
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ
ದಾವಣಗೆರೆ: ‘ಸಹಕಾರ ಎಂದರೆ ಕೇವಲ ವ್ಯವಹಾರವಲ್ಲ, ಅದೊಂದು ಜೀವನ ಪದ್ಧತಿ ಎಂಬುದನ್ನು ಸಾರುತ್ತಿರುವ ಸಹಕಾರ ಭಾರತಿಯು ಸಂಸ್ಕಾರಯುತ ಸಮಾಜದ ನಿರ್ಮಾಣಕ್ಕೆ ಬದ್ಧವಾಗಿದೆ’ ಎಂದು ಸಹಕಾರ ಭಾರತಿಯ ರಾಜ್ಯ ಘಟಕದ ಅಧ್ಯಕ್ಷ ಮಾಗನೂರು ಪ್ರಭುದೇವ್ ಆರ್. ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಡೆದ ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
‘ಸಹಕಾರ ತತ್ವ, ಕಾಯ್ದೆ ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ಮೂಲಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಶ್ರಮಿಸಲಾಗುತ್ತಿದೆ. ನಿಸ್ವಾರ್ಥ ಮನೋಭಾವದಿಂದ ರೈತರು ಮತ್ತು ಸಾಮಾನ್ಯ ಜನರ ಏಳಿಗೆಗಾಗಿ ಸಂಘಟನೆಯ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.
‘ಆರ್ಥಿಕ ವಹಿವಾಟಿಗೆ ಸೀಮಿತವಾಗಿದ್ದ ಸಹಕಾರ ಕ್ಷೇತ್ರಕ್ಕೆ ಸಂಸ್ಕಾರ ಮತ್ತು ನೈತಿಕತೆಯ ಮೌಲ್ಯಗಳನ್ನು ತುಂಬುವ ಮೂಲಕ ರಾಷ್ಟ್ರ ಪುನರ್ ನಿರ್ಮಾಣದ ಕೆಲಸದಲ್ಲಿಯೂ ಸಹಕಾರ ಭಾರತಿ ತೊಡಗಿಸಿಕೊಂಡಿದೆ ಎಂದರು.
‘ಸಹಕಾರ ಭಾರತಿಯು ದೇಶದ 500ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಕೇವಲ ಸಂಸ್ಥೆಗಳನ್ನು ಕಟ್ಟುವುದು ಮಾತ್ರವಲ್ಲದೆ, ನೈತಿಕ ಗುಣವುಳ್ಳ ಕಾರ್ಯಕರ್ತರನ್ನು ಸಿದ್ಧಪಡಿಸುವುದು ಸಂಘಟನೆಯ ಮೂಲ ಉದ್ದೇಶವಾಗಿದೆ’ ಎಂದು ಹೇಳಿದರು.
‘ಸಂಸ್ಥೆಯು ಪ್ರತಿ ವರ್ಷ ಕಾರ್ಯಕರ್ತರಿಗಾಗಿ ಅಭ್ಯಾಸ ವರ್ಗಗಳನ್ನು ಆಯೋಜಿಸುತ್ತಿದೆ. ಈ ಮೂಲಕ ಸಂಘಟನೆಯ ಜವಾಬ್ದಾರಿ ಮತ್ತು ಸಹಕಾರ ಭಾರತಿಯ ಆಶಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಪ್ರತಿ ಸಂಸ್ಥೆಯಲ್ಲೂ ದಕ್ಷ ಕಾರ್ಯಕರ್ತರನ್ನು ರೂಪಿಸಿ, ಅವರ ಮೂಲಕ ಸಹಕಾರ ಭಾರತಿಯ ಪ್ರಚಾರ ಪಡಿಸುವುದು ನಮ್ಮ ಗುರಿಯಾಗಿದೆ’ ಎಂದರು.
ಸಹಕಾರ ಭಾರತಿಯ ಜಿಲ್ಲಾ ಘಟಕದ ಮಹಿಳಾ ಪ್ರಮುಖ್ ಪುಷ್ಪಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹಕಾರ ಭಾರತಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರಪ್ಪ ಎಚ್. ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಘಟಕದ ಮಹಿಳಾ ಪ್ರಮುಖ್ ವಿದ್ಯಾ ಪೈ, ಕಾರ್ಯದರ್ಶಿ ಪ್ರಸನ್ನಕುಮಾರ್, ದಾಮ್‌ಕೋಸ್ ಅಧ್ಯಕ್ಷ ಶಿವಕುಮಾರ್ ಬಿ.ಕೆ., ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮಹೇಶ್ ಎಚ್.ಎನ್., ಸಂತೋಷ್ ಕೆ.ಜಿ., ಸೌಹಾರ್ದ ಫೆಡರೇಷನ್ ಅಧ್ಯಕ್ಷ ನಂಜನಗೌಡ, ಪ್ರಮುಖರಾದ ಪರಶುರಾಮ್ ಕೆ., ರವಿ ಪಿ., ಐನಳ್ಳಿ ಶುಭಾ, ಕೆ.ಪ್ರಶಾಂತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.