

ಬೀದಿ ಬದಿಯಲ್ಲಿ ತರಕಾರಿ, ಹಣ್ಣುಗಳ ಮಾರಾಟ ಜೋರಾಗಿತ್ತು. ಮೊಬೈಲ್ ದುರಸ್ತಿ ಹಾಗೂ ಖರೀದಿಗಾಗಿ ಅಂಗಡಿಗಳಲ್ಲಿ ಹೆಚ್ಚಿನ ಜನರುನಿಂತಿದ್ದರು. ಎಲೆಕ್ಟ್ರಾನಿಕ್ ಮಳಿಗೆಗಳು, ಚಿನ್ನಾಭರಣ ಮಳಿಗೆಗಳು, ಬಟ್ಟೆ ಹಾಗೂ ಪಾತ್ರೆ ಅಂಗಡಿಗಳು ತೆರೆದಿದ್ದವು.
ಚಿನ್ನಾಭರಣ ಅಂಗಡಿಗಳಲ್ಲಿ ಹೆಚ್ಚು ಮಂದಿ ಕಂಡುಬರಲಿಲ್ಲ. ಈ ಹಿಂದೆಆರ್ಡರ್ ನೀಡಿದ್ದವರು ಬಂದು ತಮ್ಮ ಆಭರಣಗಳನ್ನು ಪಡೆದುಕೊಂಡರು. ಗ್ರಾಮಾಂತರ ಪ್ರದೇಶಗಳಿಂದ ಗ್ರಾಹಕರು ಬಂದಿರಲಿಲ್ಲ.

‘ಅನ್‌ಲಾಕ್ ವಿಷಯವನ್ನು ತಡವಾಗಿ ಘೋಷಿಸಿದ್ದರಿಂದ ಗ್ರಾಹಕರಿಗೆ ವಿಷಯ ತಿಳಿಯುವುದು ವಿಳಂಬವಾಯಿತು. ದಾವಣಗೆರೆಯ ಗ್ರಾಹಕರು ಚಿತ್ರದುರ್ಗ, ರಾಣೇಬೆನ್ನೂರಿಗೆ ಹೋಗಿ ಜವಳಿ ಖರೀದಿಸಿದ್ದಾರೆ. ಬೆಳಿಗ್ಗೆ 7ಕ್ಕೆ ಅಂಗಡಿ ತೆರೆಯಲಾಗಿತ್ತು. ಆದರೆ ನಿರೀಕ್ಷಿಸಿದ ಮಟ್ಟಕ್ಕೆ ವಹಿವಾಟು ನಡೆದಿಲ್ಲ’ ಎಂದುಚನ್ನಬಸಪ್ಪ ಅಂಡ್‌ ಸನ್ಸ್ ಮಾಲೀಕ ಬಿ.ಸಿ. ಶಿವಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.